Monday, June 28, 2010

ಪಾದರಕ್ಷೆ ಕದ್ದ ಪಾಪಿಯ ಹುಡುಕಾಟದಲ್ಲಿ


ಕಳ್ಳತನ ಎಲ್ಲಿ ಆಗೋಲ್ಲ ಸ್ವಾಮೀ? ನಮ್ಮ ಅರಿವಿಗೆ ಬಂದಂತೆಯೇ ಅಥವಾ ಬಾರದಂತೆ ಕಳ್ಳರು ದೋಚಿಕೊಂಡು ಹೋಗುವುದು ಹೊಸ ವಿಷಯ ಏನಲ್ಲ. ಒಬ್ಬರ ಆಸ್ತಿ ಪಾಸ್ತಿ ದರೋಡೆ ಆದರೆ, ಮಗದೊಬ್ಬರ ಮೂತ್ರ ಪಿಂಡ ವೆ ಮಾಯಾ! ಇನ್ನು ಕೆಲವರದ್ದು ಹೃದಯ ಕಳ್ಳತನ ಆಗುವುದು ಇದೆ ಆದರೆ ಅದು ಬೇರೆ ವಿಷಯ ಬಿಡಿ. ಕಳ್ಳತನ ಆದಾಗ ನಮ್ಮ ಆಸ್ತಿ ಹೋಯಿತಲ್ಲ ಅನ್ನುವುದಕಿಂತ, ನಮ್ಮ ಕ್ಷೇತ್ರದಲ್ಲಿ ಅನಾಮಿಕ ನೊಬ್ಬ ನಮ್ಮ ಅರಿವಿಗೆ ಬಾರದಂತೆ ಬಂದ ಅನ್ನುವುದೇ ಮನಸ್ಸಿಗೆ ಬೇಸರ ಹಾಗು ಕಳವಳ ಉಂಟು ಮಾಡುವ ಸಂಗತಿ. ಈ ವಿಷಯ ಯಾಕೆ ಬಂತು ಅಂದ್ರೆ ಮೊನ್ನೆ ನಮ್ಮ ಮನೆಯಲ್ಲಿ ಕಳ್ಳತನ ಆಯಿತು.

ಅಂದು ಮುಂಜ್ಹಾನೆ 3 ಗಂಟೆಗೆ ನಾನು ಪ್ರಕೃತಿ ಕರೆಗೆ ಒಗೊಡಲು ಎದ್ದಾಗ ರೂಮು ಸರಿಯಾಗೇ ಇತ್ತು. ನಮ್ಮ ಮನೆ ಇರುವುದು ಮೊದಲ ಮಹಡಿಯಲ್ಲಿ. ಕೆಳ ಅಂತಸ್ತಿನಲ್ಲಿ ದೊಡ್ಡ ಗೇಟ್ ಇರುವುದರಿಂದ ಅಪರಿಚಿತರು ಒಳಗೆ ನುಗ್ಗುವುದು ಸಾದ್ಯವೇ ಇಲ್ಲ. ಗೇಟ್ ಬಾಗಿಲು ತೆರೆಯುವುದು ಮೇಲಿನ ಮನೆ "ಶೇಟು" ಹಾಲು ತರಲು 6 ಗಂಟೆಗೆ ಮಕ್ಕಳನ್ನು ಹೊರಗೆ ಅಟ್ಟಿ ದಾಗಲೇ. ಅದಕ್ಕೂ ಮೊದಲು ಗೃಹ ಪ್ರವೇಶ ಮಾಡಬೇಕು ಅಂದರೆ ಕಳ್ಳ ಸ್ಪೈಡರ್ ಮ್ಯಾನ್ ಆಗಿರಬೇಕು. ಅದು ಸಾದ್ಯವಿಲ್ಲ ವಾದ್ದರಿಂದ ಕಳ್ಳ ಬಂದಿದ್ದು ಬೆಳಗಿನ ಮುಂಚೆ, ಅದೂ ಅಕ್ಕ ಪಕ್ಕದವರು ಎದ್ದ ನಂತರ, 6 ಗಂಟೆಯ ಮೇಲೆ! ಭಾನುವಾರ ನಾವು ಸಂಪೂರ್ಣ ಸೂರ್ಯ ವಂಶಸ್ತರಾಗಿರುವುದರಿಂದ ಕಳ್ಳತನ ನನ್ನ ಕಣ್ಣಿಗೆ ಬಿದ್ದಿದ್ದು ಸುಮಾರು 10 ಗಂಟೆ ಗೆ!. ಎದ್ದು ಮಂಪರು ಗಣ್ನಲ್ಲಿ ಹೊರ ಬರುತ್ತಲೇ ಎದೆ ದಸಕ್ ಎಂದಿತು, ಬಾಗಿಲ ಪಕ್ಕ ಹೊರಗೆ ಇಟ್ಟಿದ್ದ ನನ್ನ ಅಚ್ಚು ಮೆಚ್ಚಿನ, ಪ್ರೀತಿ ಪಾತ್ರದ ಶೂ ನಾಪತ್ತೆ ಆಗಿತ್ತು.

