Wednesday, January 13, 2010

ಪ್ರೇಮಪತ್ರಕ್ಕೂ ರೇಶನ್ (Recession)





ಸದ್ಯದ ಮಟ್ಟಿಗೆ ದೇವರು ಇದ್ದನೋ ಇಲ್ಲವೋ ಖಂಡಿತಾ ಗೊತ್ತಿಲ್ಲ, ಆದರೆ ದೆವ್ವಗಳು, ರಾಕ್ಷಸರು ಮುಂತಾದವು ಇದ್ದಾವೆ ಅನ್ನೋದಕ್ಕೆ ನಂಗಂತೂ ಸಾಕಷ್ಟು ಪುರಾವೆ ಸಿಕ್ಕಿದೆ. ಅಂದ ಹಾಗೆ ತಪ್ಪು ತಿಳಿಬೇಡಿ ನಾನು ರೇಣುಕಾಚಾರ್ಯನ ಬಗ್ಗೆ ಮಾತಾಡುತ್ತ ಇಲ್ಲ. ಇರಲಿ ನಿಮಗೆ ಪೂರ ವಿಷಯ ಹೇಳಿ ಬಿಡುವೆ.




ನನ್ನದು ಪ್ರೇಮ ವಿವಾಹ, ಇಬ್ಬರದೂ ಒಂದೇ ಕಂಪನಿ. ಅವಳನ್ನು ಇಲ್ಲೇ ಮೊದಲು ಭೇಟಿ ಮಾಡಿದ್ದು. ಮೊದಲನೇ ನೋಟವೋ, ಎರಡನೇ ನೋಟವೂ ಪ್ರೀತಿ ಅಂತೂ ಹುಟ್ಟಿತು. ಅವಳು ಒಪ್ಪಿದ್ದೂ ಆಯಿತು. ಒಮ್ಮೆ ಕಾಫಿ ಡೇ ನಲ್ಲಿ ಕೂತು ಕಾಫಿ ಕುಡಿತ ಇರಬೇಕಾದ್ರೆ ಅವಳ ಪಕ್ಕದ ಮನೆಯರು ನೋಡಿ ಮನೆಗೆ ವಿಷ್ಯ ಮುಟ್ಟಿಸಿಯು ಬಿಟ್ಟರು. (ಅಷ್ಟೂ ಮಾಡದೆ ಇದ್ರೆ ಅವರಿರೋದು ಯಾಕೆ? ) ನಾವುಗಳು ಈಗ ಸಿನಿಮಾ ದ ತರ ದೊಡ್ಡ ಯುದ್ದ ನಡೆಯುತ್ತೆ, ರೂಮಿನಲ್ಲಿ ಕೂಡಿ ಹಾಕುವುದು, ತುರ್ತಿನಲ್ಲಿ ಮಾವನ ಮಗನೋ, ಮಗಳನ್ನೋ ತಂದು ಗಂಟು ಹಾಕುವರು ಎಂದೆಲ್ಲಾ ಭಾವಿಸಿದ್ದೆವು. ಆದ್ರೆ ಹಾಗೆ ಏನೂ ಆಗದೆ (ಇಲ್ಲಿ ಸ್ಟೋರಿ ಬರೆದದ್ದು ಸಿನಿಮಾ ನಿರ್ದೇಶಕ ಅಲ್ಲವಲ್ಲ) ಮನೆಯರು ಸಂತೋಷದಿಂದ ಒಪ್ಪಿ ಬಿಟ್ಟರು. ಒಂದು ಶುಭ ಮುಹೂರ್ತದಲ್ಲಿ ಮದುವೆಯು ಮಾಡಿ ಬಿಟ್ಟರು. (15 ದಿನದ ಹಿಂದೆ ಅಷ್ಟೇ ಮದುವೆ ಆಗಿದ್ದು) ಅಂತು ನಮ್ಮ 4 ತಿಂಗಳ ಪ್ರೇಮ - ಪರಿಣಯ ಸುಖಾಂತ್ಯ ಗೊಂಡಿತು.




ಆದರೆ ತೊಂದರೆ ಶುರುವಾದದ್ದೇ ಆಮೇಲೆ ನೋಡಿ, ಅದೇನೋ ಪ್ರಾಜೆಕ್ಟ್ ಡೆಡ್ ಲೈನ್, ಡೆಲಿವರಿ ಅಂತೆಲ್ಲ ಕಿವಿ ಮೇಲೆ ಹೂವ ಇಟ್ಟು ನಮ್ಮ 15 ದಿನಗಳ ರಜೆ ಕೇವಲ 4 ದಿನಕ್ಕೆ ನಮ್ಮ ಮ್ಯಾನೇಜರ್ ಮಾಡಿ ಬಿಟ್ಟರು. ಹನಿ ಮೂನ್ ಗೆ ಸಿಂಗಪೋರ್, ಶೀಮ್ಲ ಅಂತೆಲ್ಲ ಪ್ಲಾನ್ ಹಾಕಿದ್ದು ಎಲ್ಲ ವೇಸ್ಟ್ ಆಗಿ, ಅದೇ ಆಫೀಸ್ ನ ಎ ಸಿ ಕೆಳಗೆ ಕೂರೋ ಹಾಗೆ ಆಯಿತು. ಇಷ್ಟೇ ಆಗಿದ್ದರೆ ತೊಂದರೆ ಇರುತ್ತಾ ಇರಲಿಲ್ಲ. ಪ್ರಾಜೆಕ್ಟ್ implementation ಗೆ ಅಂತ ನನ್ನಾಕೆ ನ 2 ತಿಂಗಳು ಅಮೆರಿಕ ಹೋಗು ಅನ್ನೋದೇ? ನಾನಾದರೂ ಹೇಗೆ ಬೇಡ ಅನ್ನಲಿ? ದುಡ್ಡು ಸಿಗೊದಿಲ್ವೆ? ಅವಳ ದುಡ್ಡಿನ ನಂಬಿಕೆಯಿಂದಲೇ ಅಲ್ವ ನಾನು ಹೋಂ ಲೋನ್ ತಗೊಂಡಿರೋದು.




