Friday, July 3, 2009

ಕಾಂಗ್ರೆಸ್ ಗೆ ಒಂದು ಸಲಹೆ...


ಕಳೆದ 2- 3 ದಿನಗಳಿಂದ ನನಗೆ ವಿಪರೀತ ಕುಶಿ ಆಗ್ತಾ ಇದೆ, ಕಾರಣ ಏನು ಅಂತೀರಾ? ಇದೋ ಕೇಳಿ. ಅಂತೂ ಇಂತು ಮುಂಬೈ ನಲ್ಲಿ ಕಟ್ಟಿರೊ ಒಂದು ದೊಡ್ಡ ಸೇತುವೆ ಗೆ ರಾಜೀವ್ ಗಾಂದಿ ಹೆಸ್ರು ಈಡೋ ತೀರ್ಮಾನ ಆಗಿದೆ ಅಂತೆ, ಇದು ಪವಾರ್ ಅವರು ಕೊಡ್ತಾ ಇರೋ ಸಲಹೆ. ಇದನ್ನು ಕೇಳಿ ನಂಗೆ ಹಾಲು ಕುಡಿದಷ್ಟು ಸಂತೋಷ ಆಯಿತು. ರಾಜೀವ್ ವಿಮಾನ ನಿಲ್ದಾಣ, ರಾಜೀವ್ ಬಸ್ ನಿಲ್ದಾಣ, ಇಂದಿರ ಅವಾಸ, ರಾಜೀವ್ ಯುವ ಕೇಂದ್ರ, ಅಂತೆಲ್ಲಾ ಇದ್ರು ನಂಗೆ ಸಮಾಧಾನ ಆಗಿರಲಿಲ್ಲ.


ನವ ಭಾರತ ನಿರ್ಮಾತೃ, ದೇಶಕ್ಕಾಗಿ ಕುಟುಂಬವನೆ ಮುಡುಪು ಇಟ್ಟಿರೋ ನೆಹ್ರು ಮನೆತನದ ದವರ ಹೆಸ್ರು ಇಡೋದು ಅತ್ಯಂತ ಸೂಕ್ತ ಅಂತ ನನ್ನ ಭಾವನೆ. ಆದ್ದರಿಂದ ನನ್ನ ಕಡೆ ಇಂದ ಕೇಂದ್ರ ಸರಕಾರಕ್ಕೆ ಕೆಲವೊಂದು ಸಲಹೆ, ಇನ್ನೂ ಎಲ್ಲೆಲ್ಲಿ ಆ ಮಹಾನು ಭಾವರ ಹೆಸ್ರು ಇಡಬಹುದು ಅಂತ. ದೇಶದಲ್ಲಿ ಇನ್ನೂ ಹಲವು ಯೋಜನೆ ಹಾಗೂ ಸ್ಥಳ ಗಳಿಗೆ ಅವರ ಹೆಸರು ಇಡಬಹುದಾಗಿದೆ. ಇಲ್ಲಿ ಬರೆದಿರುವ ಯೋಜನೆಗಳ ಕರ್ತೃ ನಾನೇ ಆಗಿರುತ್ತೇನೆ, ದಯಮಾಡಿ ಯಾವ ಕಾಂಗ್ರೆಸ್ ಕಾರ್ಯಕರ್ತರು ಇದನ್ನು ಕದಿಯ ಬಾರದು.


ನಮ್ಮ ದೇಶದಲ್ಲಿ ಒಳ್ಳೆಯ ರಾಜಕಾರಣಿ ಗಳು ಬಹಳ ಕಡಿಮೆ, ಒಳ್ಳೆಯ ಜನ ಇದ್ರೂ ಅವರು ರಾಜಕೀಯ ದಿಂದ ನಿವೃತ್ತ ರಾಗಿದ್ದಾರೆ, ಆದ್ದರಿಂದ ಈ ವಂಚಕ ಮಹಾ ಪ್ರಭುಗಳಿಗೆ ಅಂತ ಒಂದು ಜೈಲು ನಿರ್ಮಾಣ ಮಾಡಬೇಕು. ಅವರ ತಪ್ಪು ಗಳು ಸಾಬೀತು ಆಗುವುದು ಬಹಳ ಕಡಿಮೆ, ಆದರೂ ಒಂದು ಜೈಲು ಕಟ್ಟಿಸಬೇಕು, ಹಾಗೂ ಅದಕ್ಕೆ “ರಾಜೀವ್ ಬೋಫರ್ಸ್” ಕಾರಾಗೃಹ ಅಂತ ಹೆಸರಿಸ ಬೇಕು.


ನಮ್ಮ ದೇಶದಲ್ಲಿ ಯಾವಾಗ ಬೇಕಾದ್ರೂ ಬಾಂಬು ಗಳು ಸಿಡಿದು ನಾವೆಲ್ಲ ಸ್ವರ್ಗಸ್ತರಾಗ ಬಹುದು. ಉಗ್ರಗಾಮಿಗಳು ಬಂದು ಗುಂಡಿನ ಮಳೆ ಗೆರೆಯ ಬಹುದು. ಹಾಗಾಗಿ ಉಗ್ರಗಾಮಿಗಳಿಂದ ಸತ್ತವರ ಸಮಾಧಿಗೆ ಅಂತ ರಾಜೀವ್ ರುದ್ರ ಭೂಮಿ ಮಾಡಿಸಬೇಕು. ಮುಂಬೈ, ಕಾಶ್ಮೀರ್ ಗಳಲ್ಲಿ ಜನ ಉಗ್ರರಿಂದ ಸಾಯೋ ಸ0ಖ್ಯೆ ಜಾಸ್ತಿ ಇರೋದ್ರಿಂದ ಅಲ್ಲೆಲ್ಲ ರಾಜೀವ್ ವಿಧ್ಯುತ್ ಚಿತಾಗಾರ ಮಾಡಿದರೆ ಇನ್ನೂ ಒಳ್ಳೇದು.


ನಮ್ಮಲ್ಲಿ ಹಿಂದೂ ಅಂತರ್ಜಾತೀಯ ವಿವಾಹಕ್ಕೆ ಆರ್ಯ ಸಮಾಜ ಇದೆ, ಸರ್ಕಾರವು ಕೂಡಲೇ ಇದನ್ನು ನಿಷೇದಿಸಿ, ಪ್ರತಿ ಊರಲ್ಲೂ ಪ್ರಿಯಾಂಕ ಛತ್ರ ಮಾಡಿಸಬೇಕು. ಮದುವೆ ಏ ಆಗೋಲ್ಲ, ಬರಿ ಇಷ್ಟ ಬಂದಷ್ಟು ದಿನ ಮಜ ಮಾಡ್ಕೊಂಡು ಒಟ್ಟಿಗೆ ಇರ್ತೀವಿ ಅನ್ನೋರಿಗೆ ರಾಹುಲ್ ಗಾಂದಿ ಯೋಜನೆ ಮಾಡಿ ಅವರಿಗೆ ಧನ ಸಹಾಯ ಮಾಡಬೇಕು.


ಬಾಂದ್ರಾ ಮತ್ತು ವೊರ್ಲಿ ಸೇತುವೆ ಗೆ ರಾಜೀವ್ ಹೆಸ್ರು ಇಟ್ಟಾಗಿದೆ, ಆದರೆ ಅದರ ಕೆಳಗಿನ ಸಮುದ್ರದ ಮೀನುಗಳಿಗೆ ರಾಜೀವ್ ಹೆಸ್ರು ಇಟ್ಟಿಲ್ಲ ಅಂತ ಮೀನು ಗಳು ಗೊಳೋ ಅನ್ನುತ್ತಾ ಇದ್ದಾವೆ ಅಂತ ಸುದ್ದಿ ಬಂದಿದೆ. ಆದ್ದರಿಂದ ಸರ್ಕಾರವು ಇನ್ನೂ ಮುಂದೆ ಇಂತಹ ಅವಗಡ ಗಳು ನಡೆಯದಂತೆ , ರಾಜೀವ್ ಅಥವಾ ಇಂದಿರ ಹೆಸರಿಟ್ಟ ಪೋಷಕರಿಗೆ ಉಚಿತ ಸೀರೆ, ಗಂಡಸರಿಗೆ ಎಣ್ಣೆ ಕೊಡಬೇಕು. ಮುಂದೆ ಮಕ್ಕಳಿಗೆ ನಿರುದ್ಯೊಗ ಬತ್ಯೆ ಕೊಡಬೇಕು.


