Wednesday, January 13, 2010

ಪ್ರೇಮಪತ್ರಕ್ಕೂ ರೇಶನ್ (Recession)





ಸದ್ಯದ ಮಟ್ಟಿಗೆ ದೇವರು ಇದ್ದನೋ ಇಲ್ಲವೋ ಖಂಡಿತಾ ಗೊತ್ತಿಲ್ಲ, ಆದರೆ ದೆವ್ವಗಳು, ರಾಕ್ಷಸರು ಮುಂತಾದವು ಇದ್ದಾವೆ ಅನ್ನೋದಕ್ಕೆ ನಂಗಂತೂ ಸಾಕಷ್ಟು ಪುರಾವೆ ಸಿಕ್ಕಿದೆ. ಅಂದ ಹಾಗೆ ತಪ್ಪು ತಿಳಿಬೇಡಿ ನಾನು ರೇಣುಕಾಚಾರ್ಯನ ಬಗ್ಗೆ ಮಾತಾಡುತ್ತ ಇಲ್ಲ. ಇರಲಿ ನಿಮಗೆ ಪೂರ ವಿಷಯ ಹೇಳಿ ಬಿಡುವೆ.




ನನ್ನದು ಪ್ರೇಮ ವಿವಾಹ, ಇಬ್ಬರದೂ ಒಂದೇ ಕಂಪನಿ. ಅವಳನ್ನು ಇಲ್ಲೇ ಮೊದಲು ಭೇಟಿ ಮಾಡಿದ್ದು. ಮೊದಲನೇ ನೋಟವೋ, ಎರಡನೇ ನೋಟವೂ ಪ್ರೀತಿ ಅಂತೂ ಹುಟ್ಟಿತು. ಅವಳು ಒಪ್ಪಿದ್ದೂ ಆಯಿತು. ಒಮ್ಮೆ ಕಾಫಿ ಡೇ ನಲ್ಲಿ ಕೂತು ಕಾಫಿ ಕುಡಿತ ಇರಬೇಕಾದ್ರೆ ಅವಳ ಪಕ್ಕದ ಮನೆಯರು ನೋಡಿ ಮನೆಗೆ ವಿಷ್ಯ ಮುಟ್ಟಿಸಿಯು ಬಿಟ್ಟರು. (ಅಷ್ಟೂ ಮಾಡದೆ ಇದ್ರೆ ಅವರಿರೋದು ಯಾಕೆ? ) ನಾವುಗಳು ಈಗ ಸಿನಿಮಾ ದ ತರ ದೊಡ್ಡ ಯುದ್ದ ನಡೆಯುತ್ತೆ, ರೂಮಿನಲ್ಲಿ ಕೂಡಿ ಹಾಕುವುದು, ತುರ್ತಿನಲ್ಲಿ ಮಾವನ ಮಗನೋ, ಮಗಳನ್ನೋ ತಂದು ಗಂಟು ಹಾಕುವರು ಎಂದೆಲ್ಲಾ ಭಾವಿಸಿದ್ದೆವು. ಆದ್ರೆ ಹಾಗೆ ಏನೂ ಆಗದೆ (ಇಲ್ಲಿ ಸ್ಟೋರಿ ಬರೆದದ್ದು ಸಿನಿಮಾ ನಿರ್ದೇಶಕ ಅಲ್ಲವಲ್ಲ) ಮನೆಯರು ಸಂತೋಷದಿಂದ ಒಪ್ಪಿ ಬಿಟ್ಟರು. ಒಂದು ಶುಭ ಮುಹೂರ್ತದಲ್ಲಿ ಮದುವೆಯು ಮಾಡಿ ಬಿಟ್ಟರು. (15 ದಿನದ ಹಿಂದೆ ಅಷ್ಟೇ ಮದುವೆ ಆಗಿದ್ದು) ಅಂತು ನಮ್ಮ 4 ತಿಂಗಳ ಪ್ರೇಮ - ಪರಿಣಯ ಸುಖಾಂತ್ಯ ಗೊಂಡಿತು.