ಸಂಸಾರ ನಡೆಸೋ ಬದಲು ಅವಳು ಪ್ಯಾಕ್ಕಿಂಗ್ ಮಾಡಿಕೊಂಡು ಹೊರಟೇ ಬಿಟ್ಟಳು, ನನಗೋ ವಿರಹ, ಅಷ್ಟೆಲ್ಲ ಲವ್ ಮಾಡಿ, ಮದುವೆ ಆದ್ರೆ ಇವಳು ದೂರ ತೀರಕ್ಕೆ ಹೊರಡೋದೇ? ಈ ಮ್ಯಾನೇಜರ್ ಗಳಿಗೆ ಅಷ್ಟು ಕರುಣೆ ಇರೋಲ್ವೆ? ಕಡೆ ಪಕ್ಷ ನವ ದಂಪತಿ ಗಳು ಅನ್ನೋ ಕರುಣೆ ತೋರಿದ್ದರೂ ಸಾಕಿತ್ತು. 2 ತಿಂಗಳು ಅಮೆರಿಕ ಕೆಲಸ ಮುಂದೆ ಹಾಕಿದ್ರೆ ಅವನದ್ದೇನು ಹೋಗ್ತಾ ಇತ್ತು. ಸರಿಯಾಗಿ 143 ದಿನಗಳಿಂದ ದಿನಕೊಂದರಂತೆ ಬರೆದ ಪ್ರೇಮ ಪತ್ರ (ಇಮೇಲ್ ನಲ್ಲಿ ), ಕಳುಹಿಸಿದ ಮೆಸೇಜ್ ಗಳೇ ನನಗೆ ಸದ್ಯಕ್ಕೆ ಸಂಗಾತಿ ಅಂತ ಭಾವಿಸಿ, ಅವಳು ಅಲ್ಲಿ ತಲುಪಿದ ಮೇಲೆ ನನಗೆ ಮೇಲ್ ಮಾಡುವ ಆಶ್ವಾಸನೆ ನು ತಗೊಂಡೆ.




ಅವಳು ಇಷ್ಟವರೆಗೂ ನನಗೆ ಬರಿ ಮೆಸೇಜ್ ಗಳು, ಮಿಸ್ ಕಾಲ್ ಗಳು ಕೊಡ್ತಾ ಇದ್ದಳೆ ಹೊರತು ಪ್ರೇಮ ಪತ್ರ ಬರೆದಿರಲಿಲ್ಲ. ನನ್ನ ಪತ್ರಗಳನ್ನ ಓದಿ "ಚೆನ್ನಾಗಿದೆ ಕಣೋ", "ನಾನು ಕನ್ನಡ ಎಂ ಎ ಮಾಡಿದ್ರೆ ಚೆನ್ನಾಗಿ ಇರ್ತಿತ್ತು ಕಣೋ" "ನಿನ್ನ ಪತ್ರಗಳಲ್ಲಿ ಹೋಲಿಕೆ ಗಳೆಲ್ಲ ಬರಿ ತಿನ್ನೋ ಐಟಂ ಗಳೇ ಇರ್ತಾವೆ" ಅನ್ನುವ ಫೀಡ್ ಬ್ಯಾಕ್ ಕೊಡುತ್ತಿದ್ದಳು ಹೊರತು, ನನಗೆ ಒಂದೇ ಒಂದು ಮೇಲ್ ಮಾಡಿರಲಿಲ್ಲ. ಪುಕ್ಕಟೆ ಮೆಸೇಜ್ ಇರಬೇಕಾದ್ರೆ ಪತ್ರ ಯಾಕೆ ಅನ್ನೋದು ಅವಳ ಅಂಬೋಣ.




