Friday, September 22, 2017

ಜನ್ನತ್ ಭಾಗ್ಯ




ನೀವು ನನ್ನ ಮಾತನ್ನು ಒಪ್ಪದೇ ಹೋಗಬಹುದು.
ಸಿದ್ದರಾಮನ ಭಕ್ತ ಎಂದು ಜರಿಯಬಹುದು.
ನನ್ನ ಮೇಲೆ ನೀವು ಕಾಮೆಂಟ್ / ಬೆದರಿಕೆ ಅಸ್ತ್ರ ಜಡಿಯಬಹುದು.
ಇರಲಿ. ಒಳ್ಳೆಯದನ್ನು ಗುರುತಿಸುವುದಕ್ಕೆ, ಹೊಗಳುವುದಕ್ಕೆ ಯಾವ ಅಂಜಿಕೆಯೂ ನನಗಿಲ್ಲ.

ಸದ್ಯಕ್ಕೆ ಕರುನಾಡು ಅತ್ಯಂತ ಪ್ರಗತಿ ಹೊಂದಿದ ರಾಜ್ಯ ಎಂದೇ ನನ್ನ ಭಾವನೆ.
ಕಾರಣ ಇಷ್ಟೇ,
ಇಲ್ಲಿನ ಪೋಲಿಸರೋಬ್ಬರನ್ನು ಬಿಟ್ಟು, ಮಿಕ್ಕ ಎಲ್ಲಾ ಜನರು ವಿಪರೀತ ಬುದ್ದಿವಂತರಾಗಿದ್ದಾರೆ.!

ಬೇಕಿದ್ರೆ ಗಮನಿಸಿ.
ಡಿ.ಕೆ ರವಿ ಹಾಗೂ ಡಿವೈಎಸ್ಪಿ ಗಣಪತಿ ಅನುಮಾನಾಸ್ಪದ ಸಾವಿಗೆ ಈಡಾದಾಗ, ನಮ್ಮ ಪೋಲಿಸರಿಗಿಂತಲೂ ಪತ್ರಿಕೆಗಳು – ಟೀವಿ ನ್ಯೂಸ್ ಗಳು ತರಹೇವಾರಿ ತನಿಖೆ ಮಾಡಿದವು. ಒಂದು ಟ್ಯಾಬ್ಲಾಯ್ಡ್ ಅಂತೂ... ರವಿ ಅವರು, ಯಾವುದೋ ಮಹಿಳೆಗೆ 40 – 50 ಕಾಲ್ ಮಾಡಿದ್ದರು ಎಂದೆಲ್ಲ ವರದಿ ಮಾಡಿದ್ದರು. ಗಣಪತಿಯವರ ಆರೋಗ್ಯದ ಬಗ್ಗೆ ಏನೆಲ್ಲಾ ಹೇಳಿಕೆ ಕೊಟ್ಟರು. ಆದರೆ ನಮ್ಮ ಪೊಲೀಸರು ಮಾತ್ರ, ಯಾವ್ದೋ ಹಳೇ ಸಿ ಸಿ ಟೀವಿ ಫೂಟೆಜ್ ಇಟ್ಕೊಂಡು ಕೂತಿದ್ರು! ಈ ಪತ್ರಿಕೆಯವರನ್ನ, ಮಂತ್ರಿಗಳನ್ನ ಹಿಡಿದು ಕೇಳಿದ್ರೆ, ಸತ್ಯ ಗೊತ್ತಾಗಿರೋದು. ಪಾಪ.. ನಮ್ಮ ಪೊಲೀಸರು ದಿನಾ ಬೆಳಿಗ್ಗೆ ನೆನೆಸಿದ ಬಾದಾಮಿ ತಿನ್ನೋಲ್ಲ ಅನ್ಸುತ್ತೆ. ಬುದ್ದಿನೇ ಇಲ್ಲ.

