Friday, July 31, 2009

ಒಂದು ಫ್ಲಾಶ್ ಬ್ಯಾಕ್!!

ಇದು ಬಹಳ ವರ್ಷಗಳ ಹಿಂದೆ ನಡೆದ ಘಟನೆ. ಒಂಥರಾ ಫ್ಲಾಶ್ ಬ್ಯಾಕ್!!

ನಾನು ಅವಾಗಾ ಭದ್ರಾವತಿ ಯಲ್ಲಿ ಸೆಕೆಂಡ್ ಇಯರ್ ಡಿಗ್ರೀ ಓದುತ್ತಾ ಇದ್ದೆ, ಓದುತ್ತಾ ಇದ್ದೆ ಅನ್ನೋದಕಿಂತ ಕಾಲೇಜಿಗೆ ಕೈ ಬೀಸಿಕೊಂಡು ಹೋಗುತ್ತಾ ಇದ್ದೆ ಅನ್ನೋದೇ ಸೂಕ್ತ ಅನ್ನಿಸುತ್ತೆ, ಇರಲಿ ಅವಾಗ ಇಡಿ ಡಿಗ್ರೀ ಗೆ ಇದ್ದಿದ್ದು ಕೇವಲ 9 ಜನ ಹುಡುಗರು, ಮಿಕ್ಕ ಪೂರ ಹುಡುಗಿಯರ ಸೈನ್ಯ!! ಅವರ ಮದ್ಯೆ ನಾವು ನವಗ್ರಹಗಳು!!


ಕಾಲೇಜು, ಎದುರುಗಡೆ ಒಂದು ಟೀ ಮತ್ತೆ ಸಿಗರೆಟ್ ಸಾಲ ಕೊಡೊ ಅಂಗಡಿ, ಮತ್ತೆ ಕಾಲೇಜಿನ ಎಡ ಭಾಗದಲ್ಲೇ ಉಚಿತ ಊಟಕ್ಕೆ ಒಂದು ಮದುವೆ ಛತ್ರ, ಎಲ್ಲಕಿಂತ ಮಿಗಿಲಾಗಿ ಹುಡುಗಿಯರ ಹಿಂಡು, ಅದು ನಮ್ಮ ಕಾಲೇಜು. ಅಷ್ಟು ಜನ ಹುಡುಗಿಯರಿಗೆ ಜಾತಿ ಮತ ಬೇದ ಇಲ್ಲದೆ, ಬಡವ ಶ್ರೀಮಂತ ಎನ್ನದೆ ಎಲ್ಲಾ ಹುಡುಗಿರಿಗೂ ಲೈನ್ ಹೊಡೆಯೋದು ನಮ್ಮ ಹಿಡನ್ ಅಜೆಂಡಾ. ಆದರೆ ಹೇಗೆ ನವಗ್ರಹಗಳು ಒಂದೇ ತರ ಇರುವುದಿಲ್ಲವೋ, ನಮ್ಮ ಒಂಬತ್ತು ಜನರ ಬುದ್ದಿ ಕೂಡ ಒಂದೇ ತರ ಇರುತ್ತಾ ಇರಲಿಲ್ಲ. ನಮಗೆ ಹುಡುಗಿರನ್ನ ನೋಡಲು ದೈರ್ಯ ಇರ್ತ ಇತ್ತೇ ಹೊರತು ಮಾತನಾಡಿಸಲು ಅಲ್ಲ!! ದೈರ್ಯ ಇದ್ದ 2-3 ಜನಕ್ಕೆ ಗರ್ಲ್ ಫ್ರೆಂಡ್ ಗಿಂತ ಮಲ್ಯ ನೆ ಚೀಪ್ ಅಂತ ನಂಬಿದವರು. ಮತ್ತಿಬ್ಬರು ರಜಿನಿ ಕಾಂತ ಮತ್ತೆ ಉಪೇಂದ್ರ ರ ಅಭಿಮಾನಿಗಳು, ಅವರಿಗೆ ಪ್ರೋಪೋಸೆ ಮಾಡಿ ಮಾತಾಡೋ ಅಷ್ಟು ತಾಳ್ಮೆ ಇರಲಿಲ್ಲ. ಮಗದೊಬ್ಬನಿಗೆ ಪೂರ್ವಾರ್ಜಿತ ಕರ್ಮ ಎಲ್ಲಾ ಸುಂದರ ಹುಡುಗಿಯರು ಅವನನ್ನು ಅಣ್ಣ ಅಂತಲೇ ಕರೀತ ಇದ್ದರು!!! ಉಳಿದ ನಮಗೆ ಯಾವ ತೊಂದರೇನು ಇರಲಿಲ್ಲ, ನಮಗೆ racism ಮಾಡಿ ಗೊತ್ತಿರಲಿಲ್ಲ!! :)