ಇಂದಿಗೆ ಸರಿಯಾಗಿ ಅವಳು 2 ದಿನ ಆಗಿಯೇ ಬಿಟ್ಟಿದೆ. ನಿನ್ನೆ ರಾತ್ರೆ ಅವಳು ಕಾಲ್ ಮಾಡಿದ್ಲು, ಆದರೆ ನನ್ನದು ಸೂರ್ಯ ವಂಶ ಅದ್ದರಿಂದ ಬೆಳಕು ಮೂಡಿದ ಮೇಲೆಯೇ ನನಗೆ ತಿಳಿದದ್ದು. ನಂತರ ಆಫೀಸ್ ಗೆ ಬಂದು ಒಂದು ಸುಂದರವಾದ "ಕ್ಷಮಾಪನ!" ಪತ್ರ ಬರೆದೆ. ಮತ್ತೆ ಕಾಲ್ ಮಾಡಿದ್ರೆ ಉಗಿಸಿಕೊಬೇಕು, ಯಾರಿಗೆ ಬೇಕು, ನೆಮ್ಮದಿ ಹಾಳಗೋದರ ಜೊತೆ, ದುಡ್ಡು ಕೂಡ ಖರ್ಚು. ಅಮೆರಿಕ ದಿನ ಬಂದ ಮೇಲೆ ಎಂ ಟಿ ಅರ್ ನಲ್ಲಿ ಒಳ್ಳೆಯ ಊಟ ಕೊಡಿಸುವ ಭರವಸೆ ನೀಡಿದೆ. (ಈಗಲೂ ಊಟದ ಬಗ್ಗೆನೇ ಪ್ರಾಮಿಸ್ಸು ಅಂತ ಬೈಯಬಹುದೇನೋ? ) ಮೇಲ್ ಗೆ ರಿಪ್ಲೈ ಬರುವ ನಂಬಿಕೆ ಇತ್ತಾದರಿಂದ ಲ್ಯಾಪ್ ಟಾಪ್ ನ ಮನೆಗೇ ಹೊತ್ತೊಯ್ದೆ. ಅವಳ ಮೊದಲ ಪ್ರೇಮ ಪತ್ರ ಓದಲು ತುಂಬ ಉತ್ಸುಕನಾಗಿದ್ದೆ. ನಿನ್ನೆ ರಾತ್ರೆ 12 ರ ವರೆಗೆ ಆನ್ಲೈನ್ ಇದ್ದರು ಅವಳು ಬರಲಿಲ್ಲ, ಮೇಲ್ ಗೆ ಉತ್ತರ ನು ಬರಲಿಲ್ಲ. ಅದೆಷ್ಟು ಹೊತ್ತಿಗೆ ಕಣ್ಣು ಮುಚ್ಚಿದೇನೋ ಗೊತ್ತಿಲ್ಲ, ಬೆಳಿಗ್ಗೆ ಕಣ್ಣು ಬಿಡುವಾಗ 10 ಆಗಿತ್ತು, ಕಂಪ್ಯೂಟರ್ ಆನ್ ಮಾಡಿದರೆ ಅವಳಿಂದ ಮೊದಲ ಪ್ರೇಮ ಪತ್ರ ಬಂದಿದೆ. ಸಬ್ಜೆಕ್ಟ್ ಲೈನ್ ನಲ್ಲಿ "ನಿನಗಾಗಿ ಮಾತ್ರ" ಅನ್ನುವ ಒಕ್ಕಣೆ ಬೇರೆ. :) ನನಗೆ ಸ್ವರ್ಗಕ್ಕೆ ಮೂರೇ ಗೇಣು. ಇನ್ನೇನು ಮೇಲ್ ಓಪನ್ ಆಗಬೇಕು ಅನ್ನುವಷ್ಟರಲ್ಲಿ ನಮ್ಮ ಅಂಬಾನಿಗಳು ಕೈ ಕೊಡಬೇಕೇ? datacard ಮುಷ್ಕರ ಹೂಡಿ ಬಿಟ್ಟಿತು.


