Monday, December 27, 2010

ದೇವಿ ಮಹಾತ್ಮೆ



ನಾನೀಗ ಮೇಲ್ಗಡೆ ಲೋಕದಲ್ಲಿ ಅಲ್ಲೆಲ್ಲೋ ಇರುವ ದೇವತೆಗಳ ಬಗ್ಗೆ ಮಾತಾಡುತ್ತಿಲ್ಲ. ನಮ್ಮ ನಮ್ಮ ಗೃಹ ಗಳಲ್ಲೇ ಇರುವ, ಗೃಹ ಲಕ್ಷ್ಮಿ ಯಾ ಬಗ್ಗೆ ಹೇಳುವವನಿದ್ದೇನೆ.


ನನಗೆ ಇತ್ತೀಚಿಗೆ ಎಲ್ಲದರಲ್ಲೂ ಬೇಸರ ಮೂಡುತ್ತಿತ್ತು. ಅದು ಕೊನೆಗೆ ನಮ್ಮ ಮ್ಯಾನೇಜರ್ ಅರಿವಿಗೂ ಬಂತು. ಒಂದು ದಿನ ನಾನು ಕೆಲಸ ಎಲ್ಲಾ ಮುಗಿಸಿ, ಹಂಗೆ ಕಣ್ಣು ಮುಚ್ಚಿ ಧ್ಯಾನಸ್ತ, ಸಮಾಧಿ ಸ್ಥಿತೀಲಿ ಇರುವಾಗ ಮ್ಯಾನೇಜರ್ ಆಗಮನ ಆಯಿತು. ದೇವೇ ಗೌಡರ ಧ್ಯಾನಸ್ತ ಸ್ಥಿತಿ ಬಗ್ಗೆ ವಿ ಪಕ್ಷ ಗಳಿಗೆ ಹೊಟ್ಟೆ ಉರಿತಾ ಇದ್ದ ಹಾಗೆ ಇವನಿಗೂ ಕೂಡ ಉರಿತು. ಹೆಗಲು ಮುಟ್ಟಿ ಅಲ್ಲಾಡಿಸಿ, ಒಂದು ಅರ್ಥದಲ್ಲಿ ಬಡಿದೆಬ್ಬೆಸಿ ಕೇಳೋಕೆ ಶುರು ಹಚ್ಕೊಂಡ.

ಅಲ್ಲಪ್ಪಾ ಬಾಲು, ಮೊದಲೆಲ್ಲ ನೀನು ತುಂಬಾ ಚಟುವಟಿಕೆ ಇಂದ ಇರ್ತಾ ಇದ್ದೆ. ಯಾವಾಗಲು ಅವರಿವರ ಕಾಲು ಎಳಿತಾ, ಫೋನ್ ನಲ್ಲಿ ಪುಂಗಿ ಊದುತ್ತಾ, ನನ್ ಬಗ್ಗೆ ಕಾಮೆಂಟ್ ಮಾಡುತ್ತಾ (???) ಇದ್ದೆ, ಆದರೆ ಇತ್ತೀಚಿಗೆ ಯಾಕೆ ಒಳ್ಳೆ ಯಡ್ಡಿ ತರ ಗೋಳು ಮುಖ ಮಾಡಿಕೊಂದಿದ್ದಿ ಎಂದ.

ಯಾಕೋ ಗೊತ್ತಿಲ್ಲ ಸರ್, ಅದೇ ಕೆಲಸಗಳು, ಕಾರ್ ಗಳು, ಕ್ಯಾಬಿನ್ ಗಳು, ಕಾಲ್ ಗಳು.. ಲೈಫ್ ಊ ಇಷ್ಟೇನೆ ಅಂತ ಅನ್ನಿಸ್ತಾ ಇದೆ. ಅದೇ ಮನೆ, ಅದೇ ಹೆಂಡತಿ, ಅದೇ ಪಕ್ಕದ ಮನೆಯಾಕೆ ಎಲ್ಲ ಬೋರ್ ಹೊಡಿತ ಇದೆ ಅಂದೆ.

