Wednesday, September 1, 2010

ಹೀಗೊಂದು ಅಸಂಗತ ಹರಟೆ


ಅಂತು ಇಂತೂ ನನ್ ಲೈಫ್ ಒಂದು ಮಟ್ಟಿಗೆ ಚಿತ್ರಾನ್ನ ಆಯಿತು!

ವಿಷ್ಯ ಏನಪ್ಪಾ ಅಂದ್ರೆ ಇತ್ತೀಚಿಗೆ ನಂಗೆ ನೆಮ್ಮದಿ ಹುಡುಕೋ ಚಟ ಜಾಸ್ತಿ ಆಗಿ ಬಿಟ್ಟಿತ್ತು. ಒಳ್ಳೆ ಹೆಂಡತಿ ಹುಡುಕೋ ಹಂಗೆ ಒಳ್ಳೆ ಮ್ಯಾನೇಜರ್ ನ ಹುಡುಕುತ್ತಾ ಹಲವಾರು ಕೆಲಸ ನ ಬದಲಿಸಿ ಬಿಟ್ಟೆ. ಈ ಪ್ರಯತ್ನದಲ್ಲಿ ಇರುವಾಗ ಕೆಲವು ದಿನಗಳ ಹಿಂದೆ ಒಂದು ದೊಡ್ಡ ಎಂ ಏನ್ ಸಿ ನಲ್ಲಿ ಯಾರೋ ಪಾಪ ಒಬ್ಬ ಪ್ರಾಜೆಕ್ಟ್ ಮ್ಯಾನೇಜರ್ ನನ್ ಮೂತಿ ಕೂಡ ನೋಡದೆ ಕೆಲಸ ಕೊಟ್ಟರು :) (ನೋಡಿದ್ರೆ ದೇವರಾಣೆ ಇಲ್ಲಿ ಕರೀತಾ ಇರಲಿಲ್ಲ ಅನ್ನೋದು ಘೋರ ಸತ್ಯ ಅಂತ ಗೊತ್ತು ಬಿಡಿ) ಇರೋ ೭ ಜನ ಟೀಂ ಗೆ ಮ್ಯಾನೇಜರ್ ರೇ ಇಲ್ಲ. ಎಂತ ಅದೃಷ್ಟ ಅಂತ ಕಣ್ಣು ಮುಚ್ಚಿ ಸೇರಿದೆ.

ಮೊದಲು ಎಂತ ಚಂದ ಇತ್ತು! ಒಳ್ಳೆ ಹನಿಮೂನ್ ಸಮಯ. ಆದರೇನು ಮಾಡೋದು? ಸುಖ ಅನ್ನೋದು ಯಾವಾಗಲು ಇರೋಕೆ ಅದೇನು ಜ್ಯೋತಿ ಬಸು ಗವರ್ನಮೆಂಟ? ಅದ್ಯಾರು ಲಿಂಬೆ ಹಣ್ಣಿನ ಮಾಟ ಮಾಡಿದರೋ ಏನೋ, ಇದ್ದಕ್ಕೆ ಇದ್ದಂತೆ ಒಬ್ಬ ಮ್ಯಾನೇಜರ್ ಬಂದು ಬಿಟ್ಟ. ಆಮೇಲೆ ಶುರು ಆಯಿತು ನೋಡಿ, ಹಿಡಿದು ಮುಟ್ಟಿದ್ದ ಕ್ಕೆಲ್ಲ ಪ್ರಶ್ನೆ, ಮೀಟಿಂಗು ಹಾಳು ಮೂಳು.. ಶುರು ಮಾಡಿದ. ಈ ಯಪ್ಪಂಗೆ ಅದೇನು presentation ಚಟ ಅಂದ್ರೆ ನಮ್ ಕ್ಯಾಬಿನ್ ಗೆ ಹೆಗ್ಗಣ ಬಂದಿದೆ ಅಂದರೂ, ಅದನ್ನು ಹೊಡೆದು ಕೊಲ್ಲಬೇಕು ಅಥವಾ ಬೋನ್ ನಲ್ಲಿ ಹಿಡಿದು ದೂರ ಬಿಡಬೇಕು ಅನ್ನುವ ಸರ್ವಕಾಲಿಕ ಸತ್ಯ ಕಂಡು ಹಿಡಿಲಿಕ್ಕೆ ಕನಿಷ್ಠ ೪-೫ ತಿಂಗಳು ಸಮಯ ಹಿಡಿಯುತ್ತೆ. ಯಾಕಪ್ಪ ಅಂದರೆ

