Saturday, May 9, 2015

ಇಗೋ ಬಂತು, ಬೆಂಗಳೂರಿನ ಟ್ರಾಫಿಕ್ ಗೆ ಪರಿಹಾರ!


ನೀವು ಬೆಂಗಳುರಿನಂತ ಊರಿನಲ್ಲಿ ಜೀವಿಸುತ್ತಿದ್ದರೆ (ಜೀವ ಇಲ್ಲ ಅಂದ್ರೆ ಇದನ್ನು ಓದುವ ಸಾಧ್ಯತೆಯೇ ಇಲ್ಲ ಬಿಡಿ ) ನಿಮಗೆ ಟ್ರಾಫಿಕ್ , ಅರ್ಥಾತ್ ವಾಹನ ದಟ್ಟಣೆಯ ಸಮಸ್ಯೆ ಎದುರಿಸಿಯೇ ಇರುತ್ತೀರಿ. ಎಷ್ಟು ಬೇಗ ಹೊರಟರೂ ಸರಿಯಾದ ಸಮಯಕ್ಕೆ ಕಛೇರಿ ತಲುಪಲಾಗದೆ ಮೇಲಧಿಕಾರಿ ಇಂದ (ಫೀಮೇಲ್ ಅಧಿಕಾರಿ ಕೂಡ ಆಗಿರಬಹುದು) ಆಮೇಲೆ ವಾಪಾಸು ಮನೆಗೆ ಸರಿಯಾಗಿ ತಲುಪಲಾಗದೆ ಮನೆಯವರಿಂದ ಬೈಯಿಸಿ ಕೊಂಡಿರುತ್ತಿರಿ. ಇಷ್ಟೇ ಅಲ್ಲ, ಮದುವೆ ಮನೆಗೆ ಮುಹೂರ್ತದ ಸಮಯಕ್ಕೆ ಹೊರಟರೆ, ಊಟದ ಸಮಯಕ್ಕೆ ತಲುಪುವುದೂ ಅನುಮಾನ. ರಾತ್ರೆ ಊರಿಗೆ ಹೋಗಲು ಬಸ್ಸು ಹಿಡಿಯಲು ಮೆಜೆಸ್ಟಿಕ್ ಗೆ ಹೋಗಬೇಕು ಅಂದರೆ, ನೀವು ಸಂಜೆಯೇ ಹೊರಡಬೇಕು. ಮದ್ಯೆ ಮಳೆ ಬಂದರೆ, ನಿಮ್ಮ ಮನೆ ದೇವರೂ ಕೂಡ ನಿಮ್ಮನ್ನು ಬಸ್ಸು ನಿಲ್ದಾಣಕ್ಕೆ ತಲುಪಿಸಲಾರ.

ಇರಲಿ ಪಟ್ಟಿ ಮಾಡುತ್ತಾ ಹೋದರೆ, ಸಿಲ್ಕ್ ಬೋರ್ಡ್ ಜಾಮಿಗಿಂತ ದೊಡ್ಡದಾದೀತು. ಆದರೆ ಈ ಸಮಸ್ಯೆಯಿಂದ ಮುಕ್ತಿಯೇ ಇಲ್ಲವೇ? ಎಲ್ಲೋ ಓದು ಕಲಿತ, ದ್ವಿಚಕ್ರ ವಾಹನ ಸವಾರರು ಮಾತ್ರ, ಆಂಬುಲೆನ್ಸ್ ಕಂಡ ಕ್ಷಣ ಅದರ ಹಿಂದೆ ಓಡಿ, ತಮ್ಮ ಗಮ್ಯವನ್ನು ಬೇಗನೆ ಸೇರುತ್ತಾರೆ. ಆದರೆ ಶ್ರೀಸಾಮಾನ್ಯನಿಗೆ ಅಂತಹ ಅವಕಾಶ ಎಲ್ಲಿದೆ? ಹಾಗಾಗಿ ನಮ್ಮ ಟೈಮ್ ಪಾಸ್ ತಂಡದ ಏಕ ಸದಸ್ಯ ಪೀಠವು ಹಲವಾರು ಚಿಂತನ – ಮಂಥನ ಸಭೆ ನಡೆಸಿ ಘನತೆವೆತ್ತ ಸರಕಾರಕ್ಕೆ, ಟ್ರಾಫಿಕ್ ಅವ್ಯವಸ್ತೆ ಸುಧಾರಿಸಲು ಕೆಲವೊಂದು ಮಾರ್ಗೋಪಾಯಗಳನ್ನು ನೀಡುತ್ತದೆ.

ಮೊಟ್ಟ ಮೊದಲನೇದಾಗಿ, ನಗರದಲ್ಲಿ ಸಮಸ್ಯೆ ಉಂಟಾಗೋದು ಸರಕಾರೀ ಬಿಎಂಟಿಸಿ ಬಸ್ಸುಗಳಿಂದ. ಅವು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಅಂದ್ರೆ, ಸಿಗ್ನಲ್ ಗಳಲ್ಲಿ, ಮೇಲು ಸೇತುವೆಗಳಲ್ಲಿ, ಚಿಕ್ಕ ಚಿಕ್ಕ ರಸ್ತೆಗಳಲ್ಲಿ ಹಾಗು... ಸಾಮಾನ್ಯವಾಗಿ ರಸ್ತೆ ಮದ್ಯ ಭಾಗದಲ್ಲಿಯೇ ಕೆಟ್ಟು ನಿಲ್ಲುತ್ತವೆ. ಆ ಬಸ್ಸುಗಳಿಗೆ ಸರಿಯಾದ ನಿರ್ವಹಣೆ ಕೊರತೆ ಇರುವುದೇ ಇದಕ್ಕೆ ಕಾರಣ. ಡೀಸೆಲ್ ದರ ಕಡಿಮೆ ಆಗಿದ್ದರೂ, ಪ್ರಯಾಣ ದರ ಇಳಿಕೆ ಆಗದೆ ಇದ್ದರೂ, ನಿರ್ವಹಣೆ ಮಾತ್ರ ಖೋತಾ.

ಈ ಸಮಸ್ಯೆ ಪರಿಹರಿಸಲು,ಈ ಬಸ್ಸುಗಳನ್ನು ನೇರವಾಗಿ ಅವುಗಳ ಚಾಲಕನಿಗೋ, ಕಂಡಕ್ಟರ್ ಗೋ , ಸರಕಾರವೇ ಸಬ್ಸಿಡಿ ದರದಲ್ಲಿ ಮಾರಿ ಬಿಡಬೇಕು ಅಥವಾ ಬಾಡಿಗೆಗೆ ಕೊಡಬೇಕು. ಪ್ರಯಾಣಿಕರಿಂದ ದುಡ್ಡು ತಗೊಂಡು, ಟಿಕೆಟು ಕೊಡದೆ, ಕೊಟ್ಟರೂ.. ಸರಿಯಾದ ಚಿಲ್ಲರೆ ಕೊಡದೆ ಜನರನ್ನು ಯಮಾರಿಸೋದು ಕಡಿಮೆ ಆಗುತ್ತೆ. ಅದೂ ಅಲ್ಲದೆ ಚಾಲಕರು 35 ರುಪಾಯಿಗೆ ಡೀಸೆಲ್ ಮಾರಾಟ ಮಾಡೋದು ಕೂಡ ಕಡಿಮೆ ಆಗುತ್ತೆ. ಹೆಂಗೂ ತಮ್ಮದೇ ವಾಹನ ಅಂತ ವರು ಸರಿಯಾಗಿ ನೋಡಿಕೊಳ್ಳುತ್ತಾರೆ. ಅತಿ ಹೆಚ್ಚು ಜನ ಸಂದಣಿ ಇರುವ ಸಮಯದಲ್ಲಿ ನಮಗೆ ಬಸ್ಸು ಸಿಗುವ ಸಾಧ್ಯತೆಯೂ ಹೆಚ್ಚಾಗುತ್ತದೆ. 
J

