Wednesday, May 13, 2015

ವಾಯುವಿಹಾರದ ಸೈಡ್ ಎಫೆಕ್ಟ್ಸ್!

(2014 ರ  ’ಅಕ್ಕ’ ವಿಶ್ವಕನ್ನಡ ಸಮ್ಮೇಳನದ ನೆನಪಿನ ಸಂಚಿಕೆ "ಹರಟೆ ಕಟ್ಟೆ" ಪ್ರಬಂಧಸಂಕಲನದಲ್ಲಿ ಪ್ರಕಟಗೊಂಡ ಬರಹ)

ನನಗೆ ಯಾವಾಗಲೂ ಈ ಟೀವಿ ಕಾರ್ಯಕ್ರಮಗಳ ಬಗ್ಗೆ ಬಹಳವೇ ಮುನಿಸು. ಎಲ್ಲವನ್ನೂ ಉತ್ಪ್ರೇಕ್ಷೆ ಮಾಡಿ ಹೇಳುವುದರಲ್ಲಿ ಮಾಧ್ಯಮದವರು ಎತ್ತಿದ ಕೈ. ನಿಜ ಯಾವುದು,ಸುಳ್ಳು ಯಾವುದು ಅಥವಾ ಉತ್ಪ್ರೇಕ್ಷೆ ಯಾವುದು ಎಂದು ಅರಿಯದ ಸ್ಥಿತಿಗೆ ನಾವು ಬಂದು ಬಿಟ್ಟಿದ್ದೇವೆ. ನೀವು ಒಮ್ಮೆ ಇಂಗ್ಲಿಷ್ ಮಾಧ್ಯಮಗಳನ್ನ ಗಮನಿಸಿ. ನರೇಂದ್ರ ಮೋದಿ ಗೆ ಇರುವ ಕೆಟ್ಟ ಗುಣಗಳು, ಮಾಧ್ಯಮ ಇರ ಬಯಸುವ / ನಂಬಿರುವ ಆತನ ದುಷ್ಕೃತ್ಯಗಳು ಎಲ್ಲವನ್ನೂ 16 ಆಣೆ ಸತ್ಯ ಅನ್ನೋ ಹಂಗೆ ವರದಿ ಪ್ರಸಾರ ಮಾಡುತ್ತವೆ! ಹೋಗ್ಲಿ ರಾಜಕೀಯ ಯಾಕೆಮಾಡಿರುವ ಉಪ್ಪಿಟ್ಟನ್ನೂ ಕೂಡ "ಜೀವನದಲ್ಲಿ ಇಂತಾ ಒಂದು ಖಾದ್ಯ ತಿಂದೇ ಇಲ್ಲ" ಅನ್ನೋ ಹಂಗೆ ಸಿಹಿ ಕಹಿ ಚಂದ್ರು ತಲೆ ಅಲ್ಲಾಡಿಸೋಲ್ವೆ?ಹಂಗೆ.
ಇರಲಿ ಈ ವಿಚಾರ ಯಾಕೆ ಬಂತಪ್ಪಾ ಅಂದ್ರೆಮೊನ್ನೆ ಬೆಳಿಗ್ಗೆ ಬೆಳಿಗ್ಗೆ ಟೀವಿ ಹಾಕಿದ್ರೆ ಯಾವುದೊ ಒಬ್ಬ ಜ್ಯೋತಿಷಿದು ಕಾರ್ಯಕ್ರಮ ಬರ್ತಾ ಇತ್ತು. ಅಡುಗೆ ಮನೇಲಿ ಇದ್ದ ಹೆಂಡತಿ ಕಾರ್ಯಕ್ರಮನ ಅದೆಷ್ಟು ಗಮನಿಸ್ತಾ ಇದ್ಲು ಅಂದ್ರೆನಾನು ಕಾಫೀ ಅಂತ ಕಿರುಚಿದ್ದು ಕೇಳಿಸಲೇ ಇಲ್ಲ! ಸ್ವಲ್ಪ ಹೊತ್ತಾದ ಮೇಲೆ ಕಾಫಿ ಜೊತೆ ಬಂದಾಗನನ್ನ ಸಾತ್ವಿಕ! ಸಿಟ್ಟನ್ನು (ದೈರ್ಯದಿಂದಲೇ) ತೋರ್ಪಡಿಸಿ ಬಿಟ್ಟೆ. ನೀವು ಹೆಂಗಸರು, ಬರೀ ಇಂತದ್ದು ನೋಡಿ ಹಾಳಾಗ್ತಿರಿ. ಉಪಯೋಗಕ್ಕೆ ಬರೋದು ಒಂದಾದ್ರು ನೋಡಬಾರದೇಚಂದನ ಅನ್ನೋ ಚಾನೆಲ್ ಇದೆಅದರಲ್ಲಿ ಬೆಳಿಗ್ಗೆ ಯೋಗ - ವ್ಯಾಯಾಮ - ಹೆಲೋ ಗೆಳೆಯರೇ ಮುಂತಾದ ಕಾರ್ಯಕ್ರಮ ಬರುತ್ತೆ ಗೊತ್ತೇ? ಉಪಯೋಗಕ್ಕೆ ಬಾರದೆ ಇರೋದನ್ನ ನೋಡಿದುಡ್ಡು ವೇಸ್ಟ್ ಮಾಡ್ತೀರಿ ಅಂದೆ. ಆದರೆ ಹಂಗೆಲ್ಲಾ ನನ್ನಾಕೆ ಸೋಲುವವಳೇ ಅಲ್ಲ. ಸ್ವಲ್ಪ ಹೊತ್ತು ಆ ಕಡೆಯಿಂದ ಯಾವುದೇ ಬಾಣ ಬರಲಿಲ್ಲ. ಅನುಭವದ ಪ್ರಕಾರ ಹೆಂಡತಿಯ ಮೌನ ಯಾವುದೋ ಭಯಂಕರ ಬ್ರಹ್ಮಾಸ್ತ್ರದ ಮುನ್ಸೂಚನೆ. ಮುನ್ನೆಚರಿಕೆ ಒಳ್ಳೆಯದು. 

ಒಂದೈದು ನಿಮಿಷಗಳಲ್ಲಿ ತಟ್ಟೆ ಪೂರ ಪೂರಿ ಹಾಗು ಗಟ್ಟಿ ಚಟ್ನಿಯೊಂದಿಗೆ ಬಂದುನೀವು ದಿನಾ ವಟ ವಟ ಅನ್ನೋ ಅರ್ನಾಬ್ ಗೋಸ್ವಾಮಿ ಕಾರ್ಯಕ್ರಮ ನೋಡ್ತಿರಲ್ಲ?ಕನಿಷ್ಠ ಅರ್ದ ನಿಮಿಷ ಯಾರಾದರೂ ಅರ್ಥ ಆಗೋ ಹಾಗೆ  ಮಾತಾಡುತ್ತಾರ? ಬರೀ ಗಲಾಟೆ.  ಇನ್ನು ಸಾಗರಿಕ ಚೆನ್ನಾಗಿದ್ದಾಳೆ ಅಂತ ಆಕೆಯ ತಲೆ ಬುಡವಿಲ್ಲದ ಚರ್ಚೆ ಕೂಡ ನೋಡ್ತಿರಿ. ನ್ಯೂಸ್ ಓದೋಳು ಚೆನ್ನಾಗಿದ್ರೆ ನೀವು ಅರಾಬಿಕ್ರಶಿಯನ್ ಚಾನೆಲ್ ಯಾವುದಾದರೂ ಆದೀತು. ಇದೆಲ್ಲಕಿಂತ ಬ್ರಹ್ಮಾಂಡ ಯಾವ ಮಟ್ಟದಲ್ಲಿ ಕೆಟ್ಟದ್ದುಅದೇನೋ ಯೋಗ ವ್ಯಾಯಾಮ ಅಂದ್ರಲ್ಲಅದನ್ನ ನೀವು ಮಾಡಿದ್ದೀರಾದಿನ ಒ೦ಬತ್ತು ಘಂಟೆ ತನಕ ಬಿದ್ದುಕೋತಿರಲ್ಲಸ್ವಲ್ಪ ವಾಕ್ – ವ್ಯಾಯಾಮ ಮಾಡಿ ಹೊಟ್ಟೆ ಕರಗಿಸಬಾರದೆ?ಬೀರುನಲ್ಲಿ ಟೈಟ್ ಅಂತ ಇಟ್ಟ ೪ ಜೀನ್ಸ್ ನ ಬೆಲೆ ಗೊತ್ತೇಬೊಜ್ಜು ಕರಗಿಸಿ ಆ ಪ್ಯಾಂಟ್ ಉಪಯೋಗಿಸಬಾರದೇಕೆ? ಎಂದು ಟಾಂಗ್ ಕೊಟ್ಟಳು.

