ಒಂದಾನೊಂದು ಕಾಲದಲ್ಲಿ ಕಂಪನಿಗಳು ಉದ್ಯೋಗಿಗಳನ್ನು ಅವರ
ಕಾರ್ಯಕ್ಷಮತೆ ನೋಡಿ ಕೆಲಸದಿಂದ ತೆಗೆಯುತ್ತಾ ಇದ್ದರಂತೆ.
(ಅಥವಾ... ಮ್ಯಾನೇಜರ್‌ಗಳ ಫೇವರಿಟ್ ಲಿಸ್ಟ್‌ನಲ್ಲಿ
ಇಲ್ಲದವರನ್ನು!)
ನಂತರ ಕಾಲ ಬದಲಾಯಿತು.
"ಇವರಿಗೆ ಜಾಸ್ತಿ ಸಂಬಳ
ಇದೆ" ಅನ್ನೋ ಕಾರಣಕ್ಕೆ ಉದ್ಯೋಗ ಕಳೆದುಕೊಳ್ಳುವ ಕಾಲ ಬಂತು.
ಮತ್ತಷ್ಟು ವರ್ಷಗಳ ನಂತರ...
"ಇವರಿಗೆ ತುಂಬಾ Experience
ಇದೆ. ಇವರಿಗೆ
ನಾವು ಕೊಡ್ತಿರೋ ಸಂಬಳದಲ್ಲಿ ನಾಲ್ಕು Freshers ಬರುತ್ತಾರೆ!" ಎಂಬ ಅರ್ಥ ಶಾಸ್ತ್ರದ ಆಧಾರದ ಮೇಲೆ
ಕೆಲವರನ್ನು ಮನೆಗೆ ಕಳುಹಿಸಲಾಯಿತು.
ಈಗಿನ ಪರಿಸ್ಥಿತಿ ನೋಡಿದರೆ, HR ತಂಡದವರು
"ಈ ಬಾರಿ ಹೊಸದಾಗಿ ಯಾರನ್ನು ಯಾವ ಕಾರಣಕ್ಕೆ ಮನೆಗೆ ಕಳಿಸಬಹುದು?" ಎಂಬ ವಿಷಯದ
ಬಗ್ಗೆ PhD ಮಾಡುತ್ತಿರುವಂತೆ ಕಾಣುತ್ತಿದೆ.
ಹೀಗಾಗಿ, ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ, ಮಾಜಿ HR
ಆಗಿ, ಹಾಗೂ Corporate
Logic ಅನ್ನು ಅಧ್ಯಯನ
ಮಾಡುತ್ತಾ ಮಾನಸಿಕವಾಗಿ ಸಾಕಷ್ಟು ಹಾನಿಗೊಳಗಾದ ವ್ಯಕ್ತಿಯಾಗಿ, ಕಂಪನಿಗಳ ಮುಂದಿನ ಲೇಆಫ್‌ಗಳಿಗೆ
ನನ್ನ ಕೆಲ ಉಚಿತ, ಅಮೂಲ್ಯ ಮತ್ತು ಸಂಪೂರ್ಣ ವೈಜ್ಞಾನಿಕ ಸಲಹೆಗಳು ಇಲ್ಲಿವೆ.
ಈ ಸಲಹೆಗಳನ್ನು ಬಳಸಿದರೆ ಮುಂದಿನ ಐದು ವರ್ಷ HR
ತಂಡವು
ನಿರಾಳವಾಗಿ ಲೇಆಫ್ ಮಾಡಬಹುದು ಎಂಬುದು ನನ್ನ ದೃಢ ನಂಬಿಕೆ.
1. Height Based Layoff
5.10 ಅಥವಾ 6 ಅಡಿ.
ಮೇಲೆ ನಮೂದಿಸಿದ ಸಂಖ್ಯೆಯ ಎತ್ತರದ ಮಾನವ ಪ್ರಾಣಿಗಳನ್ನು
ಸಾಮಾನ್ಯವಾಗಿ "ಉದ್ದವಿರುವವರು " ಎಂದು ಗುರುತಿಸಲಾಗುತ್ತದೆ.