1. ಮೊದಲು ಹೆಗ್ಗಣದ ಜೊತೆ ಒನ್ ಟು ಒನ್ ಮೀಟಿಂಗ್ ಮಾಡಬೇಕು

2. ಆಮೇಲೆ ನಮ್ಮಗಳ ಜೊತೆ ಒನ್ ಟು ಒನ್

3. ನಂತರ ನಮ್ಮೆಲ್ಲರ ಟೀಂ ಮೀಟಿಂಗ್

4. ಹೆಗ್ಗಣ ಕೊಲ್ಲೋದರ ಬಗ್ಗೆ ಒಂದು ಪವರ್ ಪಾಯಿಂಟ್ presentation ಕೊಡಬೇಕು

5. ಒಂದು ಎಂ ಎಸ ಎಕ್ಸೆಲ್ ನಲ್ಲಿ ಪಿವೋಟ್ ಟೇಬಲ್ ಹಾಕಿ, ಅಂಕಿ ಅಂಶ ದೊಂದಿಗೆ ವಿವರಣೆ ಕೊಡಬೇಕು

6. ಹೆಗ್ಗಣ ದಿಂದ ಎಷ್ಟೆಲ್ಲಾ ತೊಂದರೆ ಆಗ್ತಾ ಇದೆ ಅಂತ ೨-೩ ತಿಂಗಳು ಗಮನಿಸಬೇಕು

7. ಹೆಗ್ಗಣಗಳನ್ನು ಈಗಾಗಲೇ ಕೊಂದಿರುವವರನ್ನು ಕರೆಸಿ ನಮಗೆ ಒಂದೆರಡು ಗಂಟೆಗಳ ಪ್ರವಚನ ಕೊಡಿಸಬೇಕು.

8. ಇದೆಲ್ಲ ವನ್ನು ಮ್ಯಾನೇಜ್ಮೆಂಟ್ ಗೆ ತೋರಿಸಬೇಕು, ಯಾಕೆಂದರೆ ಎಲ್ಲವು "ಬಿಲ್ಲಬಲ್" ಸಮಸ್ಯೆ ಗಳು.

9. ಅವರವರ roles and responsibility ಗಳ ಬಗ್ಗೆ ವಿವರಣೆ ಕೊಡಬೇಕು. ಯಾರು ದೊಣ್ಣೆ ಹಿದುಕೋ ಬೇಕು, ಯಾರು ಬಾಲ ಹಿಡಿದು ಬಿಸಾಕಬೇಕು, ಯಾರು ಆಮೇಲೆ ನೆಲ ಸಾರಿಸಬೇಕು ಮುಂತಾದುವು.

10. ಇಷ್ಟೂ ಸಾಲದೆಂಬಂತೆ ನಾವುಗಳು ಅದೇನೋ ಕಿತ್ತೋದ work load tracker ಕೂಡ ಸಂಬಾಳಿಸಬೇಕು.


ಎಲ್ಲದಕ್ಕೂ ಒಂದು ಅಂತ್ಯ ಇರಬೇಕಲ್ಲ, ನಾವುಗಳು ಸರಿಯಾದ ಸಮಯದಲ್ಲಿ ಹೆಗ್ಗಣ ಕೊಲ್ಲದೆ ಇದ್ದಲ್ಲಿ ಹೆಗ್ಗಣದ ಜೊತೆ ಒಂದು review ಮೀಟಿಂಗ್! ನೀನು ಯಾಕೆ ಸಾಯಲಿಲ್ಲ ಮತ್ತೆ ನೀವುಗಳು ಯಾಕೆ ಸರಿಯಾಗಿ ಹೊಡೆದು ಸಾಯಿಸಲಿಲ್ಲ ಅಂತ.

