Thursday, September 3, 2026

ತುರ್ತು ಸುದ್ದಿ: HR ಗೆ ಹೊಸ ಲೇಆಫ್ ಮಾನದಂಡಗಳ ಕೊರತೆ! - ಸಮಾಜಮುಖಿ ಉದ್ಯೋಗಿಯೊಬ್ಬನ ಕ್ರಾಂತಿಕಾರಿ ಸಲಹೆಗಳು

ಒಂದಾನೊಂದು ಕಾಲದಲ್ಲಿ ಕಂಪನಿಗಳು ಉದ್ಯೋಗಿಗಳನ್ನು ಅವರ ಕಾರ್ಯಕ್ಷಮತೆ ನೋಡಿ ಕೆಲಸದಿಂದ ತೆಗೆಯುತ್ತಾ ಇದ್ದರಂತೆ.

(ಅಥವಾ... ಮ್ಯಾನೇಜರ್‌ಗಳ ಫೇವರಿಟ್ ಲಿಸ್ಟ್‌ನಲ್ಲಿ ಇಲ್ಲದವರನ್ನು!)

ನಂತರ ಕಾಲ ಬದಲಾಯಿತು.

"ಇವರಿಗೆ ಜಾಸ್ತಿ ಸಂಬಳ ಇದೆ" ಅನ್ನೋ ಕಾರಣಕ್ಕೆ ಉದ್ಯೋಗ ಕಳೆದುಕೊಳ್ಳುವ ಕಾಲ ಬಂತು.

ಮತ್ತಷ್ಟು ವರ್ಷಗಳ ನಂತರ...

"ಇವರಿಗೆ ತುಂಬಾ Experience ಇದೆ. ಇವರಿಗೆ ನಾವು ಕೊಡ್ತಿರೋ ಸಂಬಳದಲ್ಲಿ ನಾಲ್ಕು Freshers ಬರುತ್ತಾರೆ!" ಎಂಬ ಅರ್ಥ ಶಾಸ್ತ್ರದ ಆಧಾರದ ಮೇಲೆ ಕೆಲವರನ್ನು ಮನೆಗೆ ಕಳುಹಿಸಲಾಯಿತು.

ಈಗಿನ ಪರಿಸ್ಥಿತಿ ನೋಡಿದರೆ, HR ತಂಡದವರು "ಈ ಬಾರಿ ಹೊಸದಾಗಿ ಯಾರನ್ನು ಯಾವ ಕಾರಣಕ್ಕೆ ಮನೆಗೆ ಕಳಿಸಬಹುದು?" ಎಂಬ ವಿಷಯದ ಬಗ್ಗೆ PhD ಮಾಡುತ್ತಿರುವಂತೆ ಕಾಣುತ್ತಿದೆ.

 

ಹೀಗಾಗಿ, ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ, ಮಾಜಿ HR ಆಗಿ, ಹಾಗೂ Corporate Logic ಅನ್ನು ಅಧ್ಯಯನ ಮಾಡುತ್ತಾ ಮಾನಸಿಕವಾಗಿ ಸಾಕಷ್ಟು ಹಾನಿಗೊಳಗಾದ ವ್ಯಕ್ತಿಯಾಗಿ, ಕಂಪನಿಗಳ ಮುಂದಿನ ಲೇಆಫ್‌ಗಳಿಗೆ ನನ್ನ ಕೆಲ ಉಚಿತ, ಅಮೂಲ್ಯ ಮತ್ತು ಸಂಪೂರ್ಣ ವೈಜ್ಞಾನಿಕ ಸಲಹೆಗಳು ಇಲ್ಲಿವೆ. 

ಈ ಸಲಹೆಗಳನ್ನು ಬಳಸಿದರೆ ಮುಂದಿನ ಐದು ವರ್ಷ HR ತಂಡವು ನಿರಾಳವಾಗಿ ಲೇಆಫ್ ಮಾಡಬಹುದು ಎಂಬುದು ನನ್ನ ದೃಢ ನಂಬಿಕೆ.

 

1. Height Based Layoff

5.10 ಅಥವಾ 6 ಅಡಿ.

ಮೇಲೆ ನಮೂದಿಸಿದ ಸಂಖ್ಯೆಯ ಎತ್ತರದ ಮಾನವ ಪ್ರಾಣಿಗಳನ್ನು ಸಾಮಾನ್ಯವಾಗಿ "ಉದ್ದವಿರುವವರು " ಎಂದು ಗುರುತಿಸಲಾಗುತ್ತದೆ.

ಈ ಪ್ರಾಣಿಗಳು ಉದ್ದ ಪ್ಯಾಂಟ್ ಹಾಕಲಿ, ಉದ್ದ ಹಾಸಿಗೆಯಲ್ಲಿ ಮಲಗಲಿ, ಬಸ್ಸು, ರೈಲು, ವಿಮಾನ, ಎತ್ತಿನಗಾಡಿಯಲ್ಲಿ ಕಾಲು ಮಡಚಿಕೊಂಡು ಕುಳಿತುಕೊಳ್ಳಲಿ... ಅದು ಅವರ ದುಡ್ಡಿನ ಸಮಸ್ಯೆ.

ಆದರೆ ಇವರಿಂದ ಕಚೇರಿಗೆ ಆಗುತ್ತಿರುವ ಅನಾಹುತದ ಬಗ್ಗೆ ಯಾರಾದರೂ ಯೋಚಿಸಿದ್ದೀರಾ?

ಈ ಮನುಷ್ಯರು ಸೀಲಿಂಗ್ ಫ್ಯಾನ್‌ಗೆ ಅಪಾಯಕಾರಿಯಾಗಿ ಹತ್ತಿರ ಇರುತ್ತಾರೆ. ರೆಕ್ಕೆಯಿಂದ ಬರುವ ಗಾಳಿಗೆ ಅಡ್ಡ ನಿಂತು, ಗಾಳಿಯ ಮುಕ್ತ ಸಂಚಾರವನ್ನು ತಡೆಯುತ್ತಿದ್ದಾರೆ. ಅಷ್ಟೇ ಅಲ್ಲ, ಏರ್ ಕಂಡೀಷನರ್‌ನಿಂದ ಬರುವ ತಂಪಾದ ಗಾಳಿಯನ್ನು ಮೊದಲು ಅವರೇ ಹೀರಿಕೊಂಡು, ಹಿಂಬದಿಯಲ್ಲಿ ಕುಳಿತಿರುವ ಸಾಮಾನ್ಯ ಉದ್ಯೋಗಿಗಳನ್ನು ಉಷ್ಣವಲಯದ ಹವಾಮಾನಕ್ಕೆ ತಳ್ಳುತ್ತಿದ್ದಾರೆ.

ಅಯ್ಯೋ! ಇಷ್ಟೆಲ್ಲ ಪಾಪಕೃತ್ಯಗಳನ್ನು ಮಾಡುತ್ತಿರುವವರನ್ನು ಕಂಪನಿಗಳು ಇಷ್ಟು ದಿನ ಹೇಗೆ ಸಹಿಸಿಕೊಂಡಿವೆಯೋ ನಾನರಿಯೆ.