ಇನ್ನು ಆಫೀಸ್ ಗೆ ಹೋಗಿಯೇ ಓದಬೇಕು ಅಂದುಕೊಂಡು ಒಂದು ಬಕೆಟ್ ನೀರನ್ನ ತಲೆ ಮೇಲೆ ಸುರಿದು ಕೊಂಡು ಸ್ನಾನದ ಶಾಸ್ತ್ರ ಮಾಡಿ, ಆಫೀಸ್ ಗೆ ಓಡಿ ಬಂದೆ. (ನಾನು ಬೇರೆ ಕಂಪನಿ ಗೆ ರೆಸ್ಯುಮೆ ಕಳಿಸಬೇಕಾದ ಸಮಯದಲ್ಲಿ ಮಾತ್ರ ಸೈಬರ್ ಕೆಫೆ ಗೆ ಹೋಗೋದು). ಆಫೀಸ್ ಗೆ ನುಗ್ಗಿ ಇನ್ನೇನು ಲ್ಯಾಪ್ಟಾಪ್ ನ ಆನ್ ಮಾಡಬೇಕು ಅನ್ನುವಷ್ಟರಲ್ಲಿ ಮ್ಯಾನೇಜರ್ ನಿಂದ ಕಾಲ್. ಕೂಡಲೇ ಬಾ ಅಂತ. ಅಪ್ಪ ಅಮ್ಮ ಕರೆದಾಗ ಹೋಗುತ್ತಾ ಇರಲಿಲ್ಲ, ಆದರೆ ಈಗ ಹಾಗಲ್ಲವಲ್ಲ. ಈ ಕೆಲಸ ಆಗಬೇಕು, ಅದು ಆಗಬೇಕು, ಅದು ಹೀಗಲ್ಲ ಹಾಗೆ, ಸರಿ ಸುಮಾರು 2 ಘಂಟೆಗಳ ಕಾಲ ವಿಪರೀತ ಕುಯ್ದ. 1 ರ ಸುಮಾರಿಗೆ ಕ್ಯಾಬಿನ್ನಿಗೆ ಬಂದು ಮೇಲ್ ನೋಡೋಣ ಅಂದರೆ ಸ್ನೇಹಿತರು ಅನ್ನುವ ಪುಂಡು ಹುಡುಗ ಹುಡುಗಿಯರ ಗುಂಪು ಅಲ್ಲಿದೆ. ಮದ್ಯಾನ ಊಟ ಹೊರಗಡೆ ಹೋಗಿ ಮಾಡೋಣ ಅಂತ. ನನಗೆ ಮದುವೆ ಆಗಿದ್ದರೂ, ಹೆಂಡತಿ ದೂರದಲ್ಲಿ ಇದ್ದಿದ್ದರಿಂದ ನಾನು ಅ ಗುಂಪಿಗೆ ಸೇರದವನು ಅಂತ ಏಕಪಕ್ಷೀಯ ನಿರ್ದಾರ ಮಾಡಿಬಿಟ್ಟಿದ್ದರು. ಇವರನ್ನೆಲ್ಲ ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಳ್ಳಿ, ನಾನು ಹೆಂಡತಿಯ ಪ್ರೇಮ ಪತ್ರ ಓದಲಿಕ್ಕೆ ಇದೆ ಅಂತ ಹೇಳಲು ಸಾಧ್ಯನ? ಗೊತ್ತಾಗಿ ಬಿಟ್ಟರೆ ಇನ್ನು 2-3 ತಿಂಗಳು ನನ್ನ ಕಾಲು ಎಳಿಯದೆ ಬಿಡುವುದೇ ಇಲ್ಲ. ನಾನು ಕೂಡ ಅವರಿಗೆ ಹೇಗೆಲ್ಲಾ ಕಾಟ ಕೊಟ್ಟಿಲ್ಲ, ಅದಕ್ಕೆಲ್ಲ ಈಗ ಬಡ್ಡಿ ಸಮೇತ ವಾಪಸ್ಸು ಕೊಟ್ಟೇ ಬಿಡುವರು.


ಎಲ್ಲರ ಒತ್ತಾಸೆ ಯಂತೆ ಪಕ್ಕದ ಹೋಟೆಲ್ ಗೆ ಧಾಳಿ ಮಾಡಿ ತಿನ್ನುವಾಗಲೂ ನನಗೆ ಪತ್ರದ ಬಗ್ಗೆನೇ ಚಿಂತೆ. ಇವರುಗಳಾರು ಬೇಗ ತಿಂದು ಮುಗಿಸಿ ಹೊರಡುವ ಜಾಯಮಾನದವರಲ್ಲ, ಮ್ಯಾನೇಜರ್ ನಿಂದ ಹಿಡಿದು ಹೆಂಡತಿಯ ಅಪ್ಪ ಅಮ್ಮ ಎಲ್ಲರಿಗು ಮನಸೋ ಇಚ್ಛೆ ಬಯ್ಯದ ಹೊರತು ಹೊರಡುವ ಹಾಗಿಲ್ಲ!! ಸರಿ ಸುಮಾರು 2 ಘಂಟೆಗಳ ಅಮೋಘ ಊಟದ ನಂತರ ಆಫೀಸ್ ಗೆ ಬಂದು ನನ್ನ ಕ್ಯಾಬಿನ್ ಗೆ ನುಗ್ಗಬೇಕು ಅನ್ನುವಷ್ಟರಲ್ಲಿ ಮೊಬೈಲ್ ಬಡಿದು ಕೊಳ್ಳತೊಡಗಿತು, ಇವಳದ್ದೇ ಏನೋ ಅಂತ ತೆಗೆದು ನೋಡಿದರೆ, ಕ್ರೆಡಿಟ್ ಕಾರ್ಡ್ ನವನು, ರಿಸೆಪ್ಶನ್ ನಲ್ಲಿ ಕಾಯುತ್ತ ಇದ್ದೀನಿ, ದಯವಿಟ್ಟು ಬನ್ನಿ ಅಂದ. ಕಾರ್ಡು ಬೇಕು ಅಂತ ಹೇಳಿದವನು ನಾನೇ ಆದರು ಈ ಸೇಲ್ಸ್ ಅಸಾಮಿ ಈಗಲೇ ವಕ್ಕರಿಸಬೇಕೆ? ಹಾಳಾದವನು ಎಂದುಕೊಂಡು ಅ ಕಡೆ ನಡೆದೆ.




