Tuesday, July 5, 2016

ಬೇಸನ್ ಲಾಡು ಮಾಡುವ ವಿಧಾನ. :)



ಈ ಪೋಸ್ಟು, ಸಿಹಿ ಇಷ್ಟಪಡುವ ಗಂಡು ಜೀವಿಗಳಿಗೆ  ಮಾತ್ರ. J


ಹೆಂಡತಿ ಯಾವಾಗಲೂ “ನಿಮಗೆ ಒಂದು ಒಗ್ಗರಣೆ ಕೂಡ ಹಾಕೋಕೆ ಬರೋಲ್ಲ” ಅಂತ ಸ್ವಾಟೆ ತಿವಿಯುತ್ತಿದ್ದಾಳೆಯೇ? ಅಥವಾ ದಿನಾಲು ಒಬ್ಬರದೇ ಕೈ ರುಚಿ ನೋಡಿ ನಾಲಿಗೆ ಕೆಟ್ಟು ಹೋಗಿದೆಯೇ? ಇಲ್ಲಿದೆ ಅದಕ್ಕೆ ಪರಿಹಾರ.
ಮಿ
ತ್ರರೇ, ನಾನು ನಿಮಗೆ ಅತಿ ಸುಲಭವಾಗಿ ಸಿಹಿ ತಿಂಡಿಯೊಂದನ್ನು ಮಾಡುವುದು ಹೇಗೆಂದು ತಿಳಿಸಿ ಕೊಡಲಿದ್ದೇನೆ. ನೀವು ಅಂಗಡಿಗಳಲ್ಲಿ, ಸಮಾರಂಭಗಳಲ್ಲಿ ಬೇಸಿನ್ ಲಾಡು ತಿಂದು ಬಾಯಿ ಚಪ್ಪರಿಸಿರುತ್ತಿರಿ. ಇದನ್ನು ನೀವು ಮನೆಯಲ್ಲಿ ಅತಿ ಸುಲಭವಾಗಿ ಮಾಡಬಹುದು.

ಈ ಕೆಳಗೆ ಲಾಡು ಮಾಡಲು ಬೇಕಾಗುವ ಪದಾರ್ಥ ಹಾಗು ವಿಧಾನಗಳನ್ನು ಹಂತಹಂತವಾಗಿ ವಿವರಿಸಲಾಗಿದೆ. ಮಾಡಿ, ನೋಡಿ ಹಾಗು ಕೊನೆಗೆ ತಿಂದು (ಅಥವಾ ತಿನ್ನಿಸಿ) ಆನಂದಿಸಿ.

1. ಮಾಡುವ ಸಮಯ: ಹೌದು. ಹೆಂಡತಿ ಮನೆಯಲ್ಲಿ ಇಲ್ಲದ ಸಮಯ ಆರಿಸಿಕೊಳ್ಳಿ. ಯಾಕೂ ಅಲ್ಲ, ಮಧ್ಯ ಮಧ್ಯ ಇದನ್ನು ಹಿಂಗೆ ಮಾಡಬೇಕು, ಹಾಗೆ ಯಾಕೆ ಮಾಡಬೇಕು, ಎಂಬಿತ್ಯಾದಿ ಪ್ರಶ್ನೆ ಕೇಳುತ್ತಿರುತ್ತಾಳೆ. ನೀವು ಕಾರು ಓಡಿಸುವಾಗ, ಆಕೆಯ ಕಿರಿ ಕಿರಿ ಹೆಂಗೆ ಇರುತ್ತೋ, ಹಂಗೆಯೇ! ಈ ಪ್ರಶ್ನೆಗಳು ನಿಮ್ಮ ಏಕಾಗ್ರತೆಗೆ ಭಂಗ ತರುತ್ತದೆ.