ನಾವುಗಳು ನಮ್ಮ ಕ್ಲಾಸ್ ಹುಡುಗಿಯರನ್ನ ಚುಡಾಯಿಸುವ ಹಾಗೆ ಇರಲಿಲ್ಲ. ಅವರು ನಮ್ಮ ಎ ಟಿ ಎಂ, ಸಿನಿಮಾಕ್ಕೆ ಎಲ್ಲಾ ದುಡ್ಡು ಕೊಡುತ್ತಾ ಇದ್ದಿದ್ದೇ ಅವರು!! ನಾವು ಸಿನಿಮಾಕ್ಕೆ ಅಂತ ತೊಲಗಿದರೆ ತಾವು ಅರಾಂ ಆಗಿ ಪಾಠ ಕೇಳಬಹುದು ಅಂತ ಪ್ಲಾನ್ ಮಾಡ್ತಾ ಇದ್ರೋ ಏನೋ. ಒಟ್ಟಲ್ಲಿ ಅವರು ನಮಗೆ ದುಡ್ದಂತು ಕೊಡ್ತಾ ಇದ್ರೂ. ಅವರ ಹತ್ತಿರ ಸಿಕ್ಕಲಿಲ್ಲ ಅಂದ್ರೆ ಕಾಲೇಜಿನ ಕ್ಲೆರಿಕ್ ಹತ್ತಿರ, ಅಲ್ಲೂ ಗಿಟ್ಟಲಿಲ್ಲ ಅಂದ್ರೆ ಲೆಕ್ಚರರ್ ಗಳ ಹತ್ತಿರ ತೆಗೆದು ಕೊತ ಇದ್ದೆವು.


ಇಂತಿಪ್ಪ ನಮ್ಮ ಗೂಡಿಗೆ ಒಮ್ಮೆ 5-6 ಹುಡುಗಿಯರು ಪಿ ಯು ಸಿ ಗೆ ಹೊಸದಾಗಿ ಸೇರಿಕೊಂಡರು. ಸರಿ ಸುದ್ದಿ ನಮ್ಮ ಕಿವಿಗೂ ಬಿತ್ತು. ಸೇರಿಕೊಂಡರೆ ಸಾಕೆ? ನವಗ್ರಹಗಳ ಆಶಿರ್ವಾದ, ಅನುಗ್ರಹ ಕೂಡ ಬೇಕಲ್ಲ. ಆದರೆ ನಮಗೆ ಮುಂದಿನ ಕ್ಲಾಸ್ ಪ್ರಿನ್ಸಿಪಾಲರೆ ತಗೋತಾ ಇದ್ದಿದ್ದು, ಅವರೇ ಅ ಸಬ್ಜೆಕ್ಟ್ ನ HOD ಬೇರೆ, ಆಮೇಲೆ ಲ್ಯಾಬ್ ನಲ್ಲಿ ಮಾರ್ಕ್ಸ್ ನ ಕಟ್ ಮಾಡಿದರೆ ಅನ್ನೋ ಭಯ. ಆದರು ಅ ಪಿ ಯು ಸಿ ಯಾ ಆಕರ್ಷಣೆ ಜಾಸ್ತಿ ಆದ್ದರಿಂದ ಕ್ಲಾಸ್ ಬೇಡ ಅಂತ ಅತ್ತ ನಡೆದೆವು.