ಅ ಅಸಾಮಿಯೋ 10 ನಿಮಿಷದೊಳಗೆ ನನ್ನನ್ನು ಬಿಡುವ ಹಾಗೆ ಕಾಣುತ್ತಲೇ ಇಲ್ಲ, ನಮ್ಮ ಕಂಪನಿ ಕಾರ್ಡ್ ನಿಂದ ಇಷ್ಟೆಲ್ಲಾ ಉಪಯೋಗ ಇದೆ, ಅದು ಇದೆ, ಇದು ಇದೆ ಅಂತೆಲ್ಲ ಹೇಳಲು ಶುರು ಮಾಡಿದ. ಆಮೇಲೆ ಅದೆಷ್ಟೋ ಕಡೆ ನನ್ನ ಸಹಿ ತೆಗೆದು ಕೊಂಡ. ಸ್ವಲ್ಪ ಮಟ್ಟಿಗೆ ಮೊಳೆ ಹೊಡೆಸಿ ಕೊಂಡ ನಂತರ ನನ್ನ ಸುಳ್ಳು ವಿದ್ಯಾ ಪ್ರಾವಿಣ್ಯತೆಯನ್ನು ಪ್ರದರ್ಶಿಸಿ ಅವನ್ನನ್ನು ಸಾಗಹಾಕುವ ಹೊತ್ತಿಗೆ ಸಮಯ ಸಂಜೆ ಆಗುತ್ತಾ ಬಂದಿತ್ತು. ನನಗು ತಾಳ್ಮೆ ಹೋಗುತ್ತಾ ಬಂದಿತ್ತು. ಕೂಡಲೇ ಕ್ಯಾಬಿನ್ ಗೆ ನುಗ್ಗಿ, ಲ್ಯಾಪ್ಟಾಪ್ ನ ಆನ್ ಮಾಡಿ ಇನ್ನೇನು ಜಿ ಮೇಲ್ ಗೆ ಲಾಗಿನ್ ಆಗಬೇಕು ಅನ್ನುವಷ್ಟರಲ್ಲಿ ಪಕ್ಕದ ಕ್ಯಾಬಿನ್ ನ ಕೋತಿ ಮೂತಿಯ ಪ್ರಾಣಿ ವಕ್ಕರಿಸಬೇಕೆ? ಅದೇನೋ ಹೊಸ ಬುಸಿನೆಸ್ಸು, ಮಾರ್ಕೆಟಿಂಗ್, ಕೇವಲ 8 ಸಾವಿರ ಇನ್ವೆಷ್ಟು ಮೆಂಟು ಅನ್ನುತ್ತಾ ಕೊರೆಯಬೇಕೆ? ಈ ಸಾಫ್ಟ್ ವರೆ ನವರಿಗೆ ಇಷ್ಟು ಜಾಬ್ ಇನ್ಸೆಕುರಿಟಿ ಯಾಕೆ ಅಂತ ಕೇಳೋ ಹಾಗೆ ಇಲ್ಲ. ಸಂಜೆ ಆಗ್ತಾ ಬಂದ್ರು ಅವನು ಹೋಗೋ ಹಾಗೆ ಇಲ್ಲ. ಇನ್ನು ಆಫೀಸ್ ನಲ್ಲಿ ಪತ್ರ ಓದಲು ಸಾದ್ಯನೇ ಇಲ್ಲ ಅಂತ ಅನ್ನಿಸಿ, ಮನೆಗೆ ಹೊರಟು ಬಿಟ್ಟೆ. ಮೊದಲ ಪ್ರೇಮ ಪತ್ರ ದಿನ ಆದರೂ ಓದದ ಪರಮ ಪಾಪಿ ಎಂಬ ಮುಖ ಹೊತ್ತು ಬೈಕು ಹತ್ತಿ ಮನೆಗೆ ಬಂದೆ.




ಮನೆಯಲ್ಲಿ ಕೂತು ಆತುರದಿಂದ ಲಾಗಿನ್ ಆದೆ, ಒಂದು ಚಂದದ ಸಬ್ಜೆಕ್ಟ್ ಲೈನ್ "ನಿನಗಾಗಿ ಮಾತ್ರ", ಮೇಲ್ ಓಪನ್ ಆಗೇ ಬಿಟ್ಟಿತು, ನೋಡುತ್ತೀನಿ ಕೇವಲ ಒಂದೇ ಒಂದು ಲೈನ್ ಇದೆ!! "ಇಲ್ಲಿ ಬಹಳ ಚಳಿ ಕಣೋ", ಅಂತ. ಸಿಟ್ಟೆಲ್ಲ ಬಂತು, ಇಡೀ ದಿನ ಕಷ್ಟ ಪಟ್ಟು ಮೊದಲ ಪ್ರೇಮ ಪತ್ರ ಅಂತ ಓದಿದರೆ ಹೀಗಾ ಬರೆಯೋದು? ಏನು ಮಾಡೋದು ಜಗಳ ಆಡೋಣ ಅಂದ್ರೆ ಅವಳು ಇಲ್ಲಿ ಇಲ್ಲವೇ? ರಿಪ್ಲೈ ಮಾಡೇ ಬಿಟ್ಟೆ, ನನ್ನೆಲ್ಲ ಸಿಟ್ಟು ಹೊರಹಾಕಿ, ಮೊದಲು ಆಶ್ವಾಸನೆ ಕೊಟ್ಟಿದ್ದ ಎಂ ಟಿ ಅರ್ ಊಟ ಕ್ಯಾನ್ಸಲ್ ಮಾಡಿದೆ.




ನೀವು ಕೇಳಬಹುದು ಇಷ್ಟೆಲ್ಲಾ ಕಷ್ಟ ಪಡೋ ಬದಲು ಒಂದು ಫೋನ್ ಮಾಡಬಹುದಿತ್ತಲ್ಲ ಅಂತ, ಈಗ ಅದನ್ನೇ ಮಾಡ್ತಾ ಇರೋದು, ಫೋನ್ ನಲ್ಲಿ ನಡೆಯೋ ಪ್ರೇಮ ಸಂಬಾಷಣೆ ಇಲ್ಲಿ ಹಾಕುವುದಿಲ್ಲ ಬಿಡಿ, ಈಗ ನನ್ನ ಸಿಟ್ಟೆನಿದ್ದರು ಅವಳ ಮ್ಯಾನೇಜರ್ ಎಂಬ ಬ್ರಹ್ಮ ರಾಕ್ಷಸನ ಮೇಲೆ ಮಾತ್ರ.