2. ಆತ್ಮವಿಶ್ವಾಸ: ನಾಯಕನಾಗುವುದು ಹೇಗೆ? ಇಡ್ಲಿ, ಆರ್ಕಿಡ್ ಮತ್ತು ಆತ್ಮವಿಶ್ವಾಸ ಈ ತರದ ಪುಸ್ತಕಗಳನ್ನು ಓದಿರಬಹುದು ಅಥವಾ ನಿಮ್ಮ ಕಛೇರಿಗಳಲ್ಲಿ ಕೊಟ್ಟ ಕೆಲಸ ಮುಗಿಸುವುದು ಹೇಗೆ ಎಂಬೆಲ್ಲ ತರಬೇತಿ ಪಡೆದಿರಬಹುದು.
ಅದನ್ನು ಸ್ವಲ್ಪ ನೆನಪಿಸಿಕೊಳ್ಳಿ. ಏನೇ ಮಾಡುವ ಮೊದಲು, ಆತ್ಮ ವಿಶ್ವಾಸ ಮುಖ್ಯ. ನೀವು ಅಡುಗೆ ಮನೆಗೆ ನುಗ್ಗಿ, ಏನೋ ಒಂದು ಭರ್ಜರಿಯಾದ್ದನ್ನು ಸಾಧಿಸಬಲ್ಲಿರಿ ಎಂದು ನಂಬಿರಿ.

3. ಬೇಕಾಗುವ ಸಾಮಗ್ರಿಗಳು: ಫ್ರಿಜ್ಜಿನಿಂದ ಕಡಲೆ ಹಿಟ್ಟು (ಹೊರಗಿಟ್ಟರೆ, ಹುಳ ಆಗುವುದು ಎಂದು ಸಾಮಾನ್ಯವಾಗಿ ಅದನ್ನು ಫ್ರಿಜ್ಜಿನಲ್ಲಿ ಇಟ್ಟಿರುತ್ತಾರೆ- ಇದು ಹಳದಿ ಬಣ್ಣ ಇರುತ್ತದೆ. ಇದೇ ಹಿಟ್ಟಿನಿಂದ ನಿಮಗೆ ಶನಿವಾರ – ಭಾನುವಾರಗಳಲ್ಲಿ ಭಜ್ಜಿ – ಬೋಂಡ ಮಾಡಿ ಕೊಡುವುದು. ಇಷ್ಟು ಕ್ಲೂ ನಿಂದ ನಿಮಗೆ ಹಿಟ್ಟು ಹುಡುಕಲು ಸಹಾಯ ಆಗಬಹುದು.) ದ್ರಾಕ್ಷಿ ಗೋಡಂಬಿ, ಬಾದಾಮಿ (ಅಳತೆ ಒಂದು ಮುಷ್ಠಿ), ಕೊಬ್ಬರಿ ಹಾಗು ಅಮ್ಮ ಊರಿನಿಂದ ಮಾಡಿ ಕೊಟ್ಟು ಕಳಿಸಿದ ತುಪ್ಪ ತೆಗೆದುಕೊಳ್ಳಿ. ಯಾವುದೇ ಕಾರಣಕ್ಕೂ ಹೆಂಡತಿ ತಯಾರಿಸಿದ ವಾಸನೆಯುಕ್ತ ತುಪ್ಪ ಬೇಡ.

3. ಈಗ ಒಲೆ ಹಚ್ಚಿ. ಅದರ ಮೇಲೆ ಒಂದು ಬಾಣಲೆ ಇಡಿರಿ. ನಾನ್ ಸ್ಟಿಕ್ ಬಾಣಲೆ ಆಗಿದ್ದರೆ, ಅದಕ್ಕೇ ಅಂತ ಒಂದು ಮರದ ಮಗುಚೋ ಕೈ ಇರುತ್ತದೆ. ಅದನ್ನ ತೆಗೆದು ಕೊಳ್ಳಿ. (ಮರದ್ದು ಸಿಕ್ಕಿಲ್ಲ ಅಂತ ಸ್ಟೈನ್ ಲೆಸ್ ಸ್ಟೀಲ್ ಉಪಯೋಗಿಸಿದರೆ, ನಿಮ್ಮ ಮನೆಯಲ್ಲಿ ನಡೆಯುವ ಅಹಿತಕರ ಘಟನೆಗಳಿಗೆ ನಾನು ಜವಾಬುದಾರ ಅಲ್ಲ. ಹೆಂಡತಿ ಕೋಪಗೊಂಡು ಲಟ್ಟಣಿಗೆಯಲ್ಲಿ ನಾಕು ಕೊಡಬಹುದು! ) ಅದು ಸಿಗದೇ ಇದ್ದಲ್ಲಿ, ಅಲ್ಲೇ  ಮಿಕ್ಸಿ ಹಿಂಬಾಗ ದೂಳು ತಿನ್ನುತ್ತಾ ಇರುವ ಅಲುಮಿನಿಯಂ ಬಾಣಲೆ ತೆಗೆದು ಕೊಳ್ಳಿರಿ. ವರೆಸಿ ಒಲೆ ಮೇಲೆ ಕುಕ್ಕಿ.

