Tuesday, November 14, 2017

ಧಾರಾವಾಹಿ ಪ್ರಪಂಚಇತ್ತೀಚಿಗೆ ನನಗೆ ಕೆಲವು ದಿನಗಳ ಮಟ್ಟಿಗೆ ಟೀವಿ ಧಾರವಾಹಿ ನೋಡುವ ಅವಕಾಶ ಒದಗಿ ಬಂದಿತ್ತು. (ಅನಿವಾರ್ಯ ಕಾರಣಗಳಿಂದಾಗಿ ಎಂದು ಹೇಳಬೇಕಾಗಿಲ್ಲವಷ್ಟೇ ) ಅದನ್ನು ಗಮನಿಸಿದ ನಂತರ ಪ್ರಪಂಚವನ್ನು ನೋಡುವ ದೃಷ್ಟಿಕೋನವೇ ಬದಲಾಗಿ ಹೋಯಿತು. ನನ್ನಂತ ಸಾಕಷ್ಟು ಜನ ಪುರುಷಪುಂಗವರು, ಮಹಿಳೆಯರು ಟೀವಿ ನೋಡೋ ಸಮಯದಲ್ಲಿ ಸ್ನೇಹಿತರೊಡನೆ ಶರಬತ್ತು ಕುಡಿಯುತ್ತಾ ಕಾಲ ಕಳೆಯುವರು ಅಥವಾ ರಂಗಣ್ಣ - ರಾಧಮ್ಮನ ಶಬ್ದ ಮಾಲಿನ್ಯವನ್ನು ಸಹಿಸುವರು ಎಂದು ತಿಳಿದಿದೆ. ಅವರನ್ನು ಜ್ಞಾನ ಮಾರ್ಗಕ್ಕೆ ಕರೆದು ತರುವುದೇ ಜನ್ಮ ಸಾರ್ಥಕ್ಯವೆಂದು ನನಗೆ ತೋರುತ್ತಿದೆ.


ಆದರೆ ಇದಕ್ಕಾಗಿ ನೀವು ನನಗೆ ವಿಶೇಷ ಅಭಿನಂದನೆ ತಿಳಿಸಬೇಕಾದ ಅಗತ್ಯ ಇರುವುದಿಲ್ಲ. ಯಾಕೆಂದರೆ ..
ವೀರನಾರಾಯಣನೆ ಕವಿ ನಾನು ಕೇವಲ ಲಿಪಿಕಾರ ಎಂದು ಕುಮಾರ ವ್ಯಾಸ ಬರೆದುಕೊಳ್ಳುತ್ತಾನೆ. ಅದೂ ಅಲ್ಲದೆ, ಜ್ಞಾನವು ಅಪೌರುಷೇಯ ಎನ್ನುತ್ತದೆ ಪರಂಪರೆ. ಹಾಗಾಗಿ ನಿಮ್ಮ ಮೆದುಳಿನ ಸೂಕ್ಷ ತರಂಗಗಳನ್ನು ಬಡಿದೆಬ್ಬಿಸಿ, ಮಂಡೆಯನ್ನು ಹೆಚ್ಚು ಚುರುಕು ಮಾಡುವುದಷ್ಟೇ ನನ್ನ ಕೆಲಸ.
ಹಾಗಾಗಿ ತಡ ಮಾಡದೇ ಕೆಳಗಿನ ಧಾರವಾಹಿ ಜಗತ್ತಿನಲ್ಲಿ ನಾನು ಕಂಡುಕೊಂಡ ಸತ್ಯ ತಿಳಿದು ಜೀವನವನ್ನು ಸಂತೋಷ, ಎಚ್ಚರದಿಂದ ಕಳೆಯಿರಿ.

1.       ಮನೆಗೆ ಯಾರೇ ಸುಂದರ ಹುಡುಗಿ ಬಂದರೂ.. ಅದು ಹಾವು ಆಗಿರಬಹುದು. ನಿಮ್ಮ ಮನೆಗೆ ಅಕಸ್ಮಾತ್ ಆಗಿ ನಾಗಮಣಿ ಬಂದಿರಬಹುದು. ಅಥವಾ ನೀವು ಕೂತ ಕಾರು – ಬಸ್ಸು.. ಎತ್ತಿನ ಗಾಡಿ ಹಾವಿನ ಬಾಲವನ್ನು ಮೆಟ್ಟಿರಬಹುದು. ಆ ಸೇಡಿಗೆ ನಾಗಿಣಿ ಬಂದಿರಬಹುದು. ಹಾಗಾಗಿ ಯಾವುದಕ್ಕೂ ಒಂದು ಪುಂಗಿ ಇಟ್ಟುಕೊಂಡು ಓಡಾಡೋದು ಒಳಿತು!

2.       ಗಹನವಾದ ಚರ್ಚೆ ಅಥವಾ ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿರುವಾಗ, ಗಂಡನಿಗೆ ಆಫೀಸ್ ನಿಂದ ಕರೆ ಬಂದರೆ... ಅದು ದೇವರಾಣೆ ಕಚೇರಿಯಿಂದ ಆಗಿರುವುದಿಲ್ಲ. ಆತನ ಹಳೇ ಗೆಳತಿ ಆಗಿರಬಹುದು. ಕಣ್ಣಿಡುವುದು ಒಳಿತು.