ನಿನ್ ಮದುವೆ ಆಗಿ ಒಂದು ವರ್ಷ ಆಯಿತಲ್ಲ?

ಹೌದು. ಎಂದೆ.

ಹಾಗಾದ್ರೆ ನಿಂಗೆ ಸಂಸಾರದಲ್ಲಿ ಸ್ವಲ್ಪ ಹೊಸತು ಬೇಕು, ಅವಾಗ ಜೀವನ ಸೂಪರ್ ಆಗಿ ಇರುತ್ತೆ, ನಾನು ಕೂಡ ಅದನ್ನೇ ಮಾಡ್ತಾ ಇರೋದು, ನೋಡು ಎಷ್ಟು ಜಾಲಿ ಆಗಿ ಇದೀನಿ ಅಂತ.

ನಂಗೆ ತಲೆ ಬುಡ ಅರ್ಥ ಆಗಿಲ್ಲ. ಸ್ವಲ್ಪ ಬಿಡಿಸಿ ಹೇಳಿ ಪುಣ್ಯ ಕಟ್ಕೊಳಿ ಅಂದೆ.

ಮೊದಲು ನೀನು ಆಫೀಸಿನ ಎಲ್ಲಾ ಹುಡುಗೀರ ಡಾಟಾ ಬೇಸ್ ಇಟ್ಕೊಂಡು ಇದ್ದೆ. ಅವರ ಜೊತೆ ಅಲೀತ ಗುಂಡ್ರು ಗೋವಿ ತರ ಇದ್ದೆ. (ಅವನು ಬೈತಾ ಇದ್ದಾನ, ಇಲ್ಲ ಹೊಗಳ್ತಾ ಇದ್ದಾನ ಅಂತ ನಂಗೆ ಡೌಟ್ ಬರ್ತಾ ಇತ್ತು. ) ಕಡೆಗೆ receptionist ರೀಟಾ ನೂ ನೀನು ಬಿಟ್ಟಿಲ್ಲ. ಅವಳ ಅಗಾದ ಫ್ಯಾನ್ ಗಳ ಲಿಸ್ಟ್ ನಲ್ಲಿ ನೀನು ಕೂಡ ಇದ್ದೆ. ಹೋಗ್ಲಿ ನೀನು ಈಗ ರೀಟಾ ಜೊತೆ ಸಿನಿಮಾ ಗೆ ಹೋಗಿ ಎಷ್ಟು ದಿನ ಆಯಿತು?

ಮದುವೆಗೂ ಮುನ್ನ ಸರ್, ಒಂದು ವರ್ಷ ಆಯಿತು.

ಸರಿ ಅವಳ ಜೊತೆ ಸ್ವಲ್ಪ ಸುತ್ತು, ಅವಳ ಬಾಯ್ ಫ್ರೆಂಡ್ ನಂಬರ್ ೩೮ ಕೈ ಕೊಟ್ಟು ೪ ದಿನ ಆಗಿದೆ, ಅವಳು ಕೂಡ ಮಂಕಾಗಿದ್ದಾಳೆ. ಇಬ್ರು ಒಂದು ಒಳ್ಳೆ ಸಿನಿಮಾ ನೋಡಿ.

ಆದ್ರೆ ಸರ್ ನಾನು ಮದುವೆ ಆದವ, ಹಾಗೆಲ್ಲ ಹೋಗೋದು ತಪ್ಪಲ್ಲವೇ? ಅಂದೆ

ಮೊದಲು ನನ್ ಮಾತು ಕೇಳು, ರೀಟಾ ಜೊತೆ ಸಿನಿಮಾ ನೋಡು. ಅವಳ ತುಂಡು ಲಂಗದ ಬಗ್ಗೆ ಹೆಂಡತಿ ಜೊತೆ ಚರ್ಚೆ ಮಾಡು. ಅವಾಗ ನೋಡು ನಿನ್ ಜೀವನ! ತುಂಬಾ ಫ್ರೆಶ್ ಆಗುತ್ತೆ.