4. ಬಾಣಲೆಗೆ ಒಂದು ಲೋಟ ಕಡಲೆ ಹಿಟ್ಟು ಹಾಕಿ. ಲೋಟ ಮುಂದೆ ಉಪಯೋಗಕ್ಕೆ ಬರುತ್ತದೆ, ಕೂಡಲೇ ಅದನ್ನ ಸಿಂಕಿಗೆ ಬಿಸುಡಬೇಡಿ. ಆದಷ್ಟು ಸಣ್ಣ ಉರಿಯಲ್ಲಿ, ಹಿಟ್ಟನ್ನು ಸೌಟಿನಿಂದ ತಿರುವುತ್ತಾ ಇರಿ. ಸುಮಾರು 10 ನಿಮಿಷ. ಅಥವಾ ನಿಮ್ಮ ಬಲ ಗೈ ನೋವು ಬರುವಷ್ಟು ಹೊತ್ತು. ಆಮೇಲೆ ಸ್ಟೋವ್ ಆರಿಸಿ, ಹಿಟ್ಟನ್ನು ಒಂದು ತಟ್ಟೆಗೆ ಸುರುವಿಕೊಳ್ಳಿ. ಒಂದು ದ್ರಾಕ್ಷಿ ಗೋಡಂಬಿ ಹಾಗು ಬಾದಾಮಿ ಬಾಯಿಗೆ ಹಾಕಿಕೊಳ್ಳಿ.

5. ಒಂದು ಮುಕ್ಕಾಲು ಲೋಟ ಸಕ್ಕರೆ ತೆಗೆದುಕೊಳ್ಳಿ. ಸಕ್ಕರೆ ಅಡುಗೆಮನೆಲೇ ಅಲ್ಲೇ ಎಲ್ಲೋ ಇರುತ್ತೆ. ಚೂರು ಕಣ್ಣು ಆಡಿಸಿ.
ಅದಕ್ಕೆ ನಾಲ್ಕು ಏಲಕ್ಕಿ ಹಾಕಿ (ಸಿಕ್ಕಿದರೆ ಮಾತ್ರ) ಮಿಕ್ಸಿಯ ಸಣ್ಣ ಜಾರಿನಲ್ಲಿ ಸರಿ ಸುಮಾರು 100 ರಿಂದ 140 ಸೆಕೆಂಡ್ ಓಡಿಸಿ. ಆಮೇಲೆ ಮಿಕ್ಸಿ ಆಫ್ ಮಾಡಿ, ಅದನ್ನು ಪಕ್ಕಕ್ಕೆ ಇಡಿ. ಲೋಟ ಕೂಡ ಅಷ್ಟೇ, ಸಿಂಕಿಗೆ ಹಾಕಿ. ನಮ್ಮ ಉಪಯೋಗಕ್ಕೆ ಅವು ಇನ್ನು ಇಲ್ಲ.

6. ಅರ್ದ ಲೋಟ / ಒಂದು ಮುಷ್ಠಿ ಅಥವಾ ಚೂರು ಬೋರು ಬರುವಷ್ಟು ಕೊಬ್ಬರಿ ತುರಿದುಕೊಂಡು, ಬಾಣಲೆಯಲ್ಲಿ ಇನ್ನೂರು ಸೆಕೆಂಡ್ ಹುರಿಯಿರಿ. ಆಮೇಲೆ ಅದನ್ನು ಆಗಲೇ ಹುರಿದಿಟ್ಟ ಹಿಟ್ಟಿಗೆ ಸೇರಿಸಿ. ಕಲೆಸಿ. ತುರಿದು ಸುಸ್ತು ಆಗಿರುವುದರಿಂದ ಶಕ್ತಿಗೆ ದ್ರಾಕ್ಷಿ ಗೋಡಂಬಿ, ಸೇವಿಸಿ!

