Wednesday, December 2, 2009

ಹೀಗೊಂದು ಸಾಹಿತ್ಯ ಪ್ರಸವ!!ಈ ತರದ ಹುಚ್ಚು ಯಾವಾಗ ನನಗೆ ಹಿಡಿತು ಗೊತ್ತಿಲ್ಲ, ತುಂಬಾ ದಿನಗಳಿಂದ ಕೂತಲ್ಲಿ ನಿಂತಲ್ಲಿ, ಮನೆಯಲ್ಲಿ, ಆಫೀಸ್ ನಲ್ಲಿ ನಿದ್ದೆ ಮಾಡುವಾಗ ಒಂದೇ ಯೋಚನೆ, ಒಂದೇ ಆಸೆ, "ನಾನು ಒಂದು ಕಾದಂಬರಿ ಬರೀಬೇಕು" ಅಂತ. ಕಾದಂಬರಿ ಅಂದ್ರೆ ಉಡುಪಿ ಉಪಹಾರ ನಲ್ಲಿ ಮಸಾಲೆ ದೋಸೆ ತಿಂದಷ್ಟು ಸುಲಭಾನ? ಬರಹಗಾರರಿಗೆ ಇನ್ನು ಬರೆಯದೇ ಇರಲು ಸಾದ್ಯವೇ ಇಲ್ಲ ಅಂತ ಅನ್ನಿಸಿದಾಗ ಅವರು ಬರೀತಾರೆ ಅಂತೆ, ಅವರ ತಲೇಲಿ ಕಥೆ ಮೊಟ್ಟೆ ತರ ಕೂತು, ಕಾವು ಪಡೆದು ಕೊನೆಗೆ ಪ್ರಸವ ವೇದನೆ ಅನುಭವಿಸಿ ಬರೀತಾರೆ ಅಂತ ಎಲ್ಲೋ ಕೇಳಿದ್ದ ನೆನಪು. ನಂಗು ಹೆಚ್ಚು ಕಡಿಮೆ ಇದೆ ತರದ ಸ್ಥಿತಿ!! ಆದ್ರೆ ಏನು ಬರೀಬೇಕು ಅಂತ ಮಾತ್ರ ಹೊಳಿತ ಇಲ್ಲ.


ಹಿಂದೆ ಎಲ್ಲೋ ಕೇಳಿದ್ದ ನೆನಪು, ಕುಮಾರವ್ಯಾಸ ಐ ಮೀನ್ ಗದುಗಿನ ನಾರಣಪ್ಪ ಬೆಳಗಿನ ಮುಂಜಾವು ಸ್ನಾನ ಮಾಡಿ, ಮಡಿ ಉಟ್ಟು ಗುಡಿಯ ನಿರ್ದಿಷ್ಟ ಜಾಗದಲ್ಲಿ ಕೂತು ಬರೀತಾ ಇದ್ದನಂತೆ . ಹಾಗೆ ಧ್ಯಾನಸ್ತನಾಗಿ ಕೂತಾಗ ಅವನಲ್ಲಿ ಕಾವ್ಯ ಮೂಡುತ್ತಿತ್ತು ಅಂತೆ.


ಸರಿ ಹೇಗೂ ಬರೆಯಲೇಬೇಕು ಅಂತ ತೀರ್ಮಾನ ಮಾಡಿ ಆಗಿರುವುದರಿಂದ ನಾನು ಕೂಡ ಕುಮಾರವ್ಯಾಸನ ಮಾದರಿಯನ್ನೇ ಅನುಸರಿಸಿ ಬಿಡುವುದು ಎಂದುಕೊಂಡೆ. ಬೆಂಗಳೂರಿನಲ್ಲಿ 3-4 ಗಂಟೆಗೆ ದೇವಸ್ತಾನಕ್ಕೆ ಹೊರಟರೆ ಬೀದಿ ನಾಯಿಗಳು ಅಟ್ಟಿಸಿಕೊಂಡು ಬರುವ ಸಾದ್ಯತೆ ಇರುವುದರಿಂದ ಮನೆಯಲ್ಲೇ ಕೂತು, ಆಥವಾ ಟೆರೇಸಿಗೆ ಹೋಗಿ ಬರೆಯುವುದು ಅಂತ ತೀರ್ಮಾನಿಸಿದೆ. ಅಂಗಡಿಯಿಂದ ಒಂದಿಷ್ಟು A4 ಪೇಪರ್, ಒಂದು ರಟ್ಟು ಮತ್ತೆ ರೆನಾಲ್ಡ್ ಪೆನ್ ತಗೊಂಡು ಬಂದೆ. ಶುಭಸ್ಯ ಶೀಘ್ರಂ ಅಂತ ಒಂದು ಶುಭ ಶನಿವಾರದ ಬೆಳಿಗ್ಗೆ ಶುರುಮಾಡುವುದು ಅಂತ ತಯಾರಾದೆ. 2 ದಿನ ರಜೆ ಇರುವುದರಿಂದ ಯಾವ ಮ್ಯಾನೇಜರ್ ಗಳ ತೊಂದರೆ ಇಲ್ಲದೇನೆ ಅಧ್ಬುತ ಕಾವ್ಯ ಕೃಷಿಯ ಕನಸು ಕಂಡೆ.