ಅವರ ರೂಂ ಹತ್ತಿರ ಹೋಗಿ ಕಿಟಕಿ ತೆಗೆದು ನಮ್ಮ ತಲೆ ಒಳಗೆ ಹಾಕಿ ನೋಡತೊಡಗಿದೆವು. ಅಲ್ಲೇ ಇದ್ದ ಹುಡುಗರ ಜೊತೆ ಹೊಸದಾಗಿ ಸೇರಿದವರಲ್ಲಿ ಯಾರು ಸುಂದರ, ಯಾರಿಗೆ ಎಷ್ಟು ಮಾರ್ಕ್ಸ್ ಅಂತ ಚರ್ಚೆ ಶುರು ಮಾಡಿದೆವು. ಯಾಕೋ ಏನೋ ನಮ್ಮ ಹುಡುಗರಿಗೆ ಯಾರು ಇಷ್ಟ ಆಗಿಲ್ಲ ಅನ್ನಿಸುತ್ತೆ, ಎಲ್ಲಾ ನಾಪತ್ತೆ ಆದರು. ಕೊನೆಗೆ ಉಳಿದದ್ದು ನಾನು ಮತ್ತೆ ಮಜ್ಜಿಗೆ (ಮಜ್ಜಿಗೆ ಅಂದ್ರೆ ಉಮೇಶ ಅನ್ನುವನನ ಅಡ್ಡ ನಾಮ) ಹೀಗೆ ಒಂದು 5 ನಿಮಿಷ ಕಳೆಯಿತು. ನಾವಿಬ್ಬರೂ ಭಯಂಕರ ಚರ್ಚೆ ಮಾಡ್ತಾ ಇದ್ವಿ. ಅಷ್ಟರಲ್ಲಿ ಯಾರೋ ನನ್ನ ಹೆಗಲ ಮೇಲೆ ಕೈ ಇಟ್ರು, ನಾನು ಅದು ಮಜ್ಜಿಗೆ ಕೈ ಅಂತ ಸುಮ್ಮನಾದೆ. ಅಷ್ಟರಲ್ಲಿ ಮಜ್ಜಿಗೆ ನ ಯಾರೋ ಕ್ಲಾಸ್ ಗೆ ಬಾ ಅಂತ ಕರೆದರು. ಇವನೋ ನಮ್ಮ ಕ್ಲಾಸ್ ನ ದಾವೂದ್ ಇಬ್ರಾಹಿಂ. ಹೀಗೆಲ್ಲ ಡಿಸ್ಟರ್ಬ್ ಮಾಡಿದ್ರೆ ಮುಗೀತು ಕತೆ, ಮುಚ್ಕೊಂಡು ಹೋಗಯ್ಯ ಆಚೆಕಡೆ ಅಂದ. ಸರಿ ನಾವು ಮತ್ತೆ ಕಂಟಿನ್ಯೂ ಮಾಡಿದ್ವಿ. ಸ್ವಲ್ಪ ಹೊತ್ತಾದ ನಂಗು ಯಾರೋ ಕರೆದರು ಬಾ ಕ್ಲಾಸ್ ಗೆ ಅಂತ, ನಂಗು ಉರಿತು, ಅ ಬೋರಿಂಗ್ ಕ್ಲಾಸ್ ನ ಯಾರು ಕೇಳ್ತಾರೆ? ಬರಲ್ಲ ಹೋಗಪ್ಪ ಅಂದೆ. ನಂ ಹೆಗಲ ಮೇಲಿಂದ ಕೈ ಹೋಯಿತು. ಆದ್ರೆ ಮಜ್ಜಿಗೆ ಯಾ ಬೆನ್ನು ತಟ್ಟಿ ಯಾರೋ ಕರೀಲಿಕ್ಕೆ ಶುರು ಮಾಡಿದ್ರು! ಅವನು ನನ್ನ ಮುಖ ನೋಡಿದ, ಯಾಕೋ ಡೌಟ್ ಬಂತು. ಅ ಕಿಟಕಿ ಎಂಬ ಕನಕನ ಕಿಂಡಿ ಇಂದ ಮುಖ ಹೊರತೆಗೆದು ನೋಡಿದರೆ ಎದುರು ಇದ್ದಿದ್ದು ಪ್ರಿನ್ಸಿಪಾಲ್!! ಬನ್ನಿ ಕ್ಲಾಸ್ ಗೆ ಹೋಗೋಣ, ಅ ಹುಡುಗಿಯರು ಇನ್ನು 2 ವರ್ಷ ಇಲ್ಲೇ ಇರ್ತಾರೆ ಅಂದ್ರು. ನಮಗೋ ಸ್ವಲ್ಪ ಅವಮಾನ.. ಅದೂ ಪಿ ಯು ಸಿ ವಿಧ್ಯಾರ್ಥಿಗಳ ಮುಂದೆ!!! (ಅವತ್ತು ಜಾಸ್ತಿ ನೆ ಅವಮಾನ ಆಗಿತ್ತೋ ಏನೋ, ನಮಗೆ ಇಗ ಕ್ಲಾಸ್ ಗೆ ಹೋಗಬೇಕಲ್ಲ ಅನ್ನೋ ಸಂಕಟದಲ್ಲಿ ಅವಮಾನ ಗೊತ್ತಾಗಿಲ್ಲ)


ಆಮೇಲೆ ಕ್ಲಾಸ್ ನಲ್ಲಿ ಅ ಫಿಸಿಕ್ಸ್ ಪಾಠದ ಮಧ್ಯ ನಮ್ಮದೇ ಉದಾಹರಣೆ. ( ಅಲ್ಲಿ ನಮ್ಮ ಉದಾಹರಣೆ ಯಾಕೆ ಕೊಟ್ರು ಅಂತ ಅವತ್ತೂ ಅರ್ಥ ಆಗಿರಲಿಲ್ಲ. ಇವತ್ತು ಆಗಿಲ್ಲ ಕೂಡ!! )


ಇ ಘಟನೆ ನಡೆದ ಮೇಲೆ ನಾವು ಪ್ರಿನ್ಸಿಪಾಲ್ ಕೈಯಲ್ಲಿ ಸಿಕ್ಕಿ ಬೀಳಲಿಲ್ಲ. ಅಂದ್ರೆ ನಾವು ಶ್ರೀ ರಾಮ ಚಂದ್ರ ನ ತರ ಆದೆವು ಅಂತ ಅಲ್ಲ. ಪ್ರಿನ್ಸಿಪಾಲ್ ಕೈಗೆ ಸಿಗದಂತೆ ಎಚ್ಚರಿಕೆ ತೆಗೆದು ಕೊತ ಇದ್ದೆವು ಅಷ್ಟೇ. :)