ವಿರೋಧ ಪಕ್ಷಗಳು ಈಗಾಗಲೇ ಈ ಹೆಸರಿಡೊ ಪದ್ದತಿ ಅನುಸರಿಸುತ್ತಾ ಇದ್ದಾವೆ, ಉದಾಹರಣೆಗೆ ಬೆಂಗಳೂರಿನಲ್ಲಿ ಅಟಲ್ ಸಾರಿಗೆ. ಆದ್ದರಿಂದ ಯಾವುದೇ ಸರ್ಕಾರಿ ಯೋಜನೆ ಗಳಿಗೆ ಹೆಸರುಗಳು ಯಾವತ್ತೂ ರಾಜೀವ ಅಥವಾ ಇಂದಿರ ಅಂತಲೇ ಇರಬೇಕೆಂದೂ ಒಂದು ಕಾಯಿದೆ ಅನ್ನು ಹೊರತರ ಬೇಕು..


ನಮ್ಮಲ್ಲಿ ಕೊಡುವ ಬಹುತೇಕ ಪ್ರಶಸ್ತಿ ಗಳಿಗೆ ರಾಜೀವ್ ಮತ್ತೆ ಇಂದಿರ ಹೆಸರಿದೆ. ಆದರೆ ಅತ್ಯುನ್ನತ ಪ್ರಶಸ್ತಿ ಗಳಿಗೆ ಅವರ ಹೆಸರಿಲ್ಲದೇ ಇರುವುದು ನನಗೆ ಪಿಚ್ಚೆನಿಸುತ್ತಾ ಇದೆ. ಕೂಡಲೇ ಭಾರತ ರತ್ನ ವನ್ನು ರಾಜೀವ್ ರತ್ನವೆಂದು, (ರಾಜೀವ್ ಗಾಂದಿ ಖೇಲ್ ರತ್ನ ಇದೆ ಆದ್ರೆ ಅದು ಬೇರೆ) ಜ್ಞಾನ ಪೀಠ ವನ್ನು ಇಂದಿರಾ ಪೀಠ ವೆಂದು ಬದಲಿಸ ಬೇಕು.


ಆಮೇಲೆ ಇಲ್ಲಿ ಬೆಂಗಳೂರಲ್ಲಿ ಇನ್ಫೋಸಿಸ್ ಸುಧಾ ಮೂರ್ತಿ ಅವರು ನಗರದ ಜನನಿಬಿಡ ಸ್ಥಳ ಗಳಲ್ಲಿ “ಪ್ರಕೃತಿ ಕರೆ” ಒಗೋಡಲು ಹಲವು “ನಿರ್ಮಲ ಬೆಂಗಳೂರು” ಮಾಡಿದ್ದಾರೆ, ಕೂಡಲೇ ಸರ್ಕಾರವು ಇದನ್ನು ರಾಷ್ಟ್ರೀಕರಣ ಮಾಡಿ ರಾಜೀವ್ ಹೆಸರು ಇಟ್ಟರೆ ಬಹಳ ಚೆನ್ನಾಗಿರುವುದು.


ಇನ್ನು ಕೋನೇದಾಗಿ ಈ ದೇಶದ ಹೆಸ್ರನ್ನೇ ಬದಲಿಸಿ ಬಿಟ್ಟರೆ ಆಯಿತು, ಇಂಡಿಯಾ ಬದಲು ಇಂದಿರ ಅಂತ ಮಾಡಿದ್ರೆ ಮುಗೀತು.


ಈ ಬೇಡಿಕೆಗಳು ಕೂಡಲೇ ಜಾರಿಗೆ ಬರಬೇಕೆಂದು ನಾನು ಸರ್ಕಾರವನ್ನು ಈ ಬ್ಲಾಗಿನ ಮೂಲಕ ಒತ್ತಾಯ ಪಡಿಸುತ್ತಾ ಇದ್ದೇನೆ. (ಅವರ್ಯಾರು ಇದನ್ನ ನೋಡಲ್ಲ, ಆದ್ರೂ … ಕೂಡ ಹೆವೀ ಒತ್ತಾಯ) ಹಾಗೂ ಸರ್ಕಾರವು ನನ್ನ ಮನವಿ ಯನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿ, ಕಾರ್ಯರೂಪಕ್ಕೆ ತರುತ್ತದೆ ಅಂತ ನಾನು ಭಾವಿಸುವೆ. ನೀವೇನಂತೀರಿ?





ನನ್ನ ಸ್ನೇಹಿತ ಕಳಿಸಿದ ಫೋಟೋ ಇದು. ಸೇತುವೆ ಉದ್ಘಾಟನೆ ಅನಾಮಿಕ ನಿಂದ!!!!!!

Monday, June 22, 2009

ಸ್ಲಿಮ್ ಆಗೋ ಮಾರ್ಗಗಳು



ತೆಳ್ಳಗೆ ಸುಂದರವಾಗಿ , ಅರೋಗ್ಯ ವಾಗಿ ಇರಬೇಕೆಂದು ಯಾರಿಗೆ ಆಸೆ ಇರೋಲ್ಲ ಹೇಳಿ. ಆದ್ರೆ ಮೂರು ಹೊತ್ತು ಕಂಪ್ಯೂಟರ್ ಮುಂದೆ ಕೂತ್ಹೋ , ಅಥವಾ ಫೈಲೇ ಹಿಡ್ಕೊಂಡು ಕೂತಿದರ ಪಲ್ಹವೋ ... ಬಹು ಪಾಲು ಜನರಿಗೆ ಡೊಳ್ಳು ಹೊಟ್ಟೆ !!! ಕೆಲವರಂತು ಒಳ್ಳೆ 9 ತಿಂಗಳ ಬಸರಿ ತರ ಕಾಣ್ತಾರೆ !!! ಅದೇ ವಿಚಾರವಾಗಿ ಇಂಟರ್ನೆಟ್ ಸರ್ಫ್ ಮಾಡಿದೆ ಅಲ್ಲಿ ತಿಳಿಸಿದ ಮಾರ್ಗಗಳು ನನಗೆ ಭಯಾನಕ ಅನ್ನಿಸಿದವು, ಮಾಡಲು ಸಾದ್ಯನಾ ಅನ್ನಿಸ್ದ್ವು.ಕಾಲೇಜ್ ದಿನಗಳಲ್ಲಿ ಮಿಂಚಿನ ಬಳ್ಳಿ ತರ ಇದ್ದ ನಾನು, ಈಗ ಆನೆ ಮರಿ ಥರನೆ ಆಗಿದ್ದೀನಿ (ಅನೆ ಮರಿ ಅಲ್ಲ, ಅದಕ್ಕೂ ಜಾಸ್ತಿ) ಮೊದಲು ಮನೆಲ್ಲಿ ವಾಶಿಂಗ್ ಮಷಿನ್ ಇರಲ್ಲಿಲ್ಲ , ಮನೆಗೆ ಕೆಲಸಕ್ಕೆ ಕೆಲಸದವರು ಇರಲಿಲ್ಲ್ಲ , ಅಂಗಳಕ್ಕೆ ಆಳು ಇರಲಿಲ್ಲ , ಗಂಗಳ ತೊಳೊಯೊಕ್ಕೆ ಯಾರು ಬರ್ತಿರಲಿಲ್ಲ ...




ಈಗ ?... ಹೇಳೋ ಅವಶ್ಯಕತೆ ಇಲ್ಲ ಅರ್ಥ ಆಗಿರ ಬೇಕಲ್ಲ. ಏನು ಕೆಲಸ ಮಾಡದೆ ತೆಳ್ಳಗೆ ಆಗು ಅಂದ್ರೆ ದೇಹ ಕೇಳುತ್ತಾ? ಹೋಗಲಿ ಡಯೆಟ್ ಮಾಡೋಣ ಅಂದ್ರೆ ನಾಲಿಗೆ ಸುಮ್ಮನಿರುತ್ತ ? ಹೊಟ್ಟೆ ಕಟ್ಟಿದೆ, ಯೋಗ ಶುರು ಮಾಡಿದೆ, ಒಂದೆರಡು ಕೆಜಿ ತೂಕನು ಕಮ್ಮಿ ಆಯಿತು ....ಆಮೇಲೆ ಸೋಮಾರಿ ತನ. ಹಿಂಗಿರೋವಾಗ ತೆಳ್ಳಗೆ ಆಗೋದು ಹೇಗೆ? ಇದು ನನ್ನದೊಬ್ಬಳ ಸಮಸ್ಯೆ ಅಲ್ಲ, ಬಹು ಪಾಲು ಜನರದ್ದು . ಇದೊಂದು ಸಾರ್ವತ್ರಿಕ ಸಮಸ್ಯೆ ಆದುದರಿಂದ ಸುಲಭಕ್ಕೆ ತೆಳ್ಳಗೆ ಆಗೋ ಉಪಾಯಗಳನ್ನೂ ಕೊಟ್ಟಿರುವೆ . ಆಸಕ್ತರು , ನಡೆದಾಡುವ ಮಾಂಸ ಪರ್ವತ ಗಳು ಉಪಯೋಗಿಸ ಬಹುದು ......