ಆದುದರಿಂದ ನಾವು ಕೆಲವೊಂದು ಸಣ್ಣ ಪುಟ್ಟ ಸಲಹೆಗಳನ್ನು ನಮ್ಮ ದೊರೆಗೆ ಕೊಡುತ್ತಿರುವೆ. (ಸಲಹೆ ಕೊಡೋಕೆ ಅಂತಲೇ, ಸುಮಾರು ಜನರನ್ನು ಅವರು ಸಂಬಳ ಕೊಟ್ಟು ಇಟ್ಟುಕೊಂಡಿರಬಹುದು. ಆದರೆ ಈ ಕೆಳಕಂಡ ಸಲಹೆಗಳು ಪೂರ್ಣ ಉಚಿತ.)

೧. ಜನ ಬುದ್ದಿವಂತರು ಆದರೆ ಸಾಲದು. ಪೋಲಿಗಳೂ ..ಓಹ್ ಸಾರಿ. ಪೋಲಿಸರೂ ಬುದ್ದಿವಂತರು ಆಗಬೇಕು. ಹಾಗಾಗಿ ನಮ್ಮ ಶ್ರೀಧರ್ ನೇತೃತ್ವದಲ್ಲಿ ಪೊಲೀಸರಿಗೆ ತರಬೇತಿ ಕೊಡಿಸಬೇಕು. ಹೆಂಗೂ ಅಗ್ನಿಗೆ ಪೋಲಿಸ್
ಠಾಣೆ ಹೊಸದಲ್ಲ. ಸೆಲ್ ಒಳಗೆ ಕುಂತೇ ಅವರು ಟ್ರೈನಿಂಗ್ ಕೊಡಬಲ್ಲರು.

೨. ಮೂಢನಂಬಿಕೆ ವಿರುದ್ದ ಹೋರಾಡುತ್ತಿರುವ ಕಾವಿಧಾರಿ  ಶ್ರೀ ಶ್ರೀ ಶ್ರೀ ನಿಡುಕಾಮಿಡಿ ಸ್ವಾಮೀಜಿ (!) ಅವರಿಗೆ ಯಾರ ಕೊಲೆ ಯಾರು ಮಾಡಿದರು , ಮುಂದೆ ಯಾರ ಕೊಲೆ ಆಗಲಿದೆ ಎಂದೆಲ್ಲಾ ತಿಳಿದಿದೆ. ಅವರನ್ನು ಇಲಾಖೆಗೆ ಪತ್ತೆದಾರಿಕೆ ವಿಭಾಗಕ್ಕೆ ಸಲಹೆ ಕೊಡಲು ನೇಮಕ ಮಾಡಿಕೊಳ್ಳಬೇಕು. ಅವಾಗ ಎರಡೇ ನಿಮಿಷದಲ್ಲಿ ಎಲ್ಲಾ ಕೇಸುಗಳು ಕ್ಲೊಜು ಆಗುವುದು.

೩. ನಮ್ಮ ಬರಗೆಟ್ಟ ಸಾಹಿತಿ .. ತೋಪು ಸಿನೆಮ ನಿರ್ದೇಶಕ (ತೋ ಯಾವ್ದೋ ಒಂದು ಹೆಸರು. ಮಕ್ಕಳ ಪುಸ್ತಕದಲ್ಲಿ ತಪ್ಪಾದಂತೆ ಇಲ್ಲೂ ಅವರಹೆಸರು ಬಿಟ್ಟು ಹೋಗಿದೆ ಬಿಡಿ) .. ಹಾಗು ಪ್ರಶಸ್ತಿ ವಿಜೇತ ಭಗವಾನರ್ ಗೆ ಇತಿಹಾಸ / ಪುರಾಣದಲ್ಲಿ ಯಾರು – ಯಾರನ್ನ ಸಾಯಿಸಿದರು, ಯಾಕೆ ಸಾಯಿಸಿದರು ಎಂದೆಲ್ಲಾ ತಿಳಿದಿದೆ. ಹಾಗಾಗಿ, ಇವರುಗಳ ಕೈಲಿ, ಹೊಸದಾಗಿ ಕಾವ್ಯ – ಪುರಾಣ ಎಲ್ಲವನ್ನೂ  ಅರಾಬಿಕ್, ಲ್ಯಾಟಿನ್ ಭಾಷೆಯಲ್ಲಿ ಬರೆಸಬೇಕು. (ಪಾಳಿ ಭಾಷೆ ಎಂದಿರ? ಸನ್ಮಾನ್ಯರು ಬುದ್ದನನ್ನು ಓದಿಲ್ಲ ಬಿಡಿ. ಹಂಗಾಗಿ ಪಾಳಿಯ ಹೆಸರಿಲ್ಲ)

೪. ಇಷ್ಟು ಮಾಡಿದರೆ ಸಾಲದು. ಸರಕಾರ ಕೆಲವು ಹೊಸ ಕಾನೂನು ಕೂಡ ಜಾರಿಗೆ ತರಬೇಕಾಗುತ್ತದೆ. ಉದಾ: ಅರ್ ಎಸ್ ಎಸ್ / ಬಿಜೇಪಿ ಯವರು ಯಾರೇ ಕೊಲೆಯಾದರೂ .. ಅದನ್ನು ಆತ್ಮಹತ್ಯೆ ಎಂದು ಘೋಷಿಸಬೇಕು. ಹಾಗು ಮಿಕ್ಕ ಯಾರೇ ಸತ್ತರೂ.. ಅದಕ್ಕೆ, ಅರ್ ಎಸ್ ಎಸ್ ಕಾರಣ ಎಂದು ತಿಳಿಸಿ, ಸಿಕ್ಕವರನ್ನು ಹಿಡಿದು ಬಡಿಯಬೇಕು. (ಅನಂತ ಮೂರ್ತಿಯವರು ತೀರಿಕೊಂಡಾಗ .. ಹಿಡಿದು ಬಡಿದರಲ್ಲ ಹಂಗೆ ) ಬೇಕಿದ್ರೆ ಈ ಕಾಯಿದೆಗೆ ಜನ್ನತ್ ಭಾಗ್ಯ ಎಂದು ಹೆಸರಿಡಲಿ. ನನ್ನ ಪೂರ್ಣ ಬೆಂಬಲ ಇದೆ.


ಇಷ್ಟು ಮಾಡಿದರೆ ಸಾಕು.
ಕರ್ನಾಟಕ ಪೋಲಿಸ್ ಹೆಸರು ಉಚ್ಛ್ರಾಯ ಸ್ಥಿತಿಗೆ ಹೋಗುತ್ತದೆ. ಸಾಯಿಕುಮಾರ್ ನಟಿಸಿ – ಕನ್ನಡಿಗರನ್ನು ರಂಜಿಸಿದಕ್ಕೂ ಒಂದು ಅರ್ಥ ಸಿಗುತ್ತದೆ.

ಮತ್ತೆ ಮಿಕ್ಕಂತೆ ಎಲ್ಲಾ ಸೌಖ್ಯ.
ಸರಕಾರದ ದಯೆಯಿಂದ ನಾನು ಇನ್ನೂ ಜೀವಂತ ಇದ್ದೇನೆ. ಇಷ್ಟೆಲ್ಲಾ ಮಳೆ ಬಂದು ಅನಾಹುತ ಆದರೂ, ಸ್ವಲ್ಪ ಲೆಟ್ ಆದರೂ ಮನೆಗೆ ಜೀವಂತ ತಲುಪಿದ್ದೇನೆ. ಇದಕ್ಕೆಲ್ಲ ನಿಮ್ಮ ದಕ್ಷ ಆಡಳಿತವೇ ಕಾರಣ.

ನಿಮ್ಮನ್ನು ಜೀಸಸ್ ಸುಖವಾಗಿ ಇಟ್ಟಿರಲಿ ಎಂದು ಎರಡು ಬಾಳೆಹಣ್ಣು ನೈವೇದ್ಯ ಮಾಡಿ ಬೇಡಿಕೊಳ್ಳುವೆ.