Thursday, October 29, 2009

ದಿನ ಭವಿಷ್ಯವೂ, ಪ್ರಳಯವೂ

ಅದ್ಯಾವುದೋ ಕಾಲದವರು ಬರೆದಿರೋ ಅದೇನೋ ಕ್ಯಾಲೆಂಡರ್ ಪ್ರಕಾರ ಸದ್ಯದಲ್ಲೇ ಜಗತ್ತು ನಾಶ ಆಗುತ್ತೆ ಅಂತೆ. ಅದಕ್ಕೆ ಪೂರಕವಾಗಿ ವಿಶ್ವ ಪ್ರಸಿದ್ದಿ ಜ್ಯೋತಿಷಿ "ಚಂದ್ರಶೇಖರ ಸ್ವಾಮೀಜಿ" ಅವರು ಗಾಳಿಯಿಂದ ರೋಗ ಹರಡಿ ಮನುಷ್ಯನ ಮುಖ ಮಂಗನ ತರ ಆಗುತ್ತೆ ಅಂತ ಸಂಡೆ ಟೈಮ್ಸ್ ಗೆ ಹೇಳಿದ್ದಾರೆ. (ಕಳೆದ ಭಾನುವಾರದ ಟೈಮ್ಸ್ ಆಫ್ ಇಂಡಿಯಾ - ಕನ್ನಡ) ಇದರ ಜೊತೆಗೆ ನಮ್ಮ ಕೊಡಿ ಹಳ್ಳಿ ಸ್ವಾಮಿಜಿ ಭವಿಷ್ಯ ಇನ್ನೂ ಪ್ರಕಟವಾಗಬೇಕಿದೆ. ಇರಲಿ ನನಗಂತೂ ಈ ಭವಿಷ್ಯದಲ್ಲಿ ನಂಬಿಕೇನು ಇಲ್ಲ, ಆಸಕ್ತಿನು ಇಲ್ಲ ಆದ್ರೆ ನಂಬಿಕೆ ಇಲ್ಲದ ಸ್ವಲ್ಪ ಹೆದರಿಕೆ ಮಾತ್ರ ಇದೆ!!

ಕೆಲವು ವರುಷಗಳ ಹಿಂದೆ ನಾನು ಒಂದು ಚಿಕ್ಕ ಸಂಜೆ ಪತ್ರಿಕೆಯಲ್ಲಿ ಕೆಲಸ ಮಾಡುತ್ತಾ ಇದ್ದೆ. ದಿನ ಇಡಿ ಆವತ್ತಿನ ಘಟನಾವಳಿಗಳನ್ನು ನೋಡಿ, ಗುಡ್ಡೆ ಹಾಕಿಕೊಂಡು, ಅದಕ್ಕೆ ಅಕ್ಷರದ ರೂಪ ಕೊಡೋದು ಮುಖ್ಯ ಕೆಲಸ. ಈ ಕೆಲ್ಸಕ್ಕೆ ಇದ್ದವರು ೩ ಜನ. ನಾನು, ಒಬ್ಬ ಹುಡುಗಿ (ಸುನೀತಾ ಅನ್ಸುತ್ತೆ ಅವಳ ಹೆಸರು) ಮತ್ತೆ ನಮ್ಮ ಎಡಿಟರಮ್ಮ.

