Wednesday, December 7, 2011

ದೆವ್ವ - ಒಂದು ಪತ್ತೆ ದಾರಿ ಕಥೆನಿವೆಂದಾದರೂ ಬೆಂಗಳೂರಿನ ಕಾರ್ಪೋರೇಶನ್ ಸಮೀಪದ ಸಂಪಂಗಿರಾಮ್ ನಗರಕ್ಕೆ ಬಂದಿದ್ದೇ ಆದಲ್ಲಿ, ನಿಮ್ಮ ವಾಸನೆಯನ್ನು ನನ್ನ ಪತ್ತೆಧಾರ ಮಿತ್ರ ಗುರುತಿಸಿಯೇ ಇರುತ್ತಾನೆ. ಪತ್ತೆದಾರ ಪುರುಷೋತ್ತಮ, ಅಜಿತ ಮುಂತಾದವರ ಹಾಗೆ ಇವನು ಕೂಡ ಒಂದು ಮಟ್ಟಿಗೆ ಫೇಮಸ್ ಕೂಡ ಹೌದು. ತನ್ನ ಜನ್ಮ ಕಾರಣವೇ ಪತ್ತೆದಾರಿಕೆ! ಜನರಿಗೆ ಸಹಾಯ ಮಾಡುವುದೇ ಗುರಿ ಎಂದು ಕೊಂಡವನು ನಮ್ಮ ವರುಣ.ಇರಲಿ ಸದ್ಯಕ್ಕೆ ಈ ದೆವ್ವದ ಕೇಸಿಗೆ ಬರೋಣ. ಇಲ್ಲಿ ದೆವ್ವ, ದೆವ್ವಗಳನ್ನು ಏಕವಚನದಲ್ಲಿ ಸಂಭೋದಿಸಲಾಗಿದೆ , ದಯಮಾಡಿ ದೆವ್ವಾಭಿಮಾನಿಗಳು ಬೇಸರಿಸಿ ಕೊಳ್ಳದಿರಿ.