ಈ ಪ್ರಾಣಿಗಳು ಉದ್ದ ಪ್ಯಾಂಟ್ ಹಾಕಲಿ, ಉದ್ದ
ಹಾಸಿಗೆಯಲ್ಲಿ ಮಲಗಲಿ, ಬಸ್ಸು, ರೈಲು, ವಿಮಾನ, ಎತ್ತಿನಗಾಡಿಯಲ್ಲಿ ಕಾಲು ಮಡಚಿಕೊಂಡು ಕುಳಿತುಕೊಳ್ಳಲಿ... ಅದು ಅವರ ದುಡ್ಡಿನ ಸಮಸ್ಯೆ.
ಆದರೆ ಇವರಿಂದ ಕಚೇರಿಗೆ ಆಗುತ್ತಿರುವ ಅನಾಹುತದ ಬಗ್ಗೆ
ಯಾರಾದರೂ ಯೋಚಿಸಿದ್ದೀರಾ?
ಈ ಮನುಷ್ಯರು ಸೀಲಿಂಗ್ ಫ್ಯಾನ್‌ಗೆ ಅಪಾಯಕಾರಿಯಾಗಿ
ಹತ್ತಿರ ಇರುತ್ತಾರೆ. ರೆಕ್ಕೆಯಿಂದ ಬರುವ ಗಾಳಿಗೆ ಅಡ್ಡ ನಿಂತು, ಗಾಳಿಯ ಮುಕ್ತ ಸಂಚಾರವನ್ನು
ತಡೆಯುತ್ತಿದ್ದಾರೆ. ಅಷ್ಟೇ ಅಲ್ಲ, ಏರ್ ಕಂಡೀಷನರ್‌ನಿಂದ ಬರುವ ತಂಪಾದ ಗಾಳಿಯನ್ನು ಮೊದಲು ಅವರೇ
ಹೀರಿಕೊಂಡು, ಹಿಂಬದಿಯಲ್ಲಿ ಕುಳಿತಿರುವ ಸಾಮಾನ್ಯ ಉದ್ಯೋಗಿಗಳನ್ನು ಉಷ್ಣವಲಯದ
ಹವಾಮಾನಕ್ಕೆ ತಳ್ಳುತ್ತಿದ್ದಾರೆ.
ಅಯ್ಯೋ! ಇಷ್ಟೆಲ್ಲ ಪಾಪಕೃತ್ಯಗಳನ್ನು
ಮಾಡುತ್ತಿರುವವರನ್ನು ಕಂಪನಿಗಳು ಇಷ್ಟು ದಿನ ಹೇಗೆ ಸಹಿಸಿಕೊಂಡಿವೆಯೋ ನಾನರಿಯೆ.
ಹಾಗಾಗಿ 6 ಅಡಿ ಮೇಲ್ಪಟ್ಟವರನ್ನು TLRO
(Top Level Resource Optimization) ಎಂಬ ಕಂಪನಿಯ ಅಲಿಖಿತ ಕಾನೂನಿನ ಅಡಿಯಲ್ಲಿ ಕೂಡಲೇ
ವಜಾಗೊಳಿಸಿ, ಕಚೇರಿಯಲ್ಲಿ ಆಮ್ಲಜನಕ ಹಾಗೂ ತಂಪು ಗಾಳಿಯ ಸುಗಮ ಸಂಚಾರಕ್ಕೆ ಅನುವು
ಮಾಡಿಕೊಡಬಹುದು.
ಇದರಿಂದ ಉಳಿದ ಉದ್ಯೋಗಿಗಳಿಗೆ ಎರಡು ಲಾಭ:
- AC ಗಾಳಿ ಸ್ವಲ್ಪ ಹೆಚ್ಚು ಸಿಗುತ್ತದೆ.