ರಾಜಕೀಯ, ಮತ್ತೆ ನಗರದಲ್ಲಿ ನಡೆಯುವ ಸಭೆ, ಸಮಾರ೦ಭದ ವರದಿ ಮಾಡುವುದು ನನ್ನ ಕೆಲಸ. ಅದರ ಜೊತೆಗೆ ವಾರದಲೊಮ್ಮೆ ಸಿನಿಮಾ, ರಾಜಕೀಯದ ಬಗ್ಗೆ ಹಾಸ್ಯ ಲೇಖನ, ಪದ ಬಂದ ಅಡಿಷನಲ್ ಕೆಲಸ. ಮತ್ತೆ ಹಿಂದಿನ ದಿನ ಸಂಜೆ ಮತ್ತೆ ರಾತ್ರೆಯ ಎಲ್ಲಾ ಸುದ್ದಿಗಳು ಎಲ್ಲಾ ದಿನಪತ್ರಿಕೆಗಳಲ್ಲಿ ಬಂದಿರುತ್ತದೆ. ಅದನ್ನು ಓದಿ ಶೀರ್ಷಿಕೆ ಬದಲಿಸಿ, ಸ್ವಲ್ಪ ಉಪ್ಪು ಕಾರ ಹಚ್ಚಿ ಹಿಂದೆ ಮುಂದೆ ಮಾಡಿ ಬರೆಯೋದು ಹಿಡನ್ ಜವಾಬ್ದಾರಿ.

ನಮ್ಮ ಕೆಲಸ ಚೆನ್ನಾಗೇ ನಡೀತಾ ಇತ್ತು. ಆ ಊರಲ್ಲಿ ರಾಜಕೀಯ ಚಟುವಟಿಕೆಗಳಿಗೆ ಏನೂ ಕೊರತೆ ಇರಲಿಲ್ಲ. ದಿನಾಲೂ ಕನಿಷ್ಠ ಒಂದಾದರು ಚಿಕ್ಕ ಗಲಭೆ, ಅವಾಗ ಅವಾಗ ಹೊಳೆಯಲ್ಲಿ ಗುರುತು ಸಿಗದ ಹೆಣಗಳೂ ಸಿಗುತ್ತಾ ಇದ್ದವು. ನಾವುಗಳು ಕೂಡ ತಪ್ಪದೆ ವಿಷಯ ಸಿಕ್ಕಿದ ಕುಶಿಯಲ್ಲಿ ಬರೀತಾ ಇದ್ದೆವು. ಅಕಸ್ಮಾತ್ ಬರೀಲಿಕ್ಕೆ ಏನೂ ಸಿಗಲಿಲ್ಲ ಅಂದ್ರೆ "ನಗರದಲ್ಲಿ ಹದ ಗೆಟ್ಟ ರಸ್ತೆ", "ಹಂದಿ ಕಾಟ" ಜಾಸ್ತಿ ಅಂತೆಲ್ಲ ಸಂಪಾದಕೀಯ ಬರೆದು ಹಾಕ್ತಾ ಇದ್ದೆವು.

ಇಂತಿಪ್ಪ ನಮ್ಮ ಪತ್ರಿಕೆಯಲ್ಲಿ ವಾರ ಭವಿಷ್ಯವು ಪ್ರಕಟವಾಗ್ತಾ ಇತ್ತು. ನಮ್ಮ ಎಡಿಟರ್ ಅದ್ಯಾರೋ ಜ್ಯೋತಿಷಿ ಹತ್ತಿರ ಬರೆಸ್ತಾ ಇದ್ರು.