ಹಾಗಾಗಿ 6 ಅಡಿ ಮೇಲ್ಪಟ್ಟವರನ್ನು TLRO (Top Level Resource Optimization) ಎಂಬ ಕಂಪನಿಯ ಅಲಿಖಿತ ಕಾನೂನಿನ ಅಡಿಯಲ್ಲಿ ಕೂಡಲೇ ವಜಾಗೊಳಿಸಿ, ಕಚೇರಿಯಲ್ಲಿ ಆಮ್ಲಜನಕ ಹಾಗೂ ತಂಪು ಗಾಳಿಯ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬಹುದು.

ಇದರಿಂದ ಉಳಿದ ಉದ್ಯೋಗಿಗಳಿಗೆ ಎರಡು ಲಾಭ:

  1. AC ಗಾಳಿ ಸ್ವಲ್ಪ ಹೆಚ್ಚು ಸಿಗುತ್ತದೆ.
  2. Group Photo ತೆಗೆದಾಗ ಕೊನೆಯ ಸಾಲಿನಲ್ಲಿ ನಿಲ್ಲಿಸಲು ಜನರನ್ನು ಹುಡುಕಬೇಕಾಗುವುದಿಲ್ಲ.

 

2. Weight Based Layoff

ಇದು ವಿಜ್ಞಾನಾಧಾರಿತ.

ಇದು ಬಹಳ ತೂಕದ ವಿಷಯ!

ನಿಮ್ಮ ಕಚೇರಿಯಲ್ಲಿ ಸ್ಥೂಲಕಾಯ ಉದ್ಯೋಗಿಗಳಿದ್ದಾರೆಯೇ?

ಅವರಿಂದ ನಿಮ್ಮ ಕಂಪನಿಯ ಲಾಭಾಂಶಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?

ಇಲ್ಲವೇ?

ಛೇ! ಆಕಟಕಟ!

ಒಂದು ಡೊಳ್ಳು ಹೊಟ್ಟೆಯನ್ನು ಯಶಸ್ವಿಯಾಗಿ ಸಂಪಾದಿಸಿರುವ ನಾನೇ ಎಲ್ಲವನ್ನೂ ವಿವರಿಸುತ್ತೇನೆ, ಇದನ್ನು ಕೇಳಿ ನೀವೇ ಯೋಚಿಸಿ, ಚಿಂತಿಸಿ, ತರ್ಕಿಸಿ, ವಿವೇಚಿಸಿ, ಕೊನೆಗೆ ನಾನು ಈಗಾಗಲೇ ತೆಗೆದುಕೊಂಡಿರುವ ತೀರ್ಮಾನವನ್ನೇ ನೀವು ಕೂಡ ತೆಗೆದುಕೊಳ್ಳಿ.

ಕಾರಣ ಸಂಖ್ಯೆ 1: ಲಿಫ್ಟ್ ಮೇಲಿನ ದೌರ್ಜನ್ಯ

ಈ ಜಾಸ್ತಿ ತೂಕದ ಜನರು ಲಿಫ್ಟ್ ಅನ್ನು ಉಳಿದ ಉದ್ಯೋಗಿಗಳಷ್ಟೇ ಆತ್ಮವಿಶ್ವಾಸದಿಂದ ಬಳಸುತ್ತಾರೆ.

ಆದರೆ ಒಂದು ಸಣ್ಣ ಪ್ರಶ್ನೆ.

70 ಕೆಜಿ ಉದ್ಯೋಗಿ ಮತ್ತು 110 ಕೆಜಿ ಉದ್ಯೋಗಿಯನ್ನು ಎಂಟನೇ ಮಹಡಿಗೆ ಕೊಂಡೊಯ್ಯಲು ಲಿಫ್ಟ್ ಒಂದೇ ಪ್ರಮಾಣದ ಶ್ರಮ ಪಡುತ್ತದೆಯೇ?

ಇಲ್ಲ ತಾನೇ!

ಹಾಗಾದರೆ ಕಂಪನಿಯ ವಿದ್ಯುತ್ ಬಿಲ್ಲಿಗೆ ಯಾರು ಕಾರಣ?

(ಈ ಪ್ರಶ್ನೆಗೆ ಉತ್ತರವನ್ನು ಆರ್ಥಿಕ ವಿಭಾಗದವರು ಕಣ್ಣೀರಿನಿಂದ ನೀಡಬಹುದು.)

ಕಾರಣ ಸಂಖ್ಯೆ 2: ಕುರ್ಚಿಗಳ ನೋವು

ಆರಾಮ ಕುರ್ಚಿಗಳಿಗೂ ಭಾವನೆಗಳಿರುತ್ತವೆ.

ಆದರೆ ಅವು ತಮ್ಮ ನೋವನ್ನು ವ್ಯಕ್ತಪಡಿಸಲಾರವು.

ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೆ ಕೆಲವು ಉದ್ಯೋಗಿಗಳು ಅವುಗಳ ಮೇಲೆ ಕುಳಿತು ನಡೆಸುವ ದೈಹಿಕ ದಾಳಿಯ ಪರಿಣಾಮವಾಗಿ ಕುರ್ಚಿಗಳ ಆಯುಷ್ಯ ಗಣನೀಯವಾಗಿ ಕಡಿಮೆಯಾಗುತ್ತಿದೆ.

ESG ವರದಿಯಲ್ಲಿ ಈ ವಿಷಯ ಯಾಕೆ ಬರೋದಿಲ್ಲ ಅನ್ನೋದೇ ಆಶ್ಚರ್ಯ.

ಕಾರಣ ಸಂಖ್ಯೆ 3: ಟೈರ್ ಸವೆತ ಮತ್ತು ರಾಷ್ಟ್ರೀಯ ಆರ್ಥಿಕತೆ ಲಿಫ್ಟ್ ಒಂದೇ ಅಲ್ಲ. ಕಂಪನಿ ಕ್ಯಾಬ್. ಸರಕಾರಿ ಬಸ್. ಮೆಟ್ರೋ. ಆಟೋ. ಯಾವ ವಾಹನವನ್ನಾದರೂ ಬಳಸಿದರೂ ಟೈರ್ ಸವೆತಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ. ಹಾಗೂ ವಾಹನದ ಮೈಲೇಜ್ ಕೂಡ ಕಡಿಮೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಲೀಟರ್ ಪೆಟ್ರೋಲ್‌ಗೆ 15 ಕಿ.ಮೀ. ಹೋಗುವ ವಾಹನ, ಕೆಲ ಸಂದರ್ಭಗಳಲ್ಲಿ 14.999 ಕಿ.ಮೀ.ಗೆ ಇಳಿಯುವ ಭಯವಿದೆ. ದೇಶದ ಆರ್ಥಿಕತೆ ಇಂತಹ ಸೂಕ್ಷ್ಮ ವಿಷಯಗಳ ಮೇಲೆಯೇ ನಿಂತಿದೆ ಎನ್ನುವುದನ್ನು ನಾವು ಮರೆಯಬಾರದು.

ಹಾಗಾಗಿ ಇದು ಕೇವಲ ಕಂಪನಿಯ ಸಮಸ್ಯೆಯಲ್ಲ.

ಇದು ರಾಷ್ಟ್ರದ ಸಮಸ್ಯೆ.

ಪರಿಸರದ ಸಮಸ್ಯೆ.

ವಾಹನಗಳ ಟೈರ್‌ಗಳ ಸಮಸ್ಯೆ.