ಶುಕ್ರವಾದ ಸಂಜೆ ಆಫೀಸ್ ನಿಂದ ಬೇಗನೆ ಹೊರಬಿದ್ದು, ಮನೆಗೆ ಹೋದರೂ ಮಾರನೆ ದಿನದ ಬೆಳಿಗಿನ ಬಗ್ಗೆಯೇ ಚಿಂತೆ. ಪಕ್ಕದ ದರ್ಶಿನಿಯಲ್ಲಿ ಚೆನ್ನಾಗಿ ತಿಂದು ಬಂದರೂ ಸರಿಯಾಗಿ ನಿದ್ದೆ ಬರಲಿಲ್ಲ. 4 ಗಂಟೆಗೆ ಅಲರಾಂ ಇಟ್ಟಿದ್ದರಿಂದ ಬೇಗನೆ ಎದ್ದು ನೀರು ಕಾಯಿಸಿ, ಸ್ನಾನ ಮಾಡಿ, ಮಡಿ ಉಟ್ಟು ಪೇಪರ್ ಮುಂತಾದ ಸಾಮಗ್ರಿಗಲೊಡನೆ ಟೆರೆಸ್ ಗೆ ನಡೆದೆ. ನೀರಿನ ಟ್ಯಾಂಕ್ ಬಳಿ ಪ್ರತಿಷ್ಟಾಪನೆ ಆಗಿದ್ದೂ ಆಯಿತು. ಹುಮ್ಮಸ್ಸಿನಲ್ಲಿ ಪೆನ್ನು ಹಿಡಿದು ಕೂತೆ. 5 ನಿಮಿಷ ಆಯಿತು ಏನೂ ತೋಚಲಿಲ್ಲ, 10 ನಿಮಿಷ, ನಿಮಿಷಗಳು ಕಳೆದಂತೆ ಬೆಂಗಳೂರಲ್ಲಿ ಬೆಳಗ್ಗೆ ಮುಂಚೆ ಸ್ವಲ್ಪ ಚಳಿ ಇರುತ್ತೆ ಅನ್ನುವ ಸತ್ಯ ಗೊತ್ತಾಯಿತೆ ಹೊರತು ಬೇರೇನೂ ಆಗಲಿಲ್ಲ. ವದ್ದೆ ಬಟ್ಟೆ ಉಟ್ಟ ಪರಿಣಾಮ ಸ್ವಲ್ಪ ಜಾಸ್ತಿ ಚಳಿ ನೆ ಆಯಿತು. ಇದೊಳ್ಳೆ ಕಥೆ ಆಯಿತಲ್ಲ, ನಮ್ಮ ಏಕಾಗ್ರತೆಯನ್ನು ಕೆಡಿಸಲು ವಾಯು ದೇವ ಏನಾದರು ಮಸಲತ್ತು ಮಾಡುತ್ತಿದ್ದನೋ ಏನೋ ಅನ್ನುವ ಅನುಮಾನವೂ ಕಾಡಿತು. ಸಮ್ಮ ಕೆಲವು ಸಾಹಿತಿಗಳಿಗೆ ಬರೆಯುವಾಗ ಸಿಗರೆಟ್ ಸೇದುವರಂತೆ, ಅದು ತಲೆಯಲ್ಲಿ ಇರುವ ಕಥೆಗಳಿಗೆ ಕಾವು ಕೊಡುತ್ತದಂತೆ, ಆದರೆ ನನ್ನಂತ ಸಾಹಿತ್ಯ ಲೋಕದ "ಫ್ರೆಶರ್" ಗಳು ಏನು ಮಾಡುತ್ತಾರೋ ತಿಳಿಯದು. ಆದರೂ ಕೆಲ ಸಮಯದ ದ ನಂತರ ಈ ಚಳಿಗೆ ಕಾಫಿ ಕುಡಿಯುವ ಮನಸಾಗಿ ಓಡೋಡಿ ಕೆಳಗಿದು ಬಂದು