ನನ್ನ ಅಖಂಡ ಪ್ರೇಮಕ್ಕೆ ಕೆ ಈಗ 15 ವರ್ಷ ಮೇಲಾಯಿತು. ಅಂದು ಬಾಂಬೆ ಯಲ್ಲಿ ಭಾರತ ಮತ್ತೆ ಆಸ್ಟ್ರೇಲಿಯಾ ವರ್ಲ್ಡ್ ಕಪ್ ಮ್ಯಾಚ್ ನಡೀತಾ ಇತ್ತು. ಅಂದು ಸಂಜೆ ನಾನು ಸಾಂದ್ಯವಂಧನೆ ಅದೆಷ್ಟು ವೇಗವಾಗಿ ಮಾಡಿದೆನೋ? ಮುಗಿಸಿ ದೇವರ ಕೋಣೆಯಿಂದ ಹೊರ ಬರುವಾಗ ಕಂಡಿದ್ದು ಸಚಿನ್ ನ ಸಿಕ್ಸ್ ಮತ್ತೆ ಕುಣಿಯುತ್ತಿದ್ದ ನಿನ್ನ ಮುಂಗುರುಳು! ಅಂದು ಮನೆಯಲ್ಲಿ ಎಲ್ಲರಿಗೂ ಇಂಡಿಯಾ ಸೋತಿತಲ್ಲ ಅಂತ ನಿದ್ದೆ ಬಾರದೆ ಇದ್ರೆ, ನನಗೆ ಬೇರಾವುದೋ ಕಾರಣದಿಂದ ನಿದ್ರೆ ಬರಲಿಲ್ಲ!
ಅಂದಿನಿಂದ ಪ್ರತಿ ಮ್ಯಾಚ್ ನೋಡಲು ನೀನು ನಮ್ಮ ಮನೆಗೆ ಬರತೊಡಗಿದೆ. ನಂತರ ಪಾಕಿಸ್ತಾನದ ಮೇಲೆ ಬೆಂಗಳೂರಿನಲ್ಲಿ ಪಂದ್ಯ. ಅಂದು ಜಡೇಜ ಹೊಡೆದ ಎರಡು ಸಿಕ್ಸೆರ್ ಗೆ ನಾವಿಬ್ಬರು ಕೈ ಕೈ ತಟ್ಟಿ ಚಪ್ಪಾಳೆ ಹೊಡೆದಿದ್ದವು. ಅದೇ ನಿನ್ನ ಮೊದಲ ಸ್ಪರ್ಶ. ನಂತರ ಸೆಮಿ ನಲ್ಲಿ ಇಂಡಿಯಾ ಶ್ರೀಲಂಕ ಮೇಲೆ ಸೋತಿತು, ಆದರೆ ನಂಗೆ ನಿನ್ನ ಮೇಲೆ ಆಕರ್ಷಣೆ ಜಾಸ್ತಿ ಆಗಿತ್ತು.
ನಂತರ ಕೆನಡಾ ದಲ್ಲಿ ಸಹಾರ ಕಪ್ ಆಡಲು ನಮ್ಮವರು ಹೋದರು. ಆಗಲೂ ಮ್ಯಾಚ್ ಗಳನ್ನು ನೋಡಲು ನೀನು ನಮ್ಮ ಮನೆಗೆ ಬಂದೆ. ಭಾರತ ಸರಣಿ ಸೋತಿತು. ಕೊನೆಯ ಪಂದ್ಯ ದಲ್ಲಿ ಮುಶ್ತಕ್ ಅಹ್ಮೆದ್ 5 ವಿಕೆಟ್ ಪಡೆದ, ನಿನಗೆ ಕಣ್ಣಲ್ಲಿ ನೀರೆ ಬಂದಿತ್ತು. ಹಾಗೇನೆ ಮುಶ್ತಕ್ ಗೆ ನನ್ನ ಕಡೆ ಇಂದ ಲೆಕ್ಕವಿಲ್ಲದಷ್ಟು ಶಾಪ ಕೂಡ ಜಮೆ ಆಯಿತು. ನಿನ್ನ ಮೇಲಿನ ಇರುವುದು ಕೇವಲ ಆಕರ್ಷಣೆ ಅಲ್ಲವೇನೋ ಅಂತ ಅನ್ನಿಸುವಷ್ಟರಲ್ಲಿ ನಮ್ಮವರು ನ್ಯೂಜೀಲ್ಯಾಂಡ್ ನಲ್ಲಿ ಆಡುತ್ತಿದ್ದರು. ಅಲ್ಲಿನ ಹಗಲು ರಾತ್ರಿ ಪಂದ್ಯ ನೋಡಲು ನೀನು ಮನೆಗೆ ಬರುತ್ತಿರಲಿಲ್ಲ. ಆಡಲು ಅಲ್ಲಿಗೇ ಹೋಗಬೇಕಿತ್ತಾ? ನಮ್ಮಲ್ಲೇನು ಮೈದಾನಗಳು ಇಲ್ಲವ ಅಂತ ಅದೆಷ್ಟು ಅಂದು ಕೊಂಡೆನೋ? ಆಮೇಲೆ ಅದೆಷ್ಟೋ ಮ್ಯಾಚ್ ಗಳು ಇಲ್ಲಿ ನಡೆದವು. ಸಚಿನ್ ಹೊಡೆದ ಸೆಂಚುರಿಗಳು ಎಷ್ಟೋ. ಅವನ ಪ್ರತಿ ಬೌಂಡರಿಗೆ ಹಾಕಿದ ಕೇಕೆಗಳು ಲೆಕ್ಕವಿಟ್ಟವರಾರು?. ಕೆಲವೊಮ್ಮೆ ಮಳೆ ಬಂದು ಪಂದ್ಯ ನಿಲ್ಲಿಸಿದರೆ ನೀನು, ಮಳೆ ನಿಲ್ಲುವುದನ್ನೇ ಕಾಯುತ್ತಾ ಲಂಕೇಶ್ ತಿರುವಿ ಹಾಕುತ್ತಿದ್ದೆ. ನಾನು ನಿನ್ನ ಕಣ್ಣುಗಳನ್ನೇ ನೋಡುತ್ತಾ ಕೂತಿರುತ್ತಿದ್ದೆ.
1999 ರಲ್ಲಿ ಇಂಗ್ಲೆಂಡ್ ನಲ್ಲಿ ವರ್ಲ್ಡ್ ಕಪ್ ನಡೆಯುತ್ತಿತ್ತು. ನಮ್ಮೂರಲ್ಲಿ ಎಡೆಬಿಡದೆ ಮಳೆ. ನೀನು ಬರಲಿಲ್ಲ, ವಿಪರೀತ ಜ್ವರವಿತ್ತು ನಿಂಗೆ. 2000 ರಲ್ಲಿ ಸಹರ ಕಪ್ ನಡೆಯದೆ ಬೇಸರ ಉಂಟು ಮಾಡಿದರೆ, ನಿಮ್ಮ ಮನೆಯಲ್ಲಿ ಬಣ್ಣದ ಟೀವಿ ಬಂದಿತ್ತು, ನನ್ನಲ್ಲಿ ಅಳುವಿನ ಕಟ್ಟೆ ಒಡೆದಿತ್ತು. ಆಮೇಲೆ ನೀನು ಡಿಗ್ರಿ ಮಾಡಲು ಶಿವಮೊಗ್ಗೆ ಗೆ ಹೋದೆ. ಆಸ್ಟ್ರೇಲಿಯಾ ದವರು ಇಂಡಿಯಾ ಗೆ ಬಂದರು. ಹೇಡನ್, ಸಚಿನ್ ನ ದೇವರು ಅಂತ ಕರೆದ. ವಾರ್ನೆ ತಲೆ ಮೇಲೆ ಕೈ ಇಟ್ಟ. ಆದರೆ ಸಂತಸ ಹಂಚಿ ಕೊಳ್ಳಲು ನೀನು ಇರಲಿಲ್ಲ. ಆದರೆ 2003 ರಲ್ಲಿ ಸೆಂಚುರಿಯನ್ ನಲ್ಲಿ ಭಾರತ ಮತ್ತೆ ಪಾಕಿಸ್ತಾನ ಆಡುವಾಗ ನೀನು ಊರಿಗೆ ಬಂದಿದ್ದೆ. ಅಕ್ತರ್ ಗೆ ಒಂದು ಸಿಕ್ಸ್ ಬಿದ್ದ ಕೂಡಲೇ ನಿಮ್ಮನೇಲಿ ಕೇಬಲ್ ಸರಿ ಬರ್ತಾ ಇಲ್ಲ ಅಂತ ಹೇಳಿ ಬಂದು ನನ್ನ ಜೊತೇನೆ ಕೂತು ಆಟ ನೋಡಿದೆಯಲ್ಲ, ಅಂದು ನಮ್ಮಿಬ್ಬರ ಮದ್ಯೆ ಗ್ಯಾಪ್ ಇತ್ತಾ? ಆದ್ರೆ ಹಾಳದೊನು ಸಚಿನ್ 98 ಕೆ ಔಟ್ ಆಗಿ ಬಿಟ್ಟ! ನೀನು ಸಿಡುಕಿಕೊಂಡು ಮನೆಗೆ ಹೋದೆ.