ಇನ್ನು ಎರಡನೇದು, ಕೆಲವರು ಒಪ್ಪದೇ ನಂಗೆ ದಿಕ್ಕಾರ ಕೂಗಿದರೂ, ಬಹುಸಂಖ್ಯಾತರು! ಒಪ್ಪಿಯೇ ಒಪ್ಪುತ್ತಾರೆ. ಅದೇನಪ್ಪಾ ಅಂದ್ರೆ, ನಮ್ಮಲ್ಲಿ ಸಾಕಷ್ಟು ಸಲ ಟ್ರಾಫಿಕ್ ಹದಗೆಡಲು, ಅಪಘಾತಗಳು ಉಂಟಾಗಲು ಮಹಿಳಾ ಚಾಲಕಿಯರೇ (ಚಾಲಾಕಿ?) ಕಾರಣ! ಗಾಡಿ ಓಡಿಸ್ತಾ ಇರೋ ಮಹಿಳೆ, ಯಾವಾಗ ಎಡಕ್ಕೆ – ಬಲಕ್ಕೆ ತಿರುಗಿಸುತ್ತಾಳೆ, ಯಾವಾಗ ಬ್ರೇಕು ಹಾಕುವಳು ಅಂತ ಬ್ರಹ್ಮನಿಗೂ ಗೊತ್ತಿರುವುದಿಲ್ಲ. ಆಟೋ ಹಿಂದೆ, ಬ್ಯೂಟಿ ಕೂತಿರೋ ಸ್ಕೂಟಿ ಹಿಂದೆ ... ಎಲ್ಲಿ ಹೋದರೂ ಹೊಗೆ ಖಚಿತ. ಅದೂ ಅಲ್ಲದೆ, ಸುಂದರ ಯುವತಿ ಕಾರು – ಸ್ಕೂಟರ್ ಓಡಿಸ್ತಾ ಇದ್ದರೆ, ಸುತ್ತ ಮುತ್ತ ಇರೋ ಎಲ್ಲಾ ಪಡ್ಡೆ ಗಳಿಗೆ ಹೃದಯ ಬಡಿತ ಹೆಚ್ಚಾಗಿ, ರಸ್ತೆ ಮೇಲೆ ಗಮನ ಕಡಿಮೆ ಆಗಿ, ಸ್ವರ್ಗ ದ ದಾರಿ ಹಿಡಿತಾರೆ. ಸರ್ಕಾರ ಮಹಿಳೆಯರು ವಾಹನ ಚಾಲನೆ ಮಾಡೋ ಹಂಗೆ ಇಲ್ಲ ಅಂತ ಕಾನೂನು ಮಾಡಕ್ಕೆ ಆಗಲ್ಲ. ಹಂಗೆನಾದ್ರು ಮಾಡಿದ್ರೆ, ಬುದ್ದಿ ಜೀವಿಗಳು ಟೌನ್ ಹಾಲ್ ಎದುರು “ಅದು ವಾಹನ ಸಂಸ್ಕೃತಿ ಅಂತ ಹೇಳಿ, ಗೋ ಮಾಂಸ ತಿಂದಂಗೆ... ಕಾರನ್ನೇ ತಿಂದರೂ ಕಷ್ಟ!” ಯಾಕೆ ಅವರಿಗೆ ಕಷ್ಟ ಕೊಡೋದು. ಹಂಗಾಗಿ ವಾರದಲ್ಲಿ ಮೂರುದಿನ ಮಹಿಳೆಯರು – ಮೂರು ದಿನ ಪುರುಷರು ಚಲಾಯಿಸಬೇಕು ಅಂತ ಕಾಯಿದೆ ತರಬೇಕು. ಕನಿಷ್ಠ ವಾರದಲ್ಲಿ ಮೂರು ದಿನ ಗಂಡಂದಿರು ಹಿಂದಿನ ಸೀಟಿನಲ್ಲಿ, ಕುಳಿತು ಆರಾಮಾಗಿ ಕಚೇರಿ ತಲುಪಬಹುದು. ಅದೂ ಅಲ್ಲದೆ, ಸಾಮಾನ್ಯವಾಗಿ ರಸ್ತೆಯಲ್ಲಿ ಕಿರಿ ಕಿರಿ ಆದಾಗ... ಕೊರಳು ಪಟ್ಟಿ ಹಿಡಿದು ಜಗಳ ಕಾಯುವುದನ್ನು ನಾವು ನೋಡಿಯೇ ಇರುತ್ತೀವಿ. ಮುಂದೆ ಇದು, ಹೆಣ್ಣು ಮಕ್ಕಳು ಜುಟ್ಟು ಹಿಡಿದು ಕಿತ್ತಾಡೋದು ನಾವು ನೋಡಬಹುದು. ನಾವು ತಲುಪೋ ಗಮ್ಯ, ತಡ ಆದರೂ, ಮಾರ್ಗ ಮದ್ಯೆ ಮನೋರಂಜನೆಗೆ ಕೊರತೆ ಅಂತೂ ಇರಲ್ಲ. ಹೌದೂ, ಮಿಕ್ಕ 7 ನೆ ದಿನ ಯಾರು ಓಡಿಸಬೇಕು ಅಂತ ನಾನು ಹೇಳಿಯೇ ಇಲ್ಲವಲ್ಲ? ಹೋಗ್ಲಿ ಬಿಡಿ, ಯಾರಾದ್ರು ಓಡಿಸ್ಲಿ. ನಾನಂತೂ ಅವತ್ತು ಮನೇಲಿ ಮುಸುಕೆಳೆದು ಮಲಗುವೆ. J 

ಇನ್ನು ಮೂರನೆದು, ನಮ್ಮ ಐ ಟಿ / ಬೀಟಿ ನಲ್ಲಿ ಕೆಲಸ ಮಾಡೋ ಸಾಕಷ್ಟು ಜನರಿಗೆ ಮನೆಯಿಂದಲೇ ಕೆಲಸ ಮಾಡೋ ಅವಕಾಶ ಇದೆ. ಆದರೆ ಯೋಚಿಸಿ, ಈ ವ್ಯವಸ್ತೆಯಿಂದ ನಾವು ಒಂದು ಸಾಮಾಜಿಕ ಅಸಮತೋಲನಕ್ಕೆ ಕಾರಣ ಆಗುತ್ತಾ ಇದ್ದೀವಿ ಅಂತ. ಬೇರೆ ಯಾರಿಗೂ ಸಿಗದಂತ ಅವಕಾಶ ಅವರಿಗೆ ಮಾತ್ರ ಯಾಕೆ? ನಮ್ಮ ಸರಕಾರೀ ಅಧಿಕಾರಿಗಳಿಗೆ ಯಾಕೆ ಇಲ್ಲ? ಅಕಸ್ಮಾತ್ ನಮ್ಮ ಅಧಿಕಾರಿಗಳಿಗೂ ಸಿಕ್ಕರೆ, ಅವರ ಕಚೇರಿ ಸುತ್ತ ಮುತ್ತ ವಾಹನ ಸಂಚಾರ ಕಡಿಮೆ ಆಗುತ್ತೆ. ಅವರ ಸಹಿ ಬೇಕು ಅಂತ ಅಲೆದಾಡುವ ಸಾಮಾನ್ಯ ಜನ, ನೇರವಾಗಿ ಅಧಿಕಾರಿಯ ಮನೆಗೇ ಹೋಗಿ, ಅಲ್ಲಿಯೇ ಸಹಿ ಹಾಕಿಕೊಂಡು, ಟೇಬಲ್ ಮೇಲೆಯೇ ಕೈ ಬೆಚ್ಚಗೆ ಮಾಡಿ, ಹಿಂತಿರುಗಬಹುದು! ಇದರಿಂದ ಯಾವ ಲೋಕಾಯುಕ್ತ ದವರಿಗೂ ಹೆದರುವ ಅವಶ್ಯಕತೆ ಇರುವುದಿಲ್ಲ.