ಮೊನ್ನೆ ರಾತ್ರೆ ಕರೆಂಟು ಇಲ್ಲವಾದ್ದರಿಂದ ಹುರಿದ ನೆಲಗಡಲೆ ತಿನ್ನುತ್ತಾ ಕೂತಿದ್ದೆವು, ಅಷ್ಟರಲ್ಲಿ ವರುಣ ನ ಮೊಬೈಲ್ ರಿಂಗುಣಿಸಿತು. ಮಾತನಾಡುವಾಗ ವರುಣ ನ ಅರಳಿದ ಮುಖ ನೋಡಿ, ಆ ಕಡೆ ಇರೋದು ಒಂದು ಹುಡುಗಿ ಎಂದು ಗ್ಯಾರಂಟಿ ಆಯಿತು. (ನಂಗೂ ಕೂಡ ಸ್ವಲ್ಪ ಪತ್ತೆ ದಾರಿಕೆ ಬರುತ್ತೆ ) ಆಮೇಲೆ ಅವನು 5 ನಿಮಿಷ ನಾಪತ್ತೆ ಕೂಡ ಆದ. ವಾಪಸ್ ಬರೋ ಹೊತ್ತಿಗೆ ಕರೆಂಟು ಬಂದಿತ್ತು. ಟೀವಿ ಲಿ ಸದಾನಂದ ಗೌಡರ ನಗು ನೂ ಕಾಣಿಸ್ತಾ ಇತ್ತು. ಆಮೇಲೆ ಕಾಲ್ ಬಗ್ಗೆ ಹೇಳಿದ್ದು ಇಷ್ಟು. ಫೋನ್ ಬಂದಿದ್ದು ದೂರದ ಅಮೆರಿಕೆ ಇಂದ, ಮೂಲತಃ ಬೆಂಗಳೂರು ಮೂಲದ ನಯನ ಅಂತೆ. ಇಲ್ಲೇ ಕೋಣನಕುಂಟೆ ಲಿ ಅವರ ಬಂಗಲೆ ಕೂಡ ಇದೆ. ಆದರೆ ಆ ಬಂಗಲೆಲಿ ದೆವ್ವ ಇದೆಯಂತೆ. ಯಾರು ಹೊಗೊಕು ಬಿಡ್ತಾ ಇಲ್ವಂತೆ. ಹೋದೋರಿಗೆ ಗಲಾಟೆ ಮಾಡಿ, ಹೆದರಿಸಿ ಕಳ್ಸುತ್ತೆ ಅಂತೆ. ಅವರಪ್ಪ ಹೋದ ತಿಂಗಳು ಬಂದಾಗ ಸಿಕ್ಕಾಪಟ್ಟೆ ಕಾಟ ಕೊಡ್ತಂತೆ. ಅವರು ಯಾರೋ ಕಿಡಿಗೇಡಿ ಗಳು ಅಂದುಕೊಂಡು ಬ್ಯಾಟರಿ ಹಾಕಿಕೊಂಡು ಹುಡುಕೋಕೆ ಹೋದ್ರೆ ಅವರ ಮೇಲೆ ಪಾತ್ರೆಗಳನ್ನ ಎಸೆದು ಹೆದರಿಸಿ ಕಳ್ಸಿತು ಅಂತೆ. ಕೊನೆಗವರು ದಾರಿ ಕಾಣದ ಪರಿಚಯಸ್ತರನ್ನ ಕೇಳಿದ್ರೆ ನೀವು ಕೊಪ್ಪಕ್ಕೆ, ಕೊಳ್ಳೇಗಾಲಕ್ಕೆ ಹೋಗಿ ಮಾಂತ್ರಿಕರನ್ನು ಕರೀರಿ ಅಂದರಂತೆ. ಇವರು ಆಪ್ತ ಮಿತ್ರ ದ ರಾಮಚಂದ್ರ ಆಚಾರ್ಯ ರನ್ನೇ ಕರೆಸಿದರಂತೆ. ಆದ್ರೆ ದೆವ್ವ ಅವರ ಮೇಲೆ ನೆ ಹಲ್ಲೆ ಮಾಡ್ತಂತೆ. ಆದುದರಿಂದ ಈ ದೆವ್ವದ ರಹಸ್ಯ ಭೇದಿಸುವ ಅಸೈನ್ಮೆಂಟ್ ನನಗೆ ಸಿಕ್ಕಿದೆ ಅಂದು ಮಾತು ಮುಗಿಸಿದ. ಪಾಪ ಅವರು ನಮ್ಮನ್ನ ದೆವ್ವ ಹಿಡಿಯೋರು ಅಂತ ಭಾವಿಸಿದ್ರೋ ಏನೋ? ಅಥವಾ ಇವ್ನು ಹುಡುಗೀರು ಫೋನ್ ಮಾಡಿದ್ರೆ ಯಾವ ಕೇಸ್ ಬೇಕಾದ್ರೂ ತಗೋತಾನ ಅಂತ ಗುಮಾನಿ ನೂ ಬಂತು.

ಊಟ ಆದ ಕೂಡಲೇ ಎರಡು ಬ್ಯಾಟರಿ ಹಿಡ್ಕೊಂಡು ಹೋಗೋಣ ಅಂತ ಅವನು ರೆಡಿ ಆದ್ರೆ ನಂಗೆ ಯಾಕೋ ಜ್ವರ ಬಂದಿದೆ ಅಂತ ಅನ್ನಿಸ್ತು. (ಭಾಗಷ್ಯ ಅಲ್ಲಿ ಇದ್ದಿದ್ದು ಬ್ರಹ್ಮ ರಾಕ್ಷಸ ಇರಬೇಕು )ಅವನು ಬೈಕೊಂಡು ಒಬ್ನೇ ಹೋದ, ನಾನು ಮತ್ತೆ ಕಳ್ಳೆ ಕಾಯಿ ಮೆಲ್ಲುತ್ತಾ ನಿದ್ದೆ ಹೋದೆ. ಬೆಳಿಗ್ಗೆ ಪಕ್ಕದ ಮನೆ ನೀಲು ಆಂಟಿ ಮನೆ ಇಂದ ಒಂದು ೨೦ ನೀರು ದೋಸೆ ಬಂತು. ವರುಣ ಬರೋ ಸೂಚನೆ ಇರಲಿಲ್ಲ ವಾದ್ದರಿಂದ (ಅಥವಾ ಹಾಗೆ ಅಂದುಕೊಂಡು) ನಾನೊಬ್ಬನೇ ತಿಂದೆ. ಸಂಜೆ ಕೂಡ ಬರಲಿಲ್ಲವಾದ್ದರಿಂದ ನಾನೊಬ್ನೇ ಹೋಗಿ ಮೊಸರು ವಡೆ, ಮಸಾಲೆ ದೋಸೆ ತಿಂದು ಬಂದೆ. ಸ್ವಲ್ಪ ಹೊತ್ತಲ್ಲಿ "ನಾಡಿದ್ದು ಬರ್ತೀನಿ" ಅಂತ ಮೆಸೇಜ್ ಬಂತು. ಸರಿ ಅಲ್ಲಿ ತನಕ ಒಬ್ನೇ ಕೂತು ಟೀವಿ ನೈನ್ ನೋಡಬಹುದು ಅಂತ ಕುಶಿಯಾದೆ.

