Thursday, July 26, 2012

ಪರಿಪೂರ್ಣ ಕಾಫಿಗೆ 9 ಸೂತ್ರಗಳು. :)



ಮಲೆನಾಡಿನವರಿಗೆ ಜೀವನ ಕಷ್ಟವಾಗುವುದು ಮಳೆಗಾಲದಲ್ಲಿ ಆಕಾಶ ನೀಲಿ ಇದ್ದಾಗ ಅಥವಾ ಬೆಳಿಗ್ಗೆ ಕುಡಿಲಿಕ್ಕೆ ಕಾಫಿ 
ಸಿಗದೇ  ಇದ್ದಾಗ. ನಾನಂತೂ ಕಾಫಿ ಯನ್ನ ಜೀವನದ ಒಂದು ಅವಿಭಾಜ್ಯ ಅಂಗ ಎಂದೇ ಭಾವಿಸುತ್ತೇನೆ. ಬೆಳಿಗ್ಗೆ ಅದು ಇಲ್ಲದೆ ಇದ್ರೆ, ಅಂದು ಸೂರ್ಯ ಹುಟ್ಟಿದ್ದು ಕೂಡ ನಿರರ್ಥಕ ಎಂದೇ ಭಾಸವಾಗುತ್ತದೆ. ಆದರೆ ಊರು ಬಿಟ್ಟು, ಉದ್ಯೋಗಕಾಗಿ ಬೇರೆಡೆ ಬಂದಿರುವ ನನ್ನಂತ ಜನರಿಗೆ ಒಳ್ಳೆಯ ಕಾಫಿ ಎಂಬ ಅಮೃತ ಪಾನೀಯ ಸಿಗದೆ ಆಗುವ ನೋವು ಅಷ್ಟಿಷ್ಟಲ್ಲ.

ಇರಲಿ ಬಿಡಿ. ನಾನೀಗ ಒಳ್ಳೆಯ ಕಾಫಿ ಮಾಡುವ ಬಗ್ಗೆ ಕೆಲವು ಉಚಿತ ಸಲಹೆ ನೀಡಲಿದ್ದೇನೆ. (ಜಾರ್ಜ್ ಒರ್ವೆಲ್ ಟೀ ಮಾಡೋದರ ಬಗ್ಗೆ ಹೇಳಿದ್ದಾನಲ್ಲ ಹಂಗೆ.  -) ರಸ್ತೆ ಬದಿಯಲ್ಲಿ ಕೆಟ್ಟ, ಕುಲಗೆಟ್ಟ ಹಾಗೂ ಕಲಗಚ್ಚಿನಂತ  ಕಾಫಿ ಕುಡಿದವರು, ಮನೆಯಲ್ಲಿಯೇ ಈ ದೈವಾಂಶ ಸಂಬೂತ ಪಾನೀಯ ತಯಾರಿಸಿ ಜೀವನವನ್ನು ಸುಂದರ ಹಾಗೂ ಅಧ್ಬುತ ಮಾಡಿ ಕೊಳ್ಳಬಹುದು.