- Group Photo ತೆಗೆದಾಗ ಕೊನೆಯ ಸಾಲಿನಲ್ಲಿ ನಿಲ್ಲಿಸಲು ಜನರನ್ನು
ಹುಡುಕಬೇಕಾಗುವುದಿಲ್ಲ.
2. Weight Based Layoff
ಇದು ವಿಜ್ಞಾನಾಧಾರಿತ.
ಇದು ಬಹಳ ತೂಕದ ವಿಷಯ!
ನಿಮ್ಮ ಕಚೇರಿಯಲ್ಲಿ ಸ್ಥೂಲಕಾಯ ಉದ್ಯೋಗಿಗಳಿದ್ದಾರೆಯೇ?
ಅವರಿಂದ ನಿಮ್ಮ ಕಂಪನಿಯ ಲಾಭಾಂಶಕ್ಕೆ ಆಗುತ್ತಿರುವ
ಹಾನಿಯ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?
ಇಲ್ಲವೇ?
ಛೇ! ಆಕಟಕಟ!
ಒಂದು ಡೊಳ್ಳು ಹೊಟ್ಟೆಯನ್ನು ಯಶಸ್ವಿಯಾಗಿ ಸಂಪಾದಿಸಿರುವ
ನಾನೇ ಎಲ್ಲವನ್ನೂ ವಿವರಿಸುತ್ತೇನೆ, ಇದನ್ನು ಕೇಳಿ ನೀವೇ ಯೋಚಿಸಿ, ಚಿಂತಿಸಿ, ತರ್ಕಿಸಿ, ವಿವೇಚಿಸಿ, ಕೊನೆಗೆ ನಾನು
ಈಗಾಗಲೇ ತೆಗೆದುಕೊಂಡಿರುವ ತೀರ್ಮಾನವನ್ನೇ ನೀವು ಕೂಡ ತೆಗೆದುಕೊಳ್ಳಿ.
ಕಾರಣ ಸಂಖ್ಯೆ 1: ಲಿಫ್ಟ್ ಮೇಲಿನ
ದೌರ್ಜನ್ಯ
ಈ ಜಾಸ್ತಿ ತೂಕದ ಜನರು ಲಿಫ್ಟ್ ಅನ್ನು ಉಳಿದ
ಉದ್ಯೋಗಿಗಳಷ್ಟೇ ಆತ್ಮವಿಶ್ವಾಸದಿಂದ ಬಳಸುತ್ತಾರೆ.
ಆದರೆ ಒಂದು ಸಣ್ಣ ಪ್ರಶ್ನೆ.
70 ಕೆಜಿ ಉದ್ಯೋಗಿ ಮತ್ತು 110
ಕೆಜಿ
ಉದ್ಯೋಗಿಯನ್ನು ಎಂಟನೇ ಮಹಡಿಗೆ ಕೊಂಡೊಯ್ಯಲು ಲಿಫ್ಟ್ ಒಂದೇ ಪ್ರಮಾಣದ ಶ್ರಮ ಪಡುತ್ತದೆಯೇ?
ಇಲ್ಲ ತಾನೇ!
ಹಾಗಾದರೆ ಕಂಪನಿಯ ವಿದ್ಯುತ್ ಬಿಲ್ಲಿಗೆ ಯಾರು ಕಾರಣ?
(ಈ ಪ್ರಶ್ನೆಗೆ ಉತ್ತರವನ್ನು ಆರ್ಥಿಕ ವಿಭಾಗದವರು
ಕಣ್ಣೀರಿನಿಂದ ನೀಡಬಹುದು.)
ಕಾರಣ ಸಂಖ್ಯೆ 2: ಕುರ್ಚಿಗಳ ನೋವು
ಆರಾಮ ಕುರ್ಚಿಗಳಿಗೂ ಭಾವನೆಗಳಿರುತ್ತವೆ.
ಆದರೆ ಅವು ತಮ್ಮ ನೋವನ್ನು ವ್ಯಕ್ತಪಡಿಸಲಾರವು.
ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೆ ಕೆಲವು
ಉದ್ಯೋಗಿಗಳು ಅವುಗಳ ಮೇಲೆ ಕುಳಿತು ನಡೆಸುವ ದೈಹಿಕ ದಾಳಿಯ ಪರಿಣಾಮವಾಗಿ ಕುರ್ಚಿಗಳ ಆಯುಷ್ಯ
ಗಣನೀಯವಾಗಿ ಕಡಿಮೆಯಾಗುತ್ತಿದೆ.
ESG ವರದಿಯಲ್ಲಿ ಈ ವಿಷಯ ಯಾಕೆ
ಬರೋದಿಲ್ಲ ಅನ್ನೋದೇ ಆಶ್ಚರ್ಯ.
ಕಾರಣ ಸಂಖ್ಯೆ 3: ಟೈರ್ ಸವೆತ
ಮತ್ತು ರಾಷ್ಟ್ರೀಯ ಆರ್ಥಿಕತೆ ಲಿಫ್ಟ್ ಒಂದೇ ಅಲ್ಲ. ಕಂಪನಿ ಕ್ಯಾಬ್. ಸರಕಾರಿ ಬಸ್. ಮೆಟ್ರೋ. ಆಟೋ. ಯಾವ
ವಾಹನವನ್ನಾದರೂ ಬಳಸಿದರೂ ಟೈರ್ ಸವೆತಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ. ಹಾಗೂ
ವಾಹನದ ಮೈಲೇಜ್ ಕೂಡ ಕಡಿಮೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಲೀಟರ್ ಪೆಟ್ರೋಲ್‌ಗೆ 15 ಕಿ.ಮೀ. ಹೋಗುವ
ವಾಹನ, ಕೆಲ
ಸಂದರ್ಭಗಳಲ್ಲಿ 14.999 ಕಿ.ಮೀ.ಗೆ ಇಳಿಯುವ ಭಯವಿದೆ. ದೇಶದ ಆರ್ಥಿಕತೆ ಇಂತಹ ಸೂಕ್ಷ್ಮ
ವಿಷಯಗಳ ಮೇಲೆಯೇ ನಿಂತಿದೆ ಎನ್ನುವುದನ್ನು ನಾವು ಮರೆಯಬಾರದು.
ಹಾಗಾಗಿ ಇದು ಕೇವಲ
ಕಂಪನಿಯ ಸಮಸ್ಯೆಯಲ್ಲ.
ಇದು ರಾಷ್ಟ್ರದ ಸಮಸ್ಯೆ.
ಪರಿಸರದ ಸಮಸ್ಯೆ.
ವಾಹನಗಳ ಟೈರ್‌ಗಳ ಸಮಸ್ಯೆ.
ಪೆಟ್ರೋಲ್ ಬಂಕ್‌ಗಳ ಸಮಸ್ಯೆ.
ಕಬ್ಬು ಬೆಳೆಗಾರರ ಸಮಸ್ಯೆ.
ಅಡುಗೆ ಮನೆಯ ಸಕ್ಕರೆಯ ಸಮಸ್ಯೆ.
ಜಾಗತಿಕ ಆರ್ಥಿಕತೆಯ ಸಮಸ್ಯೆ.
ಏನೋ ಕಾರಣಕ್ಕೆ ಈ ಎಲ್ಲಾ ವಿಷಯಗಳು ಒಂದಕ್ಕೊಂದು ಸಂಬಂಧ
ಹೊಂದಿವೆ ಎಂದು ನನಗೆ ಅನ್ನಿಸುತ್ತದೆ. ಅದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲು
ಸಾಧ್ಯವಾಗದಿರುವುದು ಮಾತ್ರ ನನ್ನ ದುರದೃಷ್ಟ.