1) ಜೋಗ್ಗಿಂಗ್ ಮಾಡೋಕೆ ಸೋಮಾರಿತನ ಇದ್ರೆ .. ಸುಮ್ನೆ ರಸ್ತೆ ಲಿ ಹೋಗೋವಾಗ ಬೀದೀಲ್ಲಿ ಇರೋ ನಾಯಿ ಗಳಿಗೆ ಕಲ್ಲು ಹೊಡಿರಿ ...


2) ಸದಾ ಚಿಂತೆ ಮಾಡುತ್ತಿರಿ. ..ಸದಾ ಚಿಂತಾಕ್ರಾಂತರಾಗಿ , ದೇಶದ ಬಗ್ಗೆ ಯೋಚಿಸಿ, ನಿಮ್ಮ ಮ್ಯಾನೇಜರ್ ಗಳ ಬಗ್ಗೆ ಯೋಚಿಸಿ, ಮನೆ ಮತ್ತೆ ವರ್ಕ್ ಬ್ಯಾಲೆನ್ಸ್ ಬಗ್ಗೆ, ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಯೋಚಿಸಿ, ಇತ್ಯಾದಿ .....ಹಸಿವು ನಿದ್ದ ಏನೂ ತಿಳಿಯೋಲ್ಲ .... ಸೊ ತಿಂಗಳೊಳಗಾಗಿ ನೀವು ಸ್ಲಿಮ್ ಅಂಡ್ ಟ್ರಿಂ (ಬದುಕಿದ್ದರೆ )



3) ನಿಮ್ಮ ಹತ್ತಿರ ದುಡ್ಡು ಇದೆ ಅಂತ ತಿಳಿದರೆ ಯಾರಾದರೊಬ್ಬರು ಸಾಲ ಕೇಳೆ ಕೇಳುತ್ತಾರೆ ಹಾಗಿರ ಬೇಕಾದರೆ, ನೀವು ಕಿತ್ತೋದ ಒಬ್ಬನಿಗೆ ಸಾಲ ಕೊಡಿ ಅದರ ವಸೂಲಿಗೆ ಅವನನ್ನು ಅಟ್ಟಿಸಿ ಕೊಂಡು ಹೋಗಿ !! ಇದರಲ್ಲಿ ರಿಸ್ಕ್ ಇದೆ ಆದ್ರೆ ದುಡ್ಡಿನ ವಸೂಲಿ ಮಾಡೋ ನೆಪದಲ್ಲಿ ನೀವು ತೆಳ್ಳಗಾಗೊದ್ರಲ್ಲಿ ಸಂದೇಹನೆ ಇಲ್ಲ.



4) ೧೦೦ ಗ್ರಾಮ್ಸ್ ಸಾಸಿವೆ ಅಥವಾ ರಾಗಿ ತೆಗೆದುಕೊಂಡು ಒಂದು ರೂಂ ನಲ್ಲಿ ಚೆಲ್ಲಿ ಆಮೇಲೆ ಒಂದೊಂದನ್ನೇ ಹೆಕ್ಕಿ ಹೆಕ್ಕಿ ಮತ್ತೆ ಡಬ್ಬಿಗೆ ತುಂಬಿ.. ಇದೆ ತರಹ ದಿನಕ್ಕೆ 2 ಬಾರಿ ಮಾಡಿ , ಹಾಗೆ 30 ದಿನ ಮಾಡಿ.... ಆಗ ನಿಮ್ಮ ಕನ್ನಡಿ ನಿಮಗೆ " ಇದು ನೀವೇನಾ? " ಅಂತ ಪ್ರಶ್ನೆ ಕೇಳುತ್ತೆ !!!!



5) ದೊಡ್ಡೋರು , ಅನುಭವಿಗಳು ಹೇಳ್ತಾರೆ ....ಮಧ್ಯಾನ್ನ ನಿದ್ದೆ ಮಾಡಿದ್ರೆ ದಪ್ಪಗೆ ಆಗ್ತಾರೆ ಅಂತ - ಅದಕ್ಕೆ ಮಧ್ಯಾನ್ನದ ಹೊತ್ತು ನಿದ್ದೆ ಮಾಡೇ ಇರೋ ಹಾಗೆ , ಬೀದಿಲ್ಲಿ ಆಡುವ ಮಕ್ಕಳನ್ನ ಕರೆದು ೫ ರೂಪಾಯಿ ಕೊಟ್ಟು ಪ್ರತಿ ೫ ನಿಮಿಷಕ್ಕೊಮ್ಮೆ ಮನೆ ಕಾಲಿಂಗ್ ಬೆಲ್ ಒತ್ತುವ ವ್ಯವಸ್ಥೆ ಮಾಡಿ ಕೊಳ್ಳಿ( ಮತ್ತೆ ಈ ವಿಷಯನ ನೀವು ಮರೆತು ಬಿಡಿ). ಒಂದು ನಿಮಗೆ ತಾಳ್ಮೆ ಜಾಸ್ತಿ ಆಗುತ್ತೆ ಅಥವಾ ಯಾರು ಮನೆಗೆ ಬಂದ್ರು ಅಂತ ಎದ್ದು ಓಡಾಡಿ ನೀವು ಖಂಡಿತ ತೆಳ್ಳಗೆ ಆಗ್ತೀರ.



6) ಬೆಂಗಳೂರು ಮಹಾನಗರಿ ಸಾರಿಗೆ ಸಂಸ್ಥೆ ಯವರಿಂದ ಇರುವ ಕರೀ ಹಲಗೆ ಬಸ್ಸು ಗಳನ್ನೇ ದಿನನಿತ್ಯ ಬಳಸಿ . ಅದರಲ್ಲೂ ನೀವು ಒಂದು ಕಿಟಕಿ ಸೀಟ್ ಹಿಡಿಯಲು ಪ್ರಯತ್ನಿಸಿ ...ಹೀಗೆ ೩೦ ದಿನಗಳ ಕಾಲ ಮಾಡಿ .... ಖಂಡಿತ ನೀವು ಬಳಕುವ (ಅಥವಾ ಉಳಕುವ ) ಸೊಂಟದವರಾಗುತ್ತಿರಿ.



7) ಬೆಂಗಳೊರಿನಲ್ಲಿ ಬಾಡಿಗೆ ಮನೆ ಹುಡುಕುವ ಅನುಭವ ಇರಬೇಕಲ್ಲ ? ..... ಹೀಗಿರುವಾಗ ನೀವು ಗೊತ್ತಿದ್ದೂ ಗೊತ್ತಿದ್ದೂ ನಿಮ್ಮ ಗೆಳಯ ಅಥವಾ ಗೆಳತಿಗೆ ಮನೆ ಹುಡುಕಲು ಸ್ವಯಂ ಪ್ರೇರಣೆ ಇಂದ ಹೊರಡಿ . (ಮನೆಗಾಗಿ ಅಲೆದೂ ಅಲೆದೂ...... )



8) ಈಗ ನಾನು ತಿಳಿಸುತ್ತಿರುವ ಮಾರ್ಗ ತುಂಬಾ ಹಳೆಯದು ತುಂಬಾ ಸಕ್ಸೆಸ್ಸ್ ಆಗಿರೋ ಮೆಥಡ್ ...ನೀವು ಪ್ರಯತ್ನಿಸಬಹುದು.
೧/೨ ಘಂಟೆ ಗೆ ಒಮ್ಮೆ ಅಂತೆ ಒಂದು ಚಂಬು ನೀರು ಕುಡೀರಿ......ಬಚ್ಚಲ ಮನೆಗೆ ಓಡಾಡಿ ಓಡಾಡಿ ಸಣ್ಣ ಆಗೇ ಆಗ್ತೀರ. (ಮೊದಲೇ ನೀರಿನ ವ್ಯವಸ್ಥೆ ಚೆನ್ನಾಗಿ ಮಾಡಿಕೊಳ್ಳಿ )



9) ದಿನನಿತ್ಯದ ಒಗ್ಗರಣೆಗೆ ತುಪ್ಪ , ಸಾಸಿವೆ ಜೀರಿಗೆ ಹಾಕುವ ಅಭ್ಯಾಸವಿದ್ದರೆ ಇದನ್ನು ಪ್ರಯತ್ನಿಸ ಬಹುದು.... ತುಪ್ಪದ ಬದಲು ಹರಳುಎಣ್ಣೆ ಉಪಯೋಗಿಸಿ ...