ಹೀಗಿರುವಾಗ ಒಮ್ಮೆ ನಮ್ಮ ಎಡಿಟರ್ 2 ದಿನಗಳ ಮಟ್ಟಿಗೆ ಕಚೇರಿ ಕೆಲಸ ನಮ್ಮ ಹೆಗಲಿಗೆ ಹಾಕಿ ಬೆಂಗಳೊರಿಗೆ ಒಂದು ಮದುವೆಗೆ ಹೊರಟರು. ಗುರುವಾರ ಮತ್ತೆ ಶುಕ್ರವಾರದ ಜವಾಬ್ದಾರಿ ನಮ್ಮದಾಗಿತ್ತು. ನಾವು ಕೂಡ ಪೇಜ್ ತುಂಬಿಸೋ ಕೆಲಸ ನಿಷ್ಠೆಯಿಂದ ಮಾಡುವ ಅಲೂಚನೆಯಲ್ಲಿ ಇದ್ದೆವು. ಮೊದಲ ದಿನ ಒಬ್ಬ ಗೃಹಿಣಿ ಆತ್ಮ ಹತ್ಯೆ ಮಾಡಿಕೊಂಡಿದ್ದಳು. ಅದು ವರದಕ್ಷಿಣೆ ಕೊಲೆ ಎಂದು ಅವಳ ತಂದೆ ತಾಯಿ ಆಸ್ಪತ್ರೆಯಲ್ಲಿ ಗಲಾಟೆ ಮಾಡುತ್ತಾ ಇದ್ದರು, ಗಂಡನ ಮನೆಯವರು ಅವಳು ಬಂಜೆ, ಆದ್ದರಿಂದ ಬೇಸತ್ತು ಸತ್ತಿದ್ದಾಳೆ ಎಂದು ದೂರುತ್ತಿದ್ದರು. (ಯಾರಾದರು ಸತ್ತರೆ ಕುಶಿ ಪಡುತ್ತಾ ಇದ್ದಿದ್ದು ನನ್ನಂತ ಸೊ ಕಾಲ್ಡ್ ಪತ್ರ ಕರ್ತರು ಮಾತ್ರ ಅನ್ಸುತ್ತೆ) ನಾವು ಇದನ್ನು ಸುಂದರವಾಗಿ ರಕ್ತ ಸಿಕ್ತವಾಗಿ ಬರೆದುದು ಆಯಿತು.

ಆದರೆ ಮಾರನೆ ದಿನ ಶುಕ್ರವಾರ, ಡಿ ಟಿ ಪಿ ಶ್ರೀನಿವಾಸ್ ಬಂದು "ಸಾರ್ ಇನ್ನು ಭವಿಷ್ಯ ಬಂದಿಲ್ಲ, ಅ ಭಟ್ಟರ ಮನೆ ಫೋನ್ ನ ಯಾರು ಅಟೆಂಡ್ ಮಾಡ್ತಾ ಇಲ್ಲ" ಅಂದಾಗ ಯಾಕೋ ನನಗೆ ಸಮಸ್ಯೆಯ ಅರಿವು ಆಗಿದ್ದು. ವಾರ ಭವಿಷ್ಯ ಇಲ್ಲದೆ ಪತ್ರಿಕೆ ಹೊರ ತರುವುದು ಹೇಗೆ? ಏನು ಮಾಡುವುದು ಅಂತ ತಲೆಕೆಡಿಸಿಕೊಂಡು ಕುಳಿತೆ. ಬೆಳ ಬೆಳಗ್ಗೆ ಯಾವ ಜ್ಯೋತಿಷಿಗಳನ್ನ ಹುಡುಕುತ್ತಾ ಕೂರುವುದು? ಅದು ಅರ್ಜೆಂಟ್ ಅಂದ್ರೆ ಯಾರು ಬರೆದು ಕೊಟ್ಟಾರು ಎಂಬ ಚಿಂತೆ. ಅಷ್ಟರಲ್ಲಿ ಶ್ರೀನಿವಾಸ್ ಅದೆಲ್ಲಿಂದನೋ ಒಂದು "ಒಂಟಿ ಕೊಪ್ಪಲ್" ಪಂಚಾಗ ತಂದು ಕೊಟ್ಟು "ಸಾರ್ ನೀವೇ ಬರದು ಬಿಡಿ ಅಂದ್ರು" ಹೆಸರಲ್ಲಿ ಶಾಸ್ತ್ರಿ ಅಂತ ಇರೋದ್ರಿಂದ ಆತ ಏನೇನೋ ಕಲ್ಪಿಸಿ ಕೊಂಡಿದ್ದ ಅನ್ಸುತ್ತೆ. ಏನು ಅರ್ಜೆಂಟ್ ಇಲ್ಲ, ಅರ್ದ ಘಂಟೆ ಟೈಮ್ ತಗೊಂಡು ಬರೀರಿ, ನಾನು ಕಾಲಂ ಖಾಲಿ ಬಿಟ್ಟಿರ್ತೀನಿ ಅಂತ ಹೇಳಿ ನಾಪತ್ತೆ ಆದ!!