ಇದು ಯಾಕೆ ನೆನಪಿಗೆ ಬಂತು ಅಂದ್ರೆ ನಿನ್ನೆ ಮಜ್ಜಿಗೆ ಕಾಲ್ ಮಾಡಿದ್ದ. ರೆಸೆಶನ್ !!!!, ಕೆಲಸ ಚೇಂಜ್ ಮಾಡಬೇಕು ಅಂತ ಇದ್ದ. ಹಾಗೆ ಮಾತಾಡುತ್ತ ಮಾತಾಡುತ್ತ ಒಂದಿಷ್ಟು ಫ್ಲಾಶ್ ಬ್ಯಾಕ್ ಗಳು ನೆನಪಿಗೆ ಬಂದವು ಅಷ್ಟೇ.

Tuesday, July 21, 2009

ಎಲ್ಲಾ ದೇವರಿಗಾಗಿ!!

ನಿಮಗೆಲ್ಲ ನೆನಪು ಇರಬಹುದು, ಇತ್ತೀಚಿಗೆ ರೆಡ್ಡಿ ಗಳು ತಿರುಪತಿ ತಿಮ್ಮಪ್ಪ ಗೆ ೪೫ ಕೋಟಿ ಬೆಲೆ ಬಾಳೋ ಟೋಪಿ ಹಾಕಿದ್ರು. ಯೆಡಿಯುರಪ್ಪ ಅವಾಗ ಅವಾಗ ದಕ್ಷಿಣ ಭಾರತದ ಎಲ್ಲ ದೇವಸ್ತಾನಕ್ಕು ಭೇಟಿ ಕೊಡ್ತಾ ಇರ್ತಾರೆ. ಇನ್ನು ನಮ್ಮ ಗೌಡರು ಅಂತು ಕೇರಳದಲ್ಲೇ ಠಿಕಾಣಿ ಹಾಕ್ತಾರೆ, ಅಥವಾ ಅಲ್ಲಿಯವರನ್ನೇ ಇಲ್ಲಿಗೆ ಕರೆಸ್ತಾರೆ. (ದೇವರನಲ್ಲ, ಬರಿ ಮಾಟ ಮಂತ್ರ ಮಾಡೋರನ್ನ)


ಅಂತು ನಮ್ಮ ನಾಡಿನ ಬಹು ಪಾಲು ದುಡ್ಡು ಪಕ್ಕದ ರಾಜ್ಯದ ದೇವರಿಗೆ ಸಲ್ಲುತ್ತೆ. ಹೋಗ್ಲಿ ಜನ ಸಾಮಾನ್ಯರು ನಮ್ಮಲ್ಲಿರೋ ದೇವಸ್ತಾನಕ್ಕೆ ಹೋಗಿ ದುಡ್ಡು ಹಾಕ್ತರ? ಅದು ಇಲ್ಲ, ಬಹಳಷ್ಟು ಸಮಯದಲ್ಲಿ ದೇವಸ್ತಾನದಲ್ಲಿ ವಯಸ್ಸಾದವರೇ ಇರ್ತಾರೆ. ಅವರು ಜಾಸ್ತಿ ಕಾಣಿಕೆ ಹಾಕೋಲ್ಲ. ಯುವಜನರು ಅ ಕಡೆ ಸುಳಿಯೋಲ್ಲ. (ರೆಸೆಶನ್ ನಿಂದ ಸ್ವಲ್ಪ ಭಕ್ತಿ ಜಾಸ್ತಿ ಆಗಿದೆ ಅದು ಬೇರೆ ವಿಷ್ಯ) ಪರಿಸ್ತಿತಿ ಹೀಗೆ ಇರಬೇಕಾದ್ರೆ ನಮ್ಮ ದೇವರು ಬಡವನು ಖ೦ಡಿತ ಆಗುತ್ತಾನೆ. ಅದ್ಯಾರೋ ಒಬ್ಬ ಕೆಟ್ಟ ನಿರ್ದೇಶಕ, ಕತ್ತಿ ಮಚ್ಚು ಅಂತ ಸಿನಿಮಾ ಮಾಡಿದ್ರೆ ಜನ ಕ್ಯು ನಲ್ಲಿ ನಿಂತು ಹೋಗಿ ನೋಡಿ ಬರ್ತಾರೆ, ಆದ್ರೆ ದೇವಸ್ತಾನಕ್ಕೆ ಮಾತ್ರ ಬರಲ್ಲ. ಆದ್ದರಿಂದ ನಾನು ಇ ಮೂಲಕ ಕೃಷ್ಣಯ್ಯ ಶೆಟ್ಟರಿಗೆ ಕೆಲವು ಸಲಹೆ ಗಳನ್ನೂ ಕೊಡುತ್ತಾ ರಾಜ್ಯದ ಬೊಕ್ಕಸಕ್ಕೆ ಸಹಾಯ ಮಾಡುತ್ತಾ ಇದ್ದೇನೆ. (ಎಂತ ಮಹಾ ನಾಡ ಭಕ್ತ ಅಲ್ಲವೇ ನಾನು? )