10) ಎಲ್ಲ ಕಿಟಕಿ ಬಾಗಿಲು ಮುಚ್ಚಿ ಪರದೆ ಎಳೆದು ಕೊಂಡು, ಕತ್ತಲು ಕೋಣೆ ಮಾಡಿ ಕೊಂಡು, ನಿಮ್ಮ ನೆಚ್ಚಿನ ಟಿವಿ ಮುಂದೆ ಪೀಠಾರೊಹಣ ಮಾಡಿ , ನಿಮಿಷಕ್ಕೆ ೪ ಚಾನೆಲ್ ಚೇಂಜ್ ಮಾಡಿಕೊಂಡು ನೋಡಿದ್ರೆ ಎಂತಹ ಸುಖ ಅಲ್ಲವಾ? ಸುಖ ಪಟ್ಟರೆ ದಪ್ಪಗಾಗ್ತಿರ , ಇದಕ್ಕೆ ನನ್ನಲ್ಲಿ ಒಂದು ಉಪಾಯವಿದೆ ,... ಟಿವಿ ರಿಮೋಟ್ ಬ್ಯಾಟೆರಿ ಹೋಗಿದ್ರು ಸಹ ಅದನ್ನ ಚೇಂಜ್ ಮಾಡ ಬೇಡಿ ! ಇದರಿಂದ ೨ ಉಪಯೋಗಗಳು ಇವೆ.


೧) ನಿಮಿಷಕ್ಕೆ ೪ ಸಲ ಟಿವಿ ಹತ್ತಿರಾನೆ ಎದ್ದು ಹೋಗಿ ಚಾನೆಲ್ ಚೇಂಜ್ ಮಾಡೋದ್ರಿಂದ ಸ್ಲಿಮ್ ಆಗೇ ಆಗ್ತೀರ ..
೨) ಟಿವಿ ಚನ್ನೆಲ್ಸ್ ಚೇಂಜ್ ಮಾಡೋಕ್ಕೆ ಸೋಮರಿತನವಾದ್ರೆ ಟಿವಿ ಹುಚ್ಚು ಬಿಡುತ್ತೆ




ಕೊನೆಗೆ ನೋಟ್ : ಈ ಉಪಯಗಳಿಗೆ ಪೇಟೆಂಟ್ ಮಾಡಿಸಿರುವುದಿಲ್ಲ , ಕಾಪಿ ರೈಟೆ ಇಲ್ಲವೇ ಇಲ್ಲಾ, ಯಾರು ಬೇಕಾದರು ನನಗೆ ಹಣ ಕೊಡದೆ ಉಪಯೋಗಿಸಿ ಜಿಂಕೆ ಮರಿ ಆಗ ಬಹುದು . :)

Wednesday, June 17, 2009

ನೋಡಿ ಸ್ವಾಮಿ ನಾವಿರೋದೆ ಹೀಗೆ!!!!



ನಮಗೆ ತೀರಾ ನೆಗೇಟಿವ್ ಆಲೋಚನೆ ಗಳೇ ಬರುತ್ತೆ, ಅನ್ನೋದಕ್ಕೆ ಉದಾಹರಣೆ ನಮ್ಮ ಪತ್ರಿಕೆಗಳು, ಸಾಹಿತಿ ಗಳು ಮತ್ತೆ ಸಿನಿಮಾ ದವರೇ ಸಾಕ್ಷಿ. ದಿನ ಬೆಳಿಗ್ಗೆ ಆದ್ರೆ ಸಾಕು, ಆ ರಾಜಕಾರಣಿ ಹಂಗೆ ಮೋಸ ಮಾಡಿದ್ರೂ, ಜನಕ್ಕೆ ಟೋಪಿ ಹಾಕಿದ್ರೂ ಅಂತೆಲ್ಲ ಬರೀಯೋದು. ಇನ್ನೂ ನಾಮ ಸಾಹಿತಿಗಳೋ ಭಾರತ ದಲ್ಲಿ ಅದಿಲ್ಲ, ಮೂಲಭೂತ ವ್ಯವಸ್ತೆ ಇಲ್ಲ, ಮಾತು ಸೋತ ಭಾರತ, ದಾರಿ ತಪ್ಪಿದ ಭಾರತ ಅಂತೆಲ್ಲಾ ಪುಂಗಿ ಊದಿ ಬೂಕರ್, ಪಾಕರ್ ಎಲ್ಲ ತಗೋತಾರೆ. ಇನ್ನೂ ಸಿನಿಮಾ ದವರಂತೂ ಕೇಳೋದೇ ಬೇಡ, ರಾಷ್ಟ್ರೀಯ ಮಟ್ಟದಲ್ಲಿ ಅಂತರ ರಾಷ್ಟ್ರೀಯಮಟ್ಟದಲ್ಲಿ ಕೊಳಚೆ ವಾಸಿ ಗಳ ಬಗ್ಗೆ ಸಿನಿಮಾ ಮಾಡಿ ಜನರಿಗೆ ಭಾರತ ದ ಬಗ್ಗೆ ತೀರಾ ತಪ್ಪು ಕಲ್ಪನೆ ಬರೋ ಹಾಗೆ ಮಾಡ್ತಾ ಇದ್ದಾರೆ.


ಇದು ನಿಜಕ್ಕೂ ಬೇಸರದ ಸಂಗತಿ, ಯಾಕೆ ನಾವೆಲ್ಲಾ ಪಾಸಿಟಿವ್ ಥಿಂಕ್ ಮಾಡೋಲ್ಲ. ಯಾಕೆ ಕಷ್ಟ ದಲ್ಲಿ ಇದ್ದಿವಿ ಅಂತ ಭಾವಿಸ ಬೇಕು? ಪಾಲಿಗೆ ಬಂದದ್ದು ಪಂಚಾಮೃತ, ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ಗಾದೆಗಳನ್ನು ನೆನ್ಪಿಸಿ ಕೊಂಡು, ಇರಬಹುದಲ್ಲ. ನಮಗೆ ಇರಲಿಕ್ಕೆ ಮನೆ ಇಲ್ಲದೆ ಹೋದರೆ ಅದು ದೊಡ್ಡ ಕಷ್ಟ ವೆ? ಪಾಂಡವರು ದಂಡಕಾರಣ್ಯ ದಲ್ಲಿ ವನವಾಸ ಹೋಗಿದ್ದರಲ್ಲ ಅವರಿಗೇನು ಅಲ್ಲಿ ಎ ಸಿ ಸಿ ಸಿಮೆಂಟಿನಿಂದ ಕಟ್ಟಿದ ತಾರಸಿ ಮನೆಗಳು ಇದ್ದವ? ಇಲ್ಲ ತಾನೆ. ಮಲಗಲು ಮನೆ ಇಲ್ಲ ಅಂದರೆ, ಇ ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆ ಎಂದು ಭಾವಿಸಿದರೆ ಆಯಿತು.


ಸರ್ಕಾರ ಕೊಟ್ಟ ಆಶ್ರಯ ಮನೆ ಸೊರ ಬಹುದು , ಗಾಳಿ ಗೆ ಬೀಳಲು ಬಹುದು, ಅದರ ತಪ್ಪು ಗಾಳಿ ಹಾಗು ಮಳೆ. ವರುಣ ಮತ್ತು ವಾಯು ವಿಗೆ ಯಾವುದಾದರು ಕೋರ್ಟ್ ನಲ್ಲಿ ದಾವ ಹಾಕುವುದು ಸಾಧ್ಯವಿದ್ದರೆ ಚೆನ್ನಿತ್ತು. ಅದನ್ನ ಬಿಟ್ಟು ಅಧಿಕಾರಿಗಳನ್ನ, ಕಾಂಟ್ರಾಕ್ಟು ದಾರರಿಗೆ ಬೈದರೆ ಏನು ಪ್ರಯೋಜನ.