ನಮ್ಮ ಮುಖ್ಯ ಉದ್ದೇಶ ಏನು ಅಂದ್ರೆ, ಅತಿ ಮುಖ್ಯ ಪ್ರದೇಶಗಳಲ್ಲಿ ಜನ ಸಂದಣಿ ಅಥವಾ ವಾನಗಳ ಸಂಖ್ಯೆ ಕಡಿಮೆ ಮಾಡುವುದು. ಉದಾಹರಣೆಗೆ, ನಮ್ಮ ಯುವಜನತೆ ಸುಖ ಹಾಗು ನೆಮ್ಮದಿಗಾಗಿ ಅಲೆದಾಡುವ ಎಂ ಜಿ ರೋಡು, ರೆಸಿಡೆನ್ಸಿ ರೋಡು, ಕೋರಮಂಗಲ ಇತ್ಯಾದಿ. ವಾರಾಂತ್ಯಗಳಲ್ಲಿ ಅಂತೂ ಈ ಜಾಗಗಳಲ್ಲಿ ಒಂದು ಸಿಗ್ನಲ್ ದಾಟಲು ಗಂಟಾನುಗಟ್ಟಲೆ ಕಾಯಬೇಕು. ಹಾಗಾಗಿ ಕೂಡಲೇ, ಸರ್ಕಾರವು ಅಲ್ಲಿ ಸಿಗುವ ಸೌಲಭ್ಯ ನ ಜನರಿಗೆ ತಮ್ಮ ತಮ್ಮ ವಾರ್ಡುಗಳಲ್ಲಿ, ಬೀದಿಗಳಲ್ಲಿ ಸಿಗುವ ವ್ಯವಸ್ತೆ ಮಾಡಬೇಕು. ಇತ್ತೀಚಿಗೆ ಸಚೀವರೊಬ್ಬರು ಮತ್ತೆ “ಕೊಟ್ಟೆ ಸರಾಯಿ” ಜಾರಿಗೆ ತರುವ ಮಾತು ಆಡುತ್ತಿದ್ದರು. ಇದು ಆಗದೆ ಹೋದರೂ, ಬೆಂಗಳುರಿನಂತ ಊರಿನಲ್ಲಿ ಎಲ್ಲರಿಗೂ ಕಾಲ್ನಡಿಗೆಯ ದೂರದಲ್ಲಿ ಸಿಗುವ ಹಾಗೆ ಪಬ್ಬು – ಡಿಸ್ಕೋ ಶುರು ಮಾಡಲು ಅನುಮತಿ ಕೊಡಬೇಕು. ಇದರಿಂದ ಜನ, ನಡೆದೇ ಕಾರ್ಯಸ್ಥಾನ ತಲುಪಬಹುದು. ಎಷ್ಟು ಲೇಟು ಆದರೂ ಚಿಂತೆ ಇಲ್ಲ. ಮನೇಲಿ ಕೂಡ ಅಪ್ಪ – ಅಮ್ಮಂದಿರಿಗೆ ತಮ್ಮ ಮಗ / ಮಗಳು ಎಲ್ಲಿ ಕುಡಿದು ಕುಣಿತಾ ಇದ್ದಾರೆ ಅಂತ ಗೊತ್ತಿರುತ್ತೆ. ಅಷ್ಟರ ಮಟ್ಟಿಗೆ ಅವರ ಚಿಂತೆ ಕಡಿಮೆ ಆಗುತ್ತೆ! ಅಥವಾ ತನ್ನ ಗಂಡ ಕುಡಿದು, ಮನೆಗೆ ಕೂಗಳತೆಯ ದೂರದಲ್ಲಿ ಇರಬಹುದಾದ ಯಾವುದೋ ಒಂದು ಮೋರಿಯಲ್ಲಿ ಇದ್ದಾನೆ ಅಂತ ಹೆಂಡತಿಗೂ ಗೊತ್ತಿರುತ್ತೆ.! ಇದರಿಂದ ಸರಕಾರಕ್ಕೆ ಜಾಸ್ತಿ ದುಡ್ಡು, ಜನಕ್ಕೆ ಪೆಟ್ರೋಲ್ ಉಳಿತಾಯ. ಆ ಉಳಿತಾಯದ ದುಡ್ಡಲ್ಲಿ ಮತ್ತೂ ಒಂದು ಪೆಗ್ಗು ಹೋಡೀಬಹುದು. ಯಾಕೆ ಹೇಳಿದೆ ಅಂದ್ರೆ, ಡಿಸ್ಕ್ ನ ಒಳಗೆ ರಶ್ ಇರಬೇಕೇ ಹೊರತು, ಹೊರಗೆ ರಸ್ತೆ ಮೇಲೆ ಅಲ್ಲ.

ಇಷ್ಟನ್ನು ಮಾಡಿದರೆ ನಮ್ಮ ಟ್ರಾಫಿಕ್ ಸಮಸ್ಯೆ ಸಾಕಷ್ಟು ಕಡಿಮೆ ಆಗುವುದು.

ಇಷ್ಟು ಮಾಡಿದ ಮೇಲೂ ಪುರಸೊತ್ತು ಇದ್ರೆ, ಟ್ರಾಫಿಕ್ ಸಮಸ್ಯೆ ಸರಿಪಡಿಸುವ ಬದಲು, ಎಲ್ಲೋ ಟೀ ಅಂಗಡಿಯ ಮರೆಯಲ್ಲಿ ಕದ್ದು ಕುಳಿತು, ತಮ್ಮ ಕೇಸುಗಳ ಟಾರ್ಗೆಟ್ ಬಗ್ಗೆ ತಲೆ ಕೆಡಿಸಿ ಕೊಳ್ಳುವ (ಜೇಬು ಭರ್ತಿ ಕಾರ್ಯಕ್ರಮ ಕೂಡ) ಟ್ರಾಫಿಕ್ ಪೊಲೀಸರಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕೊಡಬೇಕು! ಆದರೆ ಅದರಿಂದ ಅವರಿಗೆ ಉಂಟಾಗುವ ಗಿಂಬಳದ ನಷ್ಟ ತಡೆಯಲು  ಟ್ರಾಫಿಕ್ ಪೋಲೀಸರ ಕ್ಷ್ಮೆಮಾಭಿವೃದ್ದಿಗೆ ಅಂತ ಒಂದು ನಿಧಿ ಸ್ಥಾಪನೆ ಮಾಡಬೇಕು. ಹೆಲ್ಮೆಟ್ಟು ಹಾಕದೆ, ಸೀಟು ಬೆಲ್ಟು ತೊಡದ ವಾಹನ ಚಲಾವಣೆ ಜಾಸ್ತಿ ಆಗುವ ಮಾರ್ಗಗಳಲ್ಲಿ ಈ ನಿಧಿಯ ಕಾಣಿಕೆ ಹುಂಡಿ ಇಡಬೇಕು. ಖಂಡಿತವಾಗಿಯೂ ನಮ್ಮ ಜನ ಅದಕ್ಕೆ ಕೈಲಿ ಆದಷ್ಟು ಸಹಕಾರ ಕೊಡುವರು.

ಇಷ್ಟು ಹೇಳಿದ ಮೇಲೆ, ರಸ್ತೆಗಳ ಬಗ್ಗೆ ನೀವು ಹೇಳಿಯೇ ಇಲ್ಲ ಅಂತ ದೂರಬೇಡಿ. ಅದೊಂದು ಜೇಡರ ಬಲೆ. ಸಿಮೆಂಟು ಉತ್ಪಾದಕರ ಒತ್ತಾಯಕ್ಕೆ ಮಣಿದು, ಸರ್ಕಾರ ಏನಾದ್ರು ಅದರಲ್ಲಿ ರಸ್ತೆ ಮಾಡಿದರೂ ಸಮಸ್ಯೆ ಪರಿಹಾರ ಆಗೋಲ್ಲ. ಸಿಮೆಂಟು ಒಣಗುವ ಮುಂಚೆಯೇ, ಒಳಚರಂಡಿ ಮಂಡಳಿಯವರೋ, ವಿದ್ಯುತ್ ಇಲಾಖೆಯವರೋ... ಬಂದು ರಸ್ತೆ ಅಗೆಯುವರು. ಹಂಗಾಗಿ ಒಳ್ಳೆ ರಸ್ತೆ ಅನ್ನೋದು ಚಿತ್ರಗಳಲ್ಲಿ ಮಾತ್ರ ಕಾಣಸಿಗುವುದು. ನಮಗೂ-ಅದಕ್ಕೂ, ಸರಿ ವಾಸ್ತು ಹೊಂದಿ ಬರುವುದಿಲ್ಲ ಬಿಡಿ. ನಿಮಗೆ ಅಷ್ಟಕ್ಕೂ, ಸೊಂಟ ನೋವು ಬರುತ್ತೆ ಅಂದ್ರೆ, ಲ್ಯಾಂಡ್ ರೋವರ್ ಎಸ ಯು ವಿ ತಗೋಳಿ. ಅದು ಪ್ರಪಂಚದ ಎಂತಾ ಕೆಟ್ಟ ದುರಂತ ಪರಿಸ್ಥಿತಿಲೂ ಚೆನ್ನಾಗಿ ಆರಾಮಾಗಿ ಹೋಗುವುದಂತೆ. ನೋಡಿ, ನಮ್ಮ ಸಾಕಷ್ಟು ಮಂತ್ರಿ ಮಹೋದಯರ ಹತ್ರ ಅಂತಹ ದೊಡ್ಡ ದೊಡ್ಡ ಕಾರುಗಳು ಉಂಟು. J