1. ಕೆಲವೊಂದು ಸಂಪ್ರದಾಯಸ್ತ ದೇವಸ್ತಾನಕ್ಕೆ ಪುರುಷರು ಶರ್ಟ್ ಮತ್ತೆ ಬನಿಯನ್ ತೆಗೆದು ಪ್ರವೇಶಿಸ ಬೇಕು, ಇದು ಈಗಿನ ಕಾಲದ ಯುವಕರಿಗೆ ಸರಿ ಬರುವುದಿಲ್ಲ. ಆದ್ದರಿಂದ ಮುಜರಾಯಿ ಇಲಾಕೆ ಹಾಗು ದೇವಸ್ಥಾನಗಳ ಆಡಳಿತ ಮಂಡಳಿಗಳು ಸಲ್ಮಾನ್ ಖಾನ್ ಮತ್ತು ಜಾನ್ ಅಬ್ರಹಾಂ ಅವರನ್ನು ಬ್ರಾಂಡ್ ರಾಯಭಾರಿಗಳನ್ನಾಗಿ ಮಾಡಿಕೊಳ್ಳಬೇಕು. ಇ ಮಹಾನು ಭಾವರು ಶರ್ಟ್ ಪ್ಯಾಂಟ್ ಇಲ್ಲದೆ ಕುಣಿಯುದನ್ನು ಕಂಡು ಕುಶಿ ಪಡೋ ಯುವ ಜನರು ದೇವಸ್ತಾನಕ್ಕೆ ಯಾವ ಹಿಂಜರಿಕೆನು ಇಲ್ಲದೆ ಬರುವರು. (ಇದು ಕೋಮು ಸೌಹಾರ್ದ ಅಂತ ಬೇಕಿದ್ರೆ ಪುಂಗಿ ಊದಿಕೊಂಡು ಮುಂದಿನ ಚುನಾವಣೆ ಗೆ ಹೋಗಬಹುದು)


2. ಅಷ್ಟೋತ್ತರ ಮಾಡಿಸಿದರೆ ಅರ್ಚನೆ ಫ್ರೀ ಅಂತ ಘೋಷಿಸಬೇಕು.3. ಸಕ್ಕರೆ ಕಾಯಿಲೆ ಪೀಡಿತರಿಗೆ ಶುಗರ್ ಫ್ರೀ ಪ್ರಸಾದ ದ ವ್ಯವಸ್ಥೆ ಮಾಡಬೇಕು.


4. ಅಂದಿನ ಕಾಲದಿಂದಲೂ ನಮ್ಮ ಭಕ್ತಿ ಗೀತೆಗಳು ಹಾಗೆ ಇದೆ, ಅದೇ ರಾಗ, ಅದೇ ಸಾಹಿತ್ಯ. ಆದ್ದರಿಂದ ನಮ್ಮ ಕಲಬೆರಕೆ ರಾಜ ರಿಮಿಕ್ಸ್ ಕಿಂಗ್ ಗುರುಕಿರಣ್ ಹತ್ತಿರ ಭಕ್ತಿ ಗೀತೆಗಳಿಗೆ ಹೊಸ ರಾಗ ಹಾಕಿಸಬೇಕು. (ಹೊಡಿ ಮಗ ಹೊಡಿ ಮಗ ಟ್ಯೂನ್ ನಲ್ಲಿ ಭಕ್ತಿ ಗೀತೆ ಕೇಳಿ ನಾನು ಪುನೀತ ನಾಗಿದ್ದೇನೆ. )


5. ರಕ್ತ ಸಿಕ್ತ ಸಿನಿಮಾ ಗಳ ಸರದಾರ ಪಿ ಏನ್ ಸತ್ಯ ಹಾಗು ಮಚ್ಚು ವೀರ ದರ್ಶನ್ ಇಬ್ಬರು ಸೇರಿ ಒಂದು ಭಕ್ತಿ ಪ್ರಧಾನ ಸಿನಿಮಾ ಮಾಡಬೇಕು. ಅವಾಗ ಜನ ಥಿಯೇಟರ್ ಮುಂದೆ ಮಾತ್ರ ಅಲ್ಲ, ದೇವಸ್ತಾನಕ್ಕು ನುಗ್ಗುವರು. (ಇವರಿಬ್ಬರಿಗಿಂತಲೂ ಹೆಚ್ಚಿನ ಕಲಾ ನೈಪುಣ್ಯರು ಇನ್ನೂ ಇದ್ದಾರೆ, ಆದರೆ ಇಲ್ಲಿ ಬರೆಯಲಾಗಿಲ್ಲ, ಅವರುಗಳ ಆತ್ಮ ದುಃಖ ಪಡದೆ ಇರಲಿ. ) ರವಿ ಚಂದ್ರನ್ ಮತ್ತು ನಮೀತ ಮಾಡಿದರು ನಮ್ಮದೇನು ಅಭ್ಯಂತರವಿಲ್ಲ. !!! :)