ಆದರೆ ತೊಂದರೆ ಶುರುವಾದದ್ದೇ ಆಮೇಲೆ ನೋಡಿ, ಅದೇನೋ ಪ್ರಾಜೆಕ್ಟ್ ಡೆಡ್ ಲೈನ್, ಡೆಲಿವರಿ ಅಂತೆಲ್ಲ ಕಿವಿ ಮೇಲೆ ಹೂವ ಇಟ್ಟು ನಮ್ಮ 15 ದಿನಗಳ ರಜೆ ಕೇವಲ 4 ದಿನಕ್ಕೆ ನಮ್ಮ ಮ್ಯಾನೇಜರ್ ಮಾಡಿ ಬಿಟ್ಟರು. ಹನಿ ಮೂನ್ ಗೆ ಸಿಂಗಪೋರ್, ಶೀಮ್ಲ ಅಂತೆಲ್ಲ ಪ್ಲಾನ್ ಹಾಕಿದ್ದು ಎಲ್ಲ ವೇಸ್ಟ್ ಆಗಿ, ಅದೇ ಆಫೀಸ್ ನ ಎ ಸಿ ಕೆಳಗೆ ಕೂರೋ ಹಾಗೆ ಆಯಿತು. ಇಷ್ಟೇ ಆಗಿದ್ದರೆ ತೊಂದರೆ ಇರುತ್ತಾ ಇರಲಿಲ್ಲ. ಪ್ರಾಜೆಕ್ಟ್ implementation ಗೆ ಅಂತ ನನ್ನಾಕೆ ನ 2 ತಿಂಗಳು ಅಮೆರಿಕ ಹೋಗು ಅನ್ನೋದೇ? ನಾನಾದರೂ ಹೇಗೆ ಬೇಡ ಅನ್ನಲಿ? ದುಡ್ಡು ಸಿಗೊದಿಲ್ವೆ? ಅವಳ ದುಡ್ಡಿನ ನಂಬಿಕೆಯಿಂದಲೇ ಅಲ್ವ ನಾನು ಹೋಂ ಲೋನ್ ತಗೊಂಡಿರೋದು.




ಸಂಸಾರ ನಡೆಸೋ ಬದಲು ಅವಳು ಪ್ಯಾಕ್ಕಿಂಗ್ ಮಾಡಿಕೊಂಡು ಹೊರಟೇ ಬಿಟ್ಟಳು, ನನಗೋ ವಿರಹ, ಅಷ್ಟೆಲ್ಲ ಲವ್ ಮಾಡಿ, ಮದುವೆ ಆದ್ರೆ ಇವಳು ದೂರ ತೀರಕ್ಕೆ ಹೊರಡೋದೇ? ಈ ಮ್ಯಾನೇಜರ್ ಗಳಿಗೆ ಅಷ್ಟು ಕರುಣೆ ಇರೋಲ್ವೆ? ಕಡೆ ಪಕ್ಷ ನವ ದಂಪತಿ ಗಳು ಅನ್ನೋ ಕರುಣೆ ತೋರಿದ್ದರೂ ಸಾಕಿತ್ತು. 2 ತಿಂಗಳು ಅಮೆರಿಕ ಕೆಲಸ ಮುಂದೆ ಹಾಕಿದ್ರೆ ಅವನದ್ದೇನು ಹೋಗ್ತಾ ಇತ್ತು. ಸರಿಯಾಗಿ 143 ದಿನಗಳಿಂದ ದಿನಕೊಂದರಂತೆ ಬರೆದ ಪ್ರೇಮ ಪತ್ರ (ಇಮೇಲ್ ನಲ್ಲಿ ), ಕಳುಹಿಸಿದ ಮೆಸೇಜ್ ಗಳೇ ನನಗೆ ಸದ್ಯಕ್ಕೆ ಸಂಗಾತಿ ಅಂತ ಭಾವಿಸಿ, ಅವಳು ಅಲ್ಲಿ ತಲುಪಿದ ಮೇಲೆ ನನಗೆ ಮೇಲ್ ಮಾಡುವ ಆಶ್ವಾಸನೆ ನು ತಗೊಂಡೆ.