ಇದನ್ನು ಓದಿದ ಮೇಲೆ, ನೀವು ಕೂಡ ನಿಮ್ಮ ಸ್ವಂತ ಮಂಡೆಯಲ್ಲಿ ಬರುವ ಪರಿಹಾರ ಸೂತ್ರಗಳನ್ನು ಕೊಡಬಹುದು. ಹಾಗೆ ಕೊಡುವವರಿಗೆ ಸಿಲ್ಕ್ ಬೋರ್ಡ್ ನಲ್ಲಿ ಟ್ರಾಫಿಕ್ ಜಾಮು ಸಿಗದೇ ಇರಲಿ ಅಂತ ನಮ್ಮ ತಂಡವು ದಯಾಮಯನಾದ ಭಗವಂತನಲ್ಲಿ ಪ್ರಾರ್ಥಿಸುತ್ತದೆ.

Friday, January 2, 2015

ಪ್ರೇಮ ಪತ್ರಗಳು - nostalgia

ತೀರ ಹಿಂದಲ್ಲ.
ಮೊಬೈಲ್ ಜಗತ್ತಿಗಿಂತ ಹಿಂದಿನ ಪ್ರಪಂಚ ಚೆನ್ನಾಗಿತ್ತು.
ಇಷ್ಟ ಪಟ್ಟ ಹುಡುಗಿ ಮನೆಯ ಫೋನ್ ನಂಬರ್ ಬೇಕು ಅಂದ್ರೆ ಹರಸಾಹಸ ಮಾಡಬೇಕಿತ್ತು. ಮೊದಲು ಅವರಪ್ಪನ ಹೆಸರು ಪತ್ತೆ ಮಾಡಬೇಕು, ಆಮೇಲೆ ಅಡ್ರೆಸ್ ಕಂಡು ಹಿಡಿಬೇಕು. ಕೊನೆಗೆ ಬಿ ಎಸ ಏನ್ ಎಲ್ ನವರ ಟೆಲಿಫೋನ್ ಡೈರೆಕ್ಟರಿ ಗೆ ಶರಣು ಹೊಡೆದು.. ಪ್ರಯತ್ನಿಸಬೇಕು.

ಇಷ್ಟೆಲ್ಲಾ ಸಾಹಸ ಗಾಥೆಯ ನಂತರವೂ ಕಾಲ್ ನ ನಮಗೆ ಬೇಕಾದವರೇ ಎತ್ತುತ್ತಾರೆ ಅನ್ನೋದಕ್ಕೆ ಏನೂ ಖಾತರಿ ಇರುತ್ತಿರಲಿಲ್ಲ. ಹುಡುಗಿಯ ಅಪ್ಪನೋ, ಅಣ್ಣನೋ ಎತ್ತಿದರೋ... ಮುಗೀತು. ಸಾಕು ಸಹಸ್ರ ಮಾನಕ್ಕೆ ಸಾಕಾಗುವಷ್ಟು ಬೈದು ಫೋನು ಕುಕ್ಕುತ್ತಿದ್ದರು.

ಹಾಗಾಗಿ, ಇಂತಾ ದುರಂತ ಸಂದರ್ಭಗಳಿಂದ ನಮ್ಮಂತ ಸುಸಂಸ್ಕೃತ ಗಂಡು ಮಕ್ಕಳನ್ನು ಕಾಪಾಡಲು ಒಂದು ವ್ಯವಸ್ತೆ ಜಾರಿಯಲ್ಲಿ ಇತ್ತು. ಎರಡು ಬಾರಿ ರಿಂಗ್ ಮಾಡಿ ಕಟ್ ಮಾಡಿ ಮತ್ತೆ ಪ್ರಯತ್ನಿಸಿದರೆ, ಅದು ಆ ಮನೆಯಲ್ಲಿರುವ ನಮಗೆ ಬೇಕಾದ ವ್ಯಕ್ತಿಯೇ ಫೋನ್ ಎತ್ತುತ್ತಿದ್ದರು. :) 


ಆಗಿನ ಕಾಲದಲ್ಲಿ ಪ್ರೇಮಿಸುವುದು,  ಒಂದು ಮೆಸೇಜ್ ಕಳಿಸಿದಷ್ಟು ಸುಲಭದ್ದು ಆಗಿರಲಿಲ್ಲ. ಪ್ರೇಮ ಪತ್ರ ಬರೆದು ಕೊಡುವ ನೆಪದಲ್ಲಿ ಕೈ ಬರಹ ಹಾಗು ಕಾಗುಣಿತ ಕೂಡ ಸಹನೀಯವಾಗಿಯೇ ಇರುತ್ತಿತ್ತು. ಈಗ ವಾಟ್ಸ್ ಅಪ್ ನಲ್ಲಿ ನೀಲಿ ಬಣ್ಣಕ್ಕೆ ತಿರುಗಿಲ್ಲ, ರಿಪ್ಲೈ ಎರಡು ನಿಮಿಷ ಆದರೂ ಬಂದಿಲ್ಲ ಅಂದ್ರೆ ಯಾಕೋ ಮನಸು ದಿಗಿಲು ಗೋಳ್ಳುತ್ತೆ.

ಊಹಿಸಿ ಆಗಿನ ಕಾಲವನ್ನು.

ಪತ್ರವನ್ನು ಬರೆಯುವುದು ಬಹಳ ಕಷ್ಟ ಆದರೆ ಇಷ್ಟ. ಅಂಚೆ ಕಚೇರಿಗೆ ಹೋಗಿ ಹಾಕಿ ಬಂದ್ರೆ ಹೆದರಿಕೆ ಶುರು. ಪತ್ರದಲ್ಲಿ ಏನೇ ಶೂರತ್ವದಿಂದ ಬಂಡಲು ಬಿಟ್ಟಿದ್ದರೂ, ಹುಡುಗಿ ಅಪ್ಪನ ಕೈಗೆ ಸಿಕ್ಕರೆ ಏನು ಗತಿ?
ಆಮೇಲೆ ಪೋಸ್ಟ್ ಕಾರ್ಡ್, ಅಥವಾ ಎನ್ವೆಲೋಪ್ ಗಳ ಬಗ್ಗೆ ಮಾಹಿತಿ ಕೂಡ ಅಗತ್ಯ ಇರಬೇಕಿತ್ತು. ಒಮ್ಮೆ ಪರಿಚಿತರೊಬ್ಬರು ಒಂದು ರುಪಾಯಿಯ ಅಂಚೆ ಚೀಟಿ ಅಂಟಿಸಬೇಕಾದಲ್ಲಿ ಒಂದು ರುಪಾಯಿಯ ರೆವೆನ್ಯೂ ಸ್ಟ್ಯಾಂಪ್  ಹಾಕಿ ಕಳಿಸಿದ್ರು. ಎರಡು ದಿನ ಆದಮೇಲೆ ಅಂಚೆಯಣ್ಣ ಬಂದು, ಬಾಯಿ ತುಂಬ ಉಗಿದು, ವಾಪಸು ಕೊಟ್ಟು ಹೋಗಿದ್ದ!


ಇರಲಿ, ಈ ಪ್ರೇಮ ಪತ್ರಗಳನ್ನು ಹಾಗೆಯೇ ಜತನವಾಗಿ ಇಟ್ಟುಕೊಳ್ಳುವುದರಲ್ಲಿ ಇರುವ ಸುಖ, ಅವುಗಳ ಮೇಲೆ ಆಗಾಗ ಕೈ ಆಡಿಸಿದಾಗ ಸಿಗುವ ಆನಂದ, ಮೊಬೈಲ್ ಮುಟ್ಟಿದ ಮಾತ್ರಕ್ಕೆ ಸಿಗುತ್ತಾ? ಇರಲಾರದು. 