ಶೂ ನ ಮನೆ ಒಳಗೆ ಇಟ್ಟುಕೊಬೆಕಾಗಿತ್ತು ಅಂತ ನೀವು ಹೇಳಬಹುದು, ಆದರೆ ನಂಗೆ ನನ್ನ ಕಾಲು ಚೀಲ ಗಳ ಬಗ್ಗೆ ವಿಪರೀತ ಪ್ರೇಮ, ಅದನ್ನ ಒಗೆದರೆ ಅದರ ಬಣ್ಣ ಎಲ್ಲಿ ಹೋಗುವುದೋ ಎನ್ನುವ ಭಯದಲ್ಲಿ ಅದಕ್ಕೆ ನೀರೆ ತಾಗಿಸೋಲ್ಲ. ಶೂ ನ ಒಳಗೆ ಇಟ್ಟರೆ ಅದರ ಸುವಾಸನೆಗೆ ನಿದ್ದೆ ಬರುವುದಿಲ್ಲವಾದ್ದರಿಂದ ಹೊರಗೆ ಇಟ್ಟಿರಬೇಕಾಗಿತ್ತು. ಆ ಶೂ ನನ್ನ ಜೀವನದ ಒಂದು ಭಾಗ ಆಗಿತ್ತು. ಸುಮಾರು ಹನ್ನೆರಡು ನೂರು ರೂ ಕೊಟ್ಟು ಕಳೆದ ವರ್ಷ 2 ವರ್ಷದ ಹಿಂದೆ ಕೊಂಡಿದ್ದೆ. ಮಳೆಯಲ್ಲಿ, ಬಿಸಿಲಲ್ಲಿ, ಕೆಸರು, ದೂಳಲ್ಲಿ ನನ್ನ ಸಂಗಾತಿ ಯಾಗಿತ್ತು. ಅವಾಗ ಅವಾಗ ಅದನ್ನ ತೊಳೆಯದೆ ಇದ್ದರೂ, ಯಾವಾಗಲು ಸುವಾಸನೆ ಪೂರಿತ ಕಾಲು ಚೀಲ ಹಾಕಿದರು ಒಮ್ಮೆಯೂ ಅದು ನನ್ನ ಮೇಲೆ ಕೊಪಿಸ್ಕೊಂಡಿದ್ದು ಇಲ್ಲ.

ಊರಿಗೆ ಕೂಡ ಅದನ್ನೇ ನಾನು ಹಾಕಿಕೊಂಡು ಹೋಗುತ್ತಾ ಇದ್ದಿದ್ದು. ನಮ್ಮ ಮನೆಲ್ಲಿ ಅದನ್ನ ಅಸ್ಪೃಶ್ಯ ಜೀವಿ ತರ ನೋಡುತ್ತಾ ಇದ್ದರು, ಅಪ್ಪ ಅದನ್ನ ದೊಡ್ಡದೊಂದು ದೋಟಿಯಲ್ಲಿ ಅದನ್ನ ಎತ್ತಿ ಬೇಲಿ ಪಕ್ಕದಲ್ಲಿ ಇಟ್ಟು ಬರುತ್ತಾ ಇದ್ದರು. ಆದರೆ ನಮ್ಮ ಮನೆಯ ಬೆಕ್ಕು ಮತ್ತೆ ಪಕ್ಕದ ಮನೆಯ ನಾಯಿಗಳು ನನ್ನ ಶೂ ಗೆ ಸಾಕಷ್ಟು ಮಾರ್ಯಾದೆ ಕೊಡುತ್ತಾ ಇದ್ದವು. ಮನೆ ಹೊರಗೆ ಇಟ್ಟ ಯಾವುದೇ ಚಪ್ಪಲಿ ಯನ್ನು ಅವು ಕಿತ್ತು ಇದ್ದ ಅವುಗಳು, ನನ್ನ ಶೂ ನ ಮಾತ್ರ ಮೂಸಿಯೂ ನೋಡುತ್ತಾ ಇರಲಿಲ್ಲ. ( ಆ ಗಬ್ಬು ವಾಸನೆಗೆ ಅವೆಲ್ಲಿ ಬರ್ತಾವೆ ಅಂತ ಅಮ್ಮ ಬೈತಾ ಇರ್ತಾಳೆ. )

