Friday, November 20, 2009

ಗ೦ಡಾ೦ತರ ವಿಲ್ಲದ ಗ೦ಡಸರು


ನಿನ್ನೆ "ವಿಶ್ವ ಗಂಡಸರ ದಿನ" ಆಚರಣೆ ಆಗಿದೆ. ಅದರ ಅರ್ಥ ಈ ಪ್ರಪಂಚದಲ್ಲಿ ಗಂಡಸರು ಕೂಡ ಗುರುತಿಸಲ್ಪಟ್ಟಿದ್ದಾರೆ. :) ನಮ್ಮಲ್ಲಿ ತುಳಿತಕ್ಕೆ ಒಳಪಟ್ಟವರು, ದೌರ್ಜನ್ಯಕ್ಕೆ ಒಳಗಾದವರ ಬಗ್ಗೆ ಹೋರಾಡಲು ಸಾಕಷ್ಟು ಸಂಘ ಸಂಸ್ಥೆ ಗಳು ಇವೆ, ಆದರೆ ಅವು ಯಾವುದು ಕೂಡ ಮದುವೆ ಯಾದ ಗಂಡಸರನ್ನು ರಕ್ಷಿಸುವ ಕೆಲಸ ಮಾಡಿದ್ದು ಕೇಳಿಲ್ಲ. ಇರಲಿ ನಾನು ಈಗ ಗಂಡಸಾಗಿ ಹುಟ್ಟುವುದರ ಲಾಭಗಳನ್ನು ಅಥವಾ ಗಂಡಸರಿಗಿರುವ ಅನುಕೂಲತೆ ಗಳ ಬಗ್ಗೆ ಹೇಳುವೆ, ಇವೆಲ್ಲವೂ ಗಳನ್ನೂ ಓದಿದರೆ ಗಂಡಸರಿಗೆ ಸ್ವಲ್ಪ ವಾದರೂ ಹೆಮ್ಮೆ, ಗೌರವ ಬರುತ್ತದೆ ಅಂತ ನನ್ನ ಭಾವನೆ.


1. ಸುಖ ಎಂದರೆ ಏನು? ಅಂದರೆ ನನ್ನ ಮಟ್ಟಿಗೆ, ಕಜ್ಜೀನ ತುರಿಸಿ ಕೊಂಡಾಗ ಅಥವಾ ಬಹಳ ಸಮಯದ ನಂತರ ಪ್ರಕೃತಿ ಕರೆಗೆ ಓಗೊಟ್ಟಾಗ! ಗಂಡಸರಿಗೆ ಈ ಪ್ರಪಂಚವೇ ದೊಡ್ಡ ಮೂತ್ರಲಯ, ಎಲ್ಲಿ, ಯಾವಾಗ ಹೇಗಿದ್ದರೂ.. ಉಪಯೋಗಿಸ ಬಹುದು.

2.ಅಪ್ಪಿ ತಪ್ಪಿ ಎಲ್ಲಾದರು ಏನಾದ್ರೂ ಆದ್ರೆ, ಗಂಡಸರು "ಬಸುರಿ" ಆಗೋಲ್ಲ. ಇದಕಿಂತ ದೊಡ್ಡ ಲಾಭ ಮತ್ತೊಂದು ಸಿಗಲಾರದು.

3. ಮನೆ ಇಂದ ಹೊರ ಹೋಗಬೇಕು ಅಂದರೆ ಕೈಗೆ ಸಿಕ್ಕ ಯಾವುದೋ ಒಂದು ಅಂಗಿ ಹಾಕಿಕೊಂಡು ಹೋಗಬಹುದು. ಯಾವುದೂ ಸಿಗಲಿಲ್ಲ ಅಂದರೆ ಶರ್ಟ್ ಇಲ್ಲದೆ ಹೋದರು ನಡೆಯುತ್ತೆ. ಇಷ್ಟೇ ಅಲ್ಲ ಸಿನಿಮಾ ರಂಗದಲ್ಲಿ ಸಲ್ಮಾನ್ ಖಾನ್ ತರ ಖಾಲಿ ಚಡ್ಡಿ ಹಾಕ್ಕೊಂಡು ಕುಣಿದರೂ ಅದು ಅಶ್ಲೀಲ ಆಗೋಲ್ಲ.

4. ಯಾರ ಜೊತೆಗಾದರೂ ಮಾತನಾಡುವಾಗ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಬಹುದು. ಅರ್ಥ ಆಯಿತು ಅಂದುಕೊಳ್ಳುವೆ.