ಪೆಟ್ರೋಲ್ ಬಂಕ್‌ಗಳ ಸಮಸ್ಯೆ.

ಕಬ್ಬು ಬೆಳೆಗಾರರ ಸಮಸ್ಯೆ.

ಅಡುಗೆ ಮನೆಯ ಸಕ್ಕರೆಯ ಸಮಸ್ಯೆ.

ಜಾಗತಿಕ ಆರ್ಥಿಕತೆಯ ಸಮಸ್ಯೆ.

ಏನೋ ಕಾರಣಕ್ಕೆ ಈ ಎಲ್ಲಾ ವಿಷಯಗಳು ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ನನಗೆ ಅನ್ನಿಸುತ್ತದೆ. ಅದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲು ಸಾಧ್ಯವಾಗದಿರುವುದು ಮಾತ್ರ ನನ್ನ ದುರದೃಷ್ಟ.

ಈ ವಿಷಯವನ್ನು ವಿಶ್ವಸಂಸ್ಥೆ ಇನ್ನೂ ಗಂಭೀರವಾಗಿ ಪರಿಗಣಿಸದಿರುವುದು ವಿಷಾದನೀಯ.


ಇರಲಿ...

ಒಬ್ಬ 100 ಕೆಜಿ ಉದ್ಯೋಗಿಯನ್ನು ಎಂಟನೇ ಮಹಡಿಗೆ ಕರೆದೊಯ್ಯಲು ಲಿಫ್ಟ್‌ಗೆ ಎಷ್ಟು ವಿದ್ಯುತ್ ಬೇಕು ಗೊತ್ತಾ?

ನನಗೂ ಗೊತ್ತಿಲ್ಲ.

ಆದರೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ನಲ್ಲಿ ಮೂರು ಗ್ರಾಫ್, ಎರಡು ಪೈ ಚಾರ್ಟ್, ನಾಲಕ್ಕು ಬುಲೆಟ್ ಪಾಯಿಂಟ್ ಹಾಕಿದರೆ ಸಾಕು...

ಕಂಪನಿ ಆಡಳಿತ ವಿಭಾಗ ಅದನ್ನು ಸಂಪೂರ್ಣ ವೈಜ್ಞಾನಿಕ ಸಂಶೋಧನೆ ಎಂದು ನಂಬುತ್ತದೆ.

 

 

3. Baldness Based Layoff

ಇದೀಗ ಬಹಳ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಒಂದು ಪ್ರಮುಖ ಮಾನದಂಡದ ಬಗ್ಗೆ ಮಾತನಾಡೋಣ.

ಬೋಳುತನ.

ಈ ಬ್ರಹ್ಮಾಂಡದಲ್ಲಿ, ಅದರಲ್ಲೂ ನಮ್ಮ ಈ ಭೂ ಲೋಕದಲ್ಲಿ, ಹಲವಾರು ಜನ ಬೋಳು ತಲೆಯವರು ಅತ್ಯಂತ ಜನಪ್ರಿಯರಾಗಿದ್ದಾರೆ. 

ಪ್ರತಿದಿನ ಲಕ್ಷಾಂತರ ಜನರು ಅವರನ್ನು ನೋಡುತ್ತಾರೆ. ಮೆಚ್ಚುತ್ತಾರೆ! (ನಾನು ಜೇಸನ್ ಸ್ಟಾಥಮ್ ಬಗ್ಗೆ ಮಾತನಾಡುತ್ತಿದ್ದೇನೆ!ಜೆಫ್ ಬೆಜೋಸ್  ಬಗ್ಗೆ ಅಲ್ಲ )

ಒಮ್ಮೆ ಯೋಚಿಸಿ ನೋಡಿ.

ಕೂದಲು ಇರುವವರನ್ನು ಯಾರಾದರೂ ಬೆಳಿಗ್ಗೆ ಕಚೇರಿಗೆ ಬಂದ ತಕ್ಷಣ "ಓಯ್ ಕೂದಲು!" ಎಂದು ಕರೆಯುತ್ತಾರೆಯೇ?

ಇಲ್ಲ.

 

ಆದರೆ ಬೋಳು ತಲೆ ಇರುವವರನ್ನು ಮಾತ್ರ, ವಿವಿಧ ರೀತಿಯ ಬಿರುಡುಗಳಿಂದ ಕರೆದು ಮಾನಸಿಕ ಹಿಂಸೆ ಕೊಡುತ್ತಾ ಇದ್ದಾರೆ.  ಉದಾ: ಟಕ್ಲುಬೋಳ್ಮಂಡೆ, ಮೊಟ್ಟೆ, ರಿಫ್ಲೆಕ್ಟರ್, ಶೈನಿಂಗ್ ಸ್ಟಾರ್, ಸೋಲಾರ್ ಪ್ಯಾನಲ್, ಇತ್ಯಾದಿ ಇತ್ಯಾದಿ.

ಆದರೆ ಈ ಕ್ರೂರ ಹಿಂಸೆಯ ಬಗ್ಗೆ ಯಾವ ಮಾನವ ಹಕ್ಕುಗಳ ಆಯೋಗ, ಬುದ್ದಿಜೀವಿಗಳು.. ಕನಿಷ್ಟ ಜಿರಲೆ ಪಕ್ಷ ಕೂಡ ಕಣ್ಣು ಹಾಯಿಸಿಲ್ಲ.  ಆದುದರಿಂದ HR ನವರು ಇಂತಹ ನಿರಂತರ ಮಾನಸಿಕ ಹಿಂಸೆಯನ್ನು ತಪ್ಪಿಸಲು, ಬೋಳು ತಲೆಯ ಉದ್ಯೋಗಿಗಳನ್ನು ಲೇಆಫ್ ಮಾಡಿ ಮನೆಗೆ ಕಳುಹಿಸುವುದು ಮಾನವೀಯ ಕ್ರಮವಾಗಬಹುದು.

ಅವರು ಮನೆಯಲ್ಲೇ ಆರಾಮಾಗಿ ಕುಳಿತುಕೊಂಡು:

  • ಇಂದೂಲೇಖಾ
  • ಭೃಂಗರಾಜ್ ಎಣ್ಣೆ
  • ತೆಂಗಿನ ಎಣ್ಣೆ
  • ಈರುಳ್ಳಿ ರಸ
  • ಯೂಟ್ಯೂಬ್‌ನಲ್ಲಿ ಸಿಗುವ ವಿಚಿತ್ರ ಚಿಕಿತ್ಸೆಗಳು

ಎಲ್ಲವನ್ನೂ ಪ್ರಯತ್ನಿಸಬಹುದು.

(ನಾನು ವೈಯಕ್ತಿಕವಾಗಿ ಅನೇಕ ಬ್ರ್ಯಾಂಡ್‌ಗಳನ್ನು ಪ್ರಯತ್ನಿಸಿದ್ದೇನೆ. ಫಲಿತಾಂಶ? ಸೊನ್ನೆ!)


ಸಮಾರೋಪ: 

ನನ್ನ ತಲೆಯಲ್ಲಿ ಇನ್ನೂ ಹತ್ತಿಪ್ಪತ್ತು ಐಡಿಯಾಗಳು ಇವೆ!