ನಮ್ಮ ದೇಶದಲ್ಲಿ ಭಯೋತ್ಪಾದನೆ ಇದೆ ನಿಜ, ಹಾಗಂತ ಅದರ ಬಗ್ಗೆ ನಾವು ಯಾಕೆ ಅಷ್ಟು ಗಂಟಲು ಹರಿಯೋ ಹಾಗೆ ಕೂಗಿಕೋ ಬೇಕು? ಎಲ್ಲೋ ತಿಂಗಳಿಗೆ 2-3 ಕಡೆ ಬಾಂಬ್ ಡಮ್ ಎಂದು ಸಿಡಿದು ಒಂದಿಷ್ಟು ಜನ ಸತ್ತಿರಬಹುದು, ಆದರೆ ನಾವು ಇನ್ನೂ ಬದುಕೇ ಇದ್ದಿವಲ್ಲ! ಉಗ್ರಗಾಮಿ ಗಳು ಇನ್ನೂ ನಮ್ಮ ಮನೆಯೊಳಗೆ ನುಗ್ಗಿ ಬಾಂಬ್ ಇಟ್ಟಿಲ್ಲ, ಇದು ಕುಶಿ ಪಡಬೇಕಾದ ವಿಚಾರ ಅಲ್ವಾ? 110 ಕೊಟಿ ಜನರಲ್ಲಿ ಒಂದು ನೂರು ಹೋದರೆ ತಲೆ ಕೆಡಿಸಿ ಕೋಬೇಕಾ?


ಈಗ ನಮ್ಮ ರಾಜ್ಯನೆ ತಗೋಳಿ, ನಿಜಕ್ಕೂ ನಾವು ಸಿಕ್ಕಾಪಟ್ಟೆ ಅಭಿವೃದ್ದಿ ಆಗಿದ್ದೀವಿ ಅಂತೆ, ಎಲ್ಲ ಕಡೆ ಮೂಲಭೂತ ಸೌಕರ್ಯ ಸಿಕ್ಕಿ, ನಾವೆಲ್ಲಾ ಕುಶಿ ಲೀ ಇದ್ದೀವಿ ಅಂತೆ! ಹಿಂದೆ ಬಿ ಜೆ ಪಿ ನೇತೃತ್ವದ ಎನ್ ಡಿ ಎ ಅಧಿಕಾರದಲ್ಲಿ ಇದ್ದಾಗ ಭಾರತ ಶೈನಿಂಗ್ ಅಂತ ಸಾರಿದ್ರೂ. ಅದು ಸ್ವಲ್ಪ ಹಳೆ ವಿಚಾರ ಆಯಿತು ಬಿಡಿ. ಆದ್ರೆ ನಾವು ಮುಂದುವರಿದಿಲ್ಲ ಅಂತ ಯಾಕೆ ಬಡಕೋ ಬೇಕು? ರೆಡ್ಡಿ ಗಳು ದೊಡ್ಡ ಹಗ್ಗ ಕಟ್ಟಿ ಕರ್ನಾಟಕ ನ ಮುಂದೆ ಯೆಳೀತ ಇದ್ದಾರೆ ಅನ್ಸಲ್ವಾ? ಪಾಪ ಅವರಿಗೆ ಜಯವಾಗಲಿ.


ಎಲ್ಲರೂ ಕೇಳಿರುತ್ತಾರೆ ಯುವಕರೇ ದೇಶದ ಶಕ್ತಿ, ಅವರೇ ದೇಶ ರೂಪಿಸುವವರು ಅಂತ. ಇಂತಹ ಯುವಕರ, ಯುವತಿಯರ ಬಗ್ಗೆ ನಮ್ಮ ಸರ್ಕಾರ ಗಳಿಗೆ ಸಿಕ್ಕಾಪಟ್ಟೆ ಗೌರವ. ಅವರ ಕುಶಿಯೇ ತಮ್ಮ ಕುಶಿ ಎಂದು ಭಾವಿಸಿವೆ. ಯಾವ ರೇಡಿಯೋ, ಟೀವೀ ಹಾಕಿದ್ರೂ ನಿರೋಧ್ ಬಳಸಿ, ನಿರೋಧ್ ಬಳಸಿ ಅಂತ. ಮದುವೆಗೆ ಮುನ್ನ ಅವೆಲ್ಲ ಬೇಡ ಅನ್ನುವ ನೈತಿಕತೆ ಯಾರಿಗೆ ಬೇಕಿದೆ? ಇನ್ನೂ ಸುಪ್ರಸಿದ್ದ ಕಾನ್‌ವೆಂಟ್ ಗಳಲ್ಲಿ ಹುಡುಗಿಯರು ಚಿಕ್ಕ ಚಿಕ್ಕ ಸ್ಕರ್ಟ್ ನ ಯೂನಿಫಾರ್ಮ್ ಅಂತ ಹಾಕ್ಕೊಂದು ಹೋಗ್ತಾರೆ. ಅವರು ಹಾಗೆ ಹೋಗೋದರಿಂದ ತಾನೆ ನನ್ನಂಥ ಬಿಸಿ ರಕ್ತದ ಯುವಕರಿಗೆ ಜೀವನೋತ್ಸಾಹ ಬರುವುದು. ಇದರಿಂದ ಯಾವ ಸಂಸ್ಕೃತಿ ನಾಶ ಆಗ್ತಾ ಇದೆ? ಯುವಕರು ಕುಶಿ ಇಂದ ಇರುವುದನ್ನು ಸಹಿಸದ ಕೆಲವು ಮೂಲಭೂತ ವಾದಿಗಳು ಭಾರತೀಯ ಸಂಸ್ಕೃತಿಯ ಅವನತಿ, ನೈತಿಕ ಅದೊಗತಿ ಅಂತೆಲ್ಲ ಅರ್ಥ ವಾಗದ ಪದಗಳ ಬಳಸಿ ಜನರ ನೆಮ್ಮದಿ ಕೆಡಿಸುವ ಪಿತೂರಿ ಇದು ಎಂಬ ಭಾವನೆ ನನಗೆ.


ಇನ್ನು ಮಧ್ಯ ರಾತ್ರೆ ಟಿ ವಿ ಗಳಲ್ಲಿ ಮಿಡ್ ನೈಟ್ ಮಸಾಲಾ ಕಾರ್ಯಕ್ರಮ ಗಳು ಬರುತ್ತವೆ. ಅವುಗಳು ಬಾಲಕರನ್ನು ಯುವಕರನ್ನಗಿಸಿ, ಯುವಕರನ್ನು ಮಂಚ ವಿದ್ಯಾ ಪ್ರವೀಣ ರನ್ನಾಗಿಸಿ.. ತನ್ಮೂಲಕ ದೇಶದಲ್ಲಿ ಜನ ಸಂಖ್ಯೆಯ ಬೀಜ ಬಿತ್ತ ಬೇಡವೇ? ಹುಡುಗಿಯರ ಸೊಂಟ ಹಿಡಿದು ಸುತ್ತ ಬೇಕಾದ ವಯಸ್ಸಲ್ಲಿ ಕ್ರಾಂತಿ ಯಾರಿಗೆ ಬೇಕಾಗಿದೆ ಸ್ವಾಮೀ? ಅಂದು ವಿವೇಕಾನಂದರು ಹೇಳಿದ್ದರು ಯುವಕರೇ ಏಳಿ, ಎದ್ದೇಳಿ ಅಂತ. ಈಗ ನೀವೇ ಹೇಳಿ ಬೇಗ ಎದ್ದು ಮಾಡುವುದೇನಿದೆ?


ನಮ್ಮ ದೇಶ, ಜನ ಗಳ ಬಗ್ಗೆ ಇಷ್ಟೆಲ್ಲಾ ಮಹಾದೋಪಕಾರ ಮಾಡಿರುವ ನಮ್ಮ ರಾಜಕಾರಣಿಗಳನ್ನ ಬೈಯುವ್ಯುದೇ? ಅಕಟಕಟಾ.. ಇನ್ನೂ ಅವರು ಚುನಾವಣೆ ಸಮಯದಲ್ಲಿ ದುಡ್ಡು ಕೊಟ್ಟು, ಹೆಂಡ, ಸೀರೆ, ನಂಗ ನಾಚ್ ಎಲ್ಲಾ ಮಾಡಿ ವೋಟ್ ಹಾಕಿಸಿಕೊಳ್ಳೋದ್ರಲ್ಲಿ ತಪ್ಪೇನಿದೆ? ನಾವು ಅಷ್ಟೇ ದುಡ್ಡು ತಗೊಂಡು ವೋಟ್ ಮಾಡೋದ್ರಲ್ಲಿ ಏನು ಅಪರಾದ ಅಡಗಿದೆ? ನಮ್ ವೋಟ್ ಏನು ಪುಕ್ಸಟ್ಟೆ ನ? ಅದಕ್ಕೆ ಎಲ್ಲರೂ ಅಬ್ಯರ್ಥಿಯ ಶಕ್ತ್ಯಾನುಸಾರ ದುಡ್ಡು ಪೀಕೊದು.