ನಾನೇನು ನಮ್ಮ ಮ್ಯಾನೇಜರ ಬಗ್ಗೆ ದೂರುತ್ತಾ ಇಲ್ಲ. ಮ್ಯಾನೇಜರ್ ಅನ್ನುವವ ಇಲ್ಲ ಅಂದ್ರೆ ನನ್ನಂತ ಮಾನವ ಪ್ರಾಣಿಗಳು ಖಂಡಿತ ಕೆಲಸ ಮಾಡೋಲ್ಲ, ಅಲ್ಲಿ ಇಲ್ಲಿ ಪುಂಗಿ ಊದಿ, ಆಫೀಸ್ ಫೋನ್ ನ ನಂದೇ ಸ್ವಂತ ಅನ್ನೋ ತರ ಪೋಸ್ ಕೊಟ್ಟು, ಹೊಸದಾಗಿ ಬಂದಿರೋ ಕುಶವಂತ್ ಸಿಂಗ್ ಬುಕ್ ನ ಆಫೀಸ್ ನಲ್ಲೆ ಪ್ರಿಂಟ್ ತೆಗೆದು, ಇರೋ ಬಾರೋ ಸಿನಿಮಾ ನೆಲ್ಲ ಕದ್ದು ಡೌನ್ ಲೋಡ್ ಮಾಡಿ, ಆಮೇಲೆ ಕನ್ನಡ ಸಿನಿಮಾ ಚೆನ್ನಾಗಿರೊಲ್ಲ ಅಂತ ಒಂದಿಷ್ಟು ಗೊಣಗಾಡಿ ಇರುತ್ತಿದ್ದೆವು. ಮ್ಯಾನೇಜರನಿಲ್ಲದ ಕಚೇರಿ ಬೇಲಿಯಿಲ್ಲದ ಹೊಲ ಎ೦ಬ ಹೊಸ ಗಾದೆ ನನ್ನ ತಲೆಗೆ ಹೊಳೆಯುತ್ತಿದೆ. ನಮ್ಮ ಊರಕಡೆ ಗದ್ದೆಗಳಿಗೆ ಕಾಡುಪ್ರಾಣಿ ಬಾರದ೦ತೆ ಹಳೆ ಅ೦ಗಿ ತೊಡಿಸಿ, ಮಣ್ಣ ಮಡಿಕೆಗೆ ಮೀಸೆ ಬಳಿದ ನಿರ್ಜೀವ ಬೆರ್ಚಪ್ಪನ೦ತೆ ಇರಬೇಕು ನನ್ನ ಮ್ಯಾನೇಜರ್ ಅ೦ತ ನಾನೇನಾದರೂ ಬಯಸಿದರೆ ಅದು ಅತಿಶಯವಾದೀತೇನೋ ? ಎಲ್ಲರೊಳಗೊ೦ದಾಗಿ, ಎಲ್ಲರನ್ನು ಅರಿತು, ಎಲ್ಲರೊ೦ದಿಗೆ ಬೆರೆತು, ಗು೦ಡಪ್ಪ ನವರ ಎಲ್ಲರೊಳಗೊ೦ದಾಗು ಮ೦ಕುತಿಮ್ಮ ಎ೦ಬ೦ತಹ ಒಬ್ಬ ಮ್ಯಾನೇಜರ್ ನನಗೆ ಬೇಕು. ಸದ್ಯದಮಟ್ಟಿಗೆ ಅದನ್ನು ಬಯಸುವುದೂ, ಎಡಿಯೂರಪ್ಪನ ಮ೦ತ್ರಿಮ೦ಡಲ re-shuffle ಆಗೋದು ಎರಡೂ ಕಷ್ಟ ಅನ್ಸುತ್ತೆ .


ಹೋಗ್ಲಿ ಬಿಡಿ, ನಿಮಗೂ ಕೂಡ ನನ್ ತರಾನೆ ಒಬ್ಬ ಮ್ಯಾನೇಜರ್ ಇದ್ದಾನೆ ಅಂದ್ರೆ ನನಗಂತು ಒಂತರ ಕುಶಿ ಅಂತು ಆಗುತ್ತೆ. ಅಕಸ್ಮಾತ್ ಇಲ್ಲವ? ಅ ತರದ ಮ್ಯಾನೇಜರ್ ನಿಮಗೂ ಕೂಡ ಸಿಗಲಿ ಅಂತ ಅ ದಯಮನಾದ ಭಗವಂತನಲ್ಲಿ ಪ್ರಾರ್ತಿಸುವೆ.