6. ಕೊನೆಗೆ ನಮ್ಮ ರವಿ ಬೆಳಗೆರೆ ಕೈಯಲ್ಲಿ ಟೆಂಪಲ್ ಡೈರಿ ಅಂತ ಒಂದು ಪ್ರೊಗ್ರಾಮ್ ಮಾಡಿಸ ಬೇಕು!!! ಎರಡು ಹೆಣ ಬಿದ್ದ ಮೇಲೆ ಮಲಗೊದನ್ನ ಕಲಿತಿದ್ದ ಜನ ಒಂದೆರಡು ದೇವರಿಗೆ ಜೈ ಹೇಳಿ ಮಲಗುವರು.


ಸಲಹೆಗಳೆಲ್ಲವು ಸರ್ಕಾರಕ್ಕೆ, ಜನಕ್ಕೆ ಹಾಗು ಬೊಕ್ಕಸಕ್ಕೆ!!! ನಾನು, ಇಗಷ್ಟೆ ಹೊಸ ಕುರ್ಚಿ ನ ದೂಳು ಒರಸಿ ಕೂತಿರೋ ಶೆಟ್ಟರು, ಅಥವಾ ಸೋಮಣ್ಣ ಅವರ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಹೇಳಲು ಇಷ್ಟ ಪಡುತ್ತೇನೆ.

Friday, July 3, 2009

ಕಾಂಗ್ರೆಸ್ ಗೆ ಒಂದು ಸಲಹೆ...


ಕಳೆದ 2- 3 ದಿನಗಳಿಂದ ನನಗೆ ವಿಪರೀತ ಕುಶಿ ಆಗ್ತಾ ಇದೆ, ಕಾರಣ ಏನು ಅಂತೀರಾ? ಇದೋ ಕೇಳಿ. ಅಂತೂ ಇಂತು ಮುಂಬೈ ನಲ್ಲಿ ಕಟ್ಟಿರೊ ಒಂದು ದೊಡ್ಡ ಸೇತುವೆ ಗೆ ರಾಜೀವ್ ಗಾಂದಿ ಹೆಸ್ರು ಈಡೋ ತೀರ್ಮಾನ ಆಗಿದೆ ಅಂತೆ, ಇದು ಪವಾರ್ ಅವರು ಕೊಡ್ತಾ ಇರೋ ಸಲಹೆ. ಇದನ್ನು ಕೇಳಿ ನಂಗೆ ಹಾಲು ಕುಡಿದಷ್ಟು ಸಂತೋಷ ಆಯಿತು. ರಾಜೀವ್ ವಿಮಾನ ನಿಲ್ದಾಣ, ರಾಜೀವ್ ಬಸ್ ನಿಲ್ದಾಣ, ಇಂದಿರ ಅವಾಸ, ರಾಜೀವ್ ಯುವ ಕೇಂದ್ರ, ಅಂತೆಲ್ಲಾ ಇದ್ರು ನಂಗೆ ಸಮಾಧಾನ ಆಗಿರಲಿಲ್ಲ.


ನವ ಭಾರತ ನಿರ್ಮಾತೃ, ದೇಶಕ್ಕಾಗಿ ಕುಟುಂಬವನೆ ಮುಡುಪು ಇಟ್ಟಿರೋ ನೆಹ್ರು ಮನೆತನದ ದವರ ಹೆಸ್ರು ಇಡೋದು ಅತ್ಯಂತ ಸೂಕ್ತ ಅಂತ ನನ್ನ ಭಾವನೆ. ಆದ್ದರಿಂದ ನನ್ನ ಕಡೆ ಇಂದ ಕೇಂದ್ರ ಸರಕಾರಕ್ಕೆ ಕೆಲವೊಂದು ಸಲಹೆ, ಇನ್ನೂ ಎಲ್ಲೆಲ್ಲಿ ಆ ಮಹಾನು ಭಾವರ ಹೆಸ್ರು ಇಡಬಹುದು ಅಂತ. ದೇಶದಲ್ಲಿ ಇನ್ನೂ ಹಲವು ಯೋಜನೆ ಹಾಗೂ ಸ್ಥಳ ಗಳಿಗೆ ಅವರ ಹೆಸರು ಇಡಬಹುದಾಗಿದೆ. ಇಲ್ಲಿ ಬರೆದಿರುವ ಯೋಜನೆಗಳ ಕರ್ತೃ ನಾನೇ ಆಗಿರುತ್ತೇನೆ, ದಯಮಾಡಿ ಯಾವ ಕಾಂಗ್ರೆಸ್ ಕಾರ್ಯಕರ್ತರು ಇದನ್ನು ಕದಿಯ ಬಾರದು.