ಆದರೆ ಮೊಬೈಲ್ ಬಂದ ಕೂಡ್ಲೇ ಎಲ್ಲಾ ಬದಲಾಯಿತು ಎಂದಲ್ಲ. 2000 ದಶಕದ ಆದಿಯಲ್ಲಿ "ಜೆ ಟಿ ಎಂ ನಿಂದ ಶ್ರೀನಾಥ್ ಅವರು ಮೊಬೈಲ್ ಆದರು, ಇನ್ನು ನೀವು?" ಉದಯ ಟೀವಿಯಲ್ಲಿ ಜಾಹಿರಾತು ಬರುತ್ತಿತ್ತು. ಆದರೆ ಸಾಕುವುದು ಉದ್ಯೋಗಪತಿ ಗಳಿಗೇ ಸಾದ್ಯ ಆಗ್ತಾ ಇರಲಿಲ್ಲ. ಇನ್ನು ಕಾಲೇಜು ಮಕ್ಕಳಿಗೆ ದೂರದ ಮಾತು ಆಯಿತು.
ಅದೂ ಅಲ್ಲದೆ, ಅದನ್ನ ಪ್ಯಾಂಟ್ ಜೇಬಲ್ಲಿ ಇಟ್ಟು ಕೊಂಡಲ್ಲಿ ಕಿಡ್ನಿ ಗೆ ತೊಂದರೆ, ಶರ್ಟ್ ಜೇಬಲ್ಲಿ ಇಟ್ಟರೆ ಹಾರ್ಟ್ ಅಟ್ಯಾಕ್ ಆಗುತ್ತೆ ಅನ್ನುವ ಅಪವಾದವೂ ಇತ್ತು.

ಈಗ ಎಷ್ಟು ಜನರ ಕಿಡ್ನಿ ಹೋಗಿದೆಯೋ ಮಾಹಿತಿ ಇಲ್ಲ.
ಆದರೆ ಆಗಿನ ಕಾಲದ ರೀತಿಯ ಪ್ರೇಮ ಪ್ರಕರಣಗಳು ಕಾಣುತ್ತಿಲ್ಲ.
ಒಂದು ಮೆಸಜು, ಫೇಸ್ಬುಕ್ ನಲ್ಲಿ ಅನ್ ಫ್ರೆಂಡ್ ಮಾಡಿದ ಮಾತ್ರಕ್ಕೆ ಸಂಬಂಧ ಮುಗೀತಾ ಇರಲಿಲ್ಲ.

ಯಾಕೋ ಹಂಗೆ ಅನ್ನಿಸ್ತು.
ಕೊಸರು: ಇದರರ್ಥ ನಂಗೆ ವಯಸ್ಸು ಆಗಿದೆ, ಹಳೆ ಲ್ಯಾಂಡ್ ಲೈನ್ ಜಮಾನದವನು ಅಂತ ಅಲ್ಲ. ಹಿರಿಯರು ಹೇಳಿಲ್ವೇ? ಪ್ರೇಮಕ್ಕೆ ಕಣ್ಣಿಲ್ಲ... ಹಾಗೆಯೇ ವಯಸ್ಸು ಕೂಡ ಇಲ್ಲ. :) 

Tuesday, August 13, 2013

ವರುಣನ ಸಾಹಸಗಳು! - ಪತ್ತೇದಾರಿ ಮಾಲಿಕೆ 2



ನಿಮಗೆ ನಮ್ಮ ವರುಣ ಗೊತ್ತಲ್ಲ? ಅದೇ ಲಭ್ಯವಿರುವ ಪತ್ತೆದಾರರಲ್ಲಿ ಅತ್ಯಂತ ಖ್ಯಾತನಾಮ. ಹಿಂದೊಮ್ಮೆ ಹೇಳಿದ್ನಲ್ಲ, ಕಳ್ಳಕಾಕರನ್ನು ಮಾತ್ರವಲ್ಲದೆ ದೆವ್ವವನ್ನು ಕೂಡ ಹಿಡಿದ್ದದ್ದು. ಇಂತಿರ್ಪ, ವರುಣನಿಗೆ ಕೇಸುಗಳು ವಿಪರೀತ. ಕೈ ಹಿಡದ ಯಾವ ಕೆಲಸವನ್ನು ಅರ್ದಕ್ಕೆ ಬಿಟ್ಟಿದ್ದೇ ಇಲ್ಲ. ಒಮ್ಮೆ ಒಂದು ಪ್ರಕರಣಕ್ಕೆ ಹಿಡಿದ ಸಾಕ್ಷಗಳು ಎಷ್ಟು ಖಡಕ್ ಇತ್ತು ಅಂದ್ರೆ, ಸಾಕ್ಷಾತ್ CSP (ಅದೇ ರೀ.. ಮುಕ್ತ ಮುಕ್ತ ಲಾಯರ್ರು) ಕೂಡ ವಾದಮಾಡಲು ಸಾಧ್ಯವಾಗದೆ ಸೋತು ಬಿಟ್ರು. J

ಇರಲಿ ಈಗ ವಿಷಯಕ್ಕೆ ಬರೋಣ. ಮೊನ್ನೆ ಹಿಂಗೆ ಟಿವಿ 9 ನೋಡ್ತಾ ಇರಬೇಕಾದ್ರೆ, ಎಂದಿನಂತೆ ಫೋನ್ ಬಂತು. ಅವನು ಮಾತಾಡುವಾಗ ಅಷ್ಟೇನೂ ಮಂದಹಾಸ ಇರಲಿಲ್ಲ, “ಹ್ಮ್ , ಸರಿ” ಮುಂತಾದ ಪದ ಪುಂಜ ಬಂತು. ಕೂಡ್ಲೇ ಇದು ಒಂದು ಕೇಸ್, ಆ ಕಡೆ ಇರೋದು ಗಂಡಸು ಅಂತ ಕೂಡ ಗೊತ್ತಾಯಿತು. (ಹುಡುಗೀರ ಫೋನ್ ಮಾಡಿದ್ರೆ ಮುಖ ಭಾವ ಬದಲಾಗೊಲ್ವೆ?... ನಂಗು ಪತ್ತೆದಾರಿಕೆ ಬರುತ್ತೆ) ಹೆಸರಾಂತ ಮಾಜಿ ಮಂತ್ರಿ ಮಾಡಿದ್ದು ಅಂತ ಹೇಳಿದ. ಅವರ ಅತಿ ಮುಖ್ಯ ಐ ಪ್ಯಾಡ್ ಕಳೆದು ಹೋಗಿದೆಯಂತೆ. ಅದರಲ್ಲಿ ದೇಶದ ಹಾಗು ನಾಡಿನ ಅತಿ ಮುಖ್ಯ ಮಾಹಿತಿ ಇದೆಯಂತೆ. ಅದು ವೈರಿಗಳ ಕೈಗೆ ಸೇರಿದರೆ ದೇಶದ ಭದ್ರತೆಗೆ ಅಪಾಯ ಆಗುತ್ತಂತೆ. ಕೂಡಲೇ ಹುಡುಕಿ ಕೊಡಬೇಕು ಅಂತ ವಿನಂತಿ ಮಾಡಿದ್ದಾರೆ ಅಂದ. ಅದು ಕಳೆದು ಎರಡು ದಿನಗಳೇ ಆಗಿದೆ, ವಿಷ್ಯ ಪೊಲೀಸರಿಗೆ ತಿಳಿಸುವ ಹಾಗೂ ಇಲ್ಲ, ಮಾಧ್ಯಮಗಳಿಗೆ ತಿಳಿದರೆ ವೈರಿಗಳು ಎಚ್ಚೆತ್ತು ಬಿಡುತ್ತಾರೆ ಎಂಬುದು ಮಾಜಿ ಮಂತ್ರಿಯ ಅಂಬೋಣ, ಹಾಗಾಗಿ ಕೂಡಲೇ ಹೋಗಿ ಅವರ ಮನೆ – ಆಫೀಸ್ ನೋಡಿ ಬರೋಣ ಬಾ ಎಂದ.

