Tuesday, July 5, 2016

ಬೇಸನ್ ಲಾಡು ಮಾಡುವ ವಿಧಾನ. :)



ಈ ಪೋಸ್ಟು, ಸಿಹಿ ಇಷ್ಟಪಡುವ ಗಂಡು ಜೀವಿಗಳಿಗೆ  ಮಾತ್ರ. J


ಹೆಂಡತಿ ಯಾವಾಗಲೂ “ನಿಮಗೆ ಒಂದು ಒಗ್ಗರಣೆ ಕೂಡ ಹಾಕೋಕೆ ಬರೋಲ್ಲ” ಅಂತ ಸ್ವಾಟೆ ತಿವಿಯುತ್ತಿದ್ದಾಳೆಯೇ? ಅಥವಾ ದಿನಾಲು ಒಬ್ಬರದೇ ಕೈ ರುಚಿ ನೋಡಿ ನಾಲಿಗೆ ಕೆಟ್ಟು ಹೋಗಿದೆಯೇ? ಇಲ್ಲಿದೆ ಅದಕ್ಕೆ ಪರಿಹಾರ.
ಮಿ
ತ್ರರೇ, ನಾನು ನಿಮಗೆ ಅತಿ ಸುಲಭವಾಗಿ ಸಿಹಿ ತಿಂಡಿಯೊಂದನ್ನು ಮಾಡುವುದು ಹೇಗೆಂದು ತಿಳಿಸಿ ಕೊಡಲಿದ್ದೇನೆ. ನೀವು ಅಂಗಡಿಗಳಲ್ಲಿ, ಸಮಾರಂಭಗಳಲ್ಲಿ ಬೇಸಿನ್ ಲಾಡು ತಿಂದು ಬಾಯಿ ಚಪ್ಪರಿಸಿರುತ್ತಿರಿ. ಇದನ್ನು ನೀವು ಮನೆಯಲ್ಲಿ ಅತಿ ಸುಲಭವಾಗಿ ಮಾಡಬಹುದು.

ಈ ಕೆಳಗೆ ಲಾಡು ಮಾಡಲು ಬೇಕಾಗುವ ಪದಾರ್ಥ ಹಾಗು ವಿಧಾನಗಳನ್ನು ಹಂತಹಂತವಾಗಿ ವಿವರಿಸಲಾಗಿದೆ. ಮಾಡಿ, ನೋಡಿ ಹಾಗು ಕೊನೆಗೆ ತಿಂದು (ಅಥವಾ ತಿನ್ನಿಸಿ) ಆನಂದಿಸಿ.

1. ಮಾಡುವ ಸಮಯ: ಹೌದು. ಹೆಂಡತಿ ಮನೆಯಲ್ಲಿ ಇಲ್ಲದ ಸಮಯ ಆರಿಸಿಕೊಳ್ಳಿ. ಯಾಕೂ ಅಲ್ಲ, ಮಧ್ಯ ಮಧ್ಯ ಇದನ್ನು ಹಿಂಗೆ ಮಾಡಬೇಕು, ಹಾಗೆ ಯಾಕೆ ಮಾಡಬೇಕು, ಎಂಬಿತ್ಯಾದಿ ಪ್ರಶ್ನೆ ಕೇಳುತ್ತಿರುತ್ತಾಳೆ. ನೀವು ಕಾರು ಓಡಿಸುವಾಗ, ಆಕೆಯ ಕಿರಿ ಕಿರಿ ಹೆಂಗೆ ಇರುತ್ತೋ, ಹಂಗೆಯೇ! ಈ ಪ್ರಶ್ನೆಗಳು ನಿಮ್ಮ ಏಕಾಗ್ರತೆಗೆ ಭಂಗ ತರುತ್ತದೆ.

2. ಆತ್ಮವಿಶ್ವಾಸ: ನಾಯಕನಾಗುವುದು ಹೇಗೆ? ಇಡ್ಲಿ, ಆರ್ಕಿಡ್ ಮತ್ತು ಆತ್ಮವಿಶ್ವಾಸ ಈ ತರದ ಪುಸ್ತಕಗಳನ್ನು ಓದಿರಬಹುದು ಅಥವಾ ನಿಮ್ಮ ಕಛೇರಿಗಳಲ್ಲಿ ಕೊಟ್ಟ ಕೆಲಸ ಮುಗಿಸುವುದು ಹೇಗೆ ಎಂಬೆಲ್ಲ ತರಬೇತಿ ಪಡೆದಿರಬಹುದು.
ಅದನ್ನು ಸ್ವಲ್ಪ ನೆನಪಿಸಿಕೊಳ್ಳಿ. ಏನೇ ಮಾಡುವ ಮೊದಲು, ಆತ್ಮ ವಿಶ್ವಾಸ ಮುಖ್ಯ. ನೀವು ಅಡುಗೆ ಮನೆಗೆ ನುಗ್ಗಿ, ಏನೋ ಒಂದು ಭರ್ಜರಿಯಾದ್ದನ್ನು ಸಾಧಿಸಬಲ್ಲಿರಿ ಎಂದು ನಂಬಿರಿ.