7. ಈಗ ಗಮಗಮಿಸುವ ನಾಕು ಚಮಚ ತುಪ್ಪ, ಹಿಟ್ಟಿಗೆ ಹಾಕಿ. (ಚಮಚ ಸಾಧಾರಣ ದಿಂದ ಮಧ್ಯಮ ಗಾತ್ರದ್ದು.) ಚೆನ್ನಾಗಿ ಕಲೆಸಿ.
ಇಷ್ಟು ಹೊತ್ತಿಗೆ, ಹಿಟ್ಟು ಸಂಪೂರ್ಣ ತಣ್ಣಗೆ ಆಗಿರುತ್ತದೆ.

8. ಇನ್ನೂ ಕೆಲಸ ಮುಗಿದಿಲ್ಲ. ಬಾಣಲೆ ಮತ್ತೆ ಒಲೆ ಮೇಲೆ ಇಟ್ಟು, ಒಂದೆರಡು ಚಮಚೆ ತುಪ್ಪ ಹಾಕಿ. ಅದಕ್ಕೆ ಬಾದಮಿ (ಇನ್ನೂ ಉಳಿದಿದ್ದರೆ ) ಚೂರು ಚೂರು ಮಾಡಿ ಸೇರಿಸಿ. ಸರಿಯಾಗಿ ಒಂದರಿಂದ ಇಪ್ಪತ್ತರ ತನಕ ಸಂಖ್ಯೆಯನ್ನು ಮನಸ್ಸಿನಲ್ಲಿ ಎಣಿಸಿ. ಇಪ್ಪತ್ತೊಂದು ಬರುವಾಗ ದ್ರಾಕ್ಷಿ ಹಾಕಿ. 28ಕ್ಕೆ ಒಲೆ ಆರಿಸಿ, ಹಿಟ್ಟನ ಮಿಶ್ರಣಕ್ಕೆ ಇದನ್ನು ಸೇರಿಸಿ.

9. ಈ ಹಿಟ್ಟಿಗೆ, ಸಕ್ಕರೆ ಪುಡಿ ಹಾಕಿ.  (ಆಗಲೇ ಪುಡಿ ಮಾಡಿದ್ರಲ್ಲ, ಅದೇನೇ)
ಚೆನ್ನಾಗಿ ಕಲೆಸಿ, ಸಣ್ಣ ಸಣ್ಣ ಉಂಡೆ ಮಾಡಿ.
ಇಲ್ಲಿಗೆ ರುಚಿಕರವಾದ ಬೇಸನ್ ಲಾಡು ತಯಾರು.

ಹೆಂಡತಿ ಬಂದಮೇಲೆ, ಕೊಡಿ. ಆಕೆ ತಿಂದು ಸ್ವಲ್ಪ ಹೊತ್ತು.. ಸೌಖ್ಯದಿಂದ ಇದ್ದಲ್ಲಿ, ನೀವೂ ಕೂಡ ತಿನ್ನಿ. J



ಕೊಸರು:
ಒಮ್ಮೊಮ್ಮೆ ತುಪ್ಪ ಜಾಸ್ತಿ ಆಗಿ, ಹುರಿದಿದ್ದು ಕಡಿಮೆ ಆಗಿ, ಹಿಟ್ಟು ಸ್ವಲ್ಪ ಮೆತ್ತಗೆ ಆದರೆ.. ಉಂಡೆ ಕಟ್ಟಲು ಬಾರದು.
ಆದ್ರೆ ಚಿಂತಿಸುವ ಅಗತ್ಯ ಇಲ್ಲ.
ಹೆಂಗೆ ಬರುತ್ತಾ ಹಂಗೆ ಉಂಡೆ ಕಟ್ಟಿ. ಅದು ಉಂಡೆ ಯಿಂದ ಚಪ್ಪಟೆ ಆಕಾರ ತಾಳುವಾಗ .. ಮೆಲ್ಲಕೆ ಹೊತ್ತೊಯ್ದು ಫ್ರಿಜ್ಜಿನಲ್ಲಿ ಸ್ವಲ್ಪ ಹೊತ್ತು ಇಡಿ. ಭಾಗಷ್ಯ ಎರಡು ಸಿಗರೇಟು ಸೇದುವ ಸಮಯದಷ್ಟು.