ಮೊದ್ಲೇ ನಮ್ಮ ದೇಶದಲ್ಲಿ ಎಲ್ಲಿ, ಯಾವಾಗ ಬೇಕಾದ್ರೂ ಬಾಂಬು ಸಿಡಿಯಬಹುದು. ನಾನು ಆ ರಾಜಕಾರಣಿ ಮನೆಗೆ ಹೋಗೋದು, ವೈರಿಗಳು ನಮ್ಮನ್ನು ಗುರುತು ಮಾಡಿಕೊಂಡು... ಡುಂ ಅಂತ ಸಿಡಿಸಿ ಬಿಡಬಹುದು. ಇಲ್ಲಿ ಜೀವಕ್ಕೆ ಬೆಲೆ ಬಹಳ ಕಡಿಮೆ. ಹಂಗಾಗಿ ಹೆದರಿಕೆ ಅಲ್ಲದಿದ್ದರೂ... ಹೊಟ್ಟೆಯಲ್ಲಿ ಯಾಕೋ ಡುಳು ಡುಳು ಶಬ್ದ ಬಂತು. ಸ್ವಲ್ಪ ವಾಸನೆಯೂ ಬಂತು. ನನ್ನ ಪರಿಸ್ಥಿತಿ ನೋಡಿ, ಬೈಕೊಂಡು ಅವನೊಬ್ಬನೇ ಹೋದ. ನಾನು ಕೂಡ ಎಂದಿನಂತೆ ಟಿವಿ 9 ನಿಂದ ಸುವರ್ಣ ನ್ಯೂಸ್ ಗೆ ಚಾನೆಲ್ ಬದಲಿಸಿದೆ. ಅದೇನೋ ಬ್ರೇಕಿಂಗ್ ನ್ಯೂಸ್ ಬರ್ತಾ ಇತ್ತು.

ಮಧ್ಯ ರಾತ್ರೆ ಹೊತ್ತಿಗೆ ವರುಣ ಬಂದ. ಒಮ್ಮೆಲೇ ಅಟ್ಟದಿಂದ ಹಳೆ ಪೇಪರ್ ತೆಗೆದು ಏನೇನೋ ಹುಡುಕಲು ಶುರು ಮಾಡಿದ. ಸ್ವಲ್ಪ ಹೊತ್ತಿಗೆ, ಇಂಟರ್ನೆಟ್ ನಲ್ಲಿ ಅದೇನೋ ಹುಡುಕಿ ನೋಟ್ಸ್ ಮಾಡಲು ಶುರು ಮಾಡಿದ. ಏನು ಬೇಕಿತ್ತು ಅಂತ ಕೇಳಬೇಕು ಅಂತ ಅನ್ನಿಸ್ತು, ಆದ್ರೆ ಎಲ್ಲಿ ಕೆಲಸ ಹೇಳ್ತಾನೋ ಅಂತ ಮತ್ತೊಂದು ರಗ್ಗು ಎಳಕೊಂಡು ಮಲಗಿದೆ. ಬೆಳಿಗ್ಗೆ ಒಂಬತ್ತಕ್ಕೆ ಎದ್ದುಳುವಾಗ ಅವನು ಇರಲಿಲ್ಲ. ಒಳ್ಳೆದೇ ಆಯಿತು ಅಂತ ಹೋಗಿ, ಮೂರು ಮಸಾಲೆ ದೋಸೆ, ಒಂದು ಸ್ಟ್ರಾಂಗ್ ಕಾಫಿ ಕುಡಿದು ಬಂದೆ.

ಮಾರನೆ ದಿನ ಸಂಜೆ ನಮ್ಮ ಪತ್ತೆದಾರದ ಸವಾರಿ ಬಂತು. ಪಕ್ಕದ ಮನೆ ನೀಲು ಆಂಟಿ ತಂದು ಕೊಟ್ಟ ಬಜ್ಜಿ ಪಕೋಡ ತಿನ್ನುತ ವಿಷ್ಯ ಹೇಳಿದ. 

ಹಿಂದಿನ ಸರ್ಕಾರ ಎಲ್ಲಾ ಎಂ ಎಲ್ ಎ ಗಳಿಗೆ ಕೆಲಸಕ್ಕೆ ಅನುಕೂಲವಾಗಲಿ, ಮಾಹಿತಿ ಕೈ ಅಂಚಿನಲ್ಲಿ ಇರಲಿ ಎಂದು ಐ ಪ್ಯಾಡ್ ಕೊಟ್ಟಿತ್ತಂತೆ. ಈ ರಾಜಕಾರಣಿ ಆವಾಗ ದೊಡ್ಡ ಮಂತ್ರಿ ಕೂಡ ಆಗಿದ್ದರಂತೆ. ಈಗ ಮಾಜಿ ಆದಮೇಲೆ ಐ ಪ್ಯಾಡ್ ನ ಅವರ ಕಚೇರಿಯಲ್ಲಿ ಮಾತ್ರ ಬಳಸುತ್ತಿದ್ದರಂತೆ. ಹಾಗಾಗಿ ಅದು ಕಚೇರಿಯಲ್ಲಿಯೇ ಕಳುವಾಗಿದೆ ಎಂಬ ನಿರ್ದಾರಕ್ಕೆ ಬಂದನಂತೆ. (ಬಹಳ ಈಜಿ ಅಲ್ವ?) ೪-೫ ದಿನದ ಹಿಂದೆ ಅಲ್ಲಿಗೆ ಭೇಟಿ ಕೊಟ್ಟ ಎಲ್ಲಾ ಜನರ ಬಗ್ಗೆ ರಿಜಿಸ್ಟರ್ ನಲ್ಲಿ ನೋಡಿದ ನಂತೆ. ಅಲ್ಲಿಗೆ ಬಂದವರು ವ್ಯಾಪಾರ ನಿರತ ರಾಜಕಾರಣಿಗಳು, (ಕುದುರೆ ವ್ಯಾಪಾರ ನ? ) ಬೆಂಬಲಿಗರು ಹಾಗು  ಮಂತ್ರಿಯ ಮಾಜಿ ಆಪ್ತ ಕಾರ್ಯದರ್ಶಿ!. ನನಗೆ ಕಾರ್ಯದರ್ಶಿ ಮೇಲೇನೆ ಅನುಮಾನ ಬಂತು. ಗುಟ್ಟಾಗಿ ಮನೆಗೆ ಹೋದರೆ, ಆ ಪಿಯೇ ಮಗ ಜಗುಲಿಲೇ ಕೂತು  ಐ ಪ್ಯಾಡ್ ನಲ್ಲಿ ಆಟ ಆಡ್ತಾ ಇದ್ದಾನೆ!  ಮಗು ಆಡೋಕೆ ಸಾಮಾನು ಕೇಳಿದೆ ಅಂತ ಪಿಯೆ ಇದನ್ನೇ ಕದ್ದು ಬಿಟ್ಟಿದ್ದ. ನಮ್ಮ ವರುಣ ರೆಡ್ ಹ್ಯಾಂಡ್ ಆಗಿ ಹಿಡಿದು ಐ ಪ್ಯಾಡ್ ನ ಹಿಂತಿರುಗಿಸಿದನಂತೆ.

ಅಲ್ಲ ಮಾರಾಯ, ಕದ್ದಿದ್ದು ಅವನೇ ಅಂತ ಹೆಂಗೆ ನಿರ್ದಾರಕ್ಕೆ ಬಂದೆ? ಉಗ್ರರೋ.. ಇನ್ಯಾರೋ ಅಲ್ವ ಅಂದೆ. (ಸುಖಾ ಸುಮ್ನೆ ಹೆಂಗೆ ಒಪ್ಪೋದು?)