28 comments:

PARAANJAPE K.N. said...

ಅಯ್ಯಾ ನಿಮ್ಮ ಪಡಿಪಾಟಲು ಕ೦ಡು ಅಯ್ಯೋ ಅನಿಸಿತು, ಪ್ರೇಮಿಸಿದ್ದಾಯ್ತು, ಮದುವೇನು ಆಯ್ತು, ಇನ್ನು ಎಲ್ಲದಕ್ಕೂ Recession(ರೇಶನ್), ಹಹ್ಹ. ಚೆನ್ನಾಗಿದೆ.

Nirvana said...

First Congrats and Happy married life Baalu....nimma paadu olle Meghadootada Yakshana thara matte nimmannu mattu nimmakeyanna doora maadi, viraha vedaneya kartru arthaat Manger Kuberana thara...abba yenta plot... Neevu “modern Kaalidaasa” aago dina doora illa..so sadyadalle ondu kaadambri guarantee…en antira

ಸಾಗರದಾಚೆಯ ಇಂಚರ said...

ಹಹಹಹ
ತುಂಬಾ ಚೆನ್ನಾಗಿದೆ ನಿಮ್ಮ ಪ್ರೇಮ ಪರಿಣಯ
ನಿಜಕ್ಕೂ ಮ್ಯಾನೇಜರ್ ರಾಕ್ಷಸನೆ
ನಿಮ್ಮ ಸುಂದರ ಪ್ರೇಮಕ್ಕೆ ಇಷ್ಟೊಂದು ವಿಗ್ನ ತರುವುದೇ

ಚುಕ್ಕಿಚಿತ್ತಾರ said...

ಬಾಲು ಅವರೆ...
ವಿರಹಾ... ನೂರು ನೂರು ತರಹಾ....
ಇದು ನೂರಾ ಒ೦ದನೆಯ ತರಹಾ...
ನಿಮಗೆ, ನಿಮ್ಮಾಕೆಗೆ ಸ೦ಕ್ರಮಣದ ಹಾರ್ಧಿಕ ಶುಭಾಶಯಗಳು.

ಮೂರ್ತಿ ಹೊಸಬಾಳೆ. said...

ಫೊನಿನಲ್ಲಿ ನಡೆಯುವ ಸಂಭಾಷಣೆ ಏನಿದ್ದರೂ ಫೊನ್ ಇಡುವ ವರಗೆ ಮಾತ್ರ ಆದರೆ ಬರೆದ ಪತ್ರವನ್ನ ಯಾವಾಗ ಬೇಕಾದರೂ ಓದಿ ಸಂತೋಷ ಪಡಬಹುದು ಬಿಡಿ.
ಹಾಗಂತ ಫೋನ್ ಮಾಡುವುದನ್ನು ನಿಲ್ಲಿಸಬೇಡಿ.
ಉತ್ತಮವಾದ ಬರಹಕ್ಕೆ ಧನ್ಯವಾದಗಳು.

ರಾಜೀವ said...

ಪ್ರಣಯದ ಅನುಭವಗಳು ಇವತ್ತಲ್ಲಾ ನಾಳೆ ನಿಮಗೆ ಲಭವಾಗುವುದು.
ಆದರೆ ಮದುವೆ ಆದಮೇಲೆ, ಬ್ರಹ್ಮಚಾರಿಯಾಗಿ ಇರಬಹುದಾದ ಕ್ಷಣಗಳು ಅಪರೂಪ ಅಂದು ಮದುವೆಯಾದವರು ಹೇಳುತ್ತಾರೆ.
ಸೊ, ನೀವೇ ಧನ್ಯರು ;-)

ಸಂಕ್ರಾಂತಿಯ ಹಾರ್ಧಿಕ ಶುಭಾಶಯಗಳು.

shivu.k said...

ಛೇ..ಪಾಪ ಈಗಾಗಬಾರದಿತ್ತು.

ಆ ಮೇನೇಜರಿನಿಗೆ ಒಳ್ಳೇ ಬುದ್ಧಿ ಕೊಡಲಿ...

shivu.k said...

ನಿಮ್ಮಾಕೆ ಇಲ್ಲದ ಸಮಯದಲ್ಲಿ ನಿಮಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.

ಸವಿಗನಸು said...

paapa.....!


ಸಂಕ್ರಾಂತಿಯ ಹಾರ್ಧಿಕ ಶುಭಾಶಯಗಳು...

ಗೌತಮ್ ಹೆಗಡೆ said...

ನಿಮ್ಮನ್ನ ನೋಡಿದ್ರೆ ಪಾಪ ಅನ್ನಿಸುತ್ತೆ:)

Unknown said...

Hahaha... ayyo nimma avastheye... :-(

ಶಿವಪ್ರಕಾಶ್ said...