ನಂತರ ಹೆಂಡತಿ ಬಂದಮೇಲೆ..
ಇದು “ಗೀ ಫ್ಲೇವರ್ಡ್, ಡ್ರೈ ರೋಸ್ಟೆಡ್ ಬಿಸ್ಕುಟ್” ಅಂತ ಹೇಳಿ ಕೊಡಿ.
ತಣ್ಣಗೆ, ಸಿಹಿ ಸಿಹಿಯಾಗಿ, ತುಪ್ಪದ ಸುವಾಸನೆಯಲ್ಲಿ ಚೆನ್ನಾಗಿಯೇ ಇರುತ್ತದೆ.

ಇಲ್ಲಿಗೆ ಬೇಸನ್ ಲಾಡು ಮಾಡುವ – ತಿನ್ನುವ ವಿಧಾನ ಸಮಾಪ್ತಿ.

ಸರ್ವರಿಗೂ ಒಳ್ಳೇದು ಆಗಲಿ.

Tuesday, January 26, 2016

ಹಾರ್ಲಿಕ್ಸ್ ದೋಸೆ ಮಾಡುವ ವಿಧಾನ! (ಕಡ್ಡಾಯವಾಗಿ ಗಂಡು ಜೀವಿಗಳು ಮಾತ್ರ ಓದಬೇಕಾಗಿ ವಿನಂತಿ)



ಹಾರ್ಲಿಕ್ಸ್ ದೋಸೆ ಮಾಡುವ ವಿಧಾನ!
 ಹೌದು ಹಾರ್ಲಿಕ್ಸ್ ದೋಸೆನೇ. ಅದ್ಯಾಕೆ ಕಣ್ಣು ಬಾಯಿ ಬಿಡುತ್ತೀರಿ. ಕೆಳಕಂಡ ಮಾರ್ಗ ಸೂಚಿ ಅನುಸರಿಸಿ. ಮಾಡಿರಿ, ತಿನ್ನಿರಿ ಹಾಗು ಆನಂದಿಸಿ.

ನಿಮ್ಮ ಕಾಟ ಸಹಿಸಲಾರದೋ ಅಥವಾ ಊರಿನಲ್ಲಿ ಕಾರ್ಯಕ್ರಮ ಇದೆಯೆಂದೋ ಹೆಂಡತಿ ತವರಿಗೆ ಹೋಗುತ್ತಾಳೆ. ತಾನು ಇಲ್ಲದೆ ಮನೆ ನಡೆಯುವುದೇ ಇಲ್ಲ, ನೀವು ಊಟ ತಿಂಡಿ ಎಲ್ಲಾ ಬಿಟ್ಟು ಸೊರಗಿ, ನಿರಾಶ್ರಿತರ ತರ ಆಗುತ್ತೀರಿ ಎಂದು ಭಾವಿಸಿರುವ ಆಕೆ, ಒಂದಿಷ್ಟು ದೋಸೆ ಹಿಟ್ಟು, ಏನೋ ಒಂದು ಗೊಜ್ಜು ಮಾಡಿ ಫ್ರಿಜ್ ಗೆ ಹಾಕಿರುತ್ತಾಳೆ. ತಾವು ಕೂಡ ಆಕೆ ಹೋಗುತ್ತಿರುವ ಸಂತೋಷದಲ್ಲಿ ಎಲ್ಲಾ ಸಹಿಸಿ ಕೊಂಡಿರುತ್ತೀರಿ.

ಆದರೆ ಸಮಸ್ಯೆ ಶುರು ಆಗುವುದೇ ನಂತರ.
ಸ್ವಾತಂತ್ರ ಸಿಕ್ಕ ಕುಶಿಯಲ್ಲಿ ಸ್ನೇಹಿತರೊಂದಿಗೆ ಪಾನ ಘೋಷ್ಠಿ ಮಾಡಿ ಚಂದ್ರ ಕೂಡ ಮುಳುಗೂ ಸಮಯಕ್ಕೆ ಮನೆಗೆ ಬರ್ತಿರಿ. ಹೊಟ್ಟೆ ಕವ ಕವ ಅನ್ನುತ್ತಿರುತ್ತದೆ. ಆದ್ರೆ ಅದೇ ಉದ್ದಿನ ದೋಸೆ ಹಿಟ್ಟು ಬೇರೆ ಇಲ್ಲ!!! 
ಚಿಂತೆ ಬೇಡ, ನಾನು ಅದಕ್ಕೆ ಪರಿಹಾರ ಸೂಚಿಸುತ್ತೇನೆ.