1. ಮೊದಲು ಕಾಫಿ ಪುಡಿ ಚಿಕ್ಕಮಗಳೂರಿನದೇ ಆಗಿರಬೇಕು. ಹಿಂದಿನ ಕಾಫಿ ಪ್ರಿಯರಿಗೆ ಇಂದಿಗೂ ಜಯಂತಿ ಕಾಫಿ ನೆನಪಿರಬಹುದು. ಅಗ್ಗದ ದರ ದ ಬೇರೆ ಪುಡಿ ತಂದು ನಾಲಿಗೆ ಮೈಲಿಗೆ ಮಾಡಿಕೊಳ್ಳ ಬಾರದು.
2. ಕಾಫಿ ಡಿಕಾಕ್ಷನ್ ತಯಾರಿಸಲು ಒಂದು ಬೇರೆಯದೇ ಬಟ್ಟಲು / ಪಾತ್ರೆ ಇರಬೇಕು. ಅದನ್ನು ಬೇರೆ ಯಾವುದೇ ಕೆಲಸಕ್ಕೆ ಉಪಯೋಗಿಸ ಕೂಡದು. ಅಷ್ಟರ ಮಟ್ಟಿಗೆ ಮಡಿ ಅಗತ್ಯ!
3. ಮೂರನೆಯದಾಗಿ, ಯಾವಾಗಲೂ ತಾಜಾ ಹಾಲೇ ಉಪಯೋಗಿಸಬೇಕು. ಫ್ರಿಜ್ ನಲ್ಲಿಟ್ಟ ಎರಡು ಮೂರು ದಿನಗಳ ಹಾಲು, ಹಾಲಿನ ಪುಡಿ ಅಥವಾ ಕಂಡೆನ್ಸುಡ್ ಹಾಲು ಕೂಡದು. (ಮದ್ಯ ಪ್ರಾಚ್ಯದಲ್ಲಿ ಇರುವರ ಬಗ್ಗೆ, ಈ ವಿಷಯದಲ್ಲಿ ಒಂದಿಷ್ಟು ಕನಿಕರ ಬಿಟ್ಟು ಬೇರೇನೂ ಹೇಳಲು ಸಾದ್ಯವಿಲ್ಲ)
4. ಸೋಸಲು ಯಾವತ್ತೂ ತೆಳುವಾದ, ಶುಬ್ರವಾದ ಬಿಳಿ ಕಾಟನ್ ಬಟ್ಟೆ ಉಪಯೋಗಿಸಬೇಕು. ಸುಲಭಕ್ಕೆ ಸಿಗುತ್ತೆ ಅನ್ನೋ ಕಾರಣಕ್ಕೆ ಗಂಡನ ಕರ್ಚಿಪು ಬಳಸಬಾರದು.
5. ನನ್ನ ಪ್ರಕಾರ ಕಾಫಿ ಯಾವಾಗಲೂ ಆಳದ ಸ್ಟೀಲ್ ಲೋಟದಲ್ಲೆ ಕೊಡಬೇಕು. (ನಿಮ್ಮ ಮೂಗು ಒಳಗೆ ಹೋದರೂ ಸರಿಯೇ, ಲೋಟ ಮಾತ್ರ ದೊಡ್ಡದಿರಬೇಕು ) ಸರಿಯಾಗಿ ನಾಲ್ಕು ಗುಟುಕು ಬಾರದ ಪುಟ್ಟ ಲೋಟ ಅಥವಾ ಹೋಟೆಲಿನ ಹಾಗೆ ಗಾಜಿನ, ಪಿಂಗಾಣಿಯ ಲೋಟ ಕೂಡದು.
6. ಕಾಫಿ ಯಾವತ್ತೂ ಸ್ಟ್ರಾಂಗ್ ಹಾಗೂ ಬಿಸಿ ಬಿಸಿ ಇರಬೇಕು. ತಣ್ಣಗೆ ಇದ್ರೂ ಆಗುತ್ತೆ ಅನ್ನೋರು ತಣ್ಣೀರು ಕುಡಿಬಹುದೇ ಹೊರತು ಕಾಫಿ ಕುಡಿಯೋ ಸಾಹಸ ಮಾಡಬಾರದು.
7. ಮನೆಗೆ ತಂದ ತಾಜಾ ಪುಡಿಯನ್ನ ಒಂದು ಭದ್ರವಾದ ಡಬ್ಬಿಯಲ್ಲಿ ಇಡಬೇಕು. ಸುವಾಸನೆ ಇಲ್ಲದ ಕಾಫಿ ಕುಡಿಯುವ ಬದಲು, ತೆಪ್ಪಗೆ ಆಕಾಶ ನೋಡುತ್ತಾ ಕುಳಿತು ಕೊಳ್ಳುವುದು ಒಳಿತು.
8. ಒಮ್ಮೆ ಬಿಸಿ ಮಾಡಿದ ಕಾಫಿಯನ್ನ ಪದೇ ಪದೇ ಬಿಸಿ ಮಾಡಬಾರದು. ಅದು ರುಚಿ ಕೆಡಿಸುತ್ತದೆ ಹಾಗೂ ಅದು ಶ್ರೇಷ್ಟವೂ ಅಲ್ಲ, ನಿಮಗೆ ಕಾಫಿ ಮಾಡಿದ ಪುಣ್ಯ ಕೂಡ ಲಭಿಸುವುದಿಲ್ಲ. 
9. ಎಲ್ಲಕಿಂತ ಮುಖ್ಯವಾಗಿ ಒಂದು ಲೋಟ ಕಾಫಿಗೆ ಹೆಚ್ಚೆಂದರೆ ಅರ್ದ ಚಮಚೆ ಸಕ್ಕರೆ ಸೇರಿಸಬೇಕು. ಶರಬತ್ತಿಗೆ ಹಾಕುವ ಹಾಗೆ ಸಕ್ಕರೆ ಹಾಕುವುದು, ಕಾಫಿಗೆ ಮಾಡುವ ದೊಡ್ಡ ಅವಮಾನಗಳಲೊಂದು. (ಸಿಹಿ ಕಾಫಿಯನ್ನ, ಇದಕ್ಕೆ ಶೀರ್ಷಿಕೆ ಕೊಟ್ಟಿರುವ ಚಂದ್ರು ಕುಡಿಯಬಲ್ಲನೆ ಹೊರತು, ನಮ್ಮಂತ ಸಹಜ ಮಾನವರಿಗಲ್ಲ .)