ಆದರೆ ಅದನ್ನು ಮೊದಲು, ನಾನು ನನ್ನ ಕಂಪನಿಯವರಿಗೆ ತಿಳಿಸಿ, ಭವಿಷ್ಯದಲ್ಲಿ ನಾನು ಎಷ್ಟೊಂದು ಉಪಯೋಗಕ್ಕೆ ಬರಬಹುದು ಎಂದು ಮನವರಿಕೆ ಮಾಡಿಸಿ, ನನ್ನ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುವೆ.

ಏಕೆಂದರೆ ನಾಳೆ ಅವರು ಈ ಲೇಖನ ಓದಿ,

"ಇವನ ಬಳಿ ತುಂಬಾ ಐಡಿಯಾಗಳಿವೆ... ಅಪಾಯಕಾರಿ ವ್ಯಕ್ತಿ!" ಎಂದು ಹೊಸ ಲೇಆಫ್ ಮಾನದಂಡವನ್ನೇ ಸೃಷ್ಟಿಸಬಹುದು.

ನಿಮ್ಮೆಲ್ಲರ ಹೊಟ್ಟೆ ಸಣ್ಣಗಾಗಲಿ, ತಲೆಯಲ್ಲಿ ಕೂದಲು ಬೆಳೆಯಲಿ ಎಂದು ಭಯಂಕರವಾಗಿ ಹಾರೈಸುವೆ.


Thursday, December 27, 2018

2019 - ಯಾರಾಗ್ತಾರೆ ಪ್ರಧಾನಿ - ಭಾಗ 1




ಇನ್ನೇನು ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ಬರಲಿದೆಮುಂದೆ ಯಾರು ಪ್ರಧಾನಿ ಆಗುತ್ತಾರೆಮೋದಿ ಮತ್ತೊಮ್ಮೆ ಬರಬಹುದಾಕಾಂಗ್ರೆಸ್ನ ರಾಹುಲ್ ಆಗಬಹುದೇಅಥವಾ ಅದರ ಮಿತ್ರ ಪಕ್ಷಗಳಿಗೆ ಅವಕಾಶ ಸಿಗಬಹುದೇ ಅನ್ನುವುದು ಈ ಕ್ಷಣದ ಒಳ್ಳೆಯ ಚರ್ಚೆಯ ವಿಷಯ.

ವಯಕ್ತಿಕವಾಗಿ ಅನ್ನಿಸುವುದೇನೆಂದರೆ ನಮ್ಮ ಪ್ರಾದೇಶಿಕ ಪಕ್ಷಕ್ಕೆ ಬಹುಮತ ಸಿಗಬೇಕು. ಕನಿಷ್ಠ.. ಬಹುಮತದ ಸಮೀಪ ಆದರೂ ಬರಬೇಕು. ಆಮೇಲೆ ದೇಶದ ಹಿತದೃಷ್ಠಿಯಿಂದ ನಮ್ಮ ದೊಡ್ಡ ಗೌಡ್ರೆ ಪ್ರಧಾನಿ ಆಗಬೇಕು. ಕಾರಣಗಳು ಕೆಳಗಿನಂತಿವೆ.


1. ಭ್ರಷ್ಟಾಚಾರ ಕಮ್ಮಿ ಆಗುತ್ತೆ.
ಹೌದು. ದೊಡ್ಡ ಗೌಡ್ರು ಕುರ್ಚಿಲಿ ಕುಂತ್ರೆಒಬ್ಬ ಮಗ ಹೋಮುಮತ್ತೊಬ್ಬ ಹಣಕಾಸುಸೊಸೆ ವಿದೇಶಾಂಗಸಿನೆಮಾ ನಟ ಮೊಮ್ಮಗನಿಗೆ  ರಕ್ಷಣೆ ಇತ್ಯಾದಿಯಾಗಿ ಖಾತೆ ಹಂಚಬಹುದು. ಖಾಲಿ ಇರೋ ಮತ್ತೊಬ್ಬ ಮೊಮ್ಮಗನನ್ನ ಕರ್ನಾಟಕದ ಮುಮ ಮಾಡಬಹುದು.
ಸರಿಯಾಗಿ ಯೋಚಿಸಿ. ಇದರಿಂದ ದೇಶಕ್ಕೆ ಆಗೋ ಲಾಭ ಅಷ್ಟಿಟ್ಟಲ್ಲ. ಉದಾಹರಣೆ ಸಮೇತ ವಿವರಿಸಬೇಕು ಎಂದರೆ.. ಹಿಂದಿನ ಸರಕಾರದಲ್ಲಿ ನಡೆದ 2ಜಿ ತರಂಗಾಂತರ ಹಗರಣ ನೆನಪು ಮಾಡಿಕೊಳ್ಳಿ. ದೂರಸಂಪರ್ಕ ಮಂತ್ರಿಗೆ ಇಷ್ಟುಆಮೇಲೆ ಹಣಕಾಸು ಮಂತ್ರಿಗೆ ಇಷ್ಟುಆಮೇಲೆ ಆ ಪಕ್ಷದ ಹೆಡ್ಡಿಗೆ ಇಂತಿಷ್ಟು ಎಂದೆಲ್ಲಾ ಹಂಚಿಕೆ ಆಗಿತ್ತು. ಆದ್ರೆನಮ್ಮ ಪ್ರಾದೇಶಿಕ ಪಕ್ಷ ಬಂದ್ರೆ ಈ ರೀತಿ ನಡೆಯೋಕೆ ಸಾಧ್ಯವೇ ಇಲ್ಲ. ಎಲ್ಲರೂ ಒಂದೇ ಕುಟುಂಬದಿಂದ ಬಂದಿರುವುದರಿಂದನಾಕಾರು ಜನಕ್ಕೆ ನಾಕಾರು ಭಾಗ ಹಂಚುವ ಅಗತ್ಯ ಇರುವುದಿಲ್ಲ. ಈ ಕುಟುಂಬಕ್ಕೆ ಇಷ್ಟು ಅಂತ ಕೊಟ್ಟರೆ ಸಾಕು. ಹಿಂದೆ ದೊಡ್ಡ ಮೇಡಂ ಪಕ್ಷಕ್ಕೆ ಕೊಡ್ತಾ ಇದ್ರಲ್ಲ ಹಾಗೆ. ನೋಡಿಎಷ್ಟು ದುಡ್ಡು ಉಳಿತು ಆಲ್ವಾಅಷ್ಟರ ಮಟ್ಟಿಗೆ ಬ್ರಷ್ಟಾಚಾರ ಕಡಿಮೆ ಆಗುತ್ತೆ.