ಮೊದಲು ಫ್ರಿಜ್ ನಿಂದ ದೋಸೆ ಹಿಟ್ಟು ಹೊರ ತೆಗೆಯಿರಿ. ಅದಕ್ಕೆ ಒಂದು ಸೌಟು ಹಾಕಿ ಚೆನ್ನಾಗಿ ಕದಡಿ


ಆಮೇಲೆ ಅಲ್ಲೇ ನಿಮ್ಮ ಮನೆಯವರು ಬಿಗ್ ಬಾಝರ್ ನಲ್ಲಿ ಕಡಿಮೆಗೆ ಸಿಕ್ಕಿತು ಅಂತ ತಂದು, ಆದರೆ ಉಪಯೋಗಿಸದೆ ಮಿಕ್ಸಿ ಹಿಂಬಾಗ ಇಟ್ಟ, ನಾನ್ ಸ್ಟಿಕ್ ಪುಟ್ಟ ಬಾಣಲೆ ತೆಗೆದುಕೊಳ್ಳಿ.


ಸ್ಟವ್ ಅನ್ನು ಸಣ್ಣ ಉರಿಯಲ್ಲಿ ಇಟ್ಟು, ಅದರ ಮೇಲೆ ಬಾಣಲೆಯನ್ನ ಕುಕ್ಕಿ, ಅದಕ್ಕೆ ನಾಕು ಚಮಚೆ ಎಣ್ಣೆ ಹಾಕಿ. (ಅಡುಗೆ ಎಣ್ಣೆ ಮರ್ರೆ, ಅದು ಅಲ್ಲೇ ಎಲ್ಲೋ ಇರುತ್ತೆ.  ಸ್ವಲ್ಪ ನೋಡಿ) ಅಕಸ್ಮಾತ್ ಕಣ್ಣಿಗೆ ಸಾಸಿವೆ, ಉದ್ದು ಕಂಡರೆ... ಎರಡನ್ನೂ 18-20 ಹಾಕಿ. ಆಮೇಲೆ ಸಾಸಿವೆ ನಿಮ್ಮ ಮೇಲೆ ಪೂರಾ ಸಿಡಿಯುವ ಮುನ್ನ, ನಾಕು ಸೌಟು ಹಿಟ್ಟು ಹಾಕಿ.

ಈಗ ಅತಿ ಮುಖ್ಯ ಘಟ್ಟ.

ಅಲ್ಲೇ ಅರೆ ಯಲ್ಲಿ ಇರುವ ಹಾರ್ಲಿಕ್ಸ್ ತೆಗೆದುಕೊಳ್ಳಿ. ನಾಕು ಚಮಚ ಪುಡಿಯನ್ನು ದೋಸೆಯ ಮೇಲೆ ಉದುರಿಸಿ. ಈ ಕಾರ್ಯವನ್ನು ಅತ್ಯಂತ ನಾಜೂಕಾಗಿ ಮಾಡಬೇಕಾಗಿ ಪ್ರಾರ್ಥನೆ. ಸಿಗರೇಟಿನ ಹೊಗೆಯನ್ನು ಉಂಗುರ ಉಂಗುರವಾಗಿ ಬಿಡಲು ಬೇಕಾದ ಕಲೆ, ತಣ್ಣನೆಯ ಬಿಯರ್ ಕುಡಿಯುವಾಗ ಇರುವ ತನ್ಮಯತೆ ಅಥವಾ ಆಫೀಸಿನಲ್ಲಿ ಹೊಸದಾಗಿ ಬಂದಿರುವ ಹಾಟ್ ಹುಡುಗಿಯನ್ನು ನೋಡುವಾಗ ಇರುವ “ಏಕಾಗ್ರತೆ” ಇಲ್ಲಿ ಬೇಕಾಗುತ್ತದೆ.
ಹಾಗಾಗಿ ಹಾರ್ಲಿಕ್ಸ್ ಪುಡಿ, ಉಂಡೆಯಾಗಿ ಬೀಳದಂತೆ ಎಚ್ಚರ ವಹಿಸಿ.
ನಂತರ ಪ್ಲೇಟ್ ನಲ್ಲಿ ಬಾಣಲೆ ಮುಚ್ಚಿ, ಸಣ್ಣ ಉರಿಯಲ್ಲಿ ಐದು ನಿಮಿಷ ಬೇಯಲು ಬಿಡಿ.

