Tuesday, August 13, 2013

ವರುಣನ ಸಾಹಸಗಳು! - ಪತ್ತೇದಾರಿ ಮಾಲಿಕೆ 2ನಿಮಗೆ ನಮ್ಮ ವರುಣ ಗೊತ್ತಲ್ಲ? ಅದೇ ಲಭ್ಯವಿರುವ ಪತ್ತೆದಾರರಲ್ಲಿ ಅತ್ಯಂತ ಖ್ಯಾತನಾಮ. ಹಿಂದೊಮ್ಮೆ ಹೇಳಿದ್ನಲ್ಲ, ಕಳ್ಳಕಾಕರನ್ನು ಮಾತ್ರವಲ್ಲದೆ ದೆವ್ವವನ್ನು ಕೂಡ ಹಿಡಿದ್ದದ್ದು. ಇಂತಿರ್ಪ, ವರುಣನಿಗೆ ಕೇಸುಗಳು ವಿಪರೀತ. ಕೈ ಹಿಡದ ಯಾವ ಕೆಲಸವನ್ನು ಅರ್ದಕ್ಕೆ ಬಿಟ್ಟಿದ್ದೇ ಇಲ್ಲ. ಒಮ್ಮೆ ಒಂದು ಪ್ರಕರಣಕ್ಕೆ ಹಿಡಿದ ಸಾಕ್ಷಗಳು ಎಷ್ಟು ಖಡಕ್ ಇತ್ತು ಅಂದ್ರೆ, ಸಾಕ್ಷಾತ್ CSP (ಅದೇ ರೀ.. ಮುಕ್ತ ಮುಕ್ತ ಲಾಯರ್ರು) ಕೂಡ ವಾದಮಾಡಲು ಸಾಧ್ಯವಾಗದೆ ಸೋತು ಬಿಟ್ರು. J

ಇರಲಿ ಈಗ ವಿಷಯಕ್ಕೆ ಬರೋಣ. ಮೊನ್ನೆ ಹಿಂಗೆ ಟಿವಿ 9 ನೋಡ್ತಾ ಇರಬೇಕಾದ್ರೆ, ಎಂದಿನಂತೆ ಫೋನ್ ಬಂತು. ಅವನು ಮಾತಾಡುವಾಗ ಅಷ್ಟೇನೂ ಮಂದಹಾಸ ಇರಲಿಲ್ಲ, “ಹ್ಮ್ , ಸರಿ” ಮುಂತಾದ ಪದ ಪುಂಜ ಬಂತು. ಕೂಡ್ಲೇ ಇದು ಒಂದು ಕೇಸ್, ಆ ಕಡೆ ಇರೋದು ಗಂಡಸು ಅಂತ ಕೂಡ ಗೊತ್ತಾಯಿತು. (ಹುಡುಗೀರ ಫೋನ್ ಮಾಡಿದ್ರೆ ಮುಖ ಭಾವ ಬದಲಾಗೊಲ್ವೆ?... ನಂಗು ಪತ್ತೆದಾರಿಕೆ ಬರುತ್ತೆ) ಹೆಸರಾಂತ ಮಾಜಿ ಮಂತ್ರಿ ಮಾಡಿದ್ದು ಅಂತ ಹೇಳಿದ. ಅವರ ಅತಿ ಮುಖ್ಯ ಐ ಪ್ಯಾಡ್ ಕಳೆದು ಹೋಗಿದೆಯಂತೆ. ಅದರಲ್ಲಿ ದೇಶದ ಹಾಗು ನಾಡಿನ ಅತಿ ಮುಖ್ಯ ಮಾಹಿತಿ ಇದೆಯಂತೆ. ಅದು ವೈರಿಗಳ ಕೈಗೆ ಸೇರಿದರೆ ದೇಶದ ಭದ್ರತೆಗೆ ಅಪಾಯ ಆಗುತ್ತಂತೆ. ಕೂಡಲೇ ಹುಡುಕಿ ಕೊಡಬೇಕು ಅಂತ ವಿನಂತಿ ಮಾಡಿದ್ದಾರೆ ಅಂದ. ಅದು ಕಳೆದು ಎರಡು ದಿನಗಳೇ ಆಗಿದೆ, ವಿಷ್ಯ ಪೊಲೀಸರಿಗೆ ತಿಳಿಸುವ ಹಾಗೂ ಇಲ್ಲ, ಮಾಧ್ಯಮಗಳಿಗೆ ತಿಳಿದರೆ ವೈರಿಗಳು ಎಚ್ಚೆತ್ತು ಬಿಡುತ್ತಾರೆ ಎಂಬುದು ಮಾಜಿ ಮಂತ್ರಿಯ ಅಂಬೋಣ, ಹಾಗಾಗಿ ಕೂಡಲೇ ಹೋಗಿ ಅವರ ಮನೆ – ಆಫೀಸ್ ನೋಡಿ ಬರೋಣ ಬಾ ಎಂದ.