5. ಇಂಟರ್ವ್ಯೂ ಗಳಿಗೆ ಹೋದಾಗ ನಮ್ಮ ಫಿಗರ್ ಮುಖ್ಯ ಆಗೋಲ್ಲ.

6. ಸಮಯದ ಉಳಿತಾಯ ಗಂಡಸರಿಂದ ಮಾತ್ರ ಸಾದ್ಯ, ಹೊರಗೆ ಅಡ್ಡಾಡೋಕೆ ಹೊರಡಲು ಕೇವಲ ೫-೧೦ ನಿಮಿಷ ಸಾಕು.

7. 5-6 ದಿನಗಳ ಪ್ರವಾಸಕ್ಕೆ ಕೇವಲ ಒಂದು ಸೂಟ್ ಕೇಸ್ ಸಾಕು.

8. ಒಂದು ಜೊತೆ ಶೂ ಮತ್ತೆ ೩ ಜೊತೆ ಸಾಕ್ಸ್ ಸಾಕೋ ಸಾಕು. ಸಾಕ್ಸ್ ಗಳನ್ನ ಯಾವಾಗಲು ತೊಳಿತಾ ಇರಬೇಕು ಅನ್ನುವ ಕಾಯಿದೆ ಯಾವುದು ಇಲ್ಲ.

9 ಕೆಂಪು, ಕಪ್ಪು, ಬಿಳಿ, ಹಸಿರು .. ಬಿಟ್ಟು ಇನ್ಯಾವುದೇ ಬಣ್ಣ ಗುರುತಿಸದೆ ಇದ್ದರೆ ಜನ ತಪ್ಪು ತಿಳಿಯೋಲ್ಲ.

10. ನಮ್ಮ ಕೊನೆಯ ಹೆಸರು ಯಾವಾಗಲು ಒಂದೇ ಆಗಿರುತ್ತದೆ. (ಲಾಸ್ಟ್ ನೇಮ್)

11. ಮೊಬೈಲ್ ಮಾತು ಕಥೆ ಕೇವಲ ೩೦ ಸೆಕಂಡ್ ನಲ್ಲಿ ಮುಗಿಯುತ್ತದೆ.

12. ಯಾರಾದರು ಒಂದು ಸಮಾರಂಭಕ್ಕೆ ಕರೆಯಲಿಲ್ಲ ಅಂದರೂ ಕೂಡ ಅವರು ನಮ್ಮ ಸ್ನೇಹಿತರಾಗೆ ಇರುತ್ತಾರೆ.

13. ವಯಸ್ಸು ಮೂವತ್ತಕಿಂತ ಜಾಸ್ತಿ ಆಗಿ, ಇನ್ನು ಮದುವೆ ಆಗಿಲ್ಲ ಅಂದ್ರೂನು ಯಾರು ಗಮನಿಸೋಲ್ಲ, ಅಥವಾ ಕಣ್ಣು ಹಾಕೋಲ್ಲ.. :D

14. ಅಮ್ಮ ನ ಜೊತೆ ಜಗಳ ಆಡದೇನೆ ಇರಲು ಸಾಧ್ಯವಿದೆ. (ನನ್ನ ಮೇಲೆ ದಯವಿಟ್ಟು ಜಗಳಕ್ಕೆ ಬರಬೇಡಿ, ಕಣ್ಣಾರೆ ಕಂಡಿರುವೆ, ನೋಡುತ್ತಲೂ ಇರುವೆ. )

15. ಕಡೇ ಪಕ್ಷ ಸರ್ಕಾರಿ ಲೆಕ್ಕದಲ್ಲಿ ಮನೆಯ ಯೆಜಮಾನ ಅನ್ನುವ ಬಿರುದು ಬಾವಲಿ ಸಿಗುತ್ತದೆ.