ನಮ್ಮ ದೇಶದಲ್ಲಿ ಒಳ್ಳೆಯ ರಾಜಕಾರಣಿ ಗಳು ಬಹಳ ಕಡಿಮೆ, ಒಳ್ಳೆಯ ಜನ ಇದ್ರೂ ಅವರು ರಾಜಕೀಯ ದಿಂದ ನಿವೃತ್ತ ರಾಗಿದ್ದಾರೆ, ಆದ್ದರಿಂದ ಈ ವಂಚಕ ಮಹಾ ಪ್ರಭುಗಳಿಗೆ ಅಂತ ಒಂದು ಜೈಲು ನಿರ್ಮಾಣ ಮಾಡಬೇಕು. ಅವರ ತಪ್ಪು ಗಳು ಸಾಬೀತು ಆಗುವುದು ಬಹಳ ಕಡಿಮೆ, ಆದರೂ ಒಂದು ಜೈಲು ಕಟ್ಟಿಸಬೇಕು, ಹಾಗೂ ಅದಕ್ಕೆ “ರಾಜೀವ್ ಬೋಫರ್ಸ್” ಕಾರಾಗೃಹ ಅಂತ ಹೆಸರಿಸ ಬೇಕು.


ನಮ್ಮ ದೇಶದಲ್ಲಿ ಯಾವಾಗ ಬೇಕಾದ್ರೂ ಬಾಂಬು ಗಳು ಸಿಡಿದು ನಾವೆಲ್ಲ ಸ್ವರ್ಗಸ್ತರಾಗ ಬಹುದು. ಉಗ್ರಗಾಮಿಗಳು ಬಂದು ಗುಂಡಿನ ಮಳೆ ಗೆರೆಯ ಬಹುದು. ಹಾಗಾಗಿ ಉಗ್ರಗಾಮಿಗಳಿಂದ ಸತ್ತವರ ಸಮಾಧಿಗೆ ಅಂತ ರಾಜೀವ್ ರುದ್ರ ಭೂಮಿ ಮಾಡಿಸಬೇಕು. ಮುಂಬೈ, ಕಾಶ್ಮೀರ್ ಗಳಲ್ಲಿ ಜನ ಉಗ್ರರಿಂದ ಸಾಯೋ ಸ0ಖ್ಯೆ ಜಾಸ್ತಿ ಇರೋದ್ರಿಂದ ಅಲ್ಲೆಲ್ಲ ರಾಜೀವ್ ವಿಧ್ಯುತ್ ಚಿತಾಗಾರ ಮಾಡಿದರೆ ಇನ್ನೂ ಒಳ್ಳೇದು.


ನಮ್ಮಲ್ಲಿ ಹಿಂದೂ ಅಂತರ್ಜಾತೀಯ ವಿವಾಹಕ್ಕೆ ಆರ್ಯ ಸಮಾಜ ಇದೆ, ಸರ್ಕಾರವು ಕೂಡಲೇ ಇದನ್ನು ನಿಷೇದಿಸಿ, ಪ್ರತಿ ಊರಲ್ಲೂ ಪ್ರಿಯಾಂಕ ಛತ್ರ ಮಾಡಿಸಬೇಕು. ಮದುವೆ ಏ ಆಗೋಲ್ಲ, ಬರಿ ಇಷ್ಟ ಬಂದಷ್ಟು ದಿನ ಮಜ ಮಾಡ್ಕೊಂಡು ಒಟ್ಟಿಗೆ ಇರ್ತೀವಿ ಅನ್ನೋರಿಗೆ ರಾಹುಲ್ ಗಾಂದಿ ಯೋಜನೆ ಮಾಡಿ ಅವರಿಗೆ ಧನ ಸಹಾಯ ಮಾಡಬೇಕು.


ಬಾಂದ್ರಾ ಮತ್ತು ವೊರ್ಲಿ ಸೇತುವೆ ಗೆ ರಾಜೀವ್ ಹೆಸ್ರು ಇಟ್ಟಾಗಿದೆ, ಆದರೆ ಅದರ ಕೆಳಗಿನ ಸಮುದ್ರದ ಮೀನುಗಳಿಗೆ ರಾಜೀವ್ ಹೆಸ್ರು ಇಟ್ಟಿಲ್ಲ ಅಂತ ಮೀನು ಗಳು ಗೊಳೋ ಅನ್ನುತ್ತಾ ಇದ್ದಾವೆ ಅಂತ ಸುದ್ದಿ ಬಂದಿದೆ. ಆದ್ದರಿಂದ ಸರ್ಕಾರವು ಇನ್ನೂ ಮುಂದೆ ಇಂತಹ ಅವಗಡ ಗಳು ನಡೆಯದಂತೆ , ರಾಜೀವ್ ಅಥವಾ ಇಂದಿರ ಹೆಸರಿಟ್ಟ ಪೋಷಕರಿಗೆ ಉಚಿತ ಸೀರೆ, ಗಂಡಸರಿಗೆ ಎಣ್ಣೆ ಕೊಡಬೇಕು. ಮುಂದೆ ಮಕ್ಕಳಿಗೆ ನಿರುದ್ಯೊಗ ಬತ್ಯೆ ಕೊಡಬೇಕು.