ನಾನು ಹಂಗೆಲ್ಲಾ ಹೆಂಡತಿ ಜೊತೆ ಚಾಲೆಂಜ್ ಒಪ್ಪುವವನೇ ಅಲ್ಲ. ಕೊನೆಯ ಫಲಿತಾಂಶ ಗೊತ್ತಿದ್ದ ಮೇಲೂ ಯಾರು ಜೂಜು ಆಡುವರುನಾನು ಮನೆಗೆ ಬರುವಾಗಲೇ 10 ಗಂಟೆ ಆಗಿರುತ್ತೆ. ಊಟ ಮಾಡಿಸ್ವಲ್ಪ ಏನಾದ್ರು ಓದಿ ಮಲಗೋ ಹೊತ್ತಿಗೆ 12 ಆಗಿರುತ್ತೆ. ಇನ್ನು ಬೆಳಿಗ್ಗೆ ಬೇಗ ಹೇಗೆ ಏಳಲಿಕ್ಕೆ ಆಗುತ್ತೆನಿನಾದ್ರು ಮೂರು ಹೊತ್ತು ಮನೇಲಿ ಕೂತಿರ್ತಿ (ಯಾಕೋ ಈ ಮಾತು ಬೇಡ ಆಗಿತ್ತು ಅಂತ ಆಮೇಲೆ ಅನ್ನಿಸ್ತು)ನಿಂಗೆ ಹೆಂಗೆ ಗೊತ್ತಾಗಬೇಕು ನಮ್ಮ ಕಷ್ಟ ಎಂದು ಚಿಕ್ಕ ಭಾಷಣ ಮುಗಿಸುವ ಹೊತ್ತಿಗೆ,ಆಕೆಗೆ ನನ್ನಿಂದ ಹರ್ಟ್ ಆಗಿದೆ ಅಂತ ಕೆಂಪಾದ ಕಣ್ಣುಗಳಿಂದ ಗೊತ್ತಾಗತೊಡಗಿತ್ತು.

ಅದೆಲ್ಲಾ ಮಾತು ಬೇಡ. ನಾನು ಸುಮ್ನೆ ಮನೇಲಿ ಇರ್ತಿನೋ ಇಲ್ವೋ ಅದನ್ನು ಆಮೇಲೆ ನೋಡೋಣ. ನೀವು ಒಂದು ತಿಂಗಳು ಬೆಳಿಗ್ಗೆ ವಾಕ್  ಮಾಡಿ ತೋರಿಸಿ. ಆಮೇಲೆ ನಾನು ಈ ಭವಿಷ್ಯ ಕಾರ್ಯಕ್ರಮ ಏನುನೀವು ಮನೇಲಿ ಇದ್ದಾಗ ಧಾರವಾಹಿ ಕೂಡ ನೋಡೋಲ್ಲ ಅಂತ ಘನ ಗೊರ ಘೋಷಣೆ ಮಾಡಿದಳು. ಇತಿಹಾಸದಲ್ಲಿ ಆಕೆಯೊಡನೆ ನಾನು ಒಂದೇ ಒಂದು ವಾಗ್ಯುದ್ದವಾಗಲಿ, ಕಟ್ಟಿದ್ದ ಪಂದ್ಯವಾಗಲಿ ಗೆದ್ದಿಲ್ಲ. (ಆ ವಿಚಾರ ಬೇರೆ ಬಿಡಿ!) ಆದರೆ ಅವಾಗ-ಅವಾಗ ಮೀಟಿಂಗ್ - ಆನ್ ಕಾಲ್ ಸಪ್ಪೋರ್ಟ್ ಅಂತ ಹೇಳಿ 5 ಘಂಟೆಗೆಲ್ಲಾ ಒಮ್ಮೊಮ್ಮೆ ಎದ್ದೇಳೋ ನಾನು ... 6 ಘಂಟೆಗೆ ಎದ್ದು ಒಂದು ಅರ್ದ ಘಂಟೆ ವಾಕ್ ಮಾಡುವುದು ಅಸಾದ್ಯವೇ ಅಲ್ಲ ಅಂತ ಅನ್ನಿಸಿತು. ಅಕಸ್ಮಾತ್ ಗೆದ್ದಲ್ಲಿ, ರಿಮೋಟ್ ಕಂಟ್ರೋಲ್ ಮೇಲೆ ಸಿಗುವ ಸಾರ್ವಭೌಮತ್ವ  ಹೆಂಡತಿಯ ಸವಾಲನ್ನು ಅತ್ಯಂತ ದೈರ್ಯದಿಂದ ಸ್ವೀಕರಿಸಲು ಪ್ರಚೋದಿಸಿತು. ಅಂದು ಭಾನುವಾರವಾದ್ದರಿಂದ ಹರಟೆ ಹೊಡೆಯುತ್ತಾತಿನ್ನುತ್ತಾ ಹಾಗು ಸೊಂಪಾದ ನಿದ್ರೆಯೊಂದಿಗೆ ಕಳೆಯಿತು. 