ಇನ್ನೂ ಸಾಕಷ್ಟು ಇದೆ, ಆದರೆ ಈಗ ಇಷ್ಟು ಸಾಕು ಬಿಡಿ.
ನನ್ನೆಲ್ಲಾ ಮಾತುಗಳನ್ನ ಎಲ್ಲಾ ಗಂಡಸರು ಮತ್ತು ಅವರ ಮಕ್ಕಳು ಒಪ್ಪುತ್ತಾರೆ ಅಂತ ಭಾವಿಸುವೆ. :) :)

Wednesday, November 11, 2009

ಕೇಳುಗನ ಕ(ವ್ಯ)ಥೆಒಂದು ಊರು, ಅ ಊರಲ್ಲಿ ನಮ್ಮ ಕಥಾ ನಾಯಕ ತನ್ನ ಕುಟುಂಬ ದವರೊಡನೆ ಸುಖವಾಗಿ ಇದ್ದ. ಒಳ್ಳೆಯ ಕೆಲಸ, ತಲೆ ತಿನ್ನದ ಮ್ಯಾನೇಜರ್, ಮನೆಯಲ್ಲಿ ಶಾಪಿಂಗ್ ಅಂತ ಬಾಯಿ ಬಡಿದುಕೊಳ್ಳದೆ ಇರುವ ಹೆಂಡತಿ, ಸ್ಕೂಲ್ ಗೆ ಹೋಗುವ ಬುದ್ದಿವಂತ ಮಕ್ಕಳು, ಆರೋಗ್ಯವಂತ ಅಪ್ಪ ಅಮ್ಮ ಮತ್ತೆ ಸ್ವಂತದ ಮನೆ. ಇದಕ್ಕಿಂತ ಇನ್ನೇನು ಬೇಕು ಅನ್ನುವ ಹಾಗೆ ಎಲ್ಲರೂ ಇದ್ದರು.


ಎಲ್ಲರೂ ಸುಖವಾಗಿ ಇದ್ದರೆ ಅದು ಕಥೆ ಹೇಗಾದೀತು. ಅಲ್ಲೊಬ್ಬ ದುಷ್ಮನ್ ಇರಲೇ ಬೇಕಲ್ಲವೇ? ಒಮ್ಮೆ ಇವರ ಸುಖಿ ಕುಟುಂಬದ ಬಗ್ಗೆ ತ್ರಿಲೋಕ ಸಂಚಾರಿ ನಾರದರು ಗಮನಿಸಿದರು, ಗಮನಿಸಿ ಸುಮ್ಮ ನಿರಲಾಗದೆ ದೇವರಿಗೂ ವಿಷಯ ತಿಳಿಸಿ ಬಿಟ್ಟರು. ಭೂಮಿಲಿ ಕೆಲವರು ನೆಮ್ಮದಿಯ ಜೀವನ ನಡೆಸುತ್ತಾ ಇದ್ದಾರೆ ಅಂದರೆ ನಂಬುವುದು ಹೇಗೆ? ಇಲ್ಲಿ ಪ್ರಜಾಭುತ್ವ ಇದೆ, ರಸ್ತೇಲಿ ಖಾಕಿ ರೌಡಿಗಳು ಇದ್ದಾರೆ, ಒಂದು ಕಡೆ ಸುನಾಮಿ, ಮತ್ತೊಂದೆಡೆ ಪ್ರವಾಹ, ಇನ್ನೆಲ್ಲೋ ಬರಗಾಲ, ಹೀಗಿದ್ದೂ ನೆಮ್ಮದಿ ಇಂದ ಒಂದು ಕುಟುಂಬ ಇದೆ!!. ಸುಖವಾಗಿ ಇರುವುವರನ್ನು ದೇವರು ಹೇಗೆ ತಾನೆ ಸಹಿಸ ಬಲ್ಲ? ಅವರಿಗೆ ಒಂದಿಷ್ಟು ಕಷ್ಟ ಗಳನ್ನು ಗಿಫ್ಟ್ ಮಾಡಿ ಪರೀಕ್ಷೆ ಮಾಡಲೇ ಬೇಕಲ್ಲವೇ? ಕಷ್ಟ ಬಂದರೆ ತಾನೇ ಮನುಷ್ಯರು ದೇವರ ನಾಮ ಜಪಿಸುವುದು? ಸರಿ ನಮ್ಮ ಕಥಾನಾಯಕನಿಗು ಒಂದಿಷ್ಟು ಕಷ್ಟ ಕೊಡಲೇ ಬೇಕೆಂದು ದೇವರು ತೀರ್ಮಾನಿಸಿ ಬಿಟ್ಟ.