ಮೊದ್ಲೇ ನಮ್ಮ ದೇಶದಲ್ಲಿ ಎಲ್ಲಿ, ಯಾವಾಗ ಬೇಕಾದ್ರೂ ಬಾಂಬು ಸಿಡಿಯಬಹುದು. ನಾನು ಆ ರಾಜಕಾರಣಿ ಮನೆಗೆ ಹೋಗೋದು, ವೈರಿಗಳು ನಮ್ಮನ್ನು ಗುರುತು ಮಾಡಿಕೊಂಡು... ಡುಂ ಅಂತ ಸಿಡಿಸಿ ಬಿಡಬಹುದು. ಇಲ್ಲಿ ಜೀವಕ್ಕೆ ಬೆಲೆ ಬಹಳ ಕಡಿಮೆ. ಹಂಗಾಗಿ ಹೆದರಿಕೆ ಅಲ್ಲದಿದ್ದರೂ... ಹೊಟ್ಟೆಯಲ್ಲಿ ಯಾಕೋ ಡುಳು ಡುಳು ಶಬ್ದ ಬಂತು. ಸ್ವಲ್ಪ ವಾಸನೆಯೂ ಬಂತು. ನನ್ನ ಪರಿಸ್ಥಿತಿ ನೋಡಿ, ಬೈಕೊಂಡು ಅವನೊಬ್ಬನೇ ಹೋದ. ನಾನು ಕೂಡ ಎಂದಿನಂತೆ ಟಿವಿ 9 ನಿಂದ ಸುವರ್ಣ ನ್ಯೂಸ್ ಗೆ ಚಾನೆಲ್ ಬದಲಿಸಿದೆ. ಅದೇನೋ ಬ್ರೇಕಿಂಗ್ ನ್ಯೂಸ್ ಬರ್ತಾ ಇತ್ತು.

ಮಧ್ಯ ರಾತ್ರೆ ಹೊತ್ತಿಗೆ ವರುಣ ಬಂದ. ಒಮ್ಮೆಲೇ ಅಟ್ಟದಿಂದ ಹಳೆ ಪೇಪರ್ ತೆಗೆದು ಏನೇನೋ ಹುಡುಕಲು ಶುರು ಮಾಡಿದ. ಸ್ವಲ್ಪ ಹೊತ್ತಿಗೆ, ಇಂಟರ್ನೆಟ್ ನಲ್ಲಿ ಅದೇನೋ ಹುಡುಕಿ ನೋಟ್ಸ್ ಮಾಡಲು ಶುರು ಮಾಡಿದ. ಏನು ಬೇಕಿತ್ತು ಅಂತ ಕೇಳಬೇಕು ಅಂತ ಅನ್ನಿಸ್ತು, ಆದ್ರೆ ಎಲ್ಲಿ ಕೆಲಸ ಹೇಳ್ತಾನೋ ಅಂತ ಮತ್ತೊಂದು ರಗ್ಗು ಎಳಕೊಂಡು ಮಲಗಿದೆ. ಬೆಳಿಗ್ಗೆ ಒಂಬತ್ತಕ್ಕೆ ಎದ್ದುಳುವಾಗ ಅವನು ಇರಲಿಲ್ಲ. ಒಳ್ಳೆದೇ ಆಯಿತು ಅಂತ ಹೋಗಿ, ಮೂರು ಮಸಾಲೆ ದೋಸೆ, ಒಂದು ಸ್ಟ್ರಾಂಗ್ ಕಾಫಿ ಕುಡಿದು ಬಂದೆ.

