Sunday, January 1, 2017

ಸುಲಭದಲ್ಲಿ ಕೇಕ್ ಮಾಡುವುದು ಹೇಗೆ? (ಮೊಟ್ಟೆ ಮತ್ತೆ ಆವೇನ್ ಇಲ್ಲದೆ!)

(ಎಂದಿನಂತೆ ಈ ಪೋಸ್ಟು ಸಿಹಿ ಇಷ್ಟ ಪಡುವ ಗಂಡು ಜೀವಿಗಳಿಗೆ ಮಾತ್ರ)

ನಿಮಗೆ ಕೇಕ್ ಇಷ್ಟವೇ? ಆದರೆ ಅದನ್ನು ಪಾರ್ಟಿಗಳಲ್ಲಿ, ಬೇಕರಿ ಗಳಲ್ಲಿ ಮಾತ್ರ ತಿಂದಿರುವಿರೆ? ಮನೆಯಲ್ಲಿ ಮಾಡಿಲ್ಲವೇ?
ಚಿಂತೆ ಬೇಡ. ನಿಮಗೆ ಸುಲಭಕ್ಕೆ ಕೇಕ್ ಮಾಡುವ ವಿಧಾನ ಹೇಳಿ ಕೊಡಲಿದ್ದೇನೆ.
ಅಯ್ಯೋ.. ನಾವು ಮೊಟ್ಟೆ ತಿನ್ನೋಲ್ಲ, ಮನೇಲಿ ಆವೇನ್ ಇಲ್ಲ ಎಂದು ಕೊಸರಿಸಬೇಡಿ. ಈಗ ನಾನು ಹೇಳಿ ಕೊಡುವ ವಿಧಾನಕ್ಕೆ ಅವೆರಡೂ ಅಗತ್ಯ ಇಲ್ಲ.

ಮೊದಲಿಗೆ ಬೇಕಾಗುವ ಪದಾರ್ಥಗಳ ಪಟ್ಟಿ ಮಾಡೋಣ.

1. ಒಂದು ಲೋಟ ಮೈದಾ ಹಿಟ್ಟು. (ಅಡುಗೆ ಮನೆಯ ಯಾವುದಾದರೂ ಒಂದು ಅರೆಯಲ್ಲಿ ಇರುತ್ತೆ ನೋಡಿ.)
2. ಅರ್ದ ಲೋಟ ಮೊಸರು. (ಇದು ಫ್ರಿಜ್ ನಲ್ಲಿ ಇರುತ್ತೆ. )
3. ಕಾಲು ಲೋಟ ಅಡುಗೆ ಎಣ್ಣೆ. (ಅಲ್ಲೇ ಯಾವುದಾದರೂ ಕ್ಯಾನ್ ನಲ್ಲಿ ಇರುತ್ತೆ, ಸ್ವಲ್ಪ ಗಮನಿಸಿ)
4. ಅರ್ದ ಲೋಟ ಸಕ್ಕರೆ ಪುಡಿ. (ಪುಡಿ ಇಲ್ಲಾ ಅಂದ್ರೆ, ಸಕ್ಕರೆ ನ ಮಿಕ್ಸಿ ಲಿ ಹಾಕಿ ಪುಡಿ ಮಾಡಿಕೊಳ್ಳಿ. – ಹಾಗೆ ಪುಡಿ ಮಾಡಿಕೊಳ್ಳಲು, ಚಿಕ್ಕ ಜಾರ್ ಉಪಯೋಗಿಸಿ. ಆಮೇಲೆ ಜಾರ್ ತೊಳೆದು.. ಅದನ್ನ ಇಟ್ಟ ಜಾಗದಲ್ಲೇ ಇಡಿ ಮರ್ರೆ. ಯಾರಿಗೆ ಬೇಕು, ಆಮೇಲೆ ಉಗಿಸಿಕೊಳ್ಳೋ ಗ್ರಹಚಾರ )
5. ಒಂದು ಚಿಟಿಕೆ ಅಡುಗೆ ಸೋಡಾ. (ಇದು ಸಾಮಾನ್ಯಕ್ಕೆ ಮನೇಲಿ ಇರುತ್ತೆ. ಅಡುಗೆ ಉಪ್ಪಿನ ರೀತಿಯೇ ಇರುತ್ತೆ. ಚೂರು ಪತ್ತೆದಾರಿಕೆ ಮಾಡಿ, ಹುಡುಕಬೇಕು)
6. ಅರ್ದ ಟೀ ಚಮಚೆ ಬೇಕಿಂಗ್ ಪೌಡರ್. (ಇದು ಇಲ್ಲದೆ ಇದ್ದಲ್ಲಿ, ಹೊರಗಡೆ ಇಂದ ತರಬೇಕಾದೀತು. 35 ರುಪಾಯಿಗೆಲ್ಲ ಪುಟ್ಟ ಪ್ಯಾಕೆಟ್ ಸಿಗುತ್ತೆ.)
7. ವೆನಿಲ್ಲಾ ಅಥವಾ ಪೈನ್ ಆಪಲ್ ಎಸೆನ್ಸ್. (ಇದು ಕೂಡ ಮನೇಲಿ ಇಲ್ಲ ಅಂದ್ರೆ ತರಬೇಕಾದೀತು. 10-೧೫ ರುಪಾಯಿಗೆಲ್ಲ ಪುಟ್ಟ ಡಬ್ಬಿ ಸಿಗುತ್ತೆ.)
8. ಕೊನೆಗೆ ಒಂದು ಚಿಟಿಕೆ ಅಡುಗೆ ಉಪ್ಪು.