2. ಅರ್ಥಿಕ ಪರಿಸ್ಥಿತಿ ಸುಧಾರಿಸುತ್ತೆ.
ಹೌದು. ದೇಶದ ಅರ್ಥಿಕ ಪರಿಸ್ಥಿತಿ ಖಂಡಿತಾ ಸುಧಾರಿಸುತ್ತೆ. ಯಾಕೆಂದರೆಇವರಾರಿಗೂ ಇಟಲಿ ದೇಶದಲ್ಲಿ ನೆಂಟರಿಲ್ಲಅವರ ಜೀವನ ಸುಧಾರಿಸಬೇಕು ಎಂಬ ತಲೆಬಿಸಿ ಇಲ್ಲ. ಬಂದ ಅಷ್ಟೂ ಹಣ ಬಹುಪಾಲು ದೇಶದ ಒಳಗೇ ಉಳಿಯುತ್ತೆ. ಅದರಿಂದ ರುಪಾಯಿಗೆ ಬಲ ಬರುತ್ತೆ. ಹಾಗಾದಾಗಪೆಟ್ರೋಲ್ ರೇಟು ಇನ್ನೂ ಕಮ್ಮಿ ಆಗುತ್ತೆ. ಪೆಟ್ರೋಲ್ ರೇಟು ಕಮ್ಮಿ ಆದ್ರೆದೇಶ ಏಕ್ದಂ ಉದ್ದಾರ ಆಗುತ್ತೆ. ಇವರೆನಾದ್ರು 4-5 ವರುಷ ಅದೇ ಸ್ಥಾನದಲ್ಲಿ ಇದ್ದರೆಅಮೇರಿಕಾದ ಆರ್ಥಿಕತೆ ಸಿ ಮೈನಸ್ ಗೆ ಹೋದರೂ ಹೋಗಬಹುದು. ಪಾಪ ಟ್ರಾ0ಪು.


3. ಜನರ ಅರೋಗ್ಯ ಸುಧಾರಿಸುತ್ತೆ.
ಇತ್ತೀಚಿಗೆ ನಮ್ಮ ಮಹಾನಗರಗಳ ಜನರಿಗೆ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ ಬಂದಿದೆ. (ಇದಕ್ಕೆ ಪರೋಕ್ಷ ಕಾರಣ, ಹೆಚ್ಚಿರುವ ಆಸ್ಪತ್ರೆಅಲ್ಲಿನ ಡಾಕ್ಟರುಗಳ ಮೇಲಿರುವ ಟಾರ್ಗೆಟ್ ಭೂತಸುಖಾ ಸುಮ್ಮನೆ ಮಾಡುವ ಚೆಕಪ್ ಗಳು ಇರಬಹುದು. ಬಿಡಿ ಅದು ಸದ್ಯದ ವಿಷಯ ಅಲ್ಲ) ಕಿರುಧಾನ್ಯಗಳನ್ನು ಕೊಂಡು ತಿನ್ನುವ ಚಟ ಆವರಿಸಿ ಬಿಟ್ಟಿದೆ. ಅದರ ಅಡುಗೆ ಮಾಡುವ ವಿಧಾನ ತಿಳಿಸಿ ಕೊಡಲು ಸಾಕಷ್ಟು ಟೀವಿ ಕಾರ್ಯಕ್ರಮ ಬರುತ್ತಲೇ ಇರುತ್ತೆ. ಅಷ್ಟೇಕೆ ಫೇಸ್ಬುಕ್ಯು ಟ್ಯೂಬ್ ನಲ್ಲಿ ಸಾಕಷ್ಟು ಮಾಹಿತಿ ಸಿಗುತ್ತೆ ಕೂಡ. ನಮ್ಮ ಗೌಡರಿಗೆ ಮುದ್ದೆ ಇಷ್ಟ. ಅಂದ್ರೆ ರಾಗಿಗೆ ಬಹಳ ಜನಪ್ರೀಯತೆ ಸಿಗುತ್ತೆ. ಜನ ಅದನ್ನು ಕೊಳ್ಳಲು ಶುರು ಮಾಡುತ್ತಾರೆ. ಅರೋಗ್ಯ ಹೆಚ್ಚಿಸಿ ಕೊಳ್ಳುತ್ತಾರೆ.


4.ಜನ ಜೀವನ ಸುಧಾರಿಸುತ್ತೆ.
ಮಾಜಿ ಪ್ರಧಾನಿಗಳು ನಿದ್ದೆ ಪ್ರಿಯರು. ಒಹ್ ಸಾರಿ ಹಗಲೊತ್ತು ಅಂತರ್ಮುಖಿಯಾಗಿ ದೇಶದ ಬಗ್ಗೆ ಚಿಂತೆ ಮಾಡುವವರು. ಆದ್ರೆ ಜನ ಇದನ್ನು ನಿದ್ದೆ ಎಂದು ತಿಳಿಯುವರು. ಸಾಕಷ್ಟು ಜನ ರಾತ್ರೆ ಪಾಳಿಯಲ್ಲಿ ದುಡಿಯುವವರು ಕೆಲಸ ಬದಲಿಸಬಹುದು. ಅಥವಾ ಕಂಪನಿಗಳೇ ಬೇರೆ ಕಡೆ ಹೋಗಬಹುದು. ಒಟ್ಟಾರೆ ಕಿರು ಧಾನ್ಯ ತಿಂದು, ರಾತ್ರೆ ಒಳ್ಳೆ ನಿದ್ರೆ ಮಾಡಬಹುದು. ಇದರಿಂದ ಜನ ಜೀವನ ಸುಧಾರಿಸಿ, ಭಾರತ ಖಂಡಿತಾ ವಿಶ್ವಗುರು ಆಗಬಹುದು.


ಈಗ ಒಂದು ಪ್ರಶ್ನೆ. ಅಕಸ್ಮಾತ್ ನಮ್ಮ ಈಗಿನ ಮುಮ ಮುಂದಿನ ಪ್ರಧಾನಿ ಆದ್ರೆ? ಒಬ್ಬ ಕಾರ್ಯಕರ್ತನ ಸಾವಿಗೆ ಶೂಟ್ ಮಾಡಿ ಎಂದವರು, ಪಾಕಿಸ್ತಾನ ನಮ್ಮ ಸೈನಿಕರಿಗೆ ಗುರಿ ಇಟ್ಟರೆ ಬಿಡುತ್ತಾರಾ? ದಿನಕ್ಕೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿ... ಅದನ್ನು ನಾಶ ಮಾಡುವುದಿಲ್ಲವೇ?


ಇರಲಿ. ಈಗ ಇಷ್ಟು ಸಾಕು.
ನಮ್ಮ ಮುಂದಿನ ಸಂಚಿಕೆಯಲ್ಲಿ ಶ್ರೀ ಜೂನಿಯರ್ ಗಾಂಧೀ ಅವರು ಪ್ರಧಾನಿ ಆದರೆ ಆಗುವ ಲಾಭಗಳನ್ನು ವಿವರಿಸುತ್ತೇನೆ.
ಅಲ್ಲಿಯ ತನಕ ನಿಮ್ಮ ಮತಗಳನ್ನು ಪ್ರಾದೇಶಿಕ ಪಕ್ಷಕ್ಕೇ ಮೀಸಲಿಡುವಂತೆ ಕೇಳಿಕೊಳ್ಳುತ್ತೇನೆ.