ಬಿಸಿ ಹಾಲಿನಲ್ಲಿ ಬ್ರೂ ಸೇರಿಸಿ ಕುಡಿದಾಗ ಚಳಿ ಮಾಯಾವಗಿತ್ತು. ಅಂತು ಮೊದಲ ವೈರಿಯ ವಿರುದ್ದ ಸೆಣೆಸಿ ಜಯ ದಾಖಲಿಸಿದ ಕುಶಿ ಸಿಕ್ಕಿತು, ಸರಿ ಇನ್ನು ತಡ ಮಾಡಬಾರದು ಬರೆಯಬೇಕು ಅಂತ ಅನ್ನಿಸಿ ಪೇಪರ್ ಕೈಗೆ ತೆಗೆದು ಕೊಳ್ಳುವಷ್ಟರಲ್ಲಿ ಸೂರ್ಯ ಮೂಡುತ್ತಾ ಇದ್ದ, ಅಕ್ಕ ಪಕ್ಕದ ಮನೆಯವರು ತಮ್ಮ ತಮ್ಮ ನೇಯ್ಗೆ ಯಂತ್ರಗಳಿಂದ ಕಟ ಕಟ ಶಬ್ದ ಶುರು ಮಾಡಿದ್ದರು. (ಬೆಂಗಳೂರಿನ ಸಂಪಂಗಿ ರಾಮ ನಗರ ಉದಯೋನ್ಮುಖ ಸಾಹಿತಿಗಳಿಗೆ ತಕ್ಕು ದಾದ ಸ್ಥಳ ಅಲ್ಲವೋ ಏನೋ? ) ಇನ್ನು ಕೂತು ಪ್ರಯೋಜನ ಇಲ್ಲವೆಂದು ಕೆಳಗೆ ಬಂದೆ. ಆದರೂ ಬರೆಯುವ ಹಂಬಲ ಎಳ್ಳಷ್ಟೂ ಕಡಿಮೆ ಆಗಿರಲಿಲ್ಲ. ಸೋಲೇ ಗೆಲುವಿನ ಮೊದಲ ಮೆಟ್ಟಿಲು ಎಂಬ ಥೇಟ್ ಭಾರತೀಯ ಕ್ರೀಡಾ ಪಟು ತರ ಸಮಾಧಾನ ಮಾಡಿಕೊಂಡೆ.


ಭಾನುವಾರ ಬೆಳಿಗ್ಗೆ ಬರೆಯಲು ಶುರು ಮಾಡಲೇ ಬೇಕು ಎನ್ನುವ ಹಂಬಲ ಇದ್ದಿದ್ದರಿಂದ ಕೆಲವು ಮುಂಜಾಗೃತಾ ಕ್ರಮ ಕೈಗೊಂಡೆ, ಸ್ನಾನದ ನಂತರ ಒದ್ದೆ ಬಟ್ಟೆ ಬೇಡ, ಚಳಿ ಆಗುವುದರಿಂದ ಸ್ವೆಟರ್ ಹಾಕ್ಕೊಂಡು ಹೋಗೋದು, ಕಿವಿಗೆ ಹತ್ತಿ ಅಥವಾ ಮಂಕಿ ಕ್ಯಾಪ್, ಮದ್ಯೆ ಮದ್ಯೆ ಕುಡಿಯಲು ಫ್ಲಾಸ್ಕ್ ಪೂರ ಕಾಫಿ, ಹಾಗು 4 ಗಂಟೆ ಬದಲು 2 ಗಂಟೆ ಗೆ ಬರೆಯಲು ಶುರು ಮಾಡುವುದು ಅಂತೆಲ್ಲ ಪಟ್ಟಿ ಮಾಡಿದೆ. ಹಿಂದಿನ ದಿನ ನಿದ್ದೆ ಇಲ್ಲದ್ದಕ್ಕೋ ಏನೋ ಶನಿವಾರ ರಾತ್ರೆ ಕಣ್ಣು ಮುಚ್ಚಿದಾಕ್ಷಣ ನಿದ್ದೆ ಬಂತು. ಹಿಂದಿನ ದಿನದಂತೆ ಅಲರಾಂ ಬಾರಿಸಿದಾಗ ಎದ್ದು ನೀರು ಕಾಯಿಸಿ ಸ್ನಾನ ಮಾಡಿ, ಯುದ್ದಕ್ಕೆ ಸಿದ್ದನಾದ ಸೈನಿಕನ ಹಾಗೆ ಸಿದ್ದ ನಾದೆ, ಜೆನ್ಸ್ ಪ್ಯಾಂಟು, ಸ್ವೆಟರ್, ಮಂಕಿ ಕ್ಯಾಪ್, ಕಾಲಿಗೆ ಸಾಕ್ಸ್ ಎಲ್ಲ ಧರಿಸಿ, ಟೆರೆಸ್ ಗೆ ನುಗ್ಗಿದೆ. ಬೀಸುವ ತಂಗಾಳಿ, ಬೆಚ್ಚನೆ ಸ್ವೆಟರ್, ಹಭೆ ಯಾಡುವ ಕಾಫಿ, ಅಹಹ್ ಸ್ವರ್ಗ ಸುಖ ಎನ್ನಿಸಿತು. ಹಾಗೆಯೇ ಅಲ್ಲೇ ಇದ್ದ ನೀರಿನ ಟ್ಯಾಂಕ್ ಗೆ ಒರಗಿ ಕೊಂಡು, ಧ್ಯಾನಸ್ತ ಸ್ಥಿತಿಯಲ್ಲಿ ಯೋಚಿಸ ತೊಡಗಿದೆ, ಕಥೆ ಹೇಗಿರಬೇಕು, ಸಂಸಾರಿಕ ಕಥೆನೋ, ಜನಾರ್ಧನ ಮಹರ್ಷಿ ಸಿನೆಮಾ ಕಥೆ ಬರೆದ ಹಾಗೆ ಅವರಿವರದ್ದನ್ನು ಕದ್ದು ಒಂದು ರಚನೆ ಮಾಡಬೇಕೋ, ಅಥವಾ ಈಗಿನ ಕತೆಗಾರರ ತರ ತಲೆ ಬುಡ ಅರ್ಥ ಆಗದ ಹಾಗೆ ಬರೆಯಲೋ ಯೋಚಿಸ ತೊಡಗಿದೆ. ಹಾಗೆ ಎಷ್ಟು ಹೊತ್ತು ಯೋಚಿಸಿದೆನೋ ತಿಳಿಯದು, ಕಣ್ಣು ಬಿಟ್ಟಾಗ ಸೂರ್ಯ ಕುಕ್ಕುತ್ತಾ ಇದ್ದ, ಅಕ್ಕ ಪಕ್ಕದ ಮಕ್ಕಳು ಅಲ್ಲಿ ಕುಣಿತಾ ಇದ್ವು ಪರಿಸ್ಥಿತಿಯ ಅರ್ಥ ಮಾಡಿಕೊಳ್ಳಲು ಹಲವು ನಿಮಿಷಗಳೇ ಬೇಕಾದವು, ನಂತರ ನಿದ್ರಾ ದೇವಿಗೆ ಒಂದೆರಡು ದಿಕ್ಕಾರ ಕೂಗಿ ರೂಮಿಗೆ ಬಂದು, ನನ್ನ ಕಾದಂಬರಿಯ ಕನಸನ್ನ ಅನಿರ್ದಿಷ್ಟಾವಧಿ ಕಾಲಕ್ಕೆ ಮುಂದೂಡಿ, ಪಕ್ಕದ ಉಡುಪಿ ಉಪಹಾರದಲ್ಲಿ ಮಸಾಲೆ ದೋಸೆ ತಿನ್ನಲು ಹೊರ ನಡೆದೆ.

ವಿ ಸೂ: ಶೀರ್ಷಿಕೆಯನ್ನ ಚಂದ್ರು ಇಂದ ಕಡ ತಂದದ್ದು.