ಅದು ಯಾವ ಸೀಮೆ ಶಾಪವೋ ಏನೋ ನಮ್ಮ ನಾಯಕ ನಿಧಾನವಾಗಿ ಮಂಕಾಗುತ್ತಾ ಹೋದ. ಸುಮ್ಮ ಸುಮ್ಮನೆ ಕಿರಿಚುವುದು, ತನ್ನಷ್ಟಕ್ಕೆ ತಾನೆ ಮಾತಾಡೋದು, ಗೊಣಗೋದು, ಎಲ್ಲಾ ಶುರು ಮಾಡಿದ. ಆಫೀಸ್ ನಲ್ಲೂ ಅವನ ವಿಚಿತ್ರ ವರ್ತನೆ ಶುರು ಆಯಿತು. ಸ್ವಲ್ಪ ದಿನ ನೋಡಿದ ಮ್ಯಾನೇಜರ್ ಇವನನ್ನು ಒತ್ತಾಯ ಪೂರ್ವಕವಾಗಿ ಸಂಬಳ ಇಲ್ಲದೆ ರಜೆ ಮೇಲೆ ಕಳುಹಿಸಿದರು. ಮನೆಯಲ್ಲಿ ಅಪ್ಪ ಅಮ್ಮ ತಾವು ಕಂಡ ದೇವರಿಗೆಲ್ಲ ಹರಕೆ ಹೊತ್ತರು, ಆದರೆ ದೇವರು ಸಹಾಯ ಮಾಡಲಿಲ್ಲ. ಲಂಚ ಕೊಟ್ಟ ಕೂಡಲೇ ಕೆಲಸ ಮಾಡೋಕೆ ದೇವರೇನು ಸರ್ಕಾರಿ ನೌಕರನೇ?ಹಲವು ದಿನಗಳು ಕಳೆದರು ಏನೂ ಪ್ರಯೋಜನ ಆಗಲಿಲ್ಲ.


ಹಲವಾರು ಪುಣ್ಯ ಕ್ಷೇತ್ರಗಳ ಪ್ರವಾಸ ಮಾಡಿದ್ದಾಯಿತು, ಕೇರಳದ ಮಾಂತ್ರಿಕರಿಂದ ಹೋಮ ಹವನ ಮಾಡಿಸಿದ್ದಾಯಿತು, ಪ್ರಸಿದ್ದ ಮಾನಸಿಕ ರೋಗ ತಜ್ಞರ ಬಳಿ ಹೋದದ್ದಾಯಿತು .. ಉಹ್ಹ್ಞೂ ಏನು ಉಪಯೋಗ ಆಗಲಿಲ್ಲ, ಕೊನೆಗೆ ಹುಚ್ಚ ಎಂಬ ಹಣೆ ಪಟ್ಟಿ ಕಾಯಂ ಆಗಿ ಬಿಟ್ಟಿತು.


ಕೊನೆಗೊಮ್ಮೆ ನನ್ನ ತರದ ಸಹೃದಯ ಮಿತ್ರರ ಅಣತಿಯಂತೆ ನಾಯಕನನ್ನು ಹೆಸರಾಂತ ಸಿನಿಮಾ ನಿರ್ದೇಶಕ ಯೋಗರಾಜ್ ಭಟ್ಟ ರ ಬಳಿ ಕರೆದೊಯ್ಯಲಾಯಿತು. (ಮನಸಾರೆ ಎಫೆಕ್ಟ್) ತಮ್ಮ ಕುರುಚಲು ಗಡ್ಡವನ್ನು ಒಮ್ಮೆ ಕೆರೆದು ಕೊಂಡ ಭಟ್ಟರು ಅಡುಗೆ ಮನೆ ಒಳಗೆ ಹೋದರು. ೨ ನಿಮಿಷದ ನಂತರ ಒಂದು ಭಾರಿ ಚಾಕುವಿನೊಡನೆ ಬಂದರು. ಏನಪ್ಪಾ ಭಟ್ಟರು ಕೂಡ ಮಚ್ಚು ಲಾಂಗು ಹಿಡಿಯಲು ಶುರು ಮಾಡಿದರ ಅಂತ ಯೋಚಿಸುವುದರೊಳಗೆ ಕಥಾನಾಯಕನ ಕಿವಿಗೆ ಅಂಟಿದ್ದ ಎರಡು ವೈರ್ ಗಳನ್ನು ಕಟ್ಟು ಮಾಡಿ ಬಿಟ್ಟರು!! ಏನಾಶ್ಚರ್ಯ.. ನಾಯಕ ಮೊದಲಿನ ಹಾಗೆ ನಾರ್ಮಲ್ ಆಗಿ ಬಿಟ್ಟ.