Tuesday, November 14, 2017

ಧಾರಾವಾಹಿ ಪ್ರಪಂಚ



ಇತ್ತೀಚಿಗೆ ನನಗೆ ಕೆಲವು ದಿನಗಳ ಮಟ್ಟಿಗೆ ಟೀವಿ ಧಾರವಾಹಿ ನೋಡುವ ಅವಕಾಶ ಒದಗಿ ಬಂದಿತ್ತು. (ಅನಿವಾರ್ಯ ಕಾರಣಗಳಿಂದಾಗಿ ಎಂದು ಹೇಳಬೇಕಾಗಿಲ್ಲವಷ್ಟೇ ) ಅದನ್ನು ಗಮನಿಸಿದ ನಂತರ ಪ್ರಪಂಚವನ್ನು ನೋಡುವ ದೃಷ್ಟಿಕೋನವೇ ಬದಲಾಗಿ ಹೋಯಿತು. ನನ್ನಂತ ಸಾಕಷ್ಟು ಜನ ಪುರುಷಪುಂಗವರು, ಮಹಿಳೆಯರು ಟೀವಿ ನೋಡೋ ಸಮಯದಲ್ಲಿ ಸ್ನೇಹಿತರೊಡನೆ ಶರಬತ್ತು ಕುಡಿಯುತ್ತಾ ಕಾಲ ಕಳೆಯುವರು ಅಥವಾ ರಂಗಣ್ಣ - ರಾಧಮ್ಮನ ಶಬ್ದ ಮಾಲಿನ್ಯವನ್ನು ಸಹಿಸುವರು ಎಂದು ತಿಳಿದಿದೆ. ಅವರನ್ನು ಜ್ಞಾನ ಮಾರ್ಗಕ್ಕೆ ಕರೆದು ತರುವುದೇ ಜನ್ಮ ಸಾರ್ಥಕ್ಯವೆಂದು ನನಗೆ ತೋರುತ್ತಿದೆ.


ಆದರೆ ಇದಕ್ಕಾಗಿ ನೀವು ನನಗೆ ವಿಶೇಷ ಅಭಿನಂದನೆ ತಿಳಿಸಬೇಕಾದ ಅಗತ್ಯ ಇರುವುದಿಲ್ಲ. ಯಾಕೆಂದರೆ ..
ವೀರನಾರಾಯಣನೆ ಕವಿ ನಾನು ಕೇವಲ ಲಿಪಿಕಾರ ಎಂದು ಕುಮಾರ ವ್ಯಾಸ ಬರೆದುಕೊಳ್ಳುತ್ತಾನೆ. ಅದೂ ಅಲ್ಲದೆ, ಜ್ಞಾನವು ಅಪೌರುಷೇಯ ಎನ್ನುತ್ತದೆ ಪರಂಪರೆ. ಹಾಗಾಗಿ ನಿಮ್ಮ ಮೆದುಳಿನ ಸೂಕ್ಷ ತರಂಗಗಳನ್ನು ಬಡಿದೆಬ್ಬಿಸಿ, ಮಂಡೆಯನ್ನು ಹೆಚ್ಚು ಚುರುಕು ಮಾಡುವುದಷ್ಟೇ ನನ್ನ ಕೆಲಸ.
ಹಾಗಾಗಿ ತಡ ಮಾಡದೇ ಕೆಳಗಿನ ಧಾರವಾಹಿ ಜಗತ್ತಿನಲ್ಲಿ ನಾನು ಕಂಡುಕೊಂಡ ಸತ್ಯ ತಿಳಿದು ಜೀವನವನ್ನು ಸಂತೋಷ, ಎಚ್ಚರದಿಂದ ಕಳೆಯಿರಿ.

1.       ಮನೆಗೆ ಯಾರೇ ಸುಂದರ ಹುಡುಗಿ ಬಂದರೂ.. ಅದು ಹಾವು ಆಗಿರಬಹುದು. ನಿಮ್ಮ ಮನೆಗೆ ಅಕಸ್ಮಾತ್ ಆಗಿ ನಾಗಮಣಿ ಬಂದಿರಬಹುದು. ಅಥವಾ ನೀವು ಕೂತ ಕಾರು – ಬಸ್ಸು.. ಎತ್ತಿನ ಗಾಡಿ ಹಾವಿನ ಬಾಲವನ್ನು ಮೆಟ್ಟಿರಬಹುದು. ಆ ಸೇಡಿಗೆ ನಾಗಿಣಿ ಬಂದಿರಬಹುದು. ಹಾಗಾಗಿ ಯಾವುದಕ್ಕೂ ಒಂದು ಪುಂಗಿ ಇಟ್ಟುಕೊಂಡು ಓಡಾಡೋದು ಒಳಿತು!

2.       ಗಹನವಾದ ಚರ್ಚೆ ಅಥವಾ ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿರುವಾಗ, ಗಂಡನಿಗೆ ಆಫೀಸ್ ನಿಂದ ಕರೆ ಬಂದರೆ... ಅದು ದೇವರಾಣೆ ಕಚೇರಿಯಿಂದ ಆಗಿರುವುದಿಲ್ಲ. ಆತನ ಹಳೇ ಗೆಳತಿ ಆಗಿರಬಹುದು. ಕಣ್ಣಿಡುವುದು ಒಳಿತು.

3.       ಯಾರದ್ರು ಮೆಡಿಕಲ್ ಶಾಪ್ ಗೆ ಹೋದರೆ, ಅವರು ವಿಷವನ್ನು ಕೊಳ್ಳಲು ಹೋಗುತ್ತಾ ಇದ್ದಾರೆ ಎಂದೇ ಭಾವಿಸಬೇಕು! ಈ ಜನಗಳಿಗೆ ಅದು ಹೇಗೋ, ಎಷ್ಟು ಬೇಕಾದ್ರೂ ನಿದ್ರೆ ಮಾತ್ರೆಗಳು ಸಿಗುತ್ತವೆ. ಕಾರ್ಕೋಟ ವಿಷದ ಪುಡಿಗಳು ಕೈ ತುದಿಯಲ್ಲೇ ಇರುತ್ತದೆ. ಪ್ರೀತಿಯಿಂದ ಮನೆಯಲ್ಲಿ ಹಾಲು ಕೊಟ್ಟರೆ ಅದು.. ಪ್ರಾಣವನ್ನೇ ತೆಗೆಯಬಹುದು.

4.       ನಿಮ್ಮ ವೈರಿಗಳನ್ನು ಏನೇ ಮಾಡಿದರೂ ಸಾಯಿಸಲು ಸಾಧ್ಯವಿಲ್ಲ. ಸುಪಾರಿ ಕೊಟ್ಟರೂ, ಬಾಂಬು ಸಿಡಿಸಿದರೂ, ಕೊನೆಗೆ ಹುಲಿ ಬಾಯಿಗೆ ತಳ್ಳಿದರೂ ... ಉಹುಂ. ಸಾವೇ ಇಲ್ಲ. ಎಲ್ಲಾ ಶಾಶ್ವತ. (ಧಾರಾವಾಹಿ ನೋಡೋರನ್ನು ಬಿಟ್ಟು )

5.       ನಾನು ಮೊದಲೆಲ್ಲಾ ದೇವರು ಸ್ವರ್ಗದಲ್ಲೋ, ಹಿಮಾಲಯದಲ್ಲೋ ... ಇರುವನೆಂದು ಭಾವಿಸಿದ್ದೆ. ಈಗ ಆತ ಪ್ಲಾಸ್ಟಿಕ್ ಸೆಟ್ ನಲ್ಲಿ ವಾಸಮಾಡುತ್ತಾನೆ ಎಂದು ತಿಳಿದು ಬಹಳ ಖೇದವಾಗುತ್ತಿದೆ! L