3. ಬೇಕಾಗುವ ಸಾಮಗ್ರಿಗಳು: ಫ್ರಿಜ್ಜಿನಿಂದ ಕಡಲೆ ಹಿಟ್ಟು (ಹೊರಗಿಟ್ಟರೆ, ಹುಳ ಆಗುವುದು ಎಂದು ಸಾಮಾನ್ಯವಾಗಿ ಅದನ್ನು ಫ್ರಿಜ್ಜಿನಲ್ಲಿ ಇಟ್ಟಿರುತ್ತಾರೆ- ಇದು ಹಳದಿ ಬಣ್ಣ ಇರುತ್ತದೆ. ಇದೇ ಹಿಟ್ಟಿನಿಂದ ನಿಮಗೆ ಶನಿವಾರ – ಭಾನುವಾರಗಳಲ್ಲಿ ಭಜ್ಜಿ – ಬೋಂಡ ಮಾಡಿ ಕೊಡುವುದು. ಇಷ್ಟು ಕ್ಲೂ ನಿಂದ ನಿಮಗೆ ಹಿಟ್ಟು ಹುಡುಕಲು ಸಹಾಯ ಆಗಬಹುದು.) ದ್ರಾಕ್ಷಿ ಗೋಡಂಬಿ, ಬಾದಾಮಿ (ಅಳತೆ ಒಂದು ಮುಷ್ಠಿ), ಕೊಬ್ಬರಿ ಹಾಗು ಅಮ್ಮ ಊರಿನಿಂದ ಮಾಡಿ ಕೊಟ್ಟು ಕಳಿಸಿದ ತುಪ್ಪ ತೆಗೆದುಕೊಳ್ಳಿ. ಯಾವುದೇ ಕಾರಣಕ್ಕೂ ಹೆಂಡತಿ ತಯಾರಿಸಿದ ವಾಸನೆಯುಕ್ತ ತುಪ್ಪ ಬೇಡ.

3. ಈಗ ಒಲೆ ಹಚ್ಚಿ. ಅದರ ಮೇಲೆ ಒಂದು ಬಾಣಲೆ ಇಡಿರಿ. ನಾನ್ ಸ್ಟಿಕ್ ಬಾಣಲೆ ಆಗಿದ್ದರೆ, ಅದಕ್ಕೇ ಅಂತ ಒಂದು ಮರದ ಮಗುಚೋ ಕೈ ಇರುತ್ತದೆ. ಅದನ್ನ ತೆಗೆದು ಕೊಳ್ಳಿ. (ಮರದ್ದು ಸಿಕ್ಕಿಲ್ಲ ಅಂತ ಸ್ಟೈನ್ ಲೆಸ್ ಸ್ಟೀಲ್ ಉಪಯೋಗಿಸಿದರೆ, ನಿಮ್ಮ ಮನೆಯಲ್ಲಿ ನಡೆಯುವ ಅಹಿತಕರ ಘಟನೆಗಳಿಗೆ ನಾನು ಜವಾಬುದಾರ ಅಲ್ಲ. ಹೆಂಡತಿ ಕೋಪಗೊಂಡು ಲಟ್ಟಣಿಗೆಯಲ್ಲಿ ನಾಕು ಕೊಡಬಹುದು! ) ಅದು ಸಿಗದೇ ಇದ್ದಲ್ಲಿ, ಅಲ್ಲೇ  ಮಿಕ್ಸಿ ಹಿಂಬಾಗ ದೂಳು ತಿನ್ನುತ್ತಾ ಇರುವ ಅಲುಮಿನಿಯಂ ಬಾಣಲೆ ತೆಗೆದು ಕೊಳ್ಳಿರಿ. ವರೆಸಿ ಒಲೆ ಮೇಲೆ ಕುಕ್ಕಿ.