ಈಗ ಅಗತ್ಯ ವಸ್ತುಗಳ ಪಟ್ಟಿ.
1. ಒಂದು ಕುಕ್ಕರ್. ದಿನಾ ಅನ್ನ ಮಾಡುತ್ತಲ್ಲ ಅದೇನೇ.
2. 10 ಚಮಚೆ ಅಡುಗೆ ಉಪ್ಪು.
3. ಒಂದು ಅಲುಮಿನಿಯಂ ಅಥವಾ ಸ್ಟೀಲ್ ಬಟ್ಟಲು. ತಳ ಚಪ್ಪಟೆ ಇರಬೇಕು.


ಈಗ ಕೇಕ್ ತಯಾರಿಸುವ ವಿಧಾನ ನೋಡೋಣ.
1. ಮೊದಲಿಗೆ ಕುಕರ್ ಗೆ (ಒಣಗಿದ ಕುಕರ್ ) 10 ಚಮಚೆ ಉಪ್ಪು ಹಾಕಿ. ಅಥ್ (10 ಅಥವಾ ತಳ ಮುಚ್ಚುವಷ್ಟು ಉಪ್ಪು ಹಾಕಿ) ಆಮೇಲೆ ರಿಂಗ್ ಇಡಿ. ಅದರ ಮೇಲೆ ಕುಕರ್ ಪ್ಲೇಟ್ (ತೂತ ತೂತ ಇರುತ್ತಲ್ಲ.. ಅದು) ಇಡಿ. ನಂತರ ಓಲೆ ಹಚ್ಚಿ, ಅದರ ಮೇಲೆ ಕುಕ್ಕರಿಸಿ. (ನೀವು ಓಲೆ ಹತ್ತಬೇಡಿ. ಕುಕರ್ ಇಡಿ ಅಂದೆ ಅಷ್ಟೇ..)



2. ಮುಚ್ಚುಳದ ವಿಷಲ್ ಹಾಗು ಗ್ಯಾಸ್ಕೆಟ್ ತೆಗೆದು ಮುಚ್ಚಿ..
3. ನಂತರ ಒಂದು ಬಟ್ಟಲಿಗೆ ಮೊಸರು ಹಾಕಿ.
4. ಅದಕ್ಕೆ ಸಕ್ಕರೆ ಪುಡಿ ಸೇರಿಸಿ.
5. ಈಗ ಎಣ್ಣೆ ಸೇರಿಸಿ. (ಹೊಟ್ಟೆ ಗೆ ಹಾಕುವ ಎಣ್ಣೆ ಅಲ್ಲ! )
6. ಕೊನೆದಾಗಿ ಮೈದಾ, ಸೋಡಾ, ಬೇಕಿಂಗ್ ಪೌಡರ್, ಉಪ್ಪು ಎಲ್ಲಾ ಹಾಕಿ.
7. ಒಂದು ಪುಟ್ಟ ಚಮಚೆತಗೊಂಡು ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಎಲ್ಲೂ ಗಂಟು ಕಟ್ಟಿರಬಾರದು. J


ಇಲ್ಲಿಗೆ ನಿಮ್ಮ ಕೇಕ್ ಮಿಕ್ಸ್ ತಯಾರು.
ನೀವು ಮೊದಲೇ ತೆಗೆದಿಟ್ಟು ಕೊಂಡ ಚಪ್ಪಟೆ ತಳದ ಬಟ್ಟಲು ತೆಗೆದುಕೊಂಡು ಅದಕ್ಕೆ ಒಳಗೆ ಚೆನ್ನಾಗಿ ಎಣ್ಣೆ ಸವರಿ. ಆಮೇಲೆ ಅರ್ದ ಚಮಚೆ ಮೈದಾ ಹಿಟ್ಟು ಸಿಂಪಡಿಸಿ. ಆಮೇಲೆ ತಯಾರಿಸಿಟ್ಟುಕೊಂಡ ಹಿಟ್ಟು ಅದಕ್ಕೆ ಸುರುವಿ.