ಅವಳು ಇಷ್ಟವರೆಗೂ ನನಗೆ ಬರಿ ಮೆಸೇಜ್ ಗಳು, ಮಿಸ್ ಕಾಲ್ ಗಳು ಕೊಡ್ತಾ ಇದ್ದಳೆ ಹೊರತು ಪ್ರೇಮ ಪತ್ರ ಬರೆದಿರಲಿಲ್ಲ. ನನ್ನ ಪತ್ರಗಳನ್ನ ಓದಿ "ಚೆನ್ನಾಗಿದೆ ಕಣೋ", "ನಾನು ಕನ್ನಡ ಎಂ ಎ ಮಾಡಿದ್ರೆ ಚೆನ್ನಾಗಿ ಇರ್ತಿತ್ತು ಕಣೋ" "ನಿನ್ನ ಪತ್ರಗಳಲ್ಲಿ ಹೋಲಿಕೆ ಗಳೆಲ್ಲ ಬರಿ ತಿನ್ನೋ ಐಟಂ ಗಳೇ ಇರ್ತಾವೆ" ಅನ್ನುವ ಫೀಡ್ ಬ್ಯಾಕ್ ಕೊಡುತ್ತಿದ್ದಳು ಹೊರತು, ನನಗೆ ಒಂದೇ ಒಂದು ಮೇಲ್ ಮಾಡಿರಲಿಲ್ಲ. ಪುಕ್ಕಟೆ ಮೆಸೇಜ್ ಇರಬೇಕಾದ್ರೆ ಪತ್ರ ಯಾಕೆ ಅನ್ನೋದು ಅವಳ ಅಂಬೋಣ.




ಇಂದಿಗೆ ಸರಿಯಾಗಿ ಅವಳು 2 ದಿನ ಆಗಿಯೇ ಬಿಟ್ಟಿದೆ. ನಿನ್ನೆ ರಾತ್ರೆ ಅವಳು ಕಾಲ್ ಮಾಡಿದ್ಲು, ಆದರೆ ನನ್ನದು ಸೂರ್ಯ ವಂಶ ಅದ್ದರಿಂದ ಬೆಳಕು ಮೂಡಿದ ಮೇಲೆಯೇ ನನಗೆ ತಿಳಿದದ್ದು. ನಂತರ ಆಫೀಸ್ ಗೆ ಬಂದು ಒಂದು ಸುಂದರವಾದ "ಕ್ಷಮಾಪನ!" ಪತ್ರ ಬರೆದೆ. ಮತ್ತೆ ಕಾಲ್ ಮಾಡಿದ್ರೆ ಉಗಿಸಿಕೊಬೇಕು, ಯಾರಿಗೆ ಬೇಕು, ನೆಮ್ಮದಿ ಹಾಳಗೋದರ ಜೊತೆ, ದುಡ್ಡು ಕೂಡ ಖರ್ಚು. ಅಮೆರಿಕ ದಿನ ಬಂದ ಮೇಲೆ ಎಂ ಟಿ ಅರ್ ನಲ್ಲಿ ಒಳ್ಳೆಯ ಊಟ ಕೊಡಿಸುವ ಭರವಸೆ ನೀಡಿದೆ. (ಈಗಲೂ ಊಟದ ಬಗ್ಗೆನೇ ಪ್ರಾಮಿಸ್ಸು ಅಂತ ಬೈಯಬಹುದೇನೋ? ) ಮೇಲ್ ಗೆ ರಿಪ್ಲೈ ಬರುವ ನಂಬಿಕೆ ಇತ್ತಾದರಿಂದ ಲ್ಯಾಪ್ ಟಾಪ್ ನ ಮನೆಗೇ ಹೊತ್ತೊಯ್ದೆ. ಅವಳ ಮೊದಲ ಪ್ರೇಮ ಪತ್ರ ಓದಲು ತುಂಬ ಉತ್ಸುಕನಾಗಿದ್ದೆ. ನಿನ್ನೆ ರಾತ್ರೆ 12 ರ ವರೆಗೆ ಆನ್ಲೈನ್ ಇದ್ದರು ಅವಳು ಬರಲಿಲ್ಲ, ಮೇಲ್ ಗೆ ಉತ್ತರ ನು ಬರಲಿಲ್ಲ. ಅದೆಷ್ಟು ಹೊತ್ತಿಗೆ ಕಣ್ಣು ಮುಚ್ಚಿದೇನೋ ಗೊತ್ತಿಲ್ಲ, ಬೆಳಿಗ್ಗೆ ಕಣ್ಣು ಬಿಡುವಾಗ 10 ಆಗಿತ್ತು, ಕಂಪ್ಯೂಟರ್ ಆನ್ ಮಾಡಿದರೆ ಅವಳಿಂದ ಮೊದಲ ಪ್ರೇಮ ಪತ್ರ ಬಂದಿದೆ. ಸಬ್ಜೆಕ್ಟ್ ಲೈನ್ ನಲ್ಲಿ "ನಿನಗಾಗಿ ಮಾತ್ರ" ಅನ್ನುವ ಒಕ್ಕಣೆ ಬೇರೆ. :) ನನಗೆ ಸ್ವರ್ಗಕ್ಕೆ ಮೂರೇ ಗೇಣು. ಇನ್ನೇನು ಮೇಲ್ ಓಪನ್ ಆಗಬೇಕು ಅನ್ನುವಷ್ಟರಲ್ಲಿ ನಮ್ಮ ಅಂಬಾನಿಗಳು ಕೈ ಕೊಡಬೇಕೇ? datacard ಮುಷ್ಕರ ಹೂಡಿ ಬಿಟ್ಟಿತು.