4. ಬಾಣಲೆಗೆ ಒಂದು ಲೋಟ ಕಡಲೆ ಹಿಟ್ಟು ಹಾಕಿ. ಲೋಟ ಮುಂದೆ ಉಪಯೋಗಕ್ಕೆ ಬರುತ್ತದೆ, ಕೂಡಲೇ ಅದನ್ನ ಸಿಂಕಿಗೆ ಬಿಸುಡಬೇಡಿ. ಆದಷ್ಟು ಸಣ್ಣ ಉರಿಯಲ್ಲಿ, ಹಿಟ್ಟನ್ನು ಸೌಟಿನಿಂದ ತಿರುವುತ್ತಾ ಇರಿ. ಸುಮಾರು 10 ನಿಮಿಷ. ಅಥವಾ ನಿಮ್ಮ ಬಲ ಗೈ ನೋವು ಬರುವಷ್ಟು ಹೊತ್ತು. ಆಮೇಲೆ ಸ್ಟೋವ್ ಆರಿಸಿ, ಹಿಟ್ಟನ್ನು ಒಂದು ತಟ್ಟೆಗೆ ಸುರುವಿಕೊಳ್ಳಿ. ಒಂದು ದ್ರಾಕ್ಷಿ ಗೋಡಂಬಿ ಹಾಗು ಬಾದಾಮಿ ಬಾಯಿಗೆ ಹಾಕಿಕೊಳ್ಳಿ.

5. ಒಂದು ಮುಕ್ಕಾಲು ಲೋಟ ಸಕ್ಕರೆ ತೆಗೆದುಕೊಳ್ಳಿ. ಸಕ್ಕರೆ ಅಡುಗೆಮನೆಲೇ ಅಲ್ಲೇ ಎಲ್ಲೋ ಇರುತ್ತೆ. ಚೂರು ಕಣ್ಣು ಆಡಿಸಿ.
ಅದಕ್ಕೆ ನಾಲ್ಕು ಏಲಕ್ಕಿ ಹಾಕಿ (ಸಿಕ್ಕಿದರೆ ಮಾತ್ರ) ಮಿಕ್ಸಿಯ ಸಣ್ಣ ಜಾರಿನಲ್ಲಿ ಸರಿ ಸುಮಾರು 100 ರಿಂದ 140 ಸೆಕೆಂಡ್ ಓಡಿಸಿ. ಆಮೇಲೆ ಮಿಕ್ಸಿ ಆಫ್ ಮಾಡಿ, ಅದನ್ನು ಪಕ್ಕಕ್ಕೆ ಇಡಿ. ಲೋಟ ಕೂಡ ಅಷ್ಟೇ, ಸಿಂಕಿಗೆ ಹಾಕಿ. ನಮ್ಮ ಉಪಯೋಗಕ್ಕೆ ಅವು ಇನ್ನು ಇಲ್ಲ.

6. ಅರ್ದ ಲೋಟ / ಒಂದು ಮುಷ್ಠಿ ಅಥವಾ ಚೂರು ಬೋರು ಬರುವಷ್ಟು ಕೊಬ್ಬರಿ ತುರಿದುಕೊಂಡು, ಬಾಣಲೆಯಲ್ಲಿ ಇನ್ನೂರು ಸೆಕೆಂಡ್ ಹುರಿಯಿರಿ. ಆಮೇಲೆ ಅದನ್ನು ಆಗಲೇ ಹುರಿದಿಟ್ಟ ಹಿಟ್ಟಿಗೆ ಸೇರಿಸಿ. ಕಲೆಸಿ. ತುರಿದು ಸುಸ್ತು ಆಗಿರುವುದರಿಂದ ಶಕ್ತಿಗೆ ದ್ರಾಕ್ಷಿ ಗೋಡಂಬಿ, ಸೇವಿಸಿ!

7. ಈಗ ಗಮಗಮಿಸುವ ನಾಕು ಚಮಚ ತುಪ್ಪ, ಹಿಟ್ಟಿಗೆ ಹಾಕಿ. (ಚಮಚ ಸಾಧಾರಣ ದಿಂದ ಮಧ್ಯಮ ಗಾತ್ರದ್ದು.) ಚೆನ್ನಾಗಿ ಕಲೆಸಿ.
ಇಷ್ಟು ಹೊತ್ತಿಗೆ, ಹಿಟ್ಟು ಸಂಪೂರ್ಣ ತಣ್ಣಗೆ ಆಗಿರುತ್ತದೆ.