ಈ ವಿಷಯನ ಸುನೀತಾಗು ಹೇಳಿದರೂ ಏನು ಪ್ರಯೋಜನ ಆಗಲಿಲ್ಲ. ನೀವೇ ಬರೀರಿ ಅಂದ್ಲು, ಇದೊಳ್ಳೆ ಕಥೆ ಆಯಿತಲ್ಲ, ನನಗೆ ಎಷ್ಟು ರಾಶಿ, ನಕ್ಷತ್ರ ಇದೆ ಅಂತಾನೆ ಗೊತ್ತಿಲ್ಲ. ಪಂಚಾಂಗ ನೋಡಿ ಅಂತೂ - ಇಂತೂ ಬರೆದು ಮುಗಿಸಿದೆ, ಕನ್ಯಾ ರಾಶಿಯವರಿಗೆ ತೀವ್ರ ಆರೋಗ್ಯ ಹಾನಿ, ಮಕರ ದವರಿಗೆ ಪ್ರವಾಸ ಅಂತ ಏನೇನೋ ಬರೆದಿದ್ದೆ. ಅಂದಿನ ಎಲ್ಲಾ ಕೆಲಸ ಮುಗಿಸಿ ಮನೆಗೆ ಬಂದಾಗ ರಾತ್ರೆ ಆಗ್ತಾ ಇತ್ತು.

ನಾನು ಆವಾಗ ಚಿಕ್ಕಪ್ಪನ ಮನೇಲಿ ಇದ್ದೆ. ಮನೆಗೆ ಹೋದ ಸ್ವಲ್ಪ ಹೊತ್ತಿನಲ್ಲಿ ಚಿಕ್ಕಪ್ಪನು ಬಂದ್ರು. ಅಂದು ಅವರಿಗೆ ತೀವ್ರವಾದ ಕ್ಯಾನ್ಸರ್ ಇರುವುದು ಪತ್ತೆ ಆಗಿತ್ತು, ಹಾಗು ಅವರು ಕನ್ಯಾ ರಾಶಿ ಯವರು ಆಗಿದ್ದರು. ಇ ಘಟನೆ ನಂತರ ನಾನು ಮತ್ತೆ ಭವಿಷ್ಯ ಬರೆಯುವ ಸಾಹಸ ಮಾಡಲಿಲ್ಲ. ಸ್ವಲ್ಪ ದಿನಗಳ ನಂತರ ಅ ಕೆಲ್ಸನೂ ಬಿಟ್ಟೆ.

ಇದಾಗಿ ಹಲವು ವರುಷಗಳೇ ಕಳೆದಿದ್ದರೂ ನನಗೆ ನೆನಪು ಮಾಸಿಲ್ಲ.

ನಾನು ಜ್ಯೋತಿಷ್ಯ ಸುಳ್ಳು, ಅದನ್ನು ನ೦ಬಬೇಡಿ ಅ೦ತ ಪ್ರಚಾರ ಮಾಡಲು ಹೊರಟಿಲ್ಲ. ಜ್ಯೋತಿಷ್ಯ ವಿಜ್ಞಾನವೂ, ಆಗಿರಬಹುದು. ಅದು ವಿಜ್ಞಾನವೇ ಆಗಿದ್ದರೂ ಮೂಢನ೦ಬಿಕೆಯನ್ನು ಅದರೊ೦ದಿಗೆ ತಳಕು ಹಾಕುವ ಮ೦ದಿಯಿ೦ದ ಅದರ ವೈಜ್ಞಾನಿಕ ತಳಹದಿ ಹದಗೆಟ್ಟಿದೆ ಎನ್ನಬಹುದು . ಹಾಗಂತ ಹಾದಿ ಬೀದಿಯಲ್ಲಿ ಕುಳಿತು ಮುಂದಾಗಲಿರುವ ವಿದ್ಯಮಾನಗಳ ಬಗ್ಗೆ ತಮಗೆ ತೋಚಿದ೦ತೆ ಬೊಗಳುವ ಮತ್ತು ಅದರಿ೦ದ ಜನರನ್ನು ತಪ್ಪುದಾರಿಗೆಳಸುವ ಕ್ರಮ ನೋಡಿದಾಗ ಬೇಸರ ವೆನಿಸುತ್ತದೆ ಮತ್ತು ಜ್ಯೋತಿಷಿಗಳನ್ನು ಕ೦ಡಾಗ ಸಿಟ್ಟು ಬರುತ್ತದೆ.