ಎರಡು ದಿನ ಆದ ಮೇಲೆ ಬಂದ. ಕೆಲಸ ಎಲ್ಲಾ ಮುಗೀತು, ಸಂಜೆ ಅವರು ಬರ್ತಾರೆ ರೆಡಿ ಆಗಿರು ಅಂದ. ದೆವ್ವ ಹೋಯ್ತಾ ಅಂತ ಕೇಳಬೇಕು ಅಂತ ಅನ್ನಿಸಿದ್ರೂ, ಸಂಜೆ ಹೇಳ್ತಾನಲ್ಲ ಅವಾಗ್ಲೇ ಕೇಳೋಣ ಅಂತ ಸುಮ್ಮನಾದೆ. 5 ಗಂಟೆ ಹೊತ್ತಿಗೆ ಅವರು ಬಂದ್ರು, ನಯನ ನಿಜಕ್ಕೂ ನಯನ ಮನೋಹರ ವಾಗೆ ಇದ್ಲು. ಬಂದವಳೇ ತುಂಬಾ ಥ್ಯಾಂಕ್ ಯು ವರುಣ್ ಎಂದವಳೇ ತಬ್ಬಿಕೊಂಡಳು. (ನಂಗೆ ಇಂತಹ ಸನ್ನಿವೇಶಗಳಲ್ಲಿ ಅವನ ಮೇಲೆ ವಿಪರೀತ ಅಸೂಯೆ ಆಗುತ್ತೆ )

ಸೋಫಾ ದಲ್ಲಿ ಕೂರುತಿದ್ದ ಹಾಗೆ ಮಿಸ್ಟರ್ ವರುಣ್ ದೆವ್ವ ಹೊಯ್ತ? ಏನು ಮಾಡಿದ್ರಿ? ಯಾರ ದೆವ್ವ ಅದು? ಅಂತೆಲ್ಲ ಕೇಳಿದಳು.

ತನ್ನ ಸಾಹಸ ಕಾರ್ಯದ ಬಗ್ಗೆ ಹೇಳೋದ್ರಲ್ಲಿ ವರುಣ ಗೆ ಯಾವಾಗಲು ಆಸಕ್ತಿ ಜಾಸ್ತಿ. ಶುರು ಮಾಡಿಕೊಂಡ.