Ha Ha Ha...
Paapa ri..
Nice writeup... :)
Nim maduve ayta ?? ellri maduve oota ??

:)

Santhosh Rao said...

:) Chennagide balu.. Nice write up

ಬಾಲು said...

ಪರಂಜಾಪೆ ಅವರೇ ಧನ್ಯವಾದ.

ನಿರ್ವಾಣ: ನಿಮ್ಮ ಶುಭ ಹಾರೈಕೆಗೆ ಥ್ಯಾಂಕ್ಸ್, ಆಮೇಲೆ ಮತ್ತೊಂದು ವಿಷಯ. ಮದುವೆ ಆಗಿ ಕೆಲ ಸಮಯ ಕಳೆದಿದ್ದರು ನಾನು "ಗಿಫ್ಟ್" ಗಳನ್ನೂ ಇನ್ನೂ ಸ್ವೀಕರಿಸುತ್ತಾ ಇದ್ದೀನಿ. :) :)
ಇಗ ಹೆಂಡತಿ ಪಕ್ಕದಲ್ಲಿ ಇಲ್ಲದೆ ಇರೋದ್ರಿಂದ, ಕಾಳಿದಾಸ ಅಲ್ಲ ದೇವದಾಸ ಆಗಿ ಬಿಟ್ಟಿದಿನಿ. ಒಂದು ವಿರಹ ಕಾದಂಬರಿ ಬರಬಹುದ ಅಂತ.

ಗುರುಮೂರ್ತಿ ಹೆಗಡೆ ಅವರೇ, ಮ್ಯಾನೇಜರ್ ಅನ್ನುವ ಜೀವಿಗಳು ಇರೋದೇ ತೊಂದರೆ ಕೊಡೋದಕ್ಕೆ ಅಂತ ನನ್ನ ಭಾವನೆ. :)

ಚುಕ್ಕಿ ಚಿತ್ತಾರ: ಹೌದು ನೂರ ಒಂದನೇ ತರದ ವಿರಹದಲ್ಲಿ ಸಂಕ್ರಮಣ

ಮೂರ್ತಿ ಹೊಸಬಾಳೆ ಅವರೇ ನಿಮ್ಮ ಮಾತು ನಿಜ. :) ಇಗ ಈ ವಿಷಯದಲ್ಲಿ ನಿಮಗೆ ಒಳ್ಳೆಯ ಅನುಭವ ಸಿಗುತ್ತಾ ಇದೆ ಅನ್ಸುತ್ತೆ. :)

ರಾಜೀವ ಅವರೇ ಹೌದು.
ನಿಮಗೂ ಕೂಡ ಹಬ್ಬದ ಶುಭಾಷಯ.

ಶಿವೂ: ಹೌದು ಮಾರಾಯರೇ. ನಾನು ಕೂಡ ದೇವರಲ್ಲಿ ಅದೇ ಬೇಡಿಕೊಲ್ಲುತ್ತಾ ಇದ್ದೇನೆ. :)

ಸವಿ ಗನಸು: ಹ್ಞೂ.. :(

ಗೋರೆ: ನನ್ನ ಅವಸ್ಥೆ ದುರಾವಸ್ಥೆ. :(

ಶಿವ ಪ್ರಕಾಶ್: "ಗಿಫ್ಟ್" ಕೊತ್ತೊರಿಗೆ ಮೊದಲ ಆಧ್ಯತೆ. :) :) :)

ಸಂತೋಷ್: ಮೆಚ್ಚಿ ಪ್ರೋಥ್ಸಹಿಸಿದ್ದಕ್ಕೆ ಧನ್ಯವಾದಗಳು.

Nisha said...

Wish you happy married life.

Chandru said...

Recession ಅಲ್ಲಿ ತಂತ್ರಜ್ಞೆಯಾ ಜೊತೆಗೆ ಮದುವೆ reception ಮಾಡ್ಕೊಂಡರೆ ಈ ತರಾನೆ repercussion ಆಗೋದು.. ಹಾ ನಿನ್ನ ಮದುವೆಗೆ ನಾನು ಕೊಟ್ಟ ಆ ಬಿಲ್ಲು ಬಾಣಗಳನ್ನು ನಿನ್ನ manager ಗೆ ಬಿಟ್ಟರೆ ನೀನು ನಿನ್ನಕೆಗೆ ಹೊವಬಾಣವೇನು , ಪುಷ್ಪಕ ವಿಮಾನದಲಿ ದಿನವೂ onsite ಹೋಗಿ romantic ಹಾಲಿಡೇ ನ ನಿನ್ನಕೆ ಜೊತೆ ಹಾಯಾಗಿ ಕಳೆಯಬಹುದು.. ಹೋಗು ಬೇಗ ಬಾಣ ಬಿಡು.. ಹ ಬಿಟ್ಟಿದ್ದು ನೀ ಅಂತ ಗೊತ್ತಾಗಬಾರದು ಆ ಕೋತಿ managerಗೆ.. ನಿನ್ನ innondu honey moonge ee moon ನ ಒಂದು ಚಿಕ್ಕ ಪಿಸುಮಾತು..

Unknown said...

Ration or Recession?! kannadadalli ondide english nalli ondide?

Unknown said...

ha ha ha super

sunaath said...

Better luck next time!

ತೇಜಸ್ವಿನಿ ಹೆಗಡೆ said...