ಹೋಗಲಿ ಬಿಡಿ, ನಾವೆಲ್ಲಾ ಚೆನ್ನಾಗಿದ್ದೇವೆ. ನಾಳೆಯ ಚಿಂತೆ ನಮಗಿಲ್ಲ. ಅದರ ಅಗತ್ಯವೂ ಇಲ್ಲ. ನಿನ್ನೆಯ ಹಂಗಿಲ್ಲದೆ, ನಾಳೆಯ ಕನಸಿಲ್ಲದೆ, ಇಂದಿನ ಜೀವನ ಮಾತ್ರ ನೋಡುವ ತತ್ವ ಜ್ಞಾನಿಗಳ ನಾಡು ನಮ್ಮದು. ಪಕ್ಕದ ಮನೆಯವರು ಹೊಸ ಫ್ರಿಜ್ ತಗೊಂಡರೆ ಮಾತ್ರ ನಾವು ಯೋಚಿಸ ಬೇಕಾಗಿದೆ ಹೊರತು, ಅವರ ಮನೆ ಮಕ್ಕಳು ಮೋರಿ ಲೀ ಬಿದ್ದು ಸತ್ತರೆ ಯೋಚಿಸ ಬೇಕಾ? ಸುತಾರಾಂ ಇಲ್ಲ. ನಾವೆಲ್ಲಾ ವಿಧ್ಯಾವಂತರೆಂದು ಪೋಸ್ ಕೊಡುತ್ತಾ ಸಂತೋಷವಾಗಿ ಇರೋಣ. ಬೇಕಿದ್ದರೆ ಸತ್ತ ಸೈನಿಕರಿಗೆ ಒಂದು ಸಲಾಂ ಹೊಡೆದು, ನಮ್ಮ ಮಕ್ಕಳನ್ನು ಅಮೆರಿಕೆ ಯಲ್ಲಿ ಪ್ರತಿಷ್ಠಾಪನೆ ಮಾಡುವುದು ಹೇಗೆಂದು ಚಿಂತಿಸುವ.


ನಾವುಗಳು ಇಷ್ಟೆಲ್ಲಾ ಸುಖ, ಶಾಂತಿ ಮತ್ತು ನೆಮ್ಮದಿಲಿ ಇರಲು ಕಾರಣ ರಾಗಿರುವ ಎಲ್ಲ ಮತ ಬಾಂದವರಿಗೆ , ಹಾಗು ನಾಯಕರುಗಳಿಗೆ ಜೈ ಹೋ.

Tuesday, June 9, 2009

ನಾನ್ಸೆನ್ಸ್ ಜನಗಳ ಮುಗ್ಧ ಪ್ರಶ್ನೆಗಳಿಗೆ ನಮ್ಮ (ಅ)ಪ್ರಾಮಾಣಿಕ ಉತ್ತರಗಳು



ಬ್ಯುಸಿ ಬೆಂಗಳೂರಿನಲ್ಲಿ ದಿನ ಶುರು ಆಗೋದೇ ನಾನ್ಸೆನ್ಸ್ ಪ್ರಶ್ನೆ ಇಂದ - ಪೇಪರ್ ಬಾಗಿಲಿನ ಹತ್ತಿರ ಕಾಣದೆ ಇದ್ರೆ ಅಯ್ಯೋ ಪೇಪರ್ ಬಂದೆ ಇಲ್ಲ ಅಂತ ನಮ್ಮಷ್ಟಕ್ಕೆ ನಾವೇ ಪೆದ್ದು ಪ್ರಶ್ನೆ ಹಾಕಿ ಕೊಂಡಿರುತ್ತಿವೆ !!! ಇನ್ನು ರೇಡಿಯೋ ಕಿವಿ ಹಿಂಡೋಣ ಅಂತ ಹೋದರೆ ರೇಡಿಯೋ ಜೋಕಿ ಗಳ ಮುಗ್ಧ ಪ್ರಶ್ನೆಗಳ ಸುರಿಮಳೆ .. (ಆಹಾ ಆ ಅವರ ಮ್ಯಾನೇಜರ್ ಗೆ ,ಕೆಳುಗರಿ ಗೆ , ಎಸ್ ಎಂ ಎಸ್ ಕಳುಹಿಸುವ ಅಭಿಮಾನಿ ದೇವರುಗಳಿಗೆ ಇಷ್ಟ ಆಗ ಬೇಕು ಆ ಕಿರುಚಾಟ.) ಮೊನ್ನೆ ರೇಡಿಯೋ ದಲ್ಲಿ ನಡೆತಿತ್ತು ರೀತಿ ಪ್ರಶ್ನಾವಳಿ(ಯಾವುದೋ ಒಂದು ಅಮ್ಯುಸ್ಮೆಂಟ್ ಪಾರ್ಕ್ ನಲ್ಲಿ )


"ಸರ್ ನಮಸ್ಕಾರ ನಾನು ________ಇಂದ ಬಂದಿದೀನಿ"

ನಮಸ್ಕಾರ ಹೇಳಿ ಸರ್... (ವಾಯ್ಸ್ ನಲ್ಲಿ ನೆರ್ವೋಸನೆಸ್ಸ್ ಫಸ್ಟ್ ಟೈಮ್ ಇನ್ ರೇಡಿಯೋ ಪಾಪ )
"ಸರ್ ನೀವು ವೀಕೆಂಡ್ ನ ಕಳಿಯೋಕೆ ಇಲ್ಲಿಗೆ ಬಂದ್ರ ?"
ಹೌದು ವೀಕೆಂಡ್ ಗೆ ಮಜ್ಜ ಮಾಡೋಣ ಅಂತ ಬಂದ್ವಿ (ಅಮ್ಯುಸ್ಮೆಂಟ್ ಪಾರ್ಕ್ ಜನ ಏನು ಎಮ್ಮೆ ಕಾಯೋಕ ಬರ್ತಾರೆ ? )


ಇನ್ನು ಮಳೆ ಗಾಳದಲ್ಲಿ ಬೆಂಗಳೂರ್ನಲ್ಲಿ ಓಡಾಡೋದೇ ಕಷ್ಟ , ರಸ್ತೆ ಮೇಲೆ ನೆ ಇರ್ತಿವೋ , ಯಾವುದಾದರು ಮ್ಯಾನ್ ಹೋಲ್ನಲ್ಲಿ ಬಿದ್ದು ಮೇಲೆ ಹೋಗ್ತ್ಹಿವೋ ಗೊತ್ತಿರೋಲ್ಲ .. ಹಂಗೆನದ್ರು ಬಿದ್ದು, ಅದೃಷ್ಟವಶಾತ್ ಬದುಕಿ ಬಂದ್ರೆ.. ಟಿವಿ 9ನವರು ಬಂದು .. ಮೇಡಂ ನೀವು ಗುಂಡಿಲಿ ಬಿದ್ದು ಬಂದ್ರಲ್ಲ್ಲ ನಿಮಗೆ ಏನು ಅನ್ನಿಸುತ್ತೆ ?
ಜೀವ ಉಳಿಸ್ಕೊಂದು ಬಂದಿರೋದೆ ದೊಡ್ಡ ವಿಚಾರ !!! ಇದರ ಮದ್ಯೆ , ಇವರಿಗೆ ಅನಿಸಿಗೆ ಬೇರೆ ಹೇಳ್ಬೇಕು(ಗಬ್ಬು ವಾಸನೆ ಬೇರೆ ).