ನಗರ ಪ್ರದೇಶಗಳಲ್ಲಿ ಇರುವವರು ಕಾಫಿ ಡೇ / ಸ್ಟಾರ್ ಬಕ್ಸ್ ಗಳಲ್ಲಿ ಕೆಪೆಚಿನೋ, ಎಕ್ಷ್ಪ್ರೆಸ್ಸೊ, ಇಟಾಲಿಯನೋ, ಕಾಂಬೋಡಿಯನ್ ಮುಂತಾದ ಕಾಫಿ ಹೀರಬಹುದಾದರೂ.. ಅದು ನಿಮ್ಮ ಎದುರು ಕೂತಿರುವ ಹುಡುಗಿಯರ ಮುಗುಳು ನಗೆಗೆ ಅಥವಾ ಹುಸಿಗೋಪಕ್ಕೆ ಅಷ್ಟೇ ಮದ್ದು.  ಮೂರಂಕಿ ದುಡ್ಡಲ್ಲಿ ಸ್ವಾದಿಷ್ಟ ಕಾಫಿ ಸಿಗಲಾರದು.

ವಯಕ್ತಿಕವಾಗಿ ನನಗೆ ಮನೆಯಲ್ಲಿಯೇ ಹುರಿದು ಪುಡಿ ಮಾಡಿ ಮಾಡುವ ಕಾಫಿ ಅಚ್ಚು ಮೆಚ್ಚು. ಇಂದಿಗೂ ಕೆಲವರ ಮನೆಯಲ್ಲಿ ಕಾಫಿ ಪುಡಿ ಮಾಡುವ ಮೇಷಿನ್ ನ ಅಡುಗೆ ಮನೆಯಲ್ಲಿ ನೋಡಬಹುದು. ಬೆಲ್ಲದ ಕಾಫಿ ಕೂಡ ನನಗೆ ಇಷ್ಟ. ಇಂದಿಗೂ ನನಗೆ ಫಿಲ್ಟರ್ ಕಾಫಿ ಅಥವಾ ಬ್ರೂ  ಅಸ್ಪೃಶ್ಯವಾಗಿಯೇ ಕಾಣುತ್ತದೆ! ಥಟ್ ಅಂತ ತಯಾರು ಮಾಡಬಹುದಾದರೂ ಅದರಲ್ಲಿ ದೈವಿಕ ಶಕ್ತಿಯ ಕೊರತೆ ಕಾಣುತ್ತದೆ.

ಟೀ, ಕಷಾಯ ಮುಂತಾದುವುಗಳನ್ನು ಕುಡಿಯಬಹುದಾದರೂ ಬೆಳಿಗ್ಗೆ ಮಾತ್ರ ಅದು ಕಾಫಿ ಆಗಿರಬೇಕು. ಯಾಕೆಂದರೆ ಅದು ಕೇವಲ ಪಾನೀಯ ಆಗಿರದೆ ಔಷದಿ ಕೂಡ ಆಗಿದೆ, ಶೀತ, ಕೆಮ್ಮಿಗೆ ಅದು ರಾಮ ಬಾಣ. ಹೆಚ್ಚಿನ ಮಾಹಿತಿ ಗೆ ಇಲ್ಲಿ ಇಣುಕಿ ನೋಡಬಹುದು.


ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತು ಅಂದ್ರೆ, ಮದುವೆಯೇ ಆಗುವುದಿಲ್ಲ ಎನ್ನುವ ನನ್ನ ಶಪಥ ಸಡಿಲು ಆಗುವುದಕ್ಕೆ ಹುಡುಗಿ ನೋಡಲು ಹೋದಾಗ ಸಿಕ್ಕ ರುಚಿಕರ ಕಾಫಿಯೇ ಕಾರಣ ಎಂದು ಅನ್ನಿಸಲು ಶುರು ಆಗಿದ್ದರಿಂದ. J