ಇಂತಿಪ್ಪ ನನ್ನ ಶೂ ನ ಒಬ್ಬ ಕಳ್ಳ ಕದ್ದಿದ್ದಾನೆ, ಅವನು ಕದ್ದ ಅಂತ ನನಗೇನು ಬೇಜಾರಿಲ್ಲ. ಆದರೆ ಕದಿಯೋಕಿಂತ ಮುಂಚೆ ಅಲ್ಲೇ ಬಾಗಿಲ ಪಕ್ಕ ಇಟ್ಟಿದ್ದ ಕಸದ ಬುಟ್ಟಿಗೆ ಕಾಲುಚೀಲವನ್ನ ಬಿಸಾಕಿ, ತನ್ನ ಚಪ್ಪಲಿಯನ್ನು ಅಲ್ಲೇ ಇಟ್ಟು, ಶೂ ಅನ್ನು ಮಾತ್ರ ಹಾಕಿಕೊಂಡು ಹೋಗಿದ್ದಾನೆ.!! ನನ್ನ ಪ್ರೀತಿ ಪಾತ್ರ ದ ಕಾಲು ಚೀಲಕ್ಕೆ ಕಸದ ಬುಟ್ಟಿಯ ದಾರಿ ತೋರಿದ ಅ ಕಳ್ಳನನ್ನು ನಾನು ಕಂಡಿತ ಕ್ಷಮಿಸಲಾರೆ. ನಿಮಗೆಲ್ಲಾದರು ಸ್ವಲ್ಪ ಕೆಂಪು ಬಣ್ಣದ ಖಾಲಿ ಶೂ (ನಾನು ಕೊಳ್ಳುವಾಗ ಅದು ಬಿಳಿ ಬಣ್ಣದ್ದು ಇತ್ತೆಂದು ನೆನಪು ) ದರಿಸಿರುವ ವ್ಯಕ್ತಿ ಕಂಡು ಬಂದಲ್ಲಿ ನನಗೆ ಕಂಡಿತಾ ತಿಳಿಸಿದರೆ ನಿಮಗೆ ಪುಣ್ಯ ಬರುವ ಸಾಧ್ಯತೆಗಳು ಇದೆ.

ಹಂಗೆ ಸುಮ್ನೆ: ನಾನು ಇತ್ತೀಚಿನ ಕೆಲವು ದಿನಗಳಿಂದ ಕಚೇರಿ ಕೆಲಸದಲ್ಲಿ ಮಗ್ನ ನಾಗಿರಬೇಕೆಂದು ಹಲವು ಸ್ನೇಹಿತರು ತಪ್ಪು ತಿಳಿದಿರುತ್ತಾರೆ, ಆದರೆ ನಾನು ಉತ್ತರ ಭಾರತದ (ಚೀನಾ, ನೇಪಾಳ ಕೂಡ) ಹಲವು ಪುಣ್ಯ ಕ್ಷೇತ್ರಗಳಿಗೆ ಪ್ರವಾಸ ಹೋಗಿದ್ದೆ. ಹಾಗೆಯೇ ನಾನು ರಾಜಕಾರಿಣಿ ಒಬ್ಬರ ಜೊತೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಿರುವುದಿಲ್ಲ, ಮಾನಸ ಸರೋವರ ದಲ್ಲಿ ನಾನು ಕೂಡ ಒಂಟಿ ಕಾಲಲ್ಲಿ ನಿಂತು ಲಬೋ ಲಬೋ ಅಂತ ಬಡಕೊಂಡು ಫೋಟೋ ಗಳಿಗೆ ಪೋಸು ಕೊಟ್ಟಿದ್ದರೂ ಕೂಡ ಆ ಸಮಯದಲ್ಲಿ ಅಲ್ಲಿ ನಾನೊಬ್ಬನೇ ಇದ್ದೆ. ಅಷ್ಟೂ ಸಾಲದೆಂಬಂತೆ ನಾನೇ ಸ್ವಂತ ದುಡ್ಡಿನಲ್ಲಿ ಟಿಕೆಟ್ ಕೊಂಡಿದ್ದು, ಅದಕ್ಕಾಗಿ ಯಾವ ನೆರೆ ಹಣವನ್ನು ಉಪಯೋಗಿಸಿರುವುದಿಲ್ಲ.