ಈ ವಿಷಯವನ್ನು ವಿಶ್ವಸಂಸ್ಥೆ ಇನ್ನೂ ಗಂಭೀರವಾಗಿ
ಪರಿಗಣಿಸದಿರುವುದು ವಿಷಾದನೀಯ.
ಇರಲಿ...
ಒಬ್ಬ 100 ಕೆಜಿ ಉದ್ಯೋಗಿಯನ್ನು ಎಂಟನೇ ಮಹಡಿಗೆ ಕರೆದೊಯ್ಯಲು
ಲಿಫ್ಟ್‌ಗೆ ಎಷ್ಟು ವಿದ್ಯುತ್ ಬೇಕು ಗೊತ್ತಾ?
ನನಗೂ ಗೊತ್ತಿಲ್ಲ.
ಆದರೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ನಲ್ಲಿ ಮೂರು
ಗ್ರಾಫ್, ಎರಡು ಪೈ ಚಾರ್ಟ್,
ನಾಲಕ್ಕು ಬುಲೆಟ್
ಪಾಯಿಂಟ್ ಹಾಕಿದರೆ ಸಾಕು...
ಕಂಪನಿ ಆಡಳಿತ ವಿಭಾಗ ಅದನ್ನು ಸಂಪೂರ್ಣ ವೈಜ್ಞಾನಿಕ
ಸಂಶೋಧನೆ ಎಂದು ನಂಬುತ್ತದೆ.
3. Baldness Based Layoff
ಇದೀಗ ಬಹಳ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಒಂದು ಪ್ರಮುಖ
ಮಾನದಂಡದ ಬಗ್ಗೆ ಮಾತನಾಡೋಣ.
ಬೋಳುತನ.
ಈ ಬ್ರಹ್ಮಾಂಡದಲ್ಲಿ, ಅದರಲ್ಲೂ ನಮ್ಮ ಈ ಭೂ ಲೋಕದಲ್ಲಿ,
ಹಲವಾರು ಜನ ಬೋಳು
ತಲೆಯವರು ಅತ್ಯಂತ ಜನಪ್ರಿಯರಾಗಿದ್ದಾರೆ.
ಪ್ರತಿದಿನ ಲಕ್ಷಾಂತರ ಜನರು ಅವರನ್ನು ನೋಡುತ್ತಾರೆ.
ಮೆಚ್ಚುತ್ತಾರೆ! (ನಾನು ಜೇಸನ್ ಸ್ಟಾಥಮ್ ಬಗ್ಗೆ ಮಾತನಾಡುತ್ತಿದ್ದೇನೆ!, ಜೆಫ್ ಬೆಜೋಸ್
ಬಗ್ಗೆ ಅಲ್ಲ )
ಒಮ್ಮೆ ಯೋಚಿಸಿ ನೋಡಿ.
ಕೂದಲು ಇರುವವರನ್ನು ಯಾರಾದರೂ ಬೆಳಿಗ್ಗೆ ಕಚೇರಿಗೆ ಬಂದ
ತಕ್ಷಣ "ಓಯ್ ಕೂದಲು!" ಎಂದು ಕರೆಯುತ್ತಾರೆಯೇ?
ಇಲ್ಲ.
ಆದರೆ ಬೋಳು ತಲೆ ಇರುವವರನ್ನು ಮಾತ್ರ, ವಿವಿಧ ರೀತಿಯ
ಬಿರುಡುಗಳಿಂದ ಕರೆದು ಮಾನಸಿಕ ಹಿಂಸೆ ಕೊಡುತ್ತಾ ಇದ್ದಾರೆ. ಉದಾ: ಟಕ್ಲು, ಬೋಳ್ಮಂಡೆ,
ಮೊಟ್ಟೆ,
ರಿಫ್ಲೆಕ್ಟರ್,
ಶೈನಿಂಗ್ ಸ್ಟಾರ್,
ಸೋಲಾರ್ ಪ್ಯಾನಲ್,
ಇತ್ಯಾದಿ
ಇತ್ಯಾದಿ.