2004 ರಲ್ಲಿ ರಾವಲ್ಪಿಂಡಿಯಲ್ಲಿ ಸಚಿನ್ 37 ನೆ ಶತಕ ದಾಖಲಿಸಿದ, ಆದರೆ ಪಂದ್ಯ ಸೋತ. ಅಷ್ಟೇ ಅಲ್ಲ, 38, 39,40 ನೆ ಶತಕದಲ್ಲೂ ಭಾರತಕ್ಕೆ ಸೋಲು. ನಿನ್ನ ಮುಖ ಕೂಡ ನೋಡದೆ 2 ವರ್ಷ 6 ತಿಂಗಳು 18 ದಿನ ಆಗಿತ್ತು. ನಂಗೆ 9 ನೇ ಕೆಲಸ ಕೂಡ ಹೋಗಿತ್ತು.
ಮುಂದೆ ವೆಸ್ಟ್ ಇಂಡಿಸ್ ನಲ್ಲಿ ಕಪ್ ನಡೆಯೋ ಹೊತ್ತಿಗೆ ನಿಮ್ಮನೇಲಿ ವರ ಹುಡುಕುವ ಸಂಭ್ರಮ. ಅದೆಷ್ಟು ಉಪ್ಪಿಟ್ಟು ಕೇಸರಿ ಬಾತ್ ಸಮಾರಾಧನೆ ನಡೆಯಿತೋ? ಬಾಂಗ್ಲ ಗೆ ನಮ್ಮವರು ಸೋಲೋ ಹೊತ್ತಿಗೆ, ಇಂಜಿನಿಯರ್ ನ ಬಿಟ್ಟು ಬೇರಾರಿಗೂ ನನ್ನ ಮಗಳನ್ನು ಕೊಡೋಲ್ಲ ಅಂತ ನಿಮ್ಮಪ್ಪ ಘೋಷಣೆ ಮಾಡಿ ಬಿಟ್ಟಿದ್ದರು. ನಾನಿಲ್ಲಿ ಮತ್ತೆ ಕೆಲಸ ಕಳೆದು ಕೊಂಡು ಬೀದಿ ಬೀದಿ ಅಲೀತಾ ಇದ್ದೆ. ನಮ್ಮವರು ವೆಸ್ಟ್ ಇಂಡಿಸ್ ನಿಂದ ವಾಪಾಸ್ ಬಂದ್ರು, ನಾನು ಇಲ್ಲಿ ಹೀನಾಯವಾಗಿ ಸೋತೆ. ಮುಂದೆ 2007 ಸೆಪ್ಟೆಂಬರ್ ನಲ್ಲಿ ಟಿ 20 ಶುರು ಆಗುವಾಗ ಅದ್ಯಾರೋ ರಮೇಶ ಅನ್ನೋ ಹೆಸರು ನಿನ್ನ ಜೊತೆ ಕೇಳಿ ಬರುತ್ತಲಿತ್ತು. ಯುವರಾಜ್, ಕ್ರಿಸ್ ಬ್ರಾಡ್ ಗೆ 6 ಸಿಕ್ಸ್ ಹೊಡೆದ. ಕಪ್ ಕೂಡ ಗೆದ್ದರು. ಆದರೆ ತಂಡದಲ್ಲಿ ಸಚಿನ್ ಇರಲಿಲ್ಲ. ನಂತರ ಅವನು ಹೊಡೆದ ಯಾವ ಶತಕ ಗಳು ನನಗೆ ನೆನಪೇ ಉಳಿಯಲಿಲ್ಲ. ಮೊನ್ನೆ ಮೊನ್ನೆ ಅವನು ವಿಶ್ವ ಕಪ್ ಕೂಡ ಗೆದ್ದು ಬಿಟ್ಟ, ಆದರೆ ಈ ಬೆಂಗಳೂರ್ ನಲ್ಲಿ ನಾನು ಒಬ್ಬನೇ ಕೂತು ನೋಡುತ್ತಿದ್ದೆ, ನೀನು ಎಲ್ಲಿದ್ದ್ಯೋ?
ಕಳೆದ ವಾರ ಊರಿಗೆ ಹೋಗಿದ್ದೆ, ಅಮ್ಮ ಹೇಳಿದಳು, ನೀನು ಅದ್ಯಾವ್ದೋ ಆಫ್ರಿಕಾ ದ ದೇಶದಲ್ಲಿ ಇದ್ದಿ ಅಂತ. ಅಲ್ಲಿ ಕ್ರಿಕೆಟ್ ಬರುತ್ತಾ? ಗೊತ್ತಿಲ್ಲ. ಟೀವಿ ಲಿ ಕ್ರಿಕೆಟ್ ಬರ್ತಾ ಇತ್ತು. ನೋಡೋ ಆಸಕ್ತಿ ಇರಲಿಲ್ಲ. ಸಚಿನ್ ಕೂಡ ಟೀಂ ನಲ್ಲಿ ಇರಲಿಲ್ಲ.