ಇಷ್ಟರಲ್ಲಿ ನಿಮ್ಮ ಹಳೆ ಗೆಳತಿ ಏನಾದ್ರೂ ಮೆಸೇಜು ಮಾಡಿದ್ದಳ ಗಮನಿಸಿ.
ಆದ್ರೆ ಹೆಂಡತಿದು ಎರಡು ಮಿಸ್  ಕಾಲ್ ಹಾಗು ಎರಡು ಮೂರು ಮೆಸೇಜುಗಳು ಇರುತ್ತದೆ. ಇವತ್ತು ಕಾವೇರಿ ನೀರು ಬರುತ್ತೆ, ಹಿಡಿದಿಡಿ. ಹೊರಗೆ ಗಿಡಕ್ಕೆ ನೀರು ಹಾಕಿ ಅಂತೆಲ್ಲಾ ಆದೇಶ ಇರುತ್ತದೆ. ಆದ್ರೆ ಉತ್ತರಿಸುವ ಗೋಜಿಗೆ ಹೋಗದೆ ತೆಪ್ಪಗೆ ವಾಪಾಸು ಅಡುಗೆ ಮನೆಗೆ ಬಂದು ಸ್ಟವ್ ಆರಿಸಿ.
ಆಮೇಲೆ ಒಂದು ತಟ್ಟೆಗೆ ದೊಸೆಯನ್ನ ಸ್ಥಳಾಂತರ ಮಾಡಿ, ಅದಕ್ಕೆ ಒಂದಿಷ್ಟು ತುಪ್ಪ, ಜೇನುತುಪ್ಪ ಹಾಕಿಕೊಂಡು ತಿನ್ನಿ.

ರುಚಿಯಾಗಿ ಇರುತ್ತೆ. ಇಲ್ಲದೆ ಇದ್ದಲ್ಲಿ ನಿಮ್ಮ ಹೆಂಡತಿ ಮಾಡಿರುವ ಹಿಟ್ಟು ಸರಿಯಿಲ್ಲ ಎಂದು ಭಾವಿಸಿ. ಸಾಮಾನ್ಯವಾಗಿ ಹಾರ್ಲಿಕ್ಸ್ ರುಚಿಯಾಗೆ ಇರುತ್ತದೆ.

ಇದೇ ಮಾರ್ಗದಲ್ಲಿ ನೀವು ದೋಸೆಯ ಮೇಲೆ ಕೊಂಪ್ಲಾನ್, ಬೂಸ್ಟ್, ಬೌರ್ನ್ವಿಟ ಇತ್ಯಾದಿಗಳನ್ನೂ ಪ್ರಯೋಗಿಸಬಹುದು. ಹಿಟ್ಟು ಖಾಲಿ ಆಗುವ ವರೆಗೆ.

ಹೆಂಡತಿ ಬರುವ ವರೆಗೆ ಬಾಣಲೆ ತೊಳೆಯಬೇಕು ಅಂತೇನಿಲ್ಲ. ಆದ್ರೆ ತಿಂದ ಮೇಲೆ ಕೈ ಮಾತ್ರ ಮರೆಯದೆ ತೊಳೆಯಿರಿ.



ಸರ್ವೇ ಜನಾಃ ಸುಖಿನೋ ಭವಂತು.

(ಚಿತ್ರಗಳು ನೆಟ್ ನಿಂದ ಕದ್ದಿದ್ದು. 
http://fitness.makeupandbeauty.com/how-to-make-healthy-dosa-batter/)