ಆದರೆ ಸೋಮವಾರ ದಿನ ಬೆಳ್ಳಂ ಬೆಳಿಗ್ಗೆ ಅಲಾರಂ ಬಡಿದಾಗಲೇ ಎಚ್ಚರವಾಗಿದ್ದು. ಆಕೆ ಎದ್ದುಹೊರಗೆ ರಂಗವಲ್ಲಿ ಬಿಡುತ್ತಾ ಇದ್ದಳು. ನಾನು ರಣ ಉತ್ಸಾಹದಲ್ಲಿ ತಯಾರಾಗಿ ಹೊರಟೆ. ಬರುವಾಗ ಮೂಲೆ ಅಂಗಡೀಲಿ ಹಾಲು ತನ್ನಿ ಅನ್ನುವ ಕೋರಿಕೆ ಬಂದಾಗ ಹ್ಞೂ೦ ಗುಟ್ಟಿ ನಡೆದೆ. ಸ್ವಲ್ಪ ಹೊತ್ತಿನ ನಂತರ ಮೈ ಎಲ್ಲಾ ಹಗುರ ಎಂದೆನಿಸಿತು. ವಾಪಸ್ಸು ಹೊರಡುವಾಗ ಹಾಲಿನ ವಿಚಾರ ಕೂಡ ನೆನಪು ಆಯಿತು. ಮುಂಜಾನೆಯ ನಡಿಗೆಮೆದುಳನ್ನು ಚುರುಕು ಗೊಳಿಸುತ್ತೆ ಎನ್ನುವ ಆವಿಷ್ಕಾರದೊಂದಿಗೆ ಹಾಲು ಕೊಂಡು ಮನೆಗೆ ನಡೆದೆ. ಮ್ಯಾನೇಜರ್ ಗೆ ಕೂಡ ಬೆಳಿಗ್ಗೆ ವಾಕ್ ಮಾಡಲು ಹೇಳಬೇಕುಆತನಿಗೂ ಮೆದುಳು ಸುಸ್ಥಿತಿಗೆ ಬಂದುಕಳೆದ ವರುಷ ಕೊಟ್ಟ ಭರವಸೆಗಳು ನೆನಪಿಗೆ ಬಂದು ನನ್ನ ಜೀವನ ಉದ್ದಾರ ಆಗಬಹುದು ಅಂತಲೂ ಅನ್ನಿಸಿತು. ನಿಧಾನಕ್ಕೆ ಸ್ನಾನ ಮಾಡಿಗಡಿ ಬಿಡಿ ಇಲ್ಲದೆ ತಿಂಡಿ ತಿಂದು ಆಫೀಸ್ ಸೇರಿದಾಗ ನಿಜಕ್ಕೂ ತಾಜಾ ಉಲ್ಲಾಸ ಬಂದ ಹಾಗೆ ಇತ್ತು. ಅಂದು ಯಾರನ್ನೂ ಬೈಯದೆ, ಈ ತಪ್ಪಿಗೆ ಪಕ್ಕದವನೇ ಕಾರಣ ಎಂಬ ಸಬೂಬು ನೀಡದೆ ಕ್ರಿಯಾತ್ಮಕವಾಗಿ ಕಳೆದೆ. ರಾತ್ರೆ ಹೆಂಡತಿ ಟೊಮೇಟೊ ಸಾರು ಮಾಡಿದ್ದರೂ ಕೂಡ, ಅದನ್ನು “ಮಜ್ಜಿಗೆ ಹುಳಿ” ಮಟ್ಟಿಗೆ ಹೊಗಳಿ ಅಟ್ಟಕ್ಕೆರಿಸಿದೆ. ಆದರೆ ಮಲಗುವಾಗ ಮದ್ಯರಾತ್ರೆ ಆಗಿದ್ದರೂ "ನಾಳೆ ಬೆಳಿಗ್ಗೆ 5 ಗಂಟೆ ಗೆ ನೀರು ಬರುತ್ತೆಸ್ವಲ್ಪ ಬೇಗ ಎದ್ದು ಹಿಡಿದು ಬಿಡಿ" ಎಂಬ ಹೆಂಡತಿಯ ಕೋರಿಕೆಯನ್ನ ಒಪ್ಪಿದೆ. 