ಹೀಗೆ ಬೇರೆ ಬೇರೆ ಕಡೆ ಈ ನಾನ್ಸೆನ್ಸ್ ಜನಗಳ ಮುಗ್ಧ ಪ್ರಶ್ನೆಗಳ ಹಾವಳಿ ಉದಾಹರಣೆಗಳು ಹೀಗಿದೆ......
ಎಲ್ಲಿಯಾದರೂ ಹೋಗ್ತಾ ಇರ ಬೇಕಾದರೆ ಹಲ್ಲು ಕಿರಿದು ನಿಲ್ತಾರೆ " ಎಲ್ಲೋ ಹೋಗ್ತಾ ಇದ್ದಂಗಿದೆ ? " (ನೀಟ್ ಆಗಿ ರೆಡಿಆಗಿದ್ದು ನೋಡಿ ಕೂಡ ...+ ಕೈಲಿ ಚೀಲ. ನಿನಗೆ ಯಾಕಪ್ಪಾ ನಾನು ಎಲ್ಲಿಗೆ ಬೇಕಾದ್ರು ಹೋಗ್ತೀನಿ) "ಇಲ್ಲೇ ಸಾಮಾನು ತರೋಕ್ಕೆ " (ಇವೊತ್ತು ನನಗೆ ಸಾಮಾನು ಸಿಕ್ಕಂಗೆ , ಒಳ್ಳೆ ಬೆಕ್ಕು ಅಡ್ಡ ಬಂದಂಗೆ ಬರ್ತಾರೆ )


ರಜೆ ಗೆ ಮನೇಗೆ ಊರಿಗೆ ಹೋಗೋಕ್ಕೆ ಕೈ ನಲ್ಲಿ ಬ್ಯಾಗ್ ,ಸೂಟ್ಕೇಸ್ ಹಿಡಿದು ಬಸ್ ಸ್ಟ್ಯಾಂಡ್ ನಲ್ಲಿ ನಿಂತಿದ್ದೆ - ಅಲ್ಲೂ ಬಿಡದ ಬಾಯಿ ಬದಕಿ ಶಾಂತಮ್ಮ " ಏನು ಊರಿಗೆ ಹೊಗ್ತಿದ್ದಂಗಿದೆ ಯಾವಾಗ ಬರೋದು ? "
( ಕ್ಕೊ ಕ್ಕೊ ಆಡೋಕ್ಕೆ ಬಸ್ ಸ್ಟ್ಯಾಂಡ್ ಕರೆಕ್ಟ್ ಜಾಗ ಅದಕ್ಕೆ ನಿಂತಿರುವೆ , ನಾನು ಎಲ್ಲಿಗಾದ್ರೂ ಹೋಗಿ ಸಾಯಿತಿನಿ ನಿಮಗ್ಯಾಕ್ರಿ ಬೇಕು? ) ನಾನು ಹಲ್ಲು ಕಿರಿದು - " ಹೂನ್ ರೀ ಅಮ್ಮ ತುಂಬಾ ದಿನದಿಂದ ಮನೇಗೆ ಬಾ ಅಂತಿದ್ರು "



ಸದ್ಯ ಅಪರೂಪಕ್ಕೆ ಒಳ್ಳೆ ಫಿಲಂ ಬಂದಿದೆ ನೋಡಿ ಬರೋಣ ಅಂತ ಫಿಲಂ ಥಿಯೇಟರ್ ಗೆ ಹೋದೆ ಅಲ್ಲಿ ನಮ್ಮ - ಓಣಿ ಬಡ್ಡಿ ಸಾವಿತ್ರಮ್ಮ ಪ್ರತ್ಯಕ್ಷ ವಾಗಿದರು ಅವರ ಕಣ್ಣಿಗೆ ಬಿದ್ದರೆ ಸಾಕು ಫುಲ್ ಗರಗಸ ... ಹಾಗು ಹೀಗೂ ಅವರಿಂದ ತಪ್ಪಿಸಿ ಕೊಂದು ಟಿಕೆಟ್ ತೆಗೆದು ಸೀಟ್ ನಲ್ಲಿ ಕೂತಿದ್ದೆ ತಡ ಹಿಂದಿನಿಂದ ಬಂತು ಹೆಣ್ಣು ದ್ವ್ಹನಿ "ಓಹ್ ಹೀ ಹೀ - ಏನ್ರಿ ಫಿಲಂ ನೋಡೋಕ್ಕ ? --- ( ಇಲ್ಲಮ್ಮ ತಾಯಿ ಇಲ್ಲೇ ನಾನು ವಾಸ ಮಾಡೊದು ) - " ಹೂನ್ರಿ ಹೊಸ ಫಿಲಂ ಚೆನ್ನಾಗಿದೆ ಅಂತೆ "



ವಾರದ ಮಧ್ಯದಲ್ಲಿ ಯಾರ ಕಾಟನು ಇಲ್ಲದೆ ದೇವರ ದರ್ಶನ ಮಾಡೋಣ ಅಂತ ದೇವಸ್ಥಾನಕ್ಕೆ ಬಂದ್ರೆ - " ಮುಂದಿನ ಬೀದಿ ಸುಬ್ಬಣ್ಣ ಏನ್ರಿ ನೀವಿಲ್ಲಿ ?" (ಯಾಕಪ್ಪ ದೇವರು ನಿನ್ನ ಸ್ವತ್ತೋ ?) - " ದರ್ಶನ ಮಾಡೋಣ ಅಂತ " ಕಣ್ಣು ಮುಚ್ಚಿ ದೇವರಿಗೆ ಏನಪ್ಪಾ ಇದು ರಾಮೇಶ್ವರಕ್ಕೆ ಹೋದ್ರು ಶನೀಶ್ವರ ಬಿಡಲಿಲ್ಲ ಅಂತ ಗೋಗರೆದೆ.



ನನ್ನ ಕಸಿನ್ ನಿಶ್ಚಿತಾರ್ಥ ಪಾರ್ಟಿ ಗೆ ಅಂತ ಹೋಟೆಲ್ ಗೆ ಹೋಗಿದ್ವಿ ಅಲ್ಲಿ ನಮ್ಮ ಪಕ್ಕದ ಮನೆ ಬ್ಯಾಂಕ ಅಂಕಲ್ ಮನೆಯವರನ್ನು ತವರಿಗೆ ಕಳಿಸಿದ ಗಂಡ ಹಾಯಾಗಿ ಹೋಟೆಲ್ ನಲ್ಲಿ ಊಟಕ್ಕೆ ಬಂದ್ರೆ ಅಲ್ಲಿ ಆಟಕಾಯಿಸಿಕೊಂಡ ಅವರ ಹಳೆ ಪರಿಚಯದ ಪ್ರಾಣಿ - " ಓಹ್ ಹೋ ಹೋ ಏನ್ರಿ ಊಟಕ್ಕಾ ? ( ಇಲ್ಲಾ ಇಲ್ಲಿ ಪಾರ್ಟ್ ಟೈಮ್ ಕೆಲ್ಸ ಮಾಡ್ತಿನಿ ಅಂತ ಹೇಳುವ ಹಾಗಿತ್ತು ಅಂಕಲ್ ಮುಖ ಪಾಪ ) - " ಹೆಂಡತಿ ಊರಲ್ಲಿ ಇಲ್ಲಾ ರೀ "



ಸೂಪರ್ ಮಾರ್ಕೆಟ್ ನಲ್ಲ ದುಬಾರಿ ಅಂತ ಕೃ ರಾ. ಮಾರ್ಕೆಟ್ ಗೆ ಕಷ್ಟ ಪಟ್ಟು ಬಸ್ ನಲ್ಲಿ ಬಂದು ತರಕಾರಿ ಕೊಳ್ಳುವಾಗ - ಅಲ್ಲಿ ಸಿಕ್ಕ ನನ್ನ ಗೆಳತಿ " ಏನೇ ರಾಣಿ ತರಕಾರಿ ತರೋಕ್ಕೆ ಬಂದ್ಯಾ ?" (ಇಲ್ಲ ಇಲ್ಲಿ ಅದೇನೋ ಫ್ರೀ ಆಗಿ ಚಿನ್ನ ಹಂಚ್ತಿದ್ದರಂತೆ ಅದಕ್ಕೆ) - "ಹೂನ್" ಇದು ಇಲ್ಲಿ ಗೆ ಮುಗಿಯೊಲ್ಲ ಅದೇನೋ ಅಂತಾರಲ್ಲ ಹಾಗೆ ....( ಏನು ಅಂತಾರೋ ನನಗೂ ಗೊತ್ತಿಲ್ಲ ಗೊತ್ತಿದ್ರೆ ಹೇಳಿ ).



ನಮ್ಮ ದೂರದ ನೆಂಟರ ಮದುವೆ ಗೆ ಹೋಗಿದ್ದೆ ಅಲ್ಲಿಗೆ ಆಗಮಿಸಿದ್ದ ನಮ್ಮ ದೂರದ ಚಿಕ್ಕಮ್ಮ -" ಓಹ್ ಏನೂ ಮದುವೆಗೆ ಬಂದಿದ್ದ ?" (ಒಳಗಿಂದ ಬಂದ ಸಿಟ್ಟನ್ನು ಕಂಟ್ರೋಲ್ ಮಾಡಿಕೊಳ್ಳುತ್ತಾ -ಇಲ್ಲಾ ಕಳ್ಳ ಪೋಲಿಸ್ ಆಡ್ತ ಇದ್ವಿ , ಬಚ್ಚಿಟ್ಟು ಕೊಳ್ಳೋಕೆ ಬಂದೆ !!) " ಹೂನ್ರಿ ಚಿಕ್ಕಮ್ಮ .. ನೀವು ಹೇಗಿದ್ದೀರಾ ? ಆರೋಗ್ಯನಾ ? " ಅನ್ತ ಟಾಪಿಕ್ ಚೇಂಜ್ ಮಾಡಿದೆ.