8. ಇನ್ನೂ ಕೆಲಸ ಮುಗಿದಿಲ್ಲ. ಬಾಣಲೆ ಮತ್ತೆ ಒಲೆ ಮೇಲೆ ಇಟ್ಟು, ಒಂದೆರಡು ಚಮಚೆ ತುಪ್ಪ ಹಾಕಿ. ಅದಕ್ಕೆ ಬಾದಮಿ (ಇನ್ನೂ ಉಳಿದಿದ್ದರೆ ) ಚೂರು ಚೂರು ಮಾಡಿ ಸೇರಿಸಿ. ಸರಿಯಾಗಿ ಒಂದರಿಂದ ಇಪ್ಪತ್ತರ ತನಕ ಸಂಖ್ಯೆಯನ್ನು ಮನಸ್ಸಿನಲ್ಲಿ ಎಣಿಸಿ. ಇಪ್ಪತ್ತೊಂದು ಬರುವಾಗ ದ್ರಾಕ್ಷಿ ಹಾಕಿ. 28ಕ್ಕೆ ಒಲೆ ಆರಿಸಿ, ಹಿಟ್ಟನ ಮಿಶ್ರಣಕ್ಕೆ ಇದನ್ನು ಸೇರಿಸಿ.

9. ಈ ಹಿಟ್ಟಿಗೆ, ಸಕ್ಕರೆ ಪುಡಿ ಹಾಕಿ.  (ಆಗಲೇ ಪುಡಿ ಮಾಡಿದ್ರಲ್ಲ, ಅದೇನೇ)
ಚೆನ್ನಾಗಿ ಕಲೆಸಿ, ಸಣ್ಣ ಸಣ್ಣ ಉಂಡೆ ಮಾಡಿ.
ಇಲ್ಲಿಗೆ ರುಚಿಕರವಾದ ಬೇಸನ್ ಲಾಡು ತಯಾರು.

ಹೆಂಡತಿ ಬಂದಮೇಲೆ, ಕೊಡಿ. ಆಕೆ ತಿಂದು ಸ್ವಲ್ಪ ಹೊತ್ತು.. ಸೌಖ್ಯದಿಂದ ಇದ್ದಲ್ಲಿ, ನೀವೂ ಕೂಡ ತಿನ್ನಿ. J



ಕೊಸರು:
ಒಮ್ಮೊಮ್ಮೆ ತುಪ್ಪ ಜಾಸ್ತಿ ಆಗಿ, ಹುರಿದಿದ್ದು ಕಡಿಮೆ ಆಗಿ, ಹಿಟ್ಟು ಸ್ವಲ್ಪ ಮೆತ್ತಗೆ ಆದರೆ.. ಉಂಡೆ ಕಟ್ಟಲು ಬಾರದು.
ಆದ್ರೆ ಚಿಂತಿಸುವ ಅಗತ್ಯ ಇಲ್ಲ.
ಹೆಂಗೆ ಬರುತ್ತಾ ಹಂಗೆ ಉಂಡೆ ಕಟ್ಟಿ. ಅದು ಉಂಡೆ ಯಿಂದ ಚಪ್ಪಟೆ ಆಕಾರ ತಾಳುವಾಗ .. ಮೆಲ್ಲಕೆ ಹೊತ್ತೊಯ್ದು ಫ್ರಿಜ್ಜಿನಲ್ಲಿ ಸ್ವಲ್ಪ ಹೊತ್ತು ಇಡಿ. ಭಾಗಷ್ಯ ಎರಡು ಸಿಗರೇಟು ಸೇದುವ ಸಮಯದಷ್ಟು.

ನಂತರ ಹೆಂಡತಿ ಬಂದಮೇಲೆ..
ಇದು “ಗೀ ಫ್ಲೇವರ್ಡ್, ಡ್ರೈ ರೋಸ್ಟೆಡ್ ಬಿಸ್ಕುಟ್” ಅಂತ ಹೇಳಿ ಕೊಡಿ.
ತಣ್ಣಗೆ, ಸಿಹಿ ಸಿಹಿಯಾಗಿ, ತುಪ್ಪದ ಸುವಾಸನೆಯಲ್ಲಿ ಚೆನ್ನಾಗಿಯೇ ಇರುತ್ತದೆ.

ಇಲ್ಲಿಗೆ ಬೇಸನ್ ಲಾಡು ಮಾಡುವ – ತಿನ್ನುವ ವಿಧಾನ ಸಮಾಪ್ತಿ.

ಸರ್ವರಿಗೂ ಒಳ್ಳೇದು ಆಗಲಿ.