ಎರಡನೇ ದಿನ ಅಂತಾ ದೊಡ್ಡ ತೊಂದರೆ ಇಲ್ಲದೆ ಕಳೆದು ಹೋಯಿತು. ದಿನಕ್ಕೆ ಕೇವಲ 4 – 5  ಗಂಟೆ ನಿದ್ದೆಮಾಡಿಯೂ ಮನುಷ್ಯ ಅತ್ಯಂತ ಚಟುವಟಿಕೆ ಇಂದ ಇರಬಹುದು ಎಂದು ಸಾಬೀತು ಮಾಡಿದೆ. ಆದರೆ ಬುಧವಾರ ಯಾಕೋ ಆಫೀಸ್ ನಲ್ಲಿ ಮಂಪರು ಕವಿದಂತೆ ಅನ್ನಿಸಿತು. ರಿವ್ಯೂ ಮೀಟಿಂಗ್ ನಲ್ಲಿ ತೂಕಡಿಸಿದ ಅನುಭವೂ ಆಯಿತು! ಅಂದು ಸಂಜೆ ಬೆಂಗಳೂರಲ್ಲಿ ಮಳೆ ಬಂದು ಎಲ್ಲಾ ಟ್ರಾಫಿಕ್ ವ್ಯವಸ್ತೆ ಅದ್ವಾನ ಆಗಿ ಮನೆ ತಲುಪುತ್ತಾ 12 ಆಗಿ ಬಿಟ್ಟಿತ್ತು! ರಾತ್ರಿ ಊಟಮಾಡುವಾಗ ನನ್ನವಳು ಅಂದಿನ ವಿಶೇಷ ದಾರಾವಾಹಿ ಬಗ್ಗೆ ಕೊಟ್ಟ ವಿವರಣೆಹೊಲಿಗೆ ತರಗತಿ ಮೇಡಂ ಬಗ್ಗೆ ಮಾಡಿದ ಟೀಕೆ, ಹವಾಮಾನ ವರದಿ ಯಾವುದೂ ತಲೆಗೆ ಹೋಗದೆಸೊಳ್ಳೆ ಗುಯ್ ಗುಟ್ಟಿದಂಗೆ ಅನ್ನಿಸಿತು. ಆದರೆ ಹೇಳಲು ಧೈರ್ಯ ಬರಲಿಲ್ಲ.