ಅ ಮನೆಯ ದೆವ್ವ ಬಗ್ಗೆ ಇವನು ಕೇಳಿದ್ನಂತೆ. (ನಾನು ಹೈ ಕೋರ್ಟ್ ದೆವ್ವದ ಬಗ್ಗೆ ಮಾತ್ರ ಕೇಳಿದ್ದೆ. ) ರಾತ್ರೆಯೇ "ಭೂತ ಬಂಗಲೆ" ಪಕ್ಕದ ಮನೆಗೆ ಹೋಗಿ ವಿಚಾರಿಸಿದ್ನಂತೆ. ಅ ಮನೇಲಿ ಮೊದಲು ಇದ್ದವರು ದಂಪತಿಗಳು. ನಯನಗೆ ದೂರದ ಸಂಬಂದಿಗಳು ಕೂಡ ಹೌದು. ಆದ್ರೆ ಆ ದಂಪತಿಗಳು ಯಾವಾಗಲು ಕಿತ್ತಾಡೋರಂತೆ. ಹಿಂಗಿರ ಬೇಕಾದ್ರೆ ರಸ್ತೆ ಅಪಘಾತದಲ್ಲಿ ಅವರು ತೀರಿಕೊಂಡರಂತೆ. ಇವನಿಗೆ ಅವಾಗ್ಲೇ ಡೌಟ್ ಬಂತಂತೆ. ದೆವ್ವ ಇರೋದೇ ಆದ್ರೆ ಅದು ಅ ದಂಪತಿ ಗಳು ಅಂತ. ರಾತ್ರೆ ಅ ಕಾಂಪೌಂಡ್ ಗೆ ಕಿವಿ ಕೊಟ್ಟು ನಿಂತ್ರೆ ಬರೇ ಒಂದು ಹೆಣ್ಣು ದ್ವನಿ ಕೇಳ್ತಾ ಇತ್ತಂತೆ. ಅದು ನೆಲ ಕುಟ್ಟೋದು, ಅಳೋದು, ಕಿರಿಚೋದು ಮಾಡ್ತಾ ಇತ್ತಂತೆ. ಕೆಲವೊಮ್ಮೆ ಪಾತ್ರೆ ಗಳನ್ನೂ ಬಿಸುಟು ಶಬ್ದ ಮಾಡ್ತಾ ಇತ್ತಂತೆ. ಆದರು ಇವ್ನು ದೈರ್ಯ ಮಾಡಿ ಒಳಗೆ ಹೋಗಿ ಯಾರು ನೀನು? ಯಾಕೆ ಅಳುತ್ತಾ ಇದ್ದಿ? ನಾನೇನಾದ್ರು ಸಹಾಯ ಮಾಡಬಹುದೇ? ಅಂತ ಕೇಳೆ ಬಿಟ್ಟನಂತೆ.

ದೆವ್ವ ಏನು ಕಣ್ಣಿಗೆ ಕಾಣುತ್ತ? ಆದರೂ ಸ್ವಲ್ಪ ಸ್ಥೈರ್ಯ ತಗೊಂಡು, ನೋಡು ನಾನೊಬ್ಬ ಮಾನವ ಆದರೇನಂತೆ, ಮುಂದೆ ನಿನ್ ತರಾನೆ ದೆವ್ವ ಆಗೋನು, ಹೇಳು ಯಾಕೆ ಈ ತರ ಅಳುತ್ತಾ ಇದ್ದೀಯ? ಇದ್ದಕಿದ್ದಂತೆ ಮನುಷ್ರನ್ನ ಕಂಡು ದೆವ್ವ ಹೆದ್ರಿತೋ, ಅಥವಾ ಮಾತಡ್ಸಿದ್ದಕ್ಕೆ ಕುಶಿಯ್ತೋ ಗೊತ್ತಿಲ್ಲ, ಒಟ್ಟಾರೆ ಕಥೆ ಹೇಳ್ತಂತೆ. ಅ ಮನೇಲಿ ಮೊದ್ಲು ಇದ್ದರಲ್ಲ ದಂಪತಿಗಳು, ಹೆಂಡತಿನೇ ಅ ದೆವ್ವ ಅಂತೆ. ಅವರು ಅಪಘಾತದಲ್ಲಿ ಸತ್ತ ಮೇಲೆ ಯಮ ಕಿಂಕರರು ಬಂದು ಇವರನ್ನ ಕರ್ಕೊಂಡು ಹೋಗ್ತಾ ಇರ್ಬೇಕಾದ್ರೆ,(somewhere in Vaitarnika river) ನಿಮ್ಮಿಂದಲೇ ಆಕ್ಸಿಡೆಂಟ್ ಆಗಿದ್ದು ಅಂತ ಗಂಡಗೆ ಬೈದ್ಲಂತೆ. ಅಷ್ಟಕ್ಕೇ ಹೆದರಿದ ಗಂಡ ಕ್ಷಣ ಮಾತ್ರದಲ್ಲಿ ಕುಣಿಕೆ ಇಂದ ತಪ್ಪಿಸ್ಕೊಂಡು ಹಾರಿ ಹೋದನಂತೆ. ಈ ಹೆಂಗಸಿನ ಬಾಯಿ ಗಿಂತ ಯಮ ನ ಶಿಕ್ಷೆ ನೆ ಮೇಲು ಎಂದು ಬಾವಿಸಿದ ಕಿಂಕರರು "ನಿನ್ ಗಂಡ ಸಿಕ್ಕ ಮೇಲೆ ನಮಗೆ ಮಿಸ್ ಕಾಲ್ ಕೊಡು ಅಂತ ಹೇಳಿ ಅವರು ಹೋದರಂತೆ" ಅತ್ಲಾಗೆ ಬಯ್ಯೋಕೆ ಗಂಡ ನೂ ಇಲ್ಲದೆ, ಸ್ವರ್ಗ ನೂ ಇಲ್ಲದೆ ಈಕೆ ಬೇಜಾರಾಗಿ ಆ ಮನೆಗೆ ಬಂದು ಕೂತ್ಲಂತೆ. ಇಲ್ಲಿಗೆ ಮೊದಲ ಭಾಗ ಮುಗೀತು ಅಂತ ಹೇಳಿ ಒಂದು ಸಿಪ್ಪು ಟೀ ಕುಡಿದು ಮತ್ತೆ ಮುಂದುವರಿಸಿದ.