ಇನ್ನು ಆಫೀಸ್ ಗೆ ಹೋಗಿಯೇ ಓದಬೇಕು ಅಂದುಕೊಂಡು ಒಂದು ಬಕೆಟ್ ನೀರನ್ನ ತಲೆ ಮೇಲೆ ಸುರಿದು ಕೊಂಡು ಸ್ನಾನದ ಶಾಸ್ತ್ರ ಮಾಡಿ, ಆಫೀಸ್ ಗೆ ಓಡಿ ಬಂದೆ. (ನಾನು ಬೇರೆ ಕಂಪನಿ ಗೆ ರೆಸ್ಯುಮೆ ಕಳಿಸಬೇಕಾದ ಸಮಯದಲ್ಲಿ ಮಾತ್ರ ಸೈಬರ್ ಕೆಫೆ ಗೆ ಹೋಗೋದು). ಆಫೀಸ್ ಗೆ ನುಗ್ಗಿ ಇನ್ನೇನು ಲ್ಯಾಪ್ಟಾಪ್ ನ ಆನ್ ಮಾಡಬೇಕು ಅನ್ನುವಷ್ಟರಲ್ಲಿ ಮ್ಯಾನೇಜರ್ ನಿಂದ ಕಾಲ್. ಕೂಡಲೇ ಬಾ ಅಂತ. ಅಪ್ಪ ಅಮ್ಮ ಕರೆದಾಗ ಹೋಗುತ್ತಾ ಇರಲಿಲ್ಲ, ಆದರೆ ಈಗ ಹಾಗಲ್ಲವಲ್ಲ. ಈ ಕೆಲಸ ಆಗಬೇಕು, ಅದು ಆಗಬೇಕು, ಅದು ಹೀಗಲ್ಲ ಹಾಗೆ, ಸರಿ ಸುಮಾರು 2 ಘಂಟೆಗಳ ಕಾಲ ವಿಪರೀತ ಕುಯ್ದ. 1 ರ ಸುಮಾರಿಗೆ ಕ್ಯಾಬಿನ್ನಿಗೆ ಬಂದು ಮೇಲ್ ನೋಡೋಣ ಅಂದರೆ ಸ್ನೇಹಿತರು ಅನ್ನುವ ಪುಂಡು ಹುಡುಗ ಹುಡುಗಿಯರ ಗುಂಪು ಅಲ್ಲಿದೆ. ಮದ್ಯಾನ ಊಟ ಹೊರಗಡೆ ಹೋಗಿ ಮಾಡೋಣ ಅಂತ. ನನಗೆ ಮದುವೆ ಆಗಿದ್ದರೂ, ಹೆಂಡತಿ ದೂರದಲ್ಲಿ ಇದ್ದಿದ್ದರಿಂದ ನಾನು ಅ ಗುಂಪಿಗೆ ಸೇರದವನು ಅಂತ ಏಕಪಕ್ಷೀಯ ನಿರ್ದಾರ ಮಾಡಿಬಿಟ್ಟಿದ್ದರು. ಇವರನ್ನೆಲ್ಲ ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಳ್ಳಿ, ನಾನು ಹೆಂಡತಿಯ ಪ್ರೇಮ ಪತ್ರ ಓದಲಿಕ್ಕೆ ಇದೆ ಅಂತ ಹೇಳಲು ಸಾಧ್ಯನ? ಗೊತ್ತಾಗಿ ಬಿಟ್ಟರೆ ಇನ್ನು 2-3 ತಿಂಗಳು ನನ್ನ ಕಾಲು ಎಳಿಯದೆ ಬಿಡುವುದೇ ಇಲ್ಲ. ನಾನು ಕೂಡ ಅವರಿಗೆ ಹೇಗೆಲ್ಲಾ ಕಾಟ ಕೊಟ್ಟಿಲ್ಲ, ಅದಕ್ಕೆಲ್ಲ ಈಗ ಬಡ್ಡಿ ಸಮೇತ ವಾಪಸ್ಸು ಕೊಟ್ಟೇ ಬಿಡುವರು.


ಎಲ್ಲರ ಒತ್ತಾಸೆ ಯಂತೆ ಪಕ್ಕದ ಹೋಟೆಲ್ ಗೆ ಧಾಳಿ ಮಾಡಿ ತಿನ್ನುವಾಗಲೂ ನನಗೆ ಪತ್ರದ ಬಗ್ಗೆನೇ ಚಿಂತೆ. ಇವರುಗಳಾರು ಬೇಗ ತಿಂದು ಮುಗಿಸಿ ಹೊರಡುವ ಜಾಯಮಾನದವರಲ್ಲ, ಮ್ಯಾನೇಜರ್ ನಿಂದ ಹಿಡಿದು ಹೆಂಡತಿಯ ಅಪ್ಪ ಅಮ್ಮ ಎಲ್ಲರಿಗು ಮನಸೋ ಇಚ್ಛೆ ಬಯ್ಯದ ಹೊರತು ಹೊರಡುವ ಹಾಗಿಲ್ಲ!! ಸರಿ ಸುಮಾರು 2 ಘಂಟೆಗಳ ಅಮೋಘ ಊಟದ ನಂತರ ಆಫೀಸ್ ಗೆ ಬಂದು ನನ್ನ ಕ್ಯಾಬಿನ್ ಗೆ ನುಗ್ಗಬೇಕು ಅನ್ನುವಷ್ಟರಲ್ಲಿ ಮೊಬೈಲ್ ಬಡಿದು ಕೊಳ್ಳತೊಡಗಿತು, ಇವಳದ್ದೇ ಏನೋ ಅಂತ ತೆಗೆದು ನೋಡಿದರೆ, ಕ್ರೆಡಿಟ್ ಕಾರ್ಡ್ ನವನು, ರಿಸೆಪ್ಶನ್ ನಲ್ಲಿ ಕಾಯುತ್ತ ಇದ್ದೀನಿ, ದಯವಿಟ್ಟು ಬನ್ನಿ ಅಂದ. ಕಾರ್ಡು ಬೇಕು ಅಂತ ಹೇಳಿದವನು ನಾನೇ ಆದರು ಈ ಸೇಲ್ಸ್ ಅಸಾಮಿ ಈಗಲೇ ವಕ್ಕರಿಸಬೇಕೆ? ಹಾಳಾದವನು ಎಂದುಕೊಂಡು ಅ ಕಡೆ ನಡೆದೆ.




ಅ ಅಸಾಮಿಯೋ 10 ನಿಮಿಷದೊಳಗೆ ನನ್ನನ್ನು ಬಿಡುವ ಹಾಗೆ ಕಾಣುತ್ತಲೇ ಇಲ್ಲ, ನಮ್ಮ ಕಂಪನಿ ಕಾರ್ಡ್ ನಿಂದ ಇಷ್ಟೆಲ್ಲಾ ಉಪಯೋಗ ಇದೆ, ಅದು ಇದೆ, ಇದು ಇದೆ ಅಂತೆಲ್ಲ ಹೇಳಲು ಶುರು ಮಾಡಿದ. ಆಮೇಲೆ ಅದೆಷ್ಟೋ ಕಡೆ ನನ್ನ ಸಹಿ ತೆಗೆದು ಕೊಂಡ. ಸ್ವಲ್ಪ ಮಟ್ಟಿಗೆ ಮೊಳೆ ಹೊಡೆಸಿ ಕೊಂಡ ನಂತರ ನನ್ನ ಸುಳ್ಳು ವಿದ್ಯಾ ಪ್ರಾವಿಣ್ಯತೆಯನ್ನು ಪ್ರದರ್ಶಿಸಿ ಅವನ್ನನ್ನು ಸಾಗಹಾಕುವ ಹೊತ್ತಿಗೆ ಸಮಯ ಸಂಜೆ ಆಗುತ್ತಾ ಬಂದಿತ್ತು. ನನಗು ತಾಳ್ಮೆ ಹೋಗುತ್ತಾ ಬಂದಿತ್ತು. ಕೂಡಲೇ ಕ್ಯಾಬಿನ್ ಗೆ ನುಗ್ಗಿ, ಲ್ಯಾಪ್ಟಾಪ್ ನ ಆನ್ ಮಾಡಿ ಇನ್ನೇನು ಜಿ ಮೇಲ್ ಗೆ ಲಾಗಿನ್ ಆಗಬೇಕು ಅನ್ನುವಷ್ಟರಲ್ಲಿ ಪಕ್ಕದ ಕ್ಯಾಬಿನ್ ನ ಕೋತಿ ಮೂತಿಯ ಪ್ರಾಣಿ ವಕ್ಕರಿಸಬೇಕೆ? ಅದೇನೋ ಹೊಸ ಬುಸಿನೆಸ್ಸು, ಮಾರ್ಕೆಟಿಂಗ್, ಕೇವಲ 8 ಸಾವಿರ ಇನ್ವೆಷ್ಟು ಮೆಂಟು ಅನ್ನುತ್ತಾ ಕೊರೆಯಬೇಕೆ? ಈ ಸಾಫ್ಟ್ ವರೆ ನವರಿಗೆ ಇಷ್ಟು ಜಾಬ್ ಇನ್ಸೆಕುರಿಟಿ ಯಾಕೆ ಅಂತ ಕೇಳೋ ಹಾಗೆ ಇಲ್ಲ. ಸಂಜೆ ಆಗ್ತಾ ಬಂದ್ರು ಅವನು ಹೋಗೋ ಹಾಗೆ ಇಲ್ಲ. ಇನ್ನು ಆಫೀಸ್ ನಲ್ಲಿ ಪತ್ರ ಓದಲು ಸಾದ್ಯನೇ ಇಲ್ಲ ಅಂತ ಅನ್ನಿಸಿ, ಮನೆಗೆ ಹೊರಟು ಬಿಟ್ಟೆ. ಮೊದಲ ಪ್ರೇಮ ಪತ್ರ ದಿನ ಆದರೂ ಓದದ ಪರಮ ಪಾಪಿ ಎಂಬ ಮುಖ ಹೊತ್ತು ಬೈಕು ಹತ್ತಿ ಮನೆಗೆ ಬಂದೆ.