ವಿರೋಧ ಪಕ್ಷಗಳು ಈಗಾಗಲೇ ಈ ಹೆಸರಿಡೊ ಪದ್ದತಿ ಅನುಸರಿಸುತ್ತಾ ಇದ್ದಾವೆ, ಉದಾಹರಣೆಗೆ ಬೆಂಗಳೂರಿನಲ್ಲಿ ಅಟಲ್ ಸಾರಿಗೆ. ಆದ್ದರಿಂದ ಯಾವುದೇ ಸರ್ಕಾರಿ ಯೋಜನೆ ಗಳಿಗೆ ಹೆಸರುಗಳು ಯಾವತ್ತೂ ರಾಜೀವ ಅಥವಾ ಇಂದಿರ ಅಂತಲೇ ಇರಬೇಕೆಂದೂ ಒಂದು ಕಾಯಿದೆ ಅನ್ನು ಹೊರತರ ಬೇಕು..


ನಮ್ಮಲ್ಲಿ ಕೊಡುವ ಬಹುತೇಕ ಪ್ರಶಸ್ತಿ ಗಳಿಗೆ ರಾಜೀವ್ ಮತ್ತೆ ಇಂದಿರ ಹೆಸರಿದೆ. ಆದರೆ ಅತ್ಯುನ್ನತ ಪ್ರಶಸ್ತಿ ಗಳಿಗೆ ಅವರ ಹೆಸರಿಲ್ಲದೇ ಇರುವುದು ನನಗೆ ಪಿಚ್ಚೆನಿಸುತ್ತಾ ಇದೆ. ಕೂಡಲೇ ಭಾರತ ರತ್ನ ವನ್ನು ರಾಜೀವ್ ರತ್ನವೆಂದು, (ರಾಜೀವ್ ಗಾಂದಿ ಖೇಲ್ ರತ್ನ ಇದೆ ಆದ್ರೆ ಅದು ಬೇರೆ) ಜ್ಞಾನ ಪೀಠ ವನ್ನು ಇಂದಿರಾ ಪೀಠ ವೆಂದು ಬದಲಿಸ ಬೇಕು.


ಆಮೇಲೆ ಇಲ್ಲಿ ಬೆಂಗಳೂರಲ್ಲಿ ಇನ್ಫೋಸಿಸ್ ಸುಧಾ ಮೂರ್ತಿ ಅವರು ನಗರದ ಜನನಿಬಿಡ ಸ್ಥಳ ಗಳಲ್ಲಿ “ಪ್ರಕೃತಿ ಕರೆ” ಒಗೋಡಲು ಹಲವು “ನಿರ್ಮಲ ಬೆಂಗಳೂರು” ಮಾಡಿದ್ದಾರೆ, ಕೂಡಲೇ ಸರ್ಕಾರವು ಇದನ್ನು ರಾಷ್ಟ್ರೀಕರಣ ಮಾಡಿ ರಾಜೀವ್ ಹೆಸರು ಇಟ್ಟರೆ ಬಹಳ ಚೆನ್ನಾಗಿರುವುದು.


ಇನ್ನು ಕೋನೇದಾಗಿ ಈ ದೇಶದ ಹೆಸ್ರನ್ನೇ ಬದಲಿಸಿ ಬಿಟ್ಟರೆ ಆಯಿತು, ಇಂಡಿಯಾ ಬದಲು ಇಂದಿರ ಅಂತ ಮಾಡಿದ್ರೆ ಮುಗೀತು.


ಈ ಬೇಡಿಕೆಗಳು ಕೂಡಲೇ ಜಾರಿಗೆ ಬರಬೇಕೆಂದು ನಾನು ಸರ್ಕಾರವನ್ನು ಈ ಬ್ಲಾಗಿನ ಮೂಲಕ ಒತ್ತಾಯ ಪಡಿಸುತ್ತಾ ಇದ್ದೇನೆ. (ಅವರ್ಯಾರು ಇದನ್ನ ನೋಡಲ್ಲ, ಆದ್ರೂ … ಕೂಡ ಹೆವೀ ಒತ್ತಾಯ) ಹಾಗೂ ಸರ್ಕಾರವು ನನ್ನ ಮನವಿ ಯನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿ, ಕಾರ್ಯರೂಪಕ್ಕೆ ತರುತ್ತದೆ ಅಂತ ನಾನು ಭಾವಿಸುವೆ. ನೀವೇನಂತೀರಿ?

ನನ್ನ ಸ್ನೇಹಿತ ಕಳಿಸಿದ ಫೋಟೋ ಇದು. ಸೇತುವೆ ಉದ್ಘಾಟನೆ ಅನಾಮಿಕ ನಿಂದ!!!!!!