ಅನುಭವಸ್ತರು ಹೇಳಿದ ಮೇಲೆ ನಂಬದೆ ಇರೋದು ಹೇಗೆ? ನಾನು ಕೂಡಲೆ ಸರಿ ಅಂದೆ. ರೀಟಾ ಗೆ ಕಾಲ್ ಮಾಡಿ ಮಾತಾಡಿದೆ. (ನಾನು ಅವಳ ೨೧ ನೆ ಬಾಯ್ ಫ್ರೆಂಡ್, ಆದ್ದರಿಂದ ಹಳೆ ಗಂಡನ ಪಾದವೇ ಗತಿ ಅಂತ ಅವಳಿಗೂ ಕುಶಿ ಆಯಿತೇನೋ)
ಮುಂದಿನ ಭಾನುವಾರವೇ, ಪಿ ವಿ ಅರ ನಲ್ಲಿ ಒಂದು ಸಿನಿಮಾ ನೋಡಿದೆವು, ಅವಳು ಬಟ್ಟೆ ಕೊಂಡಳು ನಾನು ದುಡ್ಡು ಕೊಟ್ಟೆ. (ಸರಿ ಸುಮಾರು ೪ ಸಾವಿರ ಹಜಾಮತಿ ಆಯಿತು ಬಿಡಿ. ಆದರೂ ಹೆಣ್ಣು ಮಕ್ಕಳು ಜೊತೆಗಿದ್ದಾಗ ದುಡ್ಡು ಕೊಡುವುದು ನಮ್ಮ ಜವಾಬ್ದಾರಿ ಅಲ್ಲವೇ?) ಅಂದು ಎಲ್ಲಾ ಮುಗಿಸಿ ಮನೆಗೆ ಬಂದು ಹೆಂಡತಿ ಗೆ ಎಲ್ಲ ವರದಿ ಒಪ್ಪಿಸ ತೊಡಗಿದೆ. ಒಳ್ಳೆ ಇಸ್ಟ್ ಮೆನ್ ಕಲರ್ ನಲ್ಲಿ ವರ್ಣಿಸಿದೆ, ಜೊತೆಗೆ ಡಿ ಟಿ ಎಸ್ ಎಫೆಕ್ಟ್ ಕೂಡ ಕೊಟ್ಟೆ. ನನ್ ಮ್ಯಾನೇಜರ್ ಮಾತು ನೂರಕ್ಕೆ ನೂರು ಸರಿ ಇತ್ತು. ಮಾರನೆ ದಿನ ದಿಂದ ನೋಡಿ, ಮನೆಯ ವಾತಾವರಣ ನೇ ಬದಲಾಯಿತು. ಲೈಫ್ ಊ ಒಂದು ವರ್ಷ ಹಿಂದೆ ಹೋಯಿತು. (ಗಮನಿಸಿ: ನಾನು ದಿನಾ ರೀಟಾ ವರ್ಣನೆ ಮಾಡೋದನ್ನ ಬಿಟ್ಟಿರಲಿಲ್ಲ). ದಿನಾ ಬೆಳಿಗ್ಗೆ ಉಪ್ಪಿಟ್ಟು ತಿನ್ನೋ ಕಾಟ ತಪ್ಪಿತು. ಮ್ಯಾಗಿ ಮನೆಗೆ ಬರುವುದು ನಿಂತಿತು. ನೀರು ದೋಸೆ, ಅಕ್ಕಿ ರೊಟ್ಟಿ ಮುಂತಾದುವು ಬೆಳಿಗ್ಗೆ ತಿಂಡಿ ಯಾಗ ತೊಡಗಿದವು. ಕಾ ಕಾ ಕಿ ಕಿ ಧಾರವಾಹಿ ಬಿಟ್ಟು ನನಗೆ ನ್ಯೂಸ್ ನೋಡುವ ಅವಕಾಶ ಸಿಕ್ಕಿತು. ಆಫೀಸ್ ನಿಂದ ಬೇಗ ಬಂದ್ರೆ ಒಂದು ಚಿಕ್ಕ ವಾಕ್, ಅವಳತ್ತೆ ಜೊತೆ ಒಂದು ಒಳ್ಳೆ ಟಾಕ್. ಲೈಫ್ ಊ ಒಂದು ರೀತಿ ನಂದನ ವನ ಆಯಿತು. (ರೀಟಾ ನೆನಪೇ ಮರೆತೇ ಬಿಡುವ ಹಾಗೆ ಆಗಿತ್ತು ) ನಿಜ ಹೇಳಬೇಕೆಂದರೆ ಮೊನ್ನೆ ಶನಿವಾರ ಕಾಫಿ ಡೇ ನಲ್ಲಿ ಒಳ್ಳೆ ಕೆಪೆಚಿನೋ ಕುಡಿದೆವು. ಗಂಡ ಹೆಂಡತಿ ಕಾಫಿ ಡೇ, ಬರಿಸ್ತಾಗೆ ಹೋಗಬಾರದು ಅಂತ ಇಲ್ಲವಲ್ಲ. !!