ಮನೆಯಲ್ಲಿ ಕೂತು ಆತುರದಿಂದ ಲಾಗಿನ್ ಆದೆ, ಒಂದು ಚಂದದ ಸಬ್ಜೆಕ್ಟ್ ಲೈನ್ "ನಿನಗಾಗಿ ಮಾತ್ರ", ಮೇಲ್ ಓಪನ್ ಆಗೇ ಬಿಟ್ಟಿತು, ನೋಡುತ್ತೀನಿ ಕೇವಲ ಒಂದೇ ಒಂದು ಲೈನ್ ಇದೆ!! "ಇಲ್ಲಿ ಬಹಳ ಚಳಿ ಕಣೋ", ಅಂತ. ಸಿಟ್ಟೆಲ್ಲ ಬಂತು, ಇಡೀ ದಿನ ಕಷ್ಟ ಪಟ್ಟು ಮೊದಲ ಪ್ರೇಮ ಪತ್ರ ಅಂತ ಓದಿದರೆ ಹೀಗಾ ಬರೆಯೋದು? ಏನು ಮಾಡೋದು ಜಗಳ ಆಡೋಣ ಅಂದ್ರೆ ಅವಳು ಇಲ್ಲಿ ಇಲ್ಲವೇ? ರಿಪ್ಲೈ ಮಾಡೇ ಬಿಟ್ಟೆ, ನನ್ನೆಲ್ಲ ಸಿಟ್ಟು ಹೊರಹಾಕಿ, ಮೊದಲು ಆಶ್ವಾಸನೆ ಕೊಟ್ಟಿದ್ದ ಎಂ ಟಿ ಅರ್ ಊಟ ಕ್ಯಾನ್ಸಲ್ ಮಾಡಿದೆ.




ನೀವು ಕೇಳಬಹುದು ಇಷ್ಟೆಲ್ಲಾ ಕಷ್ಟ ಪಡೋ ಬದಲು ಒಂದು ಫೋನ್ ಮಾಡಬಹುದಿತ್ತಲ್ಲ ಅಂತ, ಈಗ ಅದನ್ನೇ ಮಾಡ್ತಾ ಇರೋದು, ಫೋನ್ ನಲ್ಲಿ ನಡೆಯೋ ಪ್ರೇಮ ಸಂಬಾಷಣೆ ಇಲ್ಲಿ ಹಾಕುವುದಿಲ್ಲ ಬಿಡಿ, ಈಗ ನನ್ನ ಸಿಟ್ಟೆನಿದ್ದರು ಅವಳ ಮ್ಯಾನೇಜರ್ ಎಂಬ ಬ್ರಹ್ಮ ರಾಕ್ಷಸನ ಮೇಲೆ ಮಾತ್ರ.