ಆದರೆ ಈ ಕ್ರೂರ ಹಿಂಸೆಯ ಬಗ್ಗೆ ಯಾವ ಮಾನವ ಹಕ್ಕುಗಳ
ಆಯೋಗ, ಬುದ್ದಿಜೀವಿಗಳು..
ಕನಿಷ್ಟ ಜಿರಲೆ ಪಕ್ಷ ಕೂಡ ಕಣ್ಣು ಹಾಯಿಸಿಲ್ಲ. ಆದುದರಿಂದ HR ನವರು ಇಂತಹ
ನಿರಂತರ ಮಾನಸಿಕ ಹಿಂಸೆಯನ್ನು ತಪ್ಪಿಸಲು, ಬೋಳು ತಲೆಯ ಉದ್ಯೋಗಿಗಳನ್ನು ಲೇಆಫ್ ಮಾಡಿ ಮನೆಗೆ
ಕಳುಹಿಸುವುದು ಮಾನವೀಯ ಕ್ರಮವಾಗಬಹುದು.
ಅವರು ಮನೆಯಲ್ಲೇ ಆರಾಮಾಗಿ ಕುಳಿತುಕೊಂಡು:
- ಇಂದೂಲೇಖಾ
- ಭೃಂಗರಾಜ್ ಎಣ್ಣೆ
- ತೆಂಗಿನ ಎಣ್ಣೆ
- ಈರುಳ್ಳಿ ರಸ
- ಯೂಟ್ಯೂಬ್‌ನಲ್ಲಿ ಸಿಗುವ ವಿಚಿತ್ರ ಚಿಕಿತ್ಸೆಗಳು
ಎಲ್ಲವನ್ನೂ ಪ್ರಯತ್ನಿಸಬಹುದು.
(ನಾನು ವೈಯಕ್ತಿಕವಾಗಿ ಅನೇಕ ಬ್ರ್ಯಾಂಡ್‌ಗಳನ್ನು
ಪ್ರಯತ್ನಿಸಿದ್ದೇನೆ. ಫಲಿತಾಂಶ? ಸೊನ್ನೆ!)
ಸಮಾರೋಪ:
ನನ್ನ ತಲೆಯಲ್ಲಿ ಇನ್ನೂ ಹತ್ತಿಪ್ಪತ್ತು ಐಡಿಯಾಗಳು ಇವೆ!
ಆದರೆ ಅದನ್ನು ಮೊದಲು, ನಾನು ನನ್ನ ಕಂಪನಿಯವರಿಗೆ
ತಿಳಿಸಿ, ಭವಿಷ್ಯದಲ್ಲಿ
ನಾನು ಎಷ್ಟೊಂದು ಉಪಯೋಗಕ್ಕೆ ಬರಬಹುದು ಎಂದು ಮನವರಿಕೆ ಮಾಡಿಸಿ, ನನ್ನ ಕುರ್ಚಿಯನ್ನು
ಭದ್ರಪಡಿಸಿಕೊಳ್ಳಲು ಪ್ರಯತ್ನಿಸುವೆ.
ಏಕೆಂದರೆ ನಾಳೆ ಅವರು ಈ ಲೇಖನ ಓದಿ,
"ಇವನ ಬಳಿ ತುಂಬಾ
ಐಡಿಯಾಗಳಿವೆ... ಅಪಾಯಕಾರಿ ವ್ಯಕ್ತಿ!" ಎಂದು ಹೊಸ ಲೇಆಫ್ ಮಾನದಂಡವನ್ನೇ ಸೃಷ್ಟಿಸಬಹುದು.
ನಿಮ್ಮೆಲ್ಲರ ಹೊಟ್ಟೆ ಸಣ್ಣಗಾಗಲಿ, ತಲೆಯಲ್ಲಿ ಕೂದಲು
ಬೆಳೆಯಲಿ ಎಂದು ಭಯಂಕರವಾಗಿ ಹಾರೈಸುವೆ.