6.       ಕನ್ನಡದಲ್ಲಿ ಕನಿಷ್ಠ 6 ಮನೋರಂಜನಾ ಚಾನೆಲ್ ಇದೆ. ಒಂದೊಂದರಲ್ಲಿ ಕನಿಷ್ಠ 8 ಮೆಗಾ ಧಾರವಾಹಿ ಬರುತ್ತಲಿದೆ ಎಂದರೆ, ದಿನಕ್ಕೆ 45 -50 ಧಾರಾವಾಹಿಗಳು! ಪ್ರತೀ ಮನೆಯಲ್ಲಿಯೂ ಒಂದು ಅತ್ತೆ, ಸೊಸೆ, ಮಗ, ಮಗಳು, ಅಡುಗೆಯವರು, ನಾದಿನಿ.. ಇತ್ಯಾದಿ. ಆಮೇಲೆ ಸೊಸೆಯ ಕುಟುಂಬ, ಸೊಸೆಯನ್ನು / ಅತ್ತೆಯನ್ನು ಕೊಲ್ಲಲು ಅಂತಲೇ ಇರುವ ಸುಪಾರಿ ಕೊಲೆಗಾರರು.. ಹೀಗೆ ಸಾಕಷ್ಟು ಮನೆಗಳು ಬರುತ್ತವೆ. ಅವರಿಗೆ ಸಾಕಷ್ಟು ಸಮಯವೂ ಇದ್ದಂತೆ ತೋರುತ್ತದೆ. ಆದರೆ, ಯಾರೂ ಧಾರವಾಹಿ ನೋಡುವುದಿಲ್ಲ. ಅವರೇ ನೋಡುವುದಿಲ್ಲ ಎಂದಮೇಲೆ ನಾವು ನೋಡಬೇಕೆ? ಪುಟ್ಟಗೌರಿ ಅಜ್ಜಿ,.. ಯಾವ ಧಾರವಾಹಿ ನೋಡುತ್ತಾಳೆ ?

7.       ಕೊನೆಯ ಮತ್ತು ಅತ್ಯಂತ ಹೆಚ್ಚಿನ ದುರಂತ ಏನು ಅಂದರೆ... ಸಾಮಾನ್ಯವಾಗಿ ಧಾರಾವಾಹಿಯ ಎಲ್ಲಾ ಗಂಡು ಜೀವಿಗಳಿಗೆ ಒಂದೊಂದು ಎಕ್ಸ್ಟ್ರಾ ಸಂಬಂಧ ಇರುತ್ತದೆ. ಬಡ್ಡಿ ಮಗಂದು ನಿಜ ಜೀವನದಲ್ಲಿ ಒಂದೂ ಇರಲ್ಲ. ಆದರೂ ಹೆಂಡ್ತಿ ಅನುಮಾನ ಪಡ್ತಾಳೆ! L



ಸದ್ಯಕ್ ಸಮಾಪ್ತಿ!


Friday, September 22, 2017

ಜನ್ನತ್ ಭಾಗ್ಯ




ನೀವು ನನ್ನ ಮಾತನ್ನು ಒಪ್ಪದೇ ಹೋಗಬಹುದು.
ಸಿದ್ದರಾಮನ ಭಕ್ತ ಎಂದು ಜರಿಯಬಹುದು.
ನನ್ನ ಮೇಲೆ ನೀವು ಕಾಮೆಂಟ್ / ಬೆದರಿಕೆ ಅಸ್ತ್ರ ಜಡಿಯಬಹುದು.
ಇರಲಿ. ಒಳ್ಳೆಯದನ್ನು ಗುರುತಿಸುವುದಕ್ಕೆ, ಹೊಗಳುವುದಕ್ಕೆ ಯಾವ ಅಂಜಿಕೆಯೂ ನನಗಿಲ್ಲ.

ಸದ್ಯಕ್ಕೆ ಕರುನಾಡು ಅತ್ಯಂತ ಪ್ರಗತಿ ಹೊಂದಿದ ರಾಜ್ಯ ಎಂದೇ ನನ್ನ ಭಾವನೆ.
ಕಾರಣ ಇಷ್ಟೇ,
ಇಲ್ಲಿನ ಪೋಲಿಸರೋಬ್ಬರನ್ನು ಬಿಟ್ಟು, ಮಿಕ್ಕ ಎಲ್ಲಾ ಜನರು ವಿಪರೀತ ಬುದ್ದಿವಂತರಾಗಿದ್ದಾರೆ.!

ಬೇಕಿದ್ರೆ ಗಮನಿಸಿ.
ಡಿ.ಕೆ ರವಿ ಹಾಗೂ ಡಿವೈಎಸ್ಪಿ ಗಣಪತಿ ಅನುಮಾನಾಸ್ಪದ ಸಾವಿಗೆ ಈಡಾದಾಗ, ನಮ್ಮ ಪೋಲಿಸರಿಗಿಂತಲೂ ಪತ್ರಿಕೆಗಳು – ಟೀವಿ ನ್ಯೂಸ್ ಗಳು ತರಹೇವಾರಿ ತನಿಖೆ ಮಾಡಿದವು. ಒಂದು ಟ್ಯಾಬ್ಲಾಯ್ಡ್ ಅಂತೂ... ರವಿ ಅವರು, ಯಾವುದೋ ಮಹಿಳೆಗೆ 40 – 50 ಕಾಲ್ ಮಾಡಿದ್ದರು ಎಂದೆಲ್ಲ ವರದಿ ಮಾಡಿದ್ದರು. ಗಣಪತಿಯವರ ಆರೋಗ್ಯದ ಬಗ್ಗೆ ಏನೆಲ್ಲಾ ಹೇಳಿಕೆ ಕೊಟ್ಟರು. ಆದರೆ ನಮ್ಮ ಪೊಲೀಸರು ಮಾತ್ರ, ಯಾವ್ದೋ ಹಳೇ ಸಿ ಸಿ ಟೀವಿ ಫೂಟೆಜ್ ಇಟ್ಕೊಂಡು ಕೂತಿದ್ರು! ಈ ಪತ್ರಿಕೆಯವರನ್ನ, ಮಂತ್ರಿಗಳನ್ನ ಹಿಡಿದು ಕೇಳಿದ್ರೆ, ಸತ್ಯ ಗೊತ್ತಾಗಿರೋದು. ಪಾಪ.. ನಮ್ಮ ಪೊಲೀಸರು ದಿನಾ ಬೆಳಿಗ್ಗೆ ನೆನೆಸಿದ ಬಾದಾಮಿ ತಿನ್ನೋಲ್ಲ ಅನ್ಸುತ್ತೆ. ಬುದ್ದಿನೇ ಇಲ್ಲ.

ಆದುದರಿಂದ ನಾವು ಕೆಲವೊಂದು ಸಣ್ಣ ಪುಟ್ಟ ಸಲಹೆಗಳನ್ನು ನಮ್ಮ ದೊರೆಗೆ ಕೊಡುತ್ತಿರುವೆ. (ಸಲಹೆ ಕೊಡೋಕೆ ಅಂತಲೇ, ಸುಮಾರು ಜನರನ್ನು ಅವರು ಸಂಬಳ ಕೊಟ್ಟು ಇಟ್ಟುಕೊಂಡಿರಬಹುದು. ಆದರೆ ಈ ಕೆಳಕಂಡ ಸಲಹೆಗಳು ಪೂರ್ಣ ಉಚಿತ.)