ಮಾರನೆ ದಿನ ಸಂಜೆ ನಮ್ಮ ಪತ್ತೆದಾರದ ಸವಾರಿ ಬಂತು. ಪಕ್ಕದ ಮನೆ ನೀಲು ಆಂಟಿ ತಂದು ಕೊಟ್ಟ ಬಜ್ಜಿ ಪಕೋಡ ತಿನ್ನುತ ವಿಷ್ಯ ಹೇಳಿದ. 

ಹಿಂದಿನ ಸರ್ಕಾರ ಎಲ್ಲಾ ಎಂ ಎಲ್ ಎ ಗಳಿಗೆ ಕೆಲಸಕ್ಕೆ ಅನುಕೂಲವಾಗಲಿ, ಮಾಹಿತಿ ಕೈ ಅಂಚಿನಲ್ಲಿ ಇರಲಿ ಎಂದು ಐ ಪ್ಯಾಡ್ ಕೊಟ್ಟಿತ್ತಂತೆ. ಈ ರಾಜಕಾರಣಿ ಆವಾಗ ದೊಡ್ಡ ಮಂತ್ರಿ ಕೂಡ ಆಗಿದ್ದರಂತೆ. ಈಗ ಮಾಜಿ ಆದಮೇಲೆ ಐ ಪ್ಯಾಡ್ ನ ಅವರ ಕಚೇರಿಯಲ್ಲಿ ಮಾತ್ರ ಬಳಸುತ್ತಿದ್ದರಂತೆ. ಹಾಗಾಗಿ ಅದು ಕಚೇರಿಯಲ್ಲಿಯೇ ಕಳುವಾಗಿದೆ ಎಂಬ ನಿರ್ದಾರಕ್ಕೆ ಬಂದನಂತೆ. (ಬಹಳ ಈಜಿ ಅಲ್ವ?) ೪-೫ ದಿನದ ಹಿಂದೆ ಅಲ್ಲಿಗೆ ಭೇಟಿ ಕೊಟ್ಟ ಎಲ್ಲಾ ಜನರ ಬಗ್ಗೆ ರಿಜಿಸ್ಟರ್ ನಲ್ಲಿ ನೋಡಿದ ನಂತೆ. ಅಲ್ಲಿಗೆ ಬಂದವರು ವ್ಯಾಪಾರ ನಿರತ ರಾಜಕಾರಣಿಗಳು, (ಕುದುರೆ ವ್ಯಾಪಾರ ನ? ) ಬೆಂಬಲಿಗರು ಹಾಗು  ಮಂತ್ರಿಯ ಮಾಜಿ ಆಪ್ತ ಕಾರ್ಯದರ್ಶಿ!. ನನಗೆ ಕಾರ್ಯದರ್ಶಿ ಮೇಲೇನೆ ಅನುಮಾನ ಬಂತು. ಗುಟ್ಟಾಗಿ ಮನೆಗೆ ಹೋದರೆ, ಆ ಪಿಯೇ ಮಗ ಜಗುಲಿಲೇ ಕೂತು  ಐ ಪ್ಯಾಡ್ ನಲ್ಲಿ ಆಟ ಆಡ್ತಾ ಇದ್ದಾನೆ!  ಮಗು ಆಡೋಕೆ ಸಾಮಾನು ಕೇಳಿದೆ ಅಂತ ಪಿಯೆ ಇದನ್ನೇ ಕದ್ದು ಬಿಟ್ಟಿದ್ದ. ನಮ್ಮ ವರುಣ ರೆಡ್ ಹ್ಯಾಂಡ್ ಆಗಿ ಹಿಡಿದು ಐ ಪ್ಯಾಡ್ ನ ಹಿಂತಿರುಗಿಸಿದನಂತೆ.

ಅಲ್ಲ ಮಾರಾಯ, ಕದ್ದಿದ್ದು ಅವನೇ ಅಂತ ಹೆಂಗೆ ನಿರ್ದಾರಕ್ಕೆ ಬಂದೆ? ಉಗ್ರರೋ.. ಇನ್ಯಾರೋ ಅಲ್ವ ಅಂದೆ. (ಸುಖಾ ಸುಮ್ನೆ ಹೆಂಗೆ ಒಪ್ಪೋದು?)