ಗುರವಾರ ದಿನ ವಿಪರೀತ ಕೆಲಸಹಲವು ಮೀಟಿಂಗ್ ಕೂಡ ಇದ್ದಿದ್ದರಿಂದ ತೂಕಡಿಸಲೇಬಾರದು ಎಂದು ನಿರ್ಧರಿಸಿದೆ. ವಾಕ್ ಮುಗಿದ ನಂತರ ಅರ್ಜೆಂಟ್ ಕೆಲಸ ಇದೆ,ಬೆಳಿಗ್ಗೆ ತಿಂಡಿ ಏನೂ ಬೇಡ. ಸ್ಟ್ರಾಂಗ್ ಕಾಫಿ ಸಾಕು ಎಂದು ಹೇಳಿ ಕಂಪ್ಯೂಟರ್ ಮೊರೆ ಹೊಕ್ಕೆ. ಕೂಡಲೇ ಅಡುಗೆ ಮನೆಯಿಂದ ನೀರು ದೋಸೆಯ "ಚೊಂಯ್" ಶಬ್ದ ನಿಂತಂತೆ ತೋರಿತು. ಮಧ್ಯಾಹ್ನ ಕೂಡ ಬ್ರೆಡ್ ತಿಂದು ಮದ್ಯ ಮದ್ಯ ಹಲವು ಟೀ ಗಳ ಪ್ರಯೋಗಕ್ಕೆ ಮನಸ್ಸು ಮಾಡಿದೆ. ಅಂದು ಯಾವ ಕೆಲಸವೂ ಸರಿ ಮಾಡಲಾಗಲಿಲ್ಲ. ಮನೆ ತಲುಪುವುದು ಕೂಡ ತಡ ಆಯಿತು. ರಾತ್ರಿ ಮಜ್ಜಿಗೆ ಹುಳಿಯ ರುಚಿ ಬಾಯಿಗೆ ಸಿಗಲಿಲ್ಲ. ಟೀವಿಯಲ್ಲಿ ಅರ್ನಾಬ್/ ಸಾಗರೀಕ ರ ಕಾರ್ಯಕ್ರಮ ಬರುತ್ತಿದ್ದರೂ ನೆಟ್ಟಗೆ ಹಾಸಿಗೆ ಸೇರಿಬಿಟ್ಟೆ. ಶುಕ್ರವಾರ ಬೆಳಿಗ್ಗೆ 4 ಗಂಟೆಗೆಲ್ಲಾ ಆಸ್ಟ್ರೇಲಿಯಾ ಟೀಂ ಜೊತೆ ಮೀಟಿಂಗ್ ಇದ್ದಿದ್ದರಿಂದ5 ಗಂಟೆಗೆ ನೀರು ಬರುವುದರಿಂದ ಬೇಗ ಎದ್ದೆಳಬೇಕಾಯಿತು. ಅಂದು ಆಫೀಸಿನಲ್ಲಿ ಎಸ್ಕಲೆಶನ್ ಗಳ ಸರಮಾಲೆ. ಮೇಲಧಿಕಾರಿಯ ಬೈಗುಳಸಮುದ್ರದಾಚೆಯವನ ಅಸಹನೆಹಳೆ ಗೆಳತಿ ಕಳುಹಿಸಿದ ಎಸ ಎಂ ಎಸ.. ಎಲ್ಲವೂ ಒಂದೇ ರೀತಿ ಕಂಡು ದೈವೀಕ ಸ್ಥಿತಿಗೆ ಹೋದೇನೋ ಎಂದೆನಿಸಲು ಶುರು ಆಯಿತು. ಜೊತೆಗೆ ತಲೆ ಬಾರಮೈ ಕೈ ನೋವು ಬೇರೆ. ಹಂಗೂ ಹಿಂಗೂ ದಿನ ತಳ್ಳಿ ಮನೆ ಸೇರೋ ಹೊತ್ತಿಗೆ ಜ್ವರ ಕೂಡ ಬಂದ ಹಾಗೆ ಇತ್ತು. ಆದರೂ ಯಾವುದನ್ನೂ ಅಷ್ಟಾಗಿ ತೋರಿಸಿ ಕೊಳ್ಳದೆಆಫೀಸ್ ನಲ್ಲಿ ಟೀ ಕುಡಿದಿದ್ದು ಜಾಸ್ತಿ ಆಗಿದೆಈಗ ಹೊಟ್ಟೆ ತುಂಬಾ ತಿಂದರೆ ಬೆಳಿಗ್ಗೆ ಎದ್ದೆಳೋದು ಕಷ್ಟ ಆಗುತ್ತೆ ಎಂದಷ್ಟೇ ಹೇಳಿನನ್ನವಳ ಮುಖ ಕೂಡ ನೋಡದೆ ಮಲಗಿ ಬಿಟ್ಟೆ.