ವರುಣ ಟೀ ನ ಬಾಯಿಗೆ ಇಡುತ್ತಾ ಹೇಳಲು ಶುರು ಮಾಡಿದ. ಆ ಮಾಜಿ ಮಂತ್ರಿಗೆ ಕಂಪ್ಯೂಟರ್ ಜ್ಞಾನ ಏನು ಇಲ್ವಂತೆ, ಉಗ್ರರಿಗೆ ಬೇಕಾಗೋ ಮಾಹಿತಿ ಈ ಮನುಷ್ಯ ನ ಹತ್ರ ಏನೂ ಇರಲಿಲ್ಲ. ಅಷ್ಟಕ್ಕೂ ಆತ ಸಧನ ದಲ್ಲಿ ಮಾತಾಡಿದ್ದೆ ಕಡಿಮೆ ಅಂತೆ. ಮಾತಾಡಿದ್ದೆಲ್ಲವೂ ಉಪಯೋಗಕ್ಕೆ ಬಾರದವೇ. ಈ ನಾಯಕರಿಗೆ ಈ ಟ್ಯಾಬ್ಲೆಟ್ ಗಳಲ್ಲಿ ಸಿನೆಮ ನೋಡೋಕೆ ಬಳಸುತ್ತಿದರೆ ಹೊರತು ಮಾಹಿತಿ ಸಂಗ್ರಹಣೆಗೆ, ಸಂಸ್ಕರಣೆಗೆ ಉಪಯೋಗಿಸುತ್ತಾ ಇರಲ್ಲವಂತೆ. ಅವರು ನೋಡೋ ಸಿನೆಮ ಎಲ್ಲ ನಮಗೆಲ್ಲಾ ಗೊತ್ತಿರುವಂತದ್ದೇ ಎಂದು ನಕ್ಕ. ಅದಕ್ಕೆ ಆ ರಾಜಕಾರಣಿ ಪೊಲೀಸರು – ಮಧ್ಯಮ ಅಂತ ಹೆದರಿದ್ದು, ದೇಶ – ಭದ್ರತೆ ಅಂತ ನಾಟಕ ಮಾಡಿದ್ದು ಅಂದು ಮತ್ತೊದ್ದು ಪಕೋಡ ಬಾಯಿಗೆ ಹಾಕ್ಕೊಂಡ. ಇವನು  ಪಿಯೆ ಮೇಲೆ ಅನುಮಾನ ಪಟ್ಟ, ಹಾಗು ಅದು ಎಂದಿನಂತೆ ಸರಿಯಾಗೇ ಇತ್ತು. ಕಳ್ಳ ಮಾಲು ಸಮೇತ ಸಿಕ್ಕಿಬಿದ್ದ. ಕೂಡಲೇ ಮತ್ತೊಂದು ಪಕೋಡ ಕೂಡ ಬಾಯಿಗೆ ಹಾಕ್ಕೊಂಡು ನಂಗೆ ಸಿಗದಂತೆ ಮಾಡಿದ.

ಹೋಗ್ಲಿ ಬಿಡಿ, ಈ “ಬದುಕು” ದಾರವಾಹಿ ಯಾವಾಗ ಮುಗಿಯುತ್ತೆ ಅನ್ನೋ ಒಂದು ಸಮಸ್ಯೆ ಬಿಟ್ಟು ಮತ್ತೆಲ್ಲವನ್ನೂ ವರುಣ ಬಗೆಹರಿಸಿ ಆಗಿದೆ.

ನಿಮಗೂ ಏನಾದ್ರು ಸಮಸ್ಯೆ ಇದ್ದಲ್ಲಿ, ಸಂಪರ್ಕಿಸಬಹುದು. ಫೀಸ್ ಜೊತೆ ಒಂದಿಷ್ಟು ಕುರುಕುಲು ತಿಂಡಿ ಕೂಡ ಸರಬರಾಜು ಮಾಡಬೇಕಾದೀತು ಅಷ್ಟೇ. 

Wednesday, June 12, 2013

ಉತ್ತಮ ಪತಿ ಎಂದೆನಿಸಿಕೊಳ್ಳಲು...



“ಒಳ್ಳೆ ಗಂಡ ಸಿಗಲಿ” ಎಂಬ ಆಶಯಕ್ಕೆ ನಮ್ಮ ಶಾಸ್ತ್ರ ಪುರಾಣಗಳು ಯಾವತ್ತೂ ಹಲವು ಉದಾಹರಣೆಯನ್ನು ಸ್ತ್ರೀಯರಿಗೆ ಕೊಟ್ಟಿದೆ. ಪುರುಷರಿಗೆ ಈ ವಿಷಯದಲ್ಲಿ ಅಷ್ಟು ಅವಕಾಶ ಇದ್ದಂತಿಲ್ಲ. (ಅಥವ ನಾನು ಕೇಳಿಲ್ಲ. ) ಆದರೆ ಗಂಡಿನ ಜವಾಬ್ದಾರಿಗಳ ಬಗ್ಗೆ “ಮದುವೆ ಮಂಟಪ ದಲ್ಲೇ ಬೋಧನೆ” ಆಗುತ್ತದೆ. ಆದರೆ ದುರಂತಕ್ಕೆ ಅವುಗಳಲ್ಲಿ ಬಹಳಷ್ಟು ಈ ಕಾಲ ಘಟ್ಟಕ್ಕೆ ತಕ್ಕಂತೆ ಅಪ್ಡೇಟ್ ಆಗಿಲ್ಲ. ಹಾಗಾಗಿ “ಉತ್ತಮ ಪತಿಯಾಗುವುದು ಹೇಗೆ” ಎಂದು ನಮ್ಮ ಟೈಮ್ ಪಾಸು ತಂಡದ ಏಕ ಸದಸ್ಯ ಪೀಠವು ಚಿಂತಿಸಿ, ಯೋಚಿಸಿ, ಚರ್ಚಿಸಿ ಈ ಕೆಳಕಂಡ ಹಿತೋಪದೇಶಗಳನ್ನು ಸಿದ್ದಪಡಿಸಿದೆ.


ಮೊದಲನೇದಾಗಿ ಹೆಂಡತಿಯ ಮಾತಿಗೆ ಯಾವತ್ತೂ ಎದುರಾಡಲು ಹೋಗಬಾರದು. (ಅಂತಾ ದೈರ್ಯ ಯಾವ  ಗಂಡನಿಗೆ ಇದೆ  ಅಲ್ವ?) “ಹೌದು, ಸರಿ, ಹಾಗೆ ಆಗಲಿ, ಖಂಡಿತ.. ಮುಂತಾದ ಪದ ಬಳಕೆ ಮಾಡಬೇಕು. ಸ್ಥಿತಿ ಪ್ರಜ್ಞರಾಗಿ – ತರ್ಕ ಬದ್ದವಾಗಿ  ಮಾತಾಡಲು ಹೊರಟಿರೋ.. ನೀವು ಕೆಟ್ಟಿರಿ.

ಈಗಿನ ಕಾಲದ ಹುಡುಗೀರಿಗೆ ಅಡುಗೆ ಮನೆ ಅಂದ್ರೆ ಅಲರ್ಜಿ. ಸಾರಿನ ಪುಡಿಗೂ, ಹುಳಿ ಪುಡಿ ಗೂ ಇರೋ ವ್ಯತ್ಯಾಸವೇ ಬಹಳಷ್ಟು ಸಲ ಗೊತ್ತಿರೋಲ್ಲ. ಮಡದಿ ಏನು ಮಾಡಿ ಕೊಟ್ಟರೂ, ಯಾವುದೇ ರೀತಿಯ ವಿಮರ್ಶೆ ಮಾಡದೆ ಚಪ್ಪರಿಸುತ್ತಾ ತಿನ್ನಬೇಕು. ಸಾಧ್ಯವಾಗದೆ ಹೋದ್ರೆ, ತಾವೇ ಅಡುಗೆ ಮನೆಗೆ ಧಾಂಗುಡಿ ಇಟ್ಟು ಪ್ರೀತಿಯಿಂದ ಅಡುಗೆ ಮಾಡಿ ಬಡಿಸಬೇಕು.

ಹೆಂಡತಿಗೆ ಅಗತ್ಯ ಇದ್ದಾಗೆಲ್ಲ ದುಡ್ಡು ಕೊಡುತ್ತಾ ಇರಬೇಕು. ಸಾದ್ಯ ಆದ್ರೆ, ಕ್ರೆಡಿಟ್ ಕಾರ್ಡ್ ನೆ ಕೊಡಬೇಕು. ಆಮೇಲೆ ಬಿಲ್ ಬಂದಮೇಲೆ ಖರ್ಚಿನ ವಿವರ ಕೇಳುವ ಮೂರ್ಖ ಕೆಲಸಕ್ಕೆ ಕೈ ಹಾಕಬಾರದು. ತುಟಿ ಪಿಟಿಕ್ ಎನ್ನದೆ ಅದರ ಬಿಲ್ ಕಟ್ಟಬೇಕು.