ಕುತೂಹಲ ಭರಿತ ಹಾಸ್ಯ ಲೇಖನ ತುಂಬಾ ನಗು ತರಿಸಿತು. ಕೊನೆಯವರೆಗೂ ಒಂದಕ್ಷರವನ್ನೂ ಬಿಡದೇ ಓದಿಸಿಕೊಂಡು ಹೋಯಿತು. ನಗಿಸಿದ್ದಕ್ಕೆ ಥ್ಯಾಂಕ್ಸ್ :)

ಹಾರ್ದಿಕ ಶುಭಾಶಯಗಳು.

ಸುಮ said...

ಹ..ಹ..ಹ..ಚೆನ್ನಾಗಿದೆ ನಿಮ್ಮ ವಿರಹದ ಕಥೆ.ಆದಷ್ಟು ಬೇಗ ಆ ಮ್ಯಾನೇಜರ್ ದೇವನಿಗೆ ಕರುಣೆ ಹುಟ್ಟಿ ನಿಮ್ಮ ಗೋಳು ಕೊನೆಗೊಳ್ಳಲೆಂದು ಹಾರೈಸುವೆ.

ಜಲನಯನ said...

ಬಾಲು..ಹೀಗೂ ಆಗುತ್ತಾ?? ಛೇ....ಹೋಗ್ಲಿ ಬಿಡಿ..ಸಂಕ್ರಾಂತಿ ಚನ್ನಾಗಿ ಆಚರಿಸಿದ್ರಲ್ಲ...ಅದೇ ಸಂತೋಷದ ವಿಷಯ...

ಜಲನಯನ said...

ಬಾಲು..ಹೀಗೂ ಆಗುತ್ತಾ?? ಛೇ....ಹೋಗ್ಲಿ ಬಿಡಿ..ಸಂಕ್ರಾಂತಿ ಚನ್ನಾಗಿ ಆಚರಿಸಿದ್ರಲ್ಲ...ಅದೇ ಸಂತೋಷದ ವಿಷಯ...

ಮನಸು said...

ಬಾಲು ಸರ್,
ನಿಮ್ಮ ಪಜೀತಿ ಓದಿ ನಗು ಬಂದಿತು, ಒಮ್ಮೆ ಪಾಪಾ ಅನ್ನಿಸಿತು ಹೀಗಾಗ ಬಾರದಿತ್ತು. ಪತ್ರದಲ್ಲಿ ಬರೆದರೆ ತಿರುಗಿಚಿ ಮಗುಚಿ ಓದಬಹುದು ಎಷ್ಟು ಸರಿ ಬೇಕಾದರು ಅಲ್ಲವೆ..? ನಿಮ್ಮಾಕೆ ಬೇಗ ಬಂದು ನಿಮ್ಮನ್ನು ಸೇರಲಿ ಹಾಗೆ ಒಂದು ದೊಡ್ಡ ಪ್ರೇಮಪತ್ರ ಬರೆಯುವಂತಾಗಲಿ.

NSN said...

Please write English version also in your blogs, so that we (you know who we are :-) )can also read and N'joy.

ದೀಪಸ್ಮಿತಾ said...

ಪಾಪ ಹೀಗಾಗಬಾರದಿತ್ತು. ಮದುವೆಯ ಶುಭಾಷಯಗಳು

ಮನಸಿನಮನೆಯವನು said...

'ಬಾಲು ' ಅವ್ರೆ..,

ಚೆನ್ನಾಗಿದೆ.. ಆದ್ರೆ ಬ್ಲಾಗಿನಲ್ಲಿ ಸ್ವಲ್ಪ ಕಡಿಮೆ ಇದ್ದರೆ ಚೆನ್ನ..!

Blog is Updated:http://manasinamane.blogspot.com

Prabhuraj Moogi said...

ಸೂಪರ್ ಬಾಲು ಅವ್ರೆ...
ಮೊದಲಿಗೆ ಮದುವೆ ಆಗಿದ್ದಕ್ಕೆ ಕಂಗ್ರಾಜುಲೇಶನ್, ಹ್ಮ್ ಮನೆಯವರೆಲ್ಲ ಒಪ್ಪಿ ಮೆಚ್ಚಿದ ಹುಡುಗಿ ಮದುವೆ ಆಗಿದ್ದೀರಿ... ಛೇ ಈ ಇಂಡಸ್ಟ್ರೀನೇ ಹೀಗೆ ನೋಡಿ, ಯಾವಗ್ಲೂ ಸಿಗದ ವಿದೇಶಯಾತ್ರೆ ಹೀಗೆ ಸಮಯಕ್ಕೆ ಸರಿಯಾಗಿ ಬಂದು ವಕ್ಕರಿಸುತ್ತದೆ... ಏನೇ ಆಗ್ಲಿ ಕಾಯೋದ್ರಲ್ಲೂ ಥ್ರಿಲ್ ಇರ್ತದೆ ಅಂತಾರೆ, ಏಂಜಾಯ್ ಮಾಡಿ... ನಿರೂಪಣೆ ಸಕತ್ತಾಗಿತ್ತು ಒಂದೇ ಓಘದಲ್ಲಿ ಓದಿಸಿಕೊಂಡು ಹೋಯ್ತು...