ಇತ್ತ ದೇವರು ತನ್ನ ಪ್ಲಾನ್ ಪಲಿಸಿದ್ದಕ್ಕೆ, ಒಂದಿಷ್ಟು ಹರಕೆಗಳು ಸಂದಿಕ್ಕೆ ಕುಶಿ ಗೊಂಡು ಬೇರೆ ಯಾವ ಕಷ್ಟವು ಕೊಡಲಿಲ್ಲ. ನಾಯಕನ ಕುಟುಂಬದವರು ನೂರ್ಕಾಲ ಬಾಳಿ ಬದುಕಿದರು.ಅವರ ಕಥೆ ಏನೋ ಸರಿ ಹೋಯಿತು, ಆದರೆ ಹೀಗಾಗಲು ಕಾರಣ ತಿಳಿಯದ ನಾರದರು ಗೊಂದಲ ಗೊಂಡರು, ಕಿವಿ ಗು, ವೈರ್ ಗು, ಅವನ ಹುಚ್ಚು ತನಕ್ಕು ಸಂಬಂದ ಕಲ್ಪಿಸಲಾಗದೆ ಭಗವಂತನ ಬಳಿ ಅವನ ಲೀಲೆಗಳನ್ನ ಕೇಳಿದರು.


ನಗುತ್ತ ಉತ್ತರಿಸಿದ ದೇವರು ಮಾನವನಿಗೆ ನರಕ ದರ್ಶನ ಮಾಡಿಸಲು ಹೆಂಡತಿ, ಗರ್ಲ್ ಫ್ರೆಂಡ್ ಮತ್ತೆ ಮ್ಯಾನೇಜರ್ ಎಂಬ ಜಂತು ಗಳನ್ನು ಶೃಷ್ಟಿಸಿದೆ, ಆದರೆ ಕೆಲವೊಮ್ಮೆ ಕೆಲವೊಂದು ಅದೃಷ್ಟವಂಥರಿಗೆ ಎಲ್ಲ ಸರಿ ಇರುತ್ತಿತ್ತು. ಅಂತಹವರಿಗೆ ಕಷ್ಟ ಕೊಡುವ ಸಲುವಾಗಿ ಎಫ್ ಎಂ ಗಳಲ್ಲಿ ವಿಚಿತ್ರ RJ ಗಳನ್ನು ಕಳುಹಿಸಿದೆ. "RJ ಗಳು ಬಾಯಿ ಬಿಟ್ಟಾಗ" ಜನ ತಲೆ ಚಚ್ಚಿ ಕೊಳ್ಳಲು ಶುರು ಮಾಡಿದರು. ಕಾಲಸಿಪಾಲ್ಯದ ರೌಡಿಗಳ ಹಾಗೆ ರೇಡಿಯೋ ದವರು ಕಿರಿಚಲು ಶುರು ಮಾಡಿದರು. ಅವರ ಹಾಗೆ ಅಡ್ಡ ಹೆಸರು ಇಟ್ಟು ಕೊಂಡರು. ಕೋಳಿ ಮಂಜನ ಹಾಗೆ ಇಲ್ಲಿ ಬೀಟ್ ರಾಜ, ಬ್ಲೇಡ್ ದೀಪು ಮುಂತಾದವರು ಬಂದರು, ಕಂಡ ಕಂಡವರಿಗೆ ಫೋನ್ ಮಾಡಿ ಅವರು ಉಗಿಯೋ ಆಟ ಆಡಿದರು. ಸುಪ್ರೀಂ ಕೋರ್ಟ್ ಗೇ ಗಳ ಬಗ್ಗೆ ತೀರ್ಪು ಕೊಟ್ಟಿದ್ದೆ ತಡ, ಗೇ, ಲೆಸ್ಬೋ ಅಂತ ಬಡ ಕೊಳ್ಳೋಕೆ ಶುರು ಮಾಡಿದರು, ಪಾಪದ ಜನ ಬಿ ಎಂ ಟಿ ಸಿ ಬಸ್ಸು ಗಳಲ್ಲಿ ನಿಂತು ಪಕ್ಕದವರ ಬೆವರ ವಾಸನೆ ಮರೆಯಲು ಜನ ಅದನ್ನು ಕೇಳಲೇ ಬೇಕಿತ್ತು. ಜನರು ಹಿಡಿ ಶಾಪ ಹಾಕುತ್ತ ಕಷ್ಟ ಪಡುತ್ತಾ ಇದ್ದರು.