ಅ ಗಂಡನಿಗೆ ಸಿನೆಮ ಹುಚ್ಚು, ಮೂರು ಹೊತ್ತು ಕಾಮಾಕ್ಯ ಥೇಟರ್ ನಲ್ಲಿ ಇರ್ತಿದ್ದ ಅಂತ ಪಕ್ಕದ ಮನೆಯವರು ಹೇಳಿದ್ರಿಂದ ಅವನು ಅಲ್ಲೇ ಎಲ್ಲಾದರು ಹುಣಸೆ ಮರಕ್ಕೆ ನೇತು ಹಾಕ್ಕೊಂಡು ಇರಬಹುದು ಅಂತ ಅನ್ನಿಸ್ತು. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಒಂದು ಹುಣಸೆ ಮರ ಇದ್ದಿದ್ದು ಗೊತ್ತಿತ್ತು. ನಿನ್ನೆ ರಾತ್ರೆ ಅಲ್ಲಿಗೆ ಹುಡುಕೊಂಡು ಹೋದೆ. ಸೆಕೆಂಡ್ ಶೋ ಆದ ನಂತರ ಮರದಿಂದ ಗಂಡು ದ್ವನಿ ಕೇಳಿಸ್ತು. ದೈರ್ಯ ಮಾಡ್ಕೊಂಡು ಮೊನ್ನೆ ರಾತ್ರೆ ಮಾಡಿದ್ದ ತರ ಆ ದೆವ್ವನು ಮತಾಡಿಸ್ದೆ. ನನ್ನ ಊಹೆ ನಿಜ ಆಗಿತ್ತು. ಅದು ಆ ಗಂಡನೇ! ಆಮೇಲೆ ತಡ ಮಾಡದೆ ಹೋಗಿ ಅ ಹೆಣ್ಣು ದೆವ್ವಕ್ಕೆ ವಿಷ್ಯ ಹೇಳಿದೆ. ಆಮೇಲೆ ಕಿಂಕರರಿಗೆ ಕಾಲ್ ಮಾಡು ಅಂತ ನಂ ಮೊಬೈಲ್ ಕೂಡ ಕೊಟ್ಟೆ. ಕ್ಷಣ ಮಾತ್ರದಲ್ಲಿ ಕಿಂಕರರು ಹೋಗಿ ಹಿಡ್ಕೊಂಡು ಬಂದ್ರು ಅನ್ಸುತ್ತೆ, ಅ ಗಂಡು ದೆವ್ವ ನಂಗೆ ಶಾಪ ಹಾಕ್ತ ಇರೋದು ಕೇಳಿಸ್ತು. ಸ್ವಲ್ಪ ಹೊತ್ತಲ್ಲಿ ಅಲ್ಲಿ ಶಬ್ದ ಎಲ್ಲ ಕಡಿಮೆ ಆಯಿತು. ಎಲ್ಲಾ ಯಮಪುರಿಗೆ ಹೋದರು. ಆಮೇಲೆ ನಾನು ದೆವ್ವ ದ ಶಾಪ ಪರಿಹಾರಕ್ಕೆ ಕೊಳ್ಳೇಗಾಲಕ್ಕೆ ಹೋಗಿ ತಾಯ್ತ ಕಟ್ಟಿಸ್ಕೊಂದು ಬೆಳಿಗ್ಗೆ ಬಂದೆ ಅಂತ ಹೇಳಿ ವರುಣ ಮಾತು ಮುಗಿಸಿದ. ಯಮಪುರಿಯ ಕಾಂಟಾಕ್ಟ್ ನಂಬರ್ ನಮ್ಮ ಯಾರಿಗೂ ಬೇಕಾಗಿಲ್ಲ ವಾದ್ದರಿಂದ ನಾವು ಕೇಳಲಿಲ್ಲ.