ಇನ್ನು ಆಫೀಸ್ ನಲ್ಲಿ ಕೇಳುವ ಜಾಣ ಮುಗ್ಧ ಪ್ರಶ್ನೆಗಳಿಗೆ ಏನು ಕಮ್ಮಿ ಇರೋಲ್ಲ - ಮಾಡೋಕ್ಕೆ ಏನು ಕೆಲಸ ಇಲ್ಲದವರಂತು ಕೇಳುವ ಪ್ರಶ್ನಾವಳಿಗೆ ನೆ ಸಂಬಳ ತೆಗೆದು ಕೊಳ್ಳುತ್ತಾರೆ ಅನ್ನಿಸುತ್ತೆ -- ಇದು ಮನೆಯಿಂದ ಹೊರ ಬೀಳಬೇಕದ್ರೆ ನೆ ಶಕುನ ಸ್ಟಾರ್ಟ್ ಆಗೋದು ಹೀಗೆ - ಆಫೀಸ್ ಗೆ ಹೋಗ್ತಾ ಇರಬೇಕಾದ್ರೆ ಬೀಗ ಬಾಗಿಲಿಗೆ ಜಡಿದು ಇನ್ನೇನು ಮೆಲ್ಲಗೆ ಶಬ್ದ ಮಾಡದೆ ಗೇಟ್ ಹಾಕೋಸ್ಟರಲ್ಲಿ ಓನರ್ ಆಂಟಿ ಕಿಟಕಿ ಇಂದ -" ಓಹ್ ನೀವಾ? ಆಫೀಸಿಗೆ ಹೊರಟ್ರ "? ( ಇಲ್ಲಾ ಮ್ಯಾನೇಜರ್ ದು ಮ್ಯಾಜಿಕ್ ಶೋ ಅದಕ್ಕೆ ಹೊರಟೆ !! ಈ ದಿನ ಗೋವಿಂದಾ ...) " ಹೂನ್ ರೀ ಹೊಟ್ಟೆ ಪಾಡು "( ಗೊತ್ತಿದ್ದೂ ಗೊತ್ತಿದ್ದೂ ಯಾಕೆ ಹೀಗೆ ಪ್ರಾಣ ತಿಂತಾರೆ ? ದೇವರೇ ಮ್ಯಾನೇಜರ್ ಇವೊತ್ತು ಲೇಟ್ ಆಗಿ ಬರಲಿ ಆಫೀಸ್ ಗೆ ..ಅವರ ಮೂಡ್ ಸರಿ ಇರಲಿ )


ಇತ್ತೀಚಿನ ದಿನಗಳಲ್ಲಿ ಸೀರೆ ಉಡೋದೇ ಅಪರೂಪ ವಾಗಿದೆ , ದಿನಾ ಜೀನ್ಸ್ ಷರ್ಟ್ ನೋಡಿ ನೋಡಿ ಅಭ್ಯಾಸವಾಗಿರುವ ನಮ್ಮ ಜನಗಳಿಗೆ ನಮ್ಮಂಥವರು ನಮ್ಮ ಸಂಸ್ಕೃತಿಯಂತೆ ವಾರಕೊಮ್ಮೆ ಯಾದರು (?) ಸೀರೆ ಉಟ್ಟಿ ಕೊಂಡು ಹೋದ್ರೆ
- " ಏನ್ರಿ ವಿಷೇಶ ಸೀರೆ ಇವೊತ್ತು ಮದುವೆ ಏನಾದ್ರು ಗೊತ್ತಾಯಿತಾ ? ಹುಟ್ಟಿದ ಹಬ್ಬಾನ ? ಯರದದ್ರು ಮಾಡುವೆಗೆ ಹೊರಟಿದ್ದಿರ?
( ಅಯ್ಯೋ ನನ್ನ ಕರ್ಮ ಸರಿ ಇಲ್ಲದೆ ಸೀರೆ ಉಟ್ಟೆ ತಪ್ಪು ಆಯಿತು ದೇವರೇ ನನ್ನ ಕಾಪಾಡು ) - " ಎನಿಲ್ಲರಿ ಶುಕ್ರವಾರ ಅಲ್ಲವಾ "




ಸಿಗೋ ಒಂದು ಭಾನುವಾರ , ಎಲ್ಲ ಕೆಲಸ ಮುಗಿಸಿ , ಮಧ್ಯಾನ್ನ ಒಳ್ಳೆ ಊಟ ಆಗಿ ನಿದ್ದೆ ಹತ್ತುವ ಟೈಮ್ ನಲಿ ಫೋನ್ ಕೂಗಿ ಕೊಳ್ಳುತ್ತೆ - " ಮಲಗಿದ್ರಿ ಅನಿಸುತ್ತೆ ಡಿಸ್ಟರ್ಬ್ ಆಯ್ತಾ? " (ನಮ್ಮ ಧ್ವನಿನೇ ಹೇಳ್ತಿರುತ್ತೆ ಫುಲ್ ನಿದ್ದೆ ನಿದ್ದೆ ಅಂತ, ನಿಮಗೆ ಫೋನ್ ಮಾಡೋಕ್ಕೆ ಇದೇ ಟೈಮ್ ಬೇಕಿತ್ತಾ? ) " ಇಲ್ಲಾ ರೀ ಜಸ್ಟ್ ಬೆನ್ನಿಗೆ ರೆಸ್ಟ್ ಕೊಟ್ಟಿದ್ದೆ ....ಎನು ವಿಷಯ ಆಆಆಆಆಆಆಆಆಅ (ಗೊತ್ತಾಗುವ ರೀತಿನಲ್ಲಿ ದೊಡ್ಡ ಆಕಳಿಕೆ )?"



ಇನ್ನು ಶನಿವಾರ ಆಫೀಸ್ ಗೆ ರಜೆ , ಬೆಳಿಗ್ಗೆ ಬೆಳಿಗ್ಗೆ ಅಕ್ಕ ಪಕ್ಕದವರು ಯಾರು ಬಟ್ಟೆ ಒಣಗೋಕ್ಕೆ ಹಾಕಿರೋಲ್ಲ , ಬೇಗ ಬೇಗ ಬಟ್ಟೆ ಒಗೆಯೋಕ್ಕೆ ಶುರು ಮಾಡಿದ್ರೆ - ":ಏನ್ರಿ ಬಟ್ಟೆ ಒಗೀತಿದ್ದಿರಾ ?"
ಇಲ್ಲಾ ಕಲ್ಲು ಸುಮ್ಮನೆ ಮಾತಾಡ್ತಿತ್ತು ಅದಕ್ಕೆ ಒದೀತಿದ್ದಿನಿ - " ಹ್ಞೂ "
ಹೀಗೆ ದಿನ ಶುರು ಆಗೋದ್ರಿಂದ ಮುಗಿಯೋತನ ಒಂದಲ್ಲ ಒಂದು ರೀತಿ ನಾನಾ ತರಹದ ಮುಗ್ಧ ಪ್ರಶ್ನೆಗಳು ನನಗೆ ಎದಿರಾಗುತ್ತವೆ. ನಿಮಗೂ ಸಹ ಇಂತಹ ಇಕ್ಕಟ್ಟಿನಲ್ಲಿ ಸಿಕ್ಕ ಪ್ರಶ್ನೆಗಳು ಮತ್ತೆ ಅದರ ()ಪ್ರಾಮಾಣಿಕ ಉತ್ತರಗಳು ಇದ್ದಲ್ಲಿ ನಮ್ಮೊಡನೆ ಹಂಚಿಕೊಳ್ಳಿ.


ವಿ. ಸೂ: ಅಪ್ಪಿ ತಪ್ಪಿ ನಿಮ್ಮ ಪ್ರಾಮಾಣಿಕ ಉತ್ತರಗಳು ನಿಮ್ಮ ಬಾಯಿಂದ ಹೊರಗೆ ಎಸ್ಕಪೆ ಆಗಿ ಬಂದ್ರೆ ಅದಕ್ಕೆ ನಾನು ಜವಾಬ್ದಾರಳಲ್ಲ