ಹೀಗೆ ಮಾಡುತ್ತಲಿರುವಾಗಿ ಜನಕ್ಕೆ ದೇವರಿಗೆ ಇನ್ನು ದೇವರ ಮೇಲೆ ನಂಬಿಕೆ ಹಾಗು ಭಕ್ತಿ ಇರುವುದೆಂದು ವಿವರಿಸಲು, ಸಂತುಷ್ಟಗೊಂಡ ನಾರದನು ಹರಿ ನಾಮ ಸ್ಮರಣೆ ಮಾಡುತ್ತಾ ಮತ್ತೆ ತನ್ನ ಸಂಚಾರವನ್ನು ಆರಂಬಿಸಿದನು.


ಕೊನೇ ಮಾತು: ನಿಮಗೆ ನನ್ನ ಮಾತು ಅತೀ ಅನ್ನಿಸಬಹುದು, ಆದರೆ "ರಾತ್ರೆ ರಹಸ್ಯ" ಅಂತ ಕಾರ್ಯಕ್ರಮದ ಹೆಸರು ಕೇಳಿದರೆ ಹೇಗಾಗಬೇಡ? ಕಾರ್ಯಕ್ರಮದ ಉದ್ದೇಶ ಒಳ್ಳೆಯದಿದ್ದರೆ ಹೆಸರು ಕೂಡ ಒಳ್ಳೆಯದಿರಬೇಕಲ್ಲ. ಅದನ್ನು ಬಿಟ್ಟು ಜನರನ್ನು ಸೆಲೆಯಲು, ಶೆಕೀಲ ಸಿನಿಮಾ ತರ ಹೆಸರಿಟ್ಟರೆ?


ಅಷ್ಟೇ ಅಲ್ಲ ಇವರು ಯಾಕೆ ಕಿರುಚುತ್ತಾರೆ, ನಗುತ್ತಾರೆ ಅಂತ ಅರ್ಥ ಆಗೋದೆ ಕಡಿಮೆ. ಸುಮ್ನೇ ಕೂಡಗೋದು, ತಲೆ ಬುಡ ಇಲ್ಲದೇ ಮಾತಾಡೊಡೇ ನಿರೂಪಣೆ ಅಂತ ಭಾವಿಸಿದ ಹಾಗಿದೆ. ಡೇಟಿಂಗ್, ಗೇ ಅನ್ನೋದೇ ಇವರಿಗೆ ದೊಡ್ಡ ವಿಷಯಗಳು ಅನ್ಸುತ್ತೆ. ಭಾಗಶ್ಯ ಇವರಾರು ಎಸ್ ಎಸ್ ಎಲ್ ಸಿ ಕೂಡ ಪಾಸಾಗಿರೋದು ಅನುಮಾನ. ಇವರಿಗೆಲ್ಲ ಲೂಯಿ ಪಾಸ್ಚರ್ ಎನ್ನುವ ಮಾಹಾನುಭಾವ ಕಂಡುಹಿಡಿದ ರೇಬಿಸ್ ಔಷದವನ್ನು ಕೊಟ್ಟರೆ ಸರಿ ಹೋಗಬಹುದೇನೋ.


ರವಿ ಹೆಗಡೆಯವರು, ಅವರ ಬ್ಲಾಗಿನಲ್ಲಿ ಬರೆದಿದ್ದರು ಅಮೇರಿಕದಲ್ಲಿ ಟಾಕಿ ರಡಿಯೋ ಇದೆ ಅಂತ, ಸದ್ಯ ಅಷ್ಟರ ಮಟ್ಟಿಗೆ ನಾವು ಅದೃಷ್ಟವಂತರು, ಅದು ಇಲ್ಲಿಗೆ ಇನ್ನೂ ಕಾಲಿಟ್ಟಿಲ್ಲ. ಸರ್ಕಾರಿ ರೇಡಿಯೋ ಬಿಟ್ಟು ಉಳಿದೆಲ್ಲವೂ ಕೂಡ ಒಂದು ರೀತಿಯ ಹುಚ್ಚಾಸ್ಪತ್ರೆ. ಇದು ಬೆಂಗಳೂರಿನ ಎಫ್ ಎಂ ಕೇಳುಗನಾದ ನನ್ನ ಅಭಿಪ್ರಾಯ, ನೀವೇನು ಅಂತೀರೋ..