Superstition is to religion what astrology is to astronomy; the mad daughter of a wise mother. (ಯಾವುದೇ ಒ೦ದು ಧರ್ಮಕ್ಕೆ ಅ೦ಟಿಕೊ೦ಡಿರುವ ಕುರುಡುನ೦ಬಿಕೆಗಳ೦ತೆ, ಖಗೋಳವಿಜ್ನಾನಕ್ಕೆ ಅ೦ಟಿಕೊ೦ಡಿರುವ ಈ ಜ್ಯೋತಿಷ್ಯವೆ೦ಬುದು ಕೂಡ ಹಾಗೆ - ಜಾಣ ತಾಯಿಯ ಹುಚ್ಚು ಮಗಳು ) - ಹೀಗ೦ತ ಒಬ್ಬ ತತ್ವಜ್ಞಾನಿ ಹೇಳಿದ್ದಾರೆ. ಇದು ಸರಿಯೋ, ತಪ್ಪೋ ವಾದಿಸುವ ಇಚ್ಚೆ ನನಗಿಲ್ಲ. ಇಲ್ಲಿ ನನ್ನ ಮುಂದಿರುವ ಪ್ರಶ್ನೆ ಜ್ಯೋತಿಷ್ಯ ಶಾಸ್ತ್ರವೆ೦ಬ ಅಸ್ತ್ರವನ್ನು ಇಟ್ಟುಕೊ೦ಡು ತಮ್ಮ ಮನಸ್ಸಿಗೆ ತೋಚಿದ೦ತೆ ಇಲ್ಲಸಲ್ಲದ ಹೇಳಿಕೆಗಳನ್ನು ಕೊಟ್ಟು ಜನರನ್ನು ತಪ್ಪುದಾರಿಗೆಳೆಯುವ ಜನರನ್ನು ಕ೦ಡಾಗ ಮೈಯೆಲ್ಲಾ ಉರಿಯುತ್ತದೆ. ಇ೦ಥವರಿ೦ದ ಜ್ಯೋತಿಷ್ಯಕ್ಕೆ ಇದ್ದಿರಬಹುದಾದ ಅಲ್ಪ ಮೌಲ್ಯ ಕುಸಿಯುತ್ತಿದೆ, ಅದನ್ನು ಬುದ್ಧಿಜೀವಿಗಳು ಮತ್ತು ಪ್ರಗತಿಪರ ಚಿಂತಕರು ಹೀಗಳೆಯುವ ಪರಿಸ್ಥಿತಿ ಬಂದಿದೆ.

Nature may be as selfishly studied as trade. Astronomy to the selfish becomes astrology; and anatomy and physiology become phrenology and palmistry - ಹೀಗ೦ತ ರಾಲ್ಪ್ ಎಮರ್ಸನ್ ಹೇಳಿದ ಮಾತುಗಳು ಇ೦ದು ಸಕಾಲಿಕವೆನಿಸುತ್ತಿವೆ.

ಮೊನ್ನೆ ಸಂಡೆ ಟೈಮ್ಸ್ - ಕನ್ನಡ ಓದುತ್ತಾ ಇದ್ದಾಗ ಇದೆಲ್ಲ ನೆನಪಿಗೆ ಬಂತು, ಹಾಗು ನಿಮಗೆ ಹೇಳಬೇಕೆನಿಸಿತು.