೧. ಜನ ಬುದ್ದಿವಂತರು ಆದರೆ ಸಾಲದು. ಪೋಲಿಗಳೂ ..ಓಹ್ ಸಾರಿ. ಪೋಲಿಸರೂ ಬುದ್ದಿವಂತರು ಆಗಬೇಕು. ಹಾಗಾಗಿ ನಮ್ಮ ಶ್ರೀಧರ್ ನೇತೃತ್ವದಲ್ಲಿ ಪೊಲೀಸರಿಗೆ ತರಬೇತಿ ಕೊಡಿಸಬೇಕು. ಹೆಂಗೂ ಅಗ್ನಿಗೆ ಪೋಲಿಸ್
ಠಾಣೆ ಹೊಸದಲ್ಲ. ಸೆಲ್ ಒಳಗೆ ಕುಂತೇ ಅವರು ಟ್ರೈನಿಂಗ್ ಕೊಡಬಲ್ಲರು.

೨. ಮೂಢನಂಬಿಕೆ ವಿರುದ್ದ ಹೋರಾಡುತ್ತಿರುವ ಕಾವಿಧಾರಿ  ಶ್ರೀ ಶ್ರೀ ಶ್ರೀ ನಿಡುಕಾಮಿಡಿ ಸ್ವಾಮೀಜಿ (!) ಅವರಿಗೆ ಯಾರ ಕೊಲೆ ಯಾರು ಮಾಡಿದರು , ಮುಂದೆ ಯಾರ ಕೊಲೆ ಆಗಲಿದೆ ಎಂದೆಲ್ಲಾ ತಿಳಿದಿದೆ. ಅವರನ್ನು ಇಲಾಖೆಗೆ ಪತ್ತೆದಾರಿಕೆ ವಿಭಾಗಕ್ಕೆ ಸಲಹೆ ಕೊಡಲು ನೇಮಕ ಮಾಡಿಕೊಳ್ಳಬೇಕು. ಅವಾಗ ಎರಡೇ ನಿಮಿಷದಲ್ಲಿ ಎಲ್ಲಾ ಕೇಸುಗಳು ಕ್ಲೊಜು ಆಗುವುದು.

೩. ನಮ್ಮ ಬರಗೆಟ್ಟ ಸಾಹಿತಿ .. ತೋಪು ಸಿನೆಮ ನಿರ್ದೇಶಕ (ತೋ ಯಾವ್ದೋ ಒಂದು ಹೆಸರು. ಮಕ್ಕಳ ಪುಸ್ತಕದಲ್ಲಿ ತಪ್ಪಾದಂತೆ ಇಲ್ಲೂ ಅವರಹೆಸರು ಬಿಟ್ಟು ಹೋಗಿದೆ ಬಿಡಿ) .. ಹಾಗು ಪ್ರಶಸ್ತಿ ವಿಜೇತ ಭಗವಾನರ್ ಗೆ ಇತಿಹಾಸ / ಪುರಾಣದಲ್ಲಿ ಯಾರು – ಯಾರನ್ನ ಸಾಯಿಸಿದರು, ಯಾಕೆ ಸಾಯಿಸಿದರು ಎಂದೆಲ್ಲಾ ತಿಳಿದಿದೆ. ಹಾಗಾಗಿ, ಇವರುಗಳ ಕೈಲಿ, ಹೊಸದಾಗಿ ಕಾವ್ಯ – ಪುರಾಣ ಎಲ್ಲವನ್ನೂ  ಅರಾಬಿಕ್, ಲ್ಯಾಟಿನ್ ಭಾಷೆಯಲ್ಲಿ ಬರೆಸಬೇಕು. (ಪಾಳಿ ಭಾಷೆ ಎಂದಿರ? ಸನ್ಮಾನ್ಯರು ಬುದ್ದನನ್ನು ಓದಿಲ್ಲ ಬಿಡಿ. ಹಂಗಾಗಿ ಪಾಳಿಯ ಹೆಸರಿಲ್ಲ)

೪. ಇಷ್ಟು ಮಾಡಿದರೆ ಸಾಲದು. ಸರಕಾರ ಕೆಲವು ಹೊಸ ಕಾನೂನು ಕೂಡ ಜಾರಿಗೆ ತರಬೇಕಾಗುತ್ತದೆ. ಉದಾ: ಅರ್ ಎಸ್ ಎಸ್ / ಬಿಜೇಪಿ ಯವರು ಯಾರೇ ಕೊಲೆಯಾದರೂ .. ಅದನ್ನು ಆತ್ಮಹತ್ಯೆ ಎಂದು ಘೋಷಿಸಬೇಕು. ಹಾಗು ಮಿಕ್ಕ ಯಾರೇ ಸತ್ತರೂ.. ಅದಕ್ಕೆ, ಅರ್ ಎಸ್ ಎಸ್ ಕಾರಣ ಎಂದು ತಿಳಿಸಿ, ಸಿಕ್ಕವರನ್ನು ಹಿಡಿದು ಬಡಿಯಬೇಕು. (ಅನಂತ ಮೂರ್ತಿಯವರು ತೀರಿಕೊಂಡಾಗ .. ಹಿಡಿದು ಬಡಿದರಲ್ಲ ಹಂಗೆ ) ಬೇಕಿದ್ರೆ ಈ ಕಾಯಿದೆಗೆ ಜನ್ನತ್ ಭಾಗ್ಯ ಎಂದು ಹೆಸರಿಡಲಿ. ನನ್ನ ಪೂರ್ಣ ಬೆಂಬಲ ಇದೆ.


ಇಷ್ಟು ಮಾಡಿದರೆ ಸಾಕು.
ಕರ್ನಾಟಕ ಪೋಲಿಸ್ ಹೆಸರು ಉಚ್ಛ್ರಾಯ ಸ್ಥಿತಿಗೆ ಹೋಗುತ್ತದೆ. ಸಾಯಿಕುಮಾರ್ ನಟಿಸಿ – ಕನ್ನಡಿಗರನ್ನು ರಂಜಿಸಿದಕ್ಕೂ ಒಂದು ಅರ್ಥ ಸಿಗುತ್ತದೆ.

ಮತ್ತೆ ಮಿಕ್ಕಂತೆ ಎಲ್ಲಾ ಸೌಖ್ಯ.
ಸರಕಾರದ ದಯೆಯಿಂದ ನಾನು ಇನ್ನೂ ಜೀವಂತ ಇದ್ದೇನೆ. ಇಷ್ಟೆಲ್ಲಾ ಮಳೆ ಬಂದು ಅನಾಹುತ ಆದರೂ, ಸ್ವಲ್ಪ ಲೆಟ್ ಆದರೂ ಮನೆಗೆ ಜೀವಂತ ತಲುಪಿದ್ದೇನೆ. ಇದಕ್ಕೆಲ್ಲ ನಿಮ್ಮ ದಕ್ಷ ಆಡಳಿತವೇ ಕಾರಣ.

ನಿಮ್ಮನ್ನು ಜೀಸಸ್ ಸುಖವಾಗಿ ಇಟ್ಟಿರಲಿ ಎಂದು ಎರಡು ಬಾಳೆಹಣ್ಣು ನೈವೇದ್ಯ ಮಾಡಿ ಬೇಡಿಕೊಳ್ಳುವೆ.