ಆದರೆ ನಿನ್ನೆ ಭಾನುವಾರ ನನ್ನಾಕೆಯನ್ನಾ ಗೋಳು ಹೊಯ್ದು ಕೊಳ್ಳುವ ಅಂತ ಅನ್ನಿಸಿತು. ರೀಟಾ ಮತ್ತೆ ಅವಳ ತುಂಡು ಲಂಗದ ಮೇಲೆ ವರ್ಣನೆ ಶುರು ಮಾಡಿದೆ. ಅಷ್ಟರಲ್ಲಿ ಅಡುಗೆ ಮನೇಲಿ ಏನೂ ಸುಟ್ಟ ವಾಸನೆ ಬರಲಿಕ್ಕೆ ಶುರು ವಾಯಿತು. ನಾನು ಅತ್ತ ಹೆಜ್ಜೆ ಹಾಕಿದೆ. ನನ್ನಾಕೆ ಥೇಟ್ ಒನಕೆ ಓಬವ್ವ ತರ ನಿಂತಿದ್ಲು. ಕೈಯಲ್ಲಿ ಆಯುಧ ಮಾತ್ರ ಲಟ್ಟಣಿಗೆ, ಓಲೆ ಮೇಲೆ ಕಾದ ಮಗುಚೋ ಕೈ ಬೇರೆ. ನಾನು ಪರಿಸ್ತಿತಿ ಅರ್ಥಮಾಡಿ ಕೊಳ್ಳುವುದರೋಳಗಾಗಿ ಯುದ್ದ ಘೋಷಣೆ ಆಗಿ ಬಿಟ್ಟಿತ್ತು.

ಇವತ್ತು ಬೆಳಿಗ್ಗೆ ಊದಿದ ಹಣೆ ಇಟ್ಟುಕೊಂಡು, ಕಂಡವರಿಗೆಲ್ಲ ಬಣ್ಣ ಬಣ್ಣದ ಕಥೆ ಹೇಳಿ ನನ್ ಕ್ಯಾಬಿನ್ ಗೆ ಬಂದು ಕೂತೆ. ಇಷ್ಟಕ್ಕೆಲ್ಲ ಕಾರಣ ನಾದ ನನ್ ಮ್ಯಾನೇಜರ್ ಹಲ್ಲು ಮುರಿಯುವ ಯೋಜನೆ ನು ಹಾಕಿಕೊಂಡೆ. ಅವನು ಸುಮಾರು ೪ ಗಂಟೆ ಲೇಟ್ ಆಗಿ ಬಂದ. ನನ್ನ ನೋಡಿ ಸಣ್ಣನೆ ನಕ್ಕ. ಅವನ ಹಣೆ ಲೂ ದೊಡ್ಡ ಗುಳ್ಳೆ ಇತ್ತು. ಇಬ್ಬರಿಗೂ ಸಾಕಷ್ಟು ಅರ್ಥ ಆಗಿತ್ತು. ಈಗ ನಂಗೆ ಅಕ್ಕ ಪಕ್ಕದ ಹುಡುಗಿಯರೆಲ್ಲ ಅಕ್ಕ ತಂಗಿ ತರ ಕಾಣುತ್ತಾ ಇದ್ದಾರೆ.