Friday, October 16, 2009

ಒಬಾಮ, ಶಾಂತಿ ಮತ್ತು ಮಲ್ಯ

ಅಂತು ಇಂತೂ ನಮ್ಮ ದೊಡ್ದಣ್ಣಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಕ್ಕಿದೆ, ವಿಶ್ವದ ಎಲ್ಲ ಉಗ್ರರನ್ನು ಮಟ್ಟ ಹಾಕಲು ಗುತ್ತಿಗೆ ಪಡೆದಿರುವ ಒಬಾಮಾಗೆ ಇ ಪ್ರಶಸ್ತಿಯು ಅತ್ಯಂತ ಸೂಕ್ತ ಎಂದು ಹಲವಾರು ಜನ ಅಭಿಪ್ರಾಯಿಸಿದ್ದಾರೆ.

ಇಂದು ಇ ಪ್ರಪಂಚ ಇಷ್ಟೆಲ್ಲಾ ಶಾಂತಿ, ನೆಮ್ಮದಿ ಮತ್ತು ಕುಶಿ ಇಂದ ಇರಲು ಅಮೆರಿಕ ಮತ್ತು ಅಮೇರಿಕಾವೇ ಕಾರಣವಾಗಿದೆ ಎಂದರೂ ತಪ್ಪಾಗಾಲಾರದು. ಅದರೂ ಅವರಿಗಿಂತ ಹೆಚ್ಚು ಶಾಂತಿ ಪ್ರಿಯ ಜನನಾಯಕರು ನಮ್ಮ ಸುತ್ತಮುತ್ತಲ ಇದ್ದರೂ ನಾವು ಅವರನ್ನು ಗುರುತಿಸದೆ ಇರುವುದು ಅತ್ಯಂತ ದೌರ್ಭಾಗ್ಯ. ಅ ಪ್ರಶಸ್ತಿಗೆ ಒಬಾಮಾನಷ್ಟೇ ಸೂಕ್ತವಾದ ವ್ಯಕ್ತಿಗಳ ಪಟ್ಟಿ ಇ ಕೆಳಕಂಡಂತೆ ತಯಾರಿಸಿರುವೆ.

ಇವರು ಕೇವಲ ೧೦ ತಿಂಗಳು ಪ್ರಧಾನಿ ಆಗಿದ್ದರು, ಜನಸೇವೆಗೆ ತಮ್ಮ ಇಡೀ ಕುಟುಂಬವನ್ನೇ ಮುಡುಪು ಇಟ್ಟಿರುವರು. ಕೋಮುವಾದಿಗಳಿಗೆ ಅಧಿಕಾರ ಕೊಟ್ಟು ಜನ ಗಲಭೆಗಳಲ್ಲಿ ತೊಡಗಿ ಸಾಯುವುದನ್ನು ತಪ್ಪಿಸಲು ಶತ್ರುವಿನೊಡನೆ ಮೈತ್ರಿ ಮಾಡಿಕೊಂಡರು, ನಂತರ ಮುಖ್ಯ ಮಂತ್ರಿ ಎಂಬ ಕೆಟ್ಟ ಖಾತೆಗೆ ಮಗನನ್ನು ಕೂಡಿಸಿ ಜನಕ್ಕೆ ಹರುಷವನ್ನು ಉಂಟುಮಾಡಿದರು. ರಾಜ್ಯದ ೫ ಕೋಟಿ ಜನರ ಸುಖ, ಶಾಂತಿಗಾಗಿ ಹಲವಾರು ಜನರಿಗೆ ರಾಜಕೀಯ ಸನ್ಯಾಸ ದೀಕ್ಷೆ ನೀಡಿ, ಎಲ್ಲ ಕಷ್ಟಗಳನ್ನು ತಮ್ಮ ಹೆಗಲ ಮೇಲೆ ಹೊತ್ತು ನಡೆಯುತ್ತಿರುವರು, ಸಭೆ, ಸಮಾರಂಬ, ಸಂಸತ್ತು ಮುಂತಾದೆಡೆ ಧ್ಯಾನವಸ್ತೆಯಲ್ಲಿ ದೇಶದ ಬಗ್ಗೆ ಚಿಂತಿಸುವ ಇವರು ಯಾವ ಶಾಂತಿ ಧೂತನಿಗು ಕಡಿಮೆ ಇಲ್ಲವೆಂಬುದು ನಮ್ಮ ಅನಿಸಿಕೆ.