ಇಷ್ಟು ಆಗುವಷ್ಟರಲ್ಲಿ ಸರಿ ಸುಮಾರು 10 ನಿಮಿಷ ಆಗಿರಬಹುದು. ಅಲ್ಲಿಗೆ ನಿಮ್ಮ ಕುಕರ್ ಸಾಕಷ್ಟು ಬಿಸಿ ಆಗಿರುತ್ತೆ.
ಮೆಲ್ಲನೆ ಮುಚ್ಚುಳ ತೆಗೆದು, ಅದರ ಒಳಗೆ ಹಿಟ್ಟು ಸುರುವಿದ ಬಟ್ಟಲು ಮೆಲ್ಲನೆ ಜೋಪಾನವಾಗಿ ಇಡಿ. ಆ ಕಡೆ ಈ ಕಡೆ ಕೈ ತಾಗಿದರೆ, ಸುಟ್ಟು ಹೋದೀತು. ಮುಚ್ಚುಳ ಹಾಕಿ, 30-40 ನಿಮಿಷ ಅಡುಗೆ ಮನೆಯಿಂದ ಹೊರ ನಡೆಯಿರಿ. (ಸ್ಟವ್ ಸಿಮ್ - ಸಣ್ಣನೆಯ ಉರಿಯಲ್ಲಿ ಇರಲಿ)


40 ನಿಮಿಷದ ನಂತರ ಮುಚ್ಚುಳ ತೆಗೆದು ನೋಡಿ. ಕೇಕ್ ಆಗಿರುತ್ತೆ. ಬೇಕಿದ್ದಲ್ಲಿ ಚಿಕ್ಕ ಚಾಕು ತೆಗೆದು ಅದಕ್ಕೆ ಚುಚ್ಚಿ ನೋಡಬಹುದು. ಚಾಕು ಆರಂ ಆಗಿ ವಾಪಾಸ್ ಬಂದ್ರೆ, ಹಸಿ ಹಿಟ್ಟು ಹಿಡಿಯದಿದ್ದರೆ.. ಕೇಕ್ ಬೆಂದಿದೆ ಎಂದು ಅರ್ಥ.
ಸ್ಟವ್ ಆಫ್ ಮಾಡಿ.
ಬಟ್ಟಲು ಹೊರಗಿಡಿ. ಸ್ವಲ್ಪ ತಣ್ಣಗೆ ಆಗಲಿ.

ಈಗ ಕೇಕ್ ನ ಪ್ಲೇಟ್ ಗೆ ವರ್ಗಾಯಿಸಿ.


ಎಚ್ಚರಿಕೆ:
1. ಖಾಲಿ ಕುಕರ್ ಓಲೆ ಮೇಲೆ ಇಡಲು ನಿಮ್ಮ ಹೆಂಡತಿ ಹೆದರಬಹುದು. ಮದ್ಯೆ ಮದ್ಯೆ ಬಾಯಿ ಹಾಕಿ, ನಿಮ್ಮ ಏಕಾಗ್ರತೆ ಕೆಡಿಸಬಹುದು. ಏನಾದ್ರೂ ನೆಪ ಹೇಳಿ, ಉದಾಹರಣೆಗೆ, ಇಂದು ನೀವು ಆಕೆಗೆ ಪ್ರೋಪೋಸ್ ಮಾಡಿದ ದಿನ, ಮೊದಲು ನೋಡಿದ ದಿನ.. ಇತ್ಯಾದಿ.. ಹೇಳಿ, 50 ನಿಮಿಷದ ನಂತರ ಸರ್ಪ್ರೈಸ್ ಕೊಡುವುದಾಗಿ ಹೇಳಿ.. ಹೆಂಡತಿಯನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ.!
2. ಕೇಕಿನ ಮೊದಲ ಪೀಸನ್ನು, ಆಕೆಗೇ ಮೊದಲು ತಿನ್ನಿಸಿ.



3. ಆರೋಗ್ಯವಾಗಿ ಇದ್ದಲ್ಲಿ, ಅರ್ದ ಗಂಟೆಯ ನಂತರ ನೀವು ಕೂಡ ತಿನ್ನಿರಿ.
4. ನಿಮಗೆ ಜಯವಾಗಲಿ.

2 comments:

ವಿ.ರಾ.ಹೆ. said...

ಹ್ಹ ಹ್ಹ... ಮಜವಾಗಿದೆ ರೆಸಿಪಿ

ಕೇಕ್ ಎಂಗೈತೋ ಏನೋ!

cinynews said...

ಸೂಪರ್ ನಿರೂಪಣೆ! ಹಾಸ್ಯಪ್ರಜ್ಞೆ ಇಷ್ವಾಯಿತು.