ಟೀವಿಯಲ್ಲಿ ಇಂಡಿಯಾ – ಪಾಕಿಸ್ತಾನ್ ಮ್ಯಾಚ್ ಬರ್ತಾ ಇದ್ರೂ ಅಥವಾ ಅಪ್ಪಿ ತಪ್ಪಿ ಮನಮೋಹನ ಸಿಂಗ್ ಮಾತಾಡುತ್ತಾ ಇದ್ರೂ (ಎಂಟನೆ ಅದ್ಭುತ) ಅದನ್ನ ನೋಡದೆ, “ಪುಟ್ಟ ಗೌರಿ ಮದುವೆ” ಅಥವಾ ಇನ್ನಾವುದೇ ಹೆಂಡತಿ ನೋಡುವ ಧಾರವಾಹಿ ನೋಡಬೇಕು. ಮುಖ್ಯವಾಗಿ ಆ ಧಾರವಾಹಿ ಸಂಭಾಷಣೆ ಬಗ್ಗೆ, ಪಾತ್ರಗಳ ಬಗ್ಗೆ.. ನಿಮ್ಮ ತರ್ಕಶಾಸ್ತ್ರ ಪ್ರಾವಿಣ್ಯತೆಯನ್ನು ಪ್ರದರ್ಶಿಸಬಾರದು.

ಹೆಂಡತಿ ಕೆಲ್ಸಕ್ಕೆ ಹೋಗುತ್ತಿದ್ದಲ್ಲಿ, ನಿಮ್ಮ ಬೈಕು / ಕಾರಿನಲ್ಲಿ ಉಚಿತ ಸಾರಿಗೆ ವ್ಯವಸ್ತೆ ಕೊಡಬೇಕು. ನಂಗೆ ಅರ್ಥ ಆಗುತ್ತೆ, ಬೈಕು / ಕಾರಿನಲ್ಲಿ ಸ್ವಂತ ಹೆಂಡತಿನ ಕೂರಿಸಿಕೊಂಡು ಹೋಗೋದು ಎಷ್ಟು ಕಷ್ಟದ ವಿಚಾರ ಅಂತ. ಬೇರೆ ಏನಕ್ಕೂ ಅಲ್ಲ, ಜೋರಾಗಿ ಹೋಗು, ಇಲ್ಲಿ ನಿಧಾನಕ್ಕೆ ಹೋಗು, ಈಗ ಕ್ಲಚ್ ಹಿಡಿ ಎಂಬೆಲ್ಲ ಉಪದೇಶ ಕೇಳಬೇಕಲ್ಲ...

ಹೆಂಡತಿಯ ಮಾತಿಗೆ ಯಾವತ್ತೂ, ವ್ಯಾಕರಣ ಬದ್ದವಾದ – ನಿಘಂಟಿನಲ್ಲಿ ವಿವರಿಸಿರುವಂತ ಅರ್ಥವೇ ಇರುತ್ತದೆ ಎಂದು ಭಾವಿಸಬೇಡಿ. ಉದಾ: ಮನೇಲಿ ಕೂತು ಯಾಕೋ ತುಂಬಾ ಬೇಜಾರ್ ಆಗ್ತಾ ಇದೆ ಅಂದ್ರೆ, ಬರುವ ವಾರಾಂತ್ಯ ಎಲ್ಲಾದರು ಹೊರಗೆ ಸುತ್ತಾಡಿಕೊಂಡು ಬರೋಣ ವೆಂತಲೂ! ಊರಿಂದ ಅಮ್ಮ ಫೋನ್ ಮಾಡಿದ್ದಳು ಅಂದ್ರೆ.. ನಿಮ್ಮ ಅತ್ತೆಯವರು ಆಗಮಿಸುತ್ತಾ ಇದ್ದಾರೆ ಅಥವಾ ನಿಮ್ಮ ಮಡದಿಗೆ ತವರಿನ ನೆನಪು ತುಂಬಾ ಆಗುತ್ತಿದೆ ಎಂತಲೂ ಆಗಿರುತ್ತದೆ. ಈ “ಹೆಂಡತಿ ಬಾಷೆ” ಕಲಿಯಲು ಸಮಯ ಹಿಡಿಯುತ್ತದೆ. ಆದಷ್ಟು ಬೇಗ ಕಲಿಯುವುದು ಒಳ್ಳೆಯದು.

ನಿಮ್ಮ ಭಾಷಾ ಜ್ಞಾನ ವೃದ್ದಿಸಿಕೊಂಡಂತೆ, ನೆನಪಿನ ಶಕ್ತಿಯನ್ನು ಕೂಡ ಹೆಚ್ಚಿಸಿಕೊಳ್ಳಬೇಕು. ನಿಮ್ಮ ಮದುವೆಯ ದಿನ, ಹುಟ್ಟಿದ ಹಬ್ಬ ಮುಂತಾದುವು ಚೆನ್ನಾಗಿ ನೆನಪಿಟ್ಟುಕೊಳ್ಳಬೇಕು. ನಿಮ್ಮದು ಪ್ರೇಮ ವಿವಾಹವಾಗಿದ್ದಾರೆ, ಮೊದಲ ಭೇಟಿ, ಪ್ರೇಮ ನಿವೇದಿಸಿಕೊಂಡ ದಿನ, ಗಳಿಗೆ ಮುಂತಾದುವು ಕೂಡ ನೆನಪಿನ ಕೋಶದಲ್ಲಿ ಭದ್ರವಾಗಿ ಇರಬೇಕು. ನಂತರ “ಒಳ್ಳೆಯ” ಉಡುಗೊರೆಯೊಂದಿಗೆ ನಿಮ್ಮ ನೆನಪಿನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು. ಉಡುಗೊರೆ ಇಲ್ಲದಿದ್ದಲ್ಲಿ, ನೆನಪಿಟ್ಟುಕೊಂಡಿದ್ದು  ಕೂಡ ಪ್ರಯೋಜನಕ್ಕೆ ಬಾರದು.

ಮನೆ ಅಂದ ಮೇಲೆ ಅತ್ತೆ ಸೊಸೆ ಜಗಳ ಇದ್ದಿದ್ದೇ. ಇದೊಂತರ “ಅತ್ತ ದರಿ, ಇತ್ತ ಪುಲಿ” ಸಂಧರ್ಭ. ಈ ಸಮಸ್ಯೆ ಬಂದಾಗೆಲ್ಲ ಅದನ್ನು ಭೇದಿಸುವಲ್ಲಿ ಯಶಸ್ವಿ ಆದಲ್ಲಿ.. ನೀವು ಯಶಸ್ವಿ ಗಂಡ ಏನು.. ಯಶಸ್ವಿ ಮಾನವ ಜೀವಿ ಅಂತ ಗುರುತಿಸಲ್ಪಡುತ್ತಿರಿ.


ಈ ಮೇಲೆ ನಮೂದಿಸಿರುವಂತ ಮಾರ್ಗ ಸೂಚಿಯನ್ನು ಅನುಸರಿಸಿ ಯಶಸ್ವೀ ಗಂಡ ಎಂದು ಬಿರುದು ಪಡೆಯಬೇಕಾಗಿ, ಟೈಮ್ ಪಾಸ್ ಪೀಠವು ಹಾರೈಸುತ್ತದೆ.


(ನಿಮಗೆ ಇದಕ್ಕೂ ಮಿಗಿಲಾದ ಮಾರ್ಗ ಸೂಚಿಗಳು ಗೊತ್ತಿದ್ದಲ್ಲಿ / ಗೊತ್ತಾದಲ್ಲಿ, ಅದನ್ನ ಇಲ್ಲಿ ಹಂಚಿಕೊಂಡು ಪುರುಷ ಜನಾಂಗದ ಏಳಿಗೆಗೆ ಸಹಕರಿಸಬೇಕಾಗಿ ಕೋರಿಕೆ)