5 ದಿನ ಆಗುವುದರೊಳಗೆ ಸುಸ್ತಾದ ದೇಹ ಕಂಡು ನನಗೆ ಬೇಸರ ಆಗಿ ಬಿಟ್ಟಿತು. ಹಿಂದೆ ಕಾಲೇಜು ಪರೀಕ್ಷಾ ಸಮಯದಲ್ಲಿ ದಿನ ಗಟ್ಟಲೆ ನಿದ್ದೆ ಬಿಡುತ್ತಾ ಇದ್ದಿದ್ದು ಉಂಟು. ಈಗ ಏಕೆ ಇಷ್ಟು ಸುಸ್ತುನನ್ನಾಕೆ ಸ್ವಲ್ಪ ಹೊತ್ತಿನ ನಂತರ ಬಂದು ಎದೆಯ ಮೇಲೆ ತಲೆ ಇಟ್ಟುಏನಾಯಿತು ಎಂದು ವಿಚಾರಿಸಿದರೂ ಉತ್ತರ ಕೊಡಲೂ ಸಾಧ್ಯ ಆಗಲಿಲ್ಲ. ಯಾವಾಗ ನಿದ್ರೆ ಆವರಿಸಿತೋಕಣ್ಣು ಬಿಟ್ಟಾಗ ಜೋರು ಬೆಳಕಾಗಿದ್ದು ತಿಳಿಯಿತು. ಅಯ್ಯೋ ವಾಕಿಂಗ್ ಅನ್ನುವಷ್ಟರಲ್ಲಿ ಬಾಯಿ ಮೇಲೆ ಕೈ ಬಿತ್ತು. ಅವಳ ಕಣ್ಣುಗಳು ಕೆಂಪಾಗಿದ್ದವು. ಭಾಗಷ್ಯ ರಾತ್ರೆ ಎಲ್ಲ ನಿದ್ರೆ ಮಾಡಿಯೇ ಇರಲಿಲ್ಲ.
ರೀಸಾರಿ. ಅದ್ಯಾಕೆ ನನ್ನ ಮಾತು ಅಷ್ಟು ಸೀರಿಯಸ್ ಆಗಿ ತೆಗೆದು ಕೊಂಡ್ರಿನೀವು "ಮನೆಲೇ ಕೂತಿರ್ತಿಟೀವಿ ನೋಡ್ತಿ” ಅಂತೆಲ್ಲಾ ಹೇಳಿದಾಗ ಬೇಜಾರ್ ಆಗಿ ಬೆಳಿಗ್ಗೆ ಒಂದಿಷ್ಟು ವಾಕ್ ಮಾಡಿ ಅಂದೆ. ಆದ್ರೆ ನಿಮಗೆ ಇಷ್ಟು ತೊಂದರೆ ಆಗುತ್ತೆ ಅಂತ ಗೊತ್ತಿರಲಿಲ್ಲ. ಊಟ ತಿಂಡಿ ಬಿಟ್ಟುನಿದ್ದೆ ಮಾಡದೆ ಅರೋಗ್ಯ ಹಾಳು ಮಾಡ್ಕೊಳೋದು ಇವತ್ತಿಂದ ಕೂಡದು. ನೀವು ಹಿಂಗೆ ಬಸರಿ ಹೊಟ್ಟೆಹಳದಿ ಹಲ್ಲುಬಕ್ಕತಲೆ....ಹೆಂಗೇ ಇದ್ರೂ ನಂಗೆ ಇಷ್ಟ. ಈ ಟ್ರಾಫಿಕ್ಕೆಲಸದ ಒತ್ತಡದ ನಡುವೆ ಒಳ್ಳೆಯ ನಿದ್ರೆ ತೀರ ಅಗತ್ಯ. ನಾನು ಅದನ್ನೇ ಹಾಳು ಮಾಡಿ ಬಿಟ್ಟೆ ಅಂತ ಹೇಳುತ್ತಾ ಇರುವಾಗ ನಾನು ಆಕೆಯ ಬಾಯಿ ಮುಚ್ಚಿದೆ.
ನಾನು ಸಾರಿ ಕಣೆ ಅಂದೇಆಕೆ ಅಡ್ಡ ಮಾತು ಹಾಕಿ... ಮತ್ತೇನಲ್ಲತೀರ ಸಣ್ಣ ಆಗಿ ಎದುರು ಮನೆ ಹುಡುಗಿಗೆ ಲೈನ್ ಹೊಡೆಯೋದು ಬೇಡ ಅಂತ ಅಷ್ಟೇ ಎಂದೇಳಿ ಕಾಫಿ ತರಲು ಅಡುಗೆ ಮನೆಗೊಡಿದಳು.

ನಾನು ಹಾಗೆಯೇ ಮುಸುಕೆಳೆದುಕೊಂಡ ಮೇಲೆ, ಮತ್ತೆಂದೂ ಈ ರೀತಿಯ ಸಾಹಸಕ್ಕೆ ಕೈ ಹಾಕಿಲ್ಲೆಂದು ಹೇಳಬೇಕಿಲ್ಲವಷ್ಟೇ.

No comments: