Wednesday, June 12, 2013

ಉತ್ತಮ ಪತಿ ಎಂದೆನಿಸಿಕೊಳ್ಳಲು...



“ಒಳ್ಳೆ ಗಂಡ ಸಿಗಲಿ” ಎಂಬ ಆಶಯಕ್ಕೆ ನಮ್ಮ ಶಾಸ್ತ್ರ ಪುರಾಣಗಳು ಯಾವತ್ತೂ ಹಲವು ಉದಾಹರಣೆಯನ್ನು ಸ್ತ್ರೀಯರಿಗೆ ಕೊಟ್ಟಿದೆ. ಪುರುಷರಿಗೆ ಈ ವಿಷಯದಲ್ಲಿ ಅಷ್ಟು ಅವಕಾಶ ಇದ್ದಂತಿಲ್ಲ. (ಅಥವ ನಾನು ಕೇಳಿಲ್ಲ. ) ಆದರೆ ಗಂಡಿನ ಜವಾಬ್ದಾರಿಗಳ ಬಗ್ಗೆ “ಮದುವೆ ಮಂಟಪ ದಲ್ಲೇ ಬೋಧನೆ” ಆಗುತ್ತದೆ. ಆದರೆ ದುರಂತಕ್ಕೆ ಅವುಗಳಲ್ಲಿ ಬಹಳಷ್ಟು ಈ ಕಾಲ ಘಟ್ಟಕ್ಕೆ ತಕ್ಕಂತೆ ಅಪ್ಡೇಟ್ ಆಗಿಲ್ಲ. ಹಾಗಾಗಿ “ಉತ್ತಮ ಪತಿಯಾಗುವುದು ಹೇಗೆ” ಎಂದು ನಮ್ಮ ಟೈಮ್ ಪಾಸು ತಂಡದ ಏಕ ಸದಸ್ಯ ಪೀಠವು ಚಿಂತಿಸಿ, ಯೋಚಿಸಿ, ಚರ್ಚಿಸಿ ಈ ಕೆಳಕಂಡ ಹಿತೋಪದೇಶಗಳನ್ನು ಸಿದ್ದಪಡಿಸಿದೆ.


ಮೊದಲನೇದಾಗಿ ಹೆಂಡತಿಯ ಮಾತಿಗೆ ಯಾವತ್ತೂ ಎದುರಾಡಲು ಹೋಗಬಾರದು. (ಅಂತಾ ದೈರ್ಯ ಯಾವ  ಗಂಡನಿಗೆ ಇದೆ  ಅಲ್ವ?) “ಹೌದು, ಸರಿ, ಹಾಗೆ ಆಗಲಿ, ಖಂಡಿತ.. ಮುಂತಾದ ಪದ ಬಳಕೆ ಮಾಡಬೇಕು. ಸ್ಥಿತಿ ಪ್ರಜ್ಞರಾಗಿ – ತರ್ಕ ಬದ್ದವಾಗಿ  ಮಾತಾಡಲು ಹೊರಟಿರೋ.. ನೀವು ಕೆಟ್ಟಿರಿ.

ಈಗಿನ ಕಾಲದ ಹುಡುಗೀರಿಗೆ ಅಡುಗೆ ಮನೆ ಅಂದ್ರೆ ಅಲರ್ಜಿ. ಸಾರಿನ ಪುಡಿಗೂ, ಹುಳಿ ಪುಡಿ ಗೂ ಇರೋ ವ್ಯತ್ಯಾಸವೇ ಬಹಳಷ್ಟು ಸಲ ಗೊತ್ತಿರೋಲ್ಲ. ಮಡದಿ ಏನು ಮಾಡಿ ಕೊಟ್ಟರೂ, ಯಾವುದೇ ರೀತಿಯ ವಿಮರ್ಶೆ ಮಾಡದೆ ಚಪ್ಪರಿಸುತ್ತಾ ತಿನ್ನಬೇಕು. ಸಾಧ್ಯವಾಗದೆ ಹೋದ್ರೆ, ತಾವೇ ಅಡುಗೆ ಮನೆಗೆ ಧಾಂಗುಡಿ ಇಟ್ಟು ಪ್ರೀತಿಯಿಂದ ಅಡುಗೆ ಮಾಡಿ ಬಡಿಸಬೇಕು.

ಹೆಂಡತಿಗೆ ಅಗತ್ಯ ಇದ್ದಾಗೆಲ್ಲ ದುಡ್ಡು ಕೊಡುತ್ತಾ ಇರಬೇಕು. ಸಾದ್ಯ ಆದ್ರೆ, ಕ್ರೆಡಿಟ್ ಕಾರ್ಡ್ ನೆ ಕೊಡಬೇಕು. ಆಮೇಲೆ ಬಿಲ್ ಬಂದಮೇಲೆ ಖರ್ಚಿನ ವಿವರ ಕೇಳುವ ಮೂರ್ಖ ಕೆಲಸಕ್ಕೆ ಕೈ ಹಾಕಬಾರದು. ತುಟಿ ಪಿಟಿಕ್ ಎನ್ನದೆ ಅದರ ಬಿಲ್ ಕಟ್ಟಬೇಕು.

ಟೀವಿಯಲ್ಲಿ ಇಂಡಿಯಾ – ಪಾಕಿಸ್ತಾನ್ ಮ್ಯಾಚ್ ಬರ್ತಾ ಇದ್ರೂ ಅಥವಾ ಅಪ್ಪಿ ತಪ್ಪಿ ಮನಮೋಹನ ಸಿಂಗ್ ಮಾತಾಡುತ್ತಾ ಇದ್ರೂ (ಎಂಟನೆ ಅದ್ಭುತ) ಅದನ್ನ ನೋಡದೆ, “ಪುಟ್ಟ ಗೌರಿ ಮದುವೆ” ಅಥವಾ ಇನ್ನಾವುದೇ ಹೆಂಡತಿ ನೋಡುವ ಧಾರವಾಹಿ ನೋಡಬೇಕು. ಮುಖ್ಯವಾಗಿ ಆ ಧಾರವಾಹಿ ಸಂಭಾಷಣೆ ಬಗ್ಗೆ, ಪಾತ್ರಗಳ ಬಗ್ಗೆ.. ನಿಮ್ಮ ತರ್ಕಶಾಸ್ತ್ರ ಪ್ರಾವಿಣ್ಯತೆಯನ್ನು ಪ್ರದರ್ಶಿಸಬಾರದು.

ಹೆಂಡತಿ ಕೆಲ್ಸಕ್ಕೆ ಹೋಗುತ್ತಿದ್ದಲ್ಲಿ, ನಿಮ್ಮ ಬೈಕು / ಕಾರಿನಲ್ಲಿ ಉಚಿತ ಸಾರಿಗೆ ವ್ಯವಸ್ತೆ ಕೊಡಬೇಕು. ನಂಗೆ ಅರ್ಥ ಆಗುತ್ತೆ, ಬೈಕು / ಕಾರಿನಲ್ಲಿ ಸ್ವಂತ ಹೆಂಡತಿನ ಕೂರಿಸಿಕೊಂಡು ಹೋಗೋದು ಎಷ್ಟು ಕಷ್ಟದ ವಿಚಾರ ಅಂತ. ಬೇರೆ ಏನಕ್ಕೂ ಅಲ್ಲ, ಜೋರಾಗಿ ಹೋಗು, ಇಲ್ಲಿ ನಿಧಾನಕ್ಕೆ ಹೋಗು, ಈಗ ಕ್ಲಚ್ ಹಿಡಿ ಎಂಬೆಲ್ಲ ಉಪದೇಶ ಕೇಳಬೇಕಲ್ಲ...

ಹೆಂಡತಿಯ ಮಾತಿಗೆ ಯಾವತ್ತೂ, ವ್ಯಾಕರಣ ಬದ್ದವಾದ – ನಿಘಂಟಿನಲ್ಲಿ ವಿವರಿಸಿರುವಂತ ಅರ್ಥವೇ ಇರುತ್ತದೆ ಎಂದು ಭಾವಿಸಬೇಡಿ. ಉದಾ: ಮನೇಲಿ ಕೂತು ಯಾಕೋ ತುಂಬಾ ಬೇಜಾರ್ ಆಗ್ತಾ ಇದೆ ಅಂದ್ರೆ, ಬರುವ ವಾರಾಂತ್ಯ ಎಲ್ಲಾದರು ಹೊರಗೆ ಸುತ್ತಾಡಿಕೊಂಡು ಬರೋಣ ವೆಂತಲೂ! ಊರಿಂದ ಅಮ್ಮ ಫೋನ್ ಮಾಡಿದ್ದಳು ಅಂದ್ರೆ.. ನಿಮ್ಮ ಅತ್ತೆಯವರು ಆಗಮಿಸುತ್ತಾ ಇದ್ದಾರೆ ಅಥವಾ ನಿಮ್ಮ ಮಡದಿಗೆ ತವರಿನ ನೆನಪು ತುಂಬಾ ಆಗುತ್ತಿದೆ ಎಂತಲೂ ಆಗಿರುತ್ತದೆ. ಈ “ಹೆಂಡತಿ ಬಾಷೆ” ಕಲಿಯಲು ಸಮಯ ಹಿಡಿಯುತ್ತದೆ. ಆದಷ್ಟು ಬೇಗ ಕಲಿಯುವುದು ಒಳ್ಳೆಯದು.

ನಿಮ್ಮ ಭಾಷಾ ಜ್ಞಾನ ವೃದ್ದಿಸಿಕೊಂಡಂತೆ, ನೆನಪಿನ ಶಕ್ತಿಯನ್ನು ಕೂಡ ಹೆಚ್ಚಿಸಿಕೊಳ್ಳಬೇಕು. ನಿಮ್ಮ ಮದುವೆಯ ದಿನ, ಹುಟ್ಟಿದ ಹಬ್ಬ ಮುಂತಾದುವು ಚೆನ್ನಾಗಿ ನೆನಪಿಟ್ಟುಕೊಳ್ಳಬೇಕು. ನಿಮ್ಮದು ಪ್ರೇಮ ವಿವಾಹವಾಗಿದ್ದಾರೆ, ಮೊದಲ ಭೇಟಿ, ಪ್ರೇಮ ನಿವೇದಿಸಿಕೊಂಡ ದಿನ, ಗಳಿಗೆ ಮುಂತಾದುವು ಕೂಡ ನೆನಪಿನ ಕೋಶದಲ್ಲಿ ಭದ್ರವಾಗಿ ಇರಬೇಕು. ನಂತರ “ಒಳ್ಳೆಯ” ಉಡುಗೊರೆಯೊಂದಿಗೆ ನಿಮ್ಮ ನೆನಪಿನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು. ಉಡುಗೊರೆ ಇಲ್ಲದಿದ್ದಲ್ಲಿ, ನೆನಪಿಟ್ಟುಕೊಂಡಿದ್ದು  ಕೂಡ ಪ್ರಯೋಜನಕ್ಕೆ ಬಾರದು.

ಮನೆ ಅಂದ ಮೇಲೆ ಅತ್ತೆ ಸೊಸೆ ಜಗಳ ಇದ್ದಿದ್ದೇ. ಇದೊಂತರ “ಅತ್ತ ದರಿ, ಇತ್ತ ಪುಲಿ” ಸಂಧರ್ಭ. ಈ ಸಮಸ್ಯೆ ಬಂದಾಗೆಲ್ಲ ಅದನ್ನು ಭೇದಿಸುವಲ್ಲಿ ಯಶಸ್ವಿ ಆದಲ್ಲಿ.. ನೀವು ಯಶಸ್ವಿ ಗಂಡ ಏನು.. ಯಶಸ್ವಿ ಮಾನವ ಜೀವಿ ಅಂತ ಗುರುತಿಸಲ್ಪಡುತ್ತಿರಿ.


ಈ ಮೇಲೆ ನಮೂದಿಸಿರುವಂತ ಮಾರ್ಗ ಸೂಚಿಯನ್ನು ಅನುಸರಿಸಿ ಯಶಸ್ವೀ ಗಂಡ ಎಂದು ಬಿರುದು ಪಡೆಯಬೇಕಾಗಿ, ಟೈಮ್ ಪಾಸ್ ಪೀಠವು ಹಾರೈಸುತ್ತದೆ.


(ನಿಮಗೆ ಇದಕ್ಕೂ ಮಿಗಿಲಾದ ಮಾರ್ಗ ಸೂಚಿಗಳು ಗೊತ್ತಿದ್ದಲ್ಲಿ / ಗೊತ್ತಾದಲ್ಲಿ, ಅದನ್ನ ಇಲ್ಲಿ ಹಂಚಿಕೊಂಡು ಪುರುಷ ಜನಾಂಗದ ಏಳಿಗೆಗೆ ಸಹಕರಿಸಬೇಕಾಗಿ ಕೋರಿಕೆ)