ಮಹಾನುಭಾವರು ಜನಹಿತಕ್ಕಾಗಿ, ಸ್ವ ಹಿತವನ್ನು ಬಳಿ ಕೊಟ್ಟಿರುವುದನ್ನು ನಾವು ಇತಿಹಾಸದಲ್ಲಿ ಕಾಣಬಹುದು. ಆದರೆ ವರ್ತಮಾನದಲ್ಲಿ ಅ ಕೆಲಸವನ್ನು ಮಾಡಿರುವುದು ನಮ್ಮ ಯಡ್ಡಿ ಮತ್ತು ರೆಡ್ಡಿ ಗಳು, ಜನಕ್ಕೆ ಸ್ಥಿರ ಸರ್ಕಾರವನ್ನು ನೀಡಲು ಪಕ್ಷದ ಹಿತವನ್ನು ಕಡೆಗಣಿಸಿದರು, ಗಡಿಗಳನ್ನು ಮಾರಟಕ್ಕೆ ಇಟ್ಟರು. ಆಪರೇಷನ್ ಕಮಲ ಮಾಡಿ ರುವ ಇರನ್ನು ನಾವು ಮರೆಯುವ ಹಾಗೆಯೇ ಇಲ್ಲ. ನೊಬೆಲ್ ಸಂಘಟನೆಯು ಇವರ ಸಾಧನೆಯನ್ನು ಗಮನಿಸಿ ಶಾಂತಿ ಪ್ರಶಸ್ತಿಯನ್ನು ಮುಂದಿನ ದಿನಗಳಲ್ಲಿ ನೀಡಬಹುದು ಎಂದು ನಾವು ಆಶಿಸುತ್ತೇವೆ.

"ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಓದೆಯ ಬೇಡಿ" ಎನ್ನುವ ಇವರು ಥೇಟ್ ಕಾಮಧೇನು ಇದ್ದ ಹಾಗೆ, ಇಪ್ಪತ್ತು ತಿಂಗಳು ಮುಖ್ಯಮಂತ್ರಿ ಆಗಿ ಇದ್ದರು, ದೇವೇ ಗೌಡ ಎಂಬ ಪತ್ರಕರ್ತ ( ಸರ್ಕಾರಕ್ಕೆ ಒಂದರ ಮೇಲೆ ಒಂದು ಪತ್ರ ಬರೀತಾ ಇದ್ರಲ್ಲ ಅದಕ್ಕೆ ಹಾಗೆ ಹೇಳಿದ್ದು) ಕಾಟವನ್ನು ತಡೆದುಕೊಂಡು ಸೂಜಿಯ ಮೊನೆಯ ಮೇಲೆ ಅಷ್ಟು ಕಾಲ ಕೂತಿದ್ದು ಮಹಾನ್ ಸಾಧನೆಯೇ ಸರಿ!! ನಮ್ಮ ದರ್ಮ ಸಿಂಗರಿಗೊಂದು ಜೈ ಇರಲಿ.

ಮನಮೋಹನ ಸಿಂಗರು ನಮ್ಮ ಧರ್ಮು ದೊಡ್ಡಣ್ಣ ಇದ್ದಂಗೆ, ಮೇಡಂ ಮುಂದೆ ಕೈ ಕಟ್ಟಿ, ಚಿಕ್ಕ ಸಾಹೇಬರಿಗೆ ಸೀಟು ಕಾದಿರಿಸಿ, ಚೀನಾಕ್ಕೆ ನಮಸ್ಕರಿಸಿ, ಪಾಕಿಸ್ತಾನದ ಉಗ್ರರ ಬಗ್ಗೆ ಅನುಕಂಪ ಹೊಂದಿರುವ ಇವರು ಅನೇಕ ಯುದ್ದ ಗಳನ್ನು ಕೆಲವೇ ಕೆಲವು ಜನರ ಬಲಿಯೊಂದಿಗೆ ನಿಲ್ಲಿಸಿದ್ದಾರೆ. ಮುಂಬೈ ಧಾಳಿಯ ನಂತರ ಪಾಕಿಗೆ ದೊಡ್ದಗೊಂದು ಸಂದೇಶ ತಲುಪಿಸಲು ವಿಫಲವಾಗಿರುವ ಇವರು ನಮ್ಮ ಕಾಲದ ಶಾಂತಿ ಪ್ರಿಯ ರಾಜಕಾರಣಿಯೇ ಸರಿ!!

ಇ ಕಲಿಯುಗದಲ್ಲಿ ಜನರ ಸಮಾಜಿಕ ಸ್ಥಿತಿಗತಿಗಳನ್ನು ಕಾಯಲು, ತೆತ್ರಾಯುಗದ ರಾಮನ ಪರಮ ಭಕ್ತರಾದ ಮತಾಲಿಕರು ಕೆಲವೇ ಕೆಲವು ಹೆಂಗಳೆಯರಿಗೆ ಒದೆ ಕೊಡುವ ಮೂಲಕ ಶಾಂತಿಯುತ ಚಳುವಳಿಯನ್ನು ಆರಂಬಿಸಿದ್ದಾರೆ. ಅವರೂ ಕೂಡ ಅ ಪ್ರಶಸ್ತಿಗೆ ಅರ್ಹರು. ಇಷ್ಟೇ ಅಲ್ಲದೆ ಮಚ್ಚು ಕತ್ತಿ ಉಪಯೋಗಿಸುವುದರಿಂದ ರಕ್ತ ಬರುತ್ತದೆ, ಎಂಬಂತಾ ಸಂದೇಶ ಹೊತ್ತ ಸಿನಿಮಾಗಳನ್ನು ಇಡೀ ಚಿತ್ರರಂಗ ಮಾಡುತ್ತಾ ಇದೆ. ಇವರಿಗೆ ನೊಬೆಲ್ ಶಾಂತಿ ಪುರಸ್ಕಾರ ಕೊಡಲು ಸಾಧ್ಯವಾಗದೆ ಇದ್ದಲ್ಲಿ ಶಾಂತಿ ಆಸ್ಕರ್ ಕೊಡಬೇಕಿದೆ.

ಇರಲಿ ನನ್ನೆಲ್ಲ ತಲೆಹರಟೆ ಬರಹ (ಬರಹ!! ???) ಗಳನ್ನು ಅತ್ಯಂತ ಕಷ್ಟಪಟ್ಟು ಓದುವ ನಿಮಗಳಿಗೆ, ನಿಮ್ಮ ಶಾಂತಿ, ಸಹನೆಗೆ ಒಂದು ಸಲಾಮು. ನಾನೇನಾದ್ರು ಅ ಆಯ್ಕೆ ಸಮಿತಿಯಲ್ಲಿ ಇದ್ದಲ್ಲಿ ನಿಮ್ಮಗಳ ಹೆಸರನ್ನು ರೆಕಮಂಡ್ ಮಾಡುತ್ತಿದ್ದೆ.

ಇ ಸಂಚಿಕೆಯ ಎಲ್ಲಾ ಪ್ರಾಯೋಜಕರು ಮಲ್ಯ ಬ್ರಾಂಡ್ಸ್!! ಹೊಟ್ಟೆಯಲ್ಲಿ ನಮ್ಮ ಪಾನೀಯ ಇದ್ದರೆ, ಲೋಕಕ್ಕೆ ನೀವೇ ಕಿಂಗು, ಗಾಂದಿ ತಾತನ ಕನ್ನಡಕ ತಂದಿರುವ ನಾವುಗಳು ನಿಮಗಳಿಗೆ ನೆಮ್ಮದಿಯ ಜೀವನ ಕೋರುವೆ. - ಶ್ರೀ ಮಲ್ಯ.