ವರುಣ ಟೀ ನ ಬಾಯಿಗೆ ಇಡುತ್ತಾ ಹೇಳಲು ಶುರು ಮಾಡಿದ. ಆ ಮಾಜಿ ಮಂತ್ರಿಗೆ ಕಂಪ್ಯೂಟರ್ ಜ್ಞಾನ ಏನು ಇಲ್ವಂತೆ, ಉಗ್ರರಿಗೆ ಬೇಕಾಗೋ ಮಾಹಿತಿ ಈ ಮನುಷ್ಯ ನ ಹತ್ರ ಏನೂ ಇರಲಿಲ್ಲ. ಅಷ್ಟಕ್ಕೂ ಆತ ಸಧನ ದಲ್ಲಿ ಮಾತಾಡಿದ್ದೆ ಕಡಿಮೆ ಅಂತೆ. ಮಾತಾಡಿದ್ದೆಲ್ಲವೂ ಉಪಯೋಗಕ್ಕೆ ಬಾರದವೇ. ಈ ನಾಯಕರಿಗೆ ಈ ಟ್ಯಾಬ್ಲೆಟ್ ಗಳಲ್ಲಿ ಸಿನೆಮ ನೋಡೋಕೆ ಬಳಸುತ್ತಿದರೆ ಹೊರತು ಮಾಹಿತಿ ಸಂಗ್ರಹಣೆಗೆ, ಸಂಸ್ಕರಣೆಗೆ ಉಪಯೋಗಿಸುತ್ತಾ ಇರಲ್ಲವಂತೆ. ಅವರು ನೋಡೋ ಸಿನೆಮ ಎಲ್ಲ ನಮಗೆಲ್ಲಾ ಗೊತ್ತಿರುವಂತದ್ದೇ ಎಂದು ನಕ್ಕ. ಅದಕ್ಕೆ ಆ ರಾಜಕಾರಣಿ ಪೊಲೀಸರು – ಮಧ್ಯಮ ಅಂತ ಹೆದರಿದ್ದು, ದೇಶ – ಭದ್ರತೆ ಅಂತ ನಾಟಕ ಮಾಡಿದ್ದು ಅಂದು ಮತ್ತೊದ್ದು ಪಕೋಡ ಬಾಯಿಗೆ ಹಾಕ್ಕೊಂಡ. ಇವನು  ಪಿಯೆ ಮೇಲೆ ಅನುಮಾನ ಪಟ್ಟ, ಹಾಗು ಅದು ಎಂದಿನಂತೆ ಸರಿಯಾಗೇ ಇತ್ತು. ಕಳ್ಳ ಮಾಲು ಸಮೇತ ಸಿಕ್ಕಿಬಿದ್ದ. ಕೂಡಲೇ ಮತ್ತೊಂದು ಪಕೋಡ ಕೂಡ ಬಾಯಿಗೆ ಹಾಕ್ಕೊಂಡು ನಂಗೆ ಸಿಗದಂತೆ ಮಾಡಿದ.

ಹೋಗ್ಲಿ ಬಿಡಿ, ಈ “ಬದುಕು” ದಾರವಾಹಿ ಯಾವಾಗ ಮುಗಿಯುತ್ತೆ ಅನ್ನೋ ಒಂದು ಸಮಸ್ಯೆ ಬಿಟ್ಟು ಮತ್ತೆಲ್ಲವನ್ನೂ ವರುಣ ಬಗೆಹರಿಸಿ ಆಗಿದೆ.

ನಿಮಗೂ ಏನಾದ್ರು ಸಮಸ್ಯೆ ಇದ್ದಲ್ಲಿ, ಸಂಪರ್ಕಿಸಬಹುದು. ಫೀಸ್ ಜೊತೆ ಒಂದಿಷ್ಟು ಕುರುಕುಲು ತಿಂಡಿ ಕೂಡ ಸರಬರಾಜು ಮಾಡಬೇಕಾದೀತು ಅಷ್ಟೇ.