ಮಾತು ಕಥೆ ಎಲ್ಲಾ ಮುಗಿಸಿ ಅವರನ್ನು ಬೀಳ್ಕೊಡ್ತಾ ಇರಬೇಕಾದ್ರೆ ಒಂದು ಕಾಲ್ ಬಂತು. ಅದ್ಯಾವ್ದೋ ಭವಿಷ್ಯ ಹೇಳೋ ಸ್ವಾಮಿಜಿದು ತಾಳೆ ಗರಿಗಳು ನಾಪತ್ತೆ ಆಗಿದೆಯಂತೆ. ಸ್ವತಃ ಮಾಜಿ ಮುಖ್ಯ ಮಂತ್ರಿಗಳು ಸಹಾಯ ಕೇಳಿದ್ದಾರೆ. ಈಗ ನಾವು ಅಲ್ಲಿಗೆ ಹೊರಡಬೇಕಿದೆ.

ಇರಲಿ, ಈ ಪತ್ತೆದಾರನ ಜೊತೆ ಇರೋದು ನಾನು ಡಾಕ್ಟರ್ ಅಂತ ಅಂದು ಕೊಂಡರ? ಹಂಗೇನಿಲ್ಲ. ನಾನು ಮೂಲತಃ ಕೌನ್ಸೆಲ್ಲಿಂಗ್ ಮಾಡೋನು. ವರುಣ್ ಕೈಯಲ್ಲಿ ಕೇಸ್ ಆಗಿಲ್ಲ ಅಂದ್ರೆ ಅದು ನಂಗೆ ಬರುತ್ತೆ. "ನಿಮ್ಮ ಮನೇಲಿ ಕಳ್ಳತನ ಆಗೇ ಇಲ್ಲ, ನಿಮ್ಮ ಹತ್ತಿರ ಮುತ್ತಿನ ಹಾರ ಇರಲೇ ಇಲ್ಲ" ಅಂತೆಲ್ಲ ನಂಬಿಸಿ ನ್ಯಾಯ ಮಾರ್ಗವಾಗಿ ಫೀಸ್ ಪಡೆಯೋದು ನನ್ನ ಕೆಲಸ :)

ಅಂದ ಹಾಗೆ ನಿಮ್ಮ ಬಳಿ ಕೂಡ ಏನಾದ್ರು ಸಮಸ್ಯೆ ಇದ್ರೆ ನಮ್ಮನ್ನು ಸಂಪರ್ಕಿಸಬಹುದು. ದೆವ್ವ ಹಿಡಿತೀವಿ ಅಂತ ನಮಗೆ ಬಾಡಿ ಬ್ರಹ್ಮಾಂಡ ನ ಹಿಡಿಯೋ ಕೇಸ್ ಕೊಡಬೇಡಿ ಅಷ್ಟೇ. :)

ಶೀರ್ಷಿಕೆ ಕೊಡುಗೆ: ಫ್ಯೂಚರ್ ದೆವ್ವ ಚಂದ್ರು. :)