3.       ಯಾರದ್ರು ಮೆಡಿಕಲ್ ಶಾಪ್ ಗೆ ಹೋದರೆ, ಅವರು ವಿಷವನ್ನು ಕೊಳ್ಳಲು ಹೋಗುತ್ತಾ ಇದ್ದಾರೆ ಎಂದೇ ಭಾವಿಸಬೇಕು! ಈ ಜನಗಳಿಗೆ ಅದು ಹೇಗೋ, ಎಷ್ಟು ಬೇಕಾದ್ರೂ ನಿದ್ರೆ ಮಾತ್ರೆಗಳು ಸಿಗುತ್ತವೆ. ಕಾರ್ಕೋಟ ವಿಷದ ಪುಡಿಗಳು ಕೈ ತುದಿಯಲ್ಲೇ ಇರುತ್ತದೆ. ಪ್ರೀತಿಯಿಂದ ಮನೆಯಲ್ಲಿ ಹಾಲು ಕೊಟ್ಟರೆ ಅದು.. ಪ್ರಾಣವನ್ನೇ ತೆಗೆಯಬಹುದು.

4.       ನಿಮ್ಮ ವೈರಿಗಳನ್ನು ಏನೇ ಮಾಡಿದರೂ ಸಾಯಿಸಲು ಸಾಧ್ಯವಿಲ್ಲ. ಸುಪಾರಿ ಕೊಟ್ಟರೂ, ಬಾಂಬು ಸಿಡಿಸಿದರೂ, ಕೊನೆಗೆ ಹುಲಿ ಬಾಯಿಗೆ ತಳ್ಳಿದರೂ ... ಉಹುಂ. ಸಾವೇ ಇಲ್ಲ. ಎಲ್ಲಾ ಶಾಶ್ವತ. (ಧಾರಾವಾಹಿ ನೋಡೋರನ್ನು ಬಿಟ್ಟು )

5.       ನಾನು ಮೊದಲೆಲ್ಲಾ ದೇವರು ಸ್ವರ್ಗದಲ್ಲೋ, ಹಿಮಾಲಯದಲ್ಲೋ ... ಇರುವನೆಂದು ಭಾವಿಸಿದ್ದೆ. ಈಗ ಆತ ಪ್ಲಾಸ್ಟಿಕ್ ಸೆಟ್ ನಲ್ಲಿ ವಾಸಮಾಡುತ್ತಾನೆ ಎಂದು ತಿಳಿದು ಬಹಳ ಖೇದವಾಗುತ್ತಿದೆ! L

6.       ಕನ್ನಡದಲ್ಲಿ ಕನಿಷ್ಠ 6 ಮನೋರಂಜನಾ ಚಾನೆಲ್ ಇದೆ. ಒಂದೊಂದರಲ್ಲಿ ಕನಿಷ್ಠ 8 ಮೆಗಾ ಧಾರವಾಹಿ ಬರುತ್ತಲಿದೆ ಎಂದರೆ, ದಿನಕ್ಕೆ 45 -50 ಧಾರಾವಾಹಿಗಳು! ಪ್ರತೀ ಮನೆಯಲ್ಲಿಯೂ ಒಂದು ಅತ್ತೆ, ಸೊಸೆ, ಮಗ, ಮಗಳು, ಅಡುಗೆಯವರು, ನಾದಿನಿ.. ಇತ್ಯಾದಿ. ಆಮೇಲೆ ಸೊಸೆಯ ಕುಟುಂಬ, ಸೊಸೆಯನ್ನು / ಅತ್ತೆಯನ್ನು ಕೊಲ್ಲಲು ಅಂತಲೇ ಇರುವ ಸುಪಾರಿ ಕೊಲೆಗಾರರು.. ಹೀಗೆ ಸಾಕಷ್ಟು ಮನೆಗಳು ಬರುತ್ತವೆ. ಅವರಿಗೆ ಸಾಕಷ್ಟು ಸಮಯವೂ ಇದ್ದಂತೆ ತೋರುತ್ತದೆ. ಆದರೆ, ಯಾರೂ ಧಾರವಾಹಿ ನೋಡುವುದಿಲ್ಲ. ಅವರೇ ನೋಡುವುದಿಲ್ಲ ಎಂದಮೇಲೆ ನಾವು ನೋಡಬೇಕೆ? ಪುಟ್ಟಗೌರಿ ಅಜ್ಜಿ,.. ಯಾವ ಧಾರವಾಹಿ ನೋಡುತ್ತಾಳೆ ?

7.       ಕೊನೆಯ ಮತ್ತು ಅತ್ಯಂತ ಹೆಚ್ಚಿನ ದುರಂತ ಏನು ಅಂದರೆ... ಸಾಮಾನ್ಯವಾಗಿ ಧಾರಾವಾಹಿಯ ಎಲ್ಲಾ ಗಂಡು ಜೀವಿಗಳಿಗೆ ಒಂದೊಂದು ಎಕ್ಸ್ಟ್ರಾ ಸಂಬಂಧ ಇರುತ್ತದೆ. ಬಡ್ಡಿ ಮಗಂದು ನಿಜ ಜೀವನದಲ್ಲಿ ಒಂದೂ ಇರಲ್ಲ. ಆದರೂ ಹೆಂಡ್ತಿ ಅನುಮಾನ ಪಡ್ತಾಳೆ! Lಸದ್ಯಕ್ ಸಮಾಪ್ತಿ!