11 comments:
ಚೆನ್ನಾಗಿತ್ತು ,
ಕೊನೇಗ್ ಯಾಕ್ ಹಿಂಗಾಯ್ತು !!?
ಚೆನಾಗಿತ್ತು,
ಕೊನೇಗ್ ಯಾಕ್ ಹಿಂಗಾಯ್ತು !!?
ಅಹ ಅಹುಂ....ಶಾಸ್ತ್ರಿಗಳೇ ಅಂತೂ ನಿಮ್ಮ ಲವ್ವಾಯಣದ ಕರಾಮತ್ತು ತೋರಿಸಿದ್ದೀರಿ! ಪರವಾ ಇಲ್ಲರೀ ಒಂಥರಾ ಚೆನ್ನಾಗೇ ಇದೆ. ಅಂದಹಾಗೆ ನಿಮ್ ಹೆಂಡ್ತಿ ತವರಿಗೆ ಹೋದವಳು ಬಂದಿಲ್ವೋ ಏನೋ ! ಅದ್ಕೇ ಯಜಮಾನ್ರು ಸ್ವಲ್ಪ ಜೋರಾಗಿ ಹಾರ್ತಿದಾರೆ! ಹಹಹ ...
ಚೆನ್ನಾಗಿದೆ. ಆದರೆ ಕೊನೆಯಲ್ಲಿ, ಇದ್ದಕ್ಕಿದ್ದಂತೆ, ಶತಕದ ಹತ್ತಿರಕ್ಕೆ ಬಂದು ಸಚಿನ್ ಔಟಾದಂತೆ ಅನಿಸಿತು.
ಪ್ರೆಮಕಥೆಯನ್ನೂ ಕ್ರಿಕೆಟನ್ನೂ ಚೆನ್ನಾಗಿ ಕೊಂಡಿಸಿ, ಸಾರಾಂಶ ಬರೆದಿದ್ದೀರ.
amazing
tumba chennagi link maadidiraa
ending swalpa besara aaytu
indian cricket sries bagge chennagi tilidu kondiddura anthaa aithu...
aadru koneyally story thumba sad aagittu...
ಬಾಲು ಸರ್,
ನಿಮ್ಮ ಕ್ರಿಕೆಟ್ ಜೊತೆ ಪ್ರಕರಣ ತುಂಬಾ ಚೆನ್ನಾಗಿದೆ. ಕೊನೆಯಲ್ಲಿ ನಿಮಗೆ ಹೀಗೆ ಆಗಬಾರದಿತ್ತು..
chennagide! Cricket, Sachin mathu nimma premavanna link madiro reethi adbhuthavagide.
ಅರ್ಧ ರಾತ್ರಿ ನಿದ್ರೆ ಬಿಟ್ಟು ಬರೆದ ಕಾಮೆಂಟರಿ ನಿಜಕ್ಕೂ ಅದ್ಭುತವಾಗಿದೆ.ಆದರೆ ಇದು ಕಾಮೆಂಟರಿಯೋ ಅಥವಾ ಪ್ರೇಮ ಪ್ರಹಸನವೋ ತಿಳಿಯದೆ ಗೊಂದಲವಾಗಿದೆ. ನಿನ್ನ ಬ್ರಹ್ಮಚಾರ ವ್ರತಕ್ಕೆ ಇದುವೇ ಕಾರಣ ಎಂದು ತಿಳಿದ
ಮೇಲೆ ನಗಲೂ ಆಗದೆ ಧ್ವಂಧ್ವ ದಲ್ಲಿ ಸಿಲಿಕಿದ್ದೇನೆ.
Sreeharsha
ಅರ್ಧ ರಾತ್ರಿ ನಿದ್ರೆ ಬಿಟ್ಟು ಬರೆದ ಕಾಮೆಂಟರಿ ನಿಜಕ್ಕೂ ಅದ್ಭುತವಾಗಿದೆ.ಆದರೆ ಇದು ಕಾಮೆಂಟರಿಯೋ ಅಥವಾ ಪ್ರೇಮ ಪ್ರಹಸನವೋ ತಿಳಿಯದೆ ಗೊಂದಲವಾಗಿದೆ. ನಿನ್ನ ಬ್ರಹ್ಮಚಾರ ವ್ರತಕ್ಕೆ ಇದುವೇ ಕಾರಣ ಎಂದು ತಿಳಿದ
ಮೇಲೆ ನಗಲೂ ಆಗದೆ ಧ್ವಂಧ್ವ ದಲ್ಲಿ ಸಿಲಿಕಿದ್ದೇನೆ.
Post a Comment