ಮಾಡೋಕೆ ಏನು ಕೆಲಸ ಇಲ್ಲದೇ ಇದ್ದಾಗ, ಬೋರ್ ಆಗ್ತಾ ಇದೆ ಅಂದಾಗ, ಮ್ಯಾನೇಜರ್ ತಲೆ ಮೇಲೆ ಕೂತು, ತಲೆ ಕೆಡಿಸಿದಾಗ... ತುಟಿ ಗಳ ಮೇಲೆ ಕಿರು ನಗೆ ಗೆ... ಈ ಬ್ಲಾಗ್.
Saturday, March 13, 2010
ನಿದ್ದೆ ಬಾರದ ರಾತ್ರಿಗಳು
ನೀವು ಏನೇ ಹೇಳಿ, ನಂಗೆ ರಾತ್ರೆ ಭರಪೂರ ನಿದ್ರೆ ಮಾಡೋರನ್ನ ಕಂಡ್ರೆ ವಿಪರೀತ ಹೊಟ್ಟೆ ಉರಿಯುತ್ತೆ, ಅದರಲ್ಲೂ ಮಲಗಿದ ಕೂಡಲೇ ಗೊರಕೆ ಹೊಡಿಲಿಕ್ಕೆ ಶುರು ಮಾಡ್ತಾರಲ್ಲ ಅವರನ್ನು ಕಂಡ್ರೆ ಹೊಟ್ಟೆಲಿ ಜೀರಿಗೆ ಮೆಣಸು ಕುಟ್ಟಿದ ಹಾಗೆ ಅನ್ಸುತ್ತೆ. ಇದಕ್ಕೆ ಕಾರಣ ಇಷ್ಟೇ, ನಂಗೆ ಇತ್ತೀಚಿಗೆ ನಿದ್ದೆ ಕಡಿಮೆ ಆಗಿದೆ, ಮಧ್ಯರಾತ್ರೆ ಏನಾದ್ರು ಎಚ್ಚರ ಆದ್ರೆ ನನ್ನ ಕಷ್ಟ ಯಾರಿಗೂ ಬೇಡ.
ನನ್ನ ಸಮಸ್ಯೆಗೆ ಅಮ್ಮ ಪರಿಹಾರ ಸೂಚಿಸಿದಳು, ತಲೆಗೆ ಚೆನ್ನಾಗಿ ಎಣ್ಣೆ ಹಾಕಿಕೋ, ಹರಳೆಣ್ಣೆ ಬಿಸಿ ಮಾಡಿ ತಲೆಗೆ ಹೊಯ್ಕೋ, ನೆಲ್ಲಿ - ಕೊಬ್ಬರಿ ಎಣ್ಣೆ ಊರಿಂದ ಕಳಿಸಿ ಉಪಯೋಗಿಸು ಅಂತೆಲ್ಲಾ ಸಲಹೆ ಬಂತು, ನಾನು ಕೂಡ ಪ್ರಾಮಾಣಿಕವಾಗಿ ಪ್ರಯೋಗಿಸಿದೆ, ನಿದ್ದೆ ಬರಲಿಲ್ಲ, ಅದರ ಬದಲಿಗೆ ಮನೆಯ ಗೋಡೆಗಳೆಲ್ಲ ಎಣ್ಣೆ ಕಲೆ ಆಯಿತು ಅಷ್ಟೇ. ಅದೂ ಸಾಲದು ಎಂಬಂತೆ, ಒಮ್ಮೆ ರಾತ್ರೆ ತಲೆಯ ಮೇಲೆ ಇರುವೆಗಳು ಧಾಳಿ ಮಾಡಬೇಕೆ?
ಈ ಹಾಳು ನಿದ್ರೆ ಬೇಡದ ಸಮಯದಲ್ಲಿ ಚೆನ್ನಾಗಿ ಬರುತ್ತದೆ! ಮ್ಯಾನೇಜರ್ ಜೊತೆ ಮೀಟಿಂಗ್ ನಲ್ಲಿ ಇದ್ರೆ ಪೂರ ಆಕಳಿಕೆ ಹಾಗು ತೂಕಡಿಕೆ, ಒಂದು ಮಾತು ಕೂಡ ಮೆದುಳು ತಲುಪೋಲ್ಲ, ಅದೇ ರಾತ್ರೆ ಹಾಸಿಗೇಲಿ ಉರುಳಾಡಿದರು ನಿದ್ರೆಯ ಸುಳಿವಿರೋಲ್ಲ. ಮ್ಯಾನೇಜರ್ ಮಾತಿಗೂ ನಿದ್ರೆಗೂ ಸಂಬಂದವೆನಾದ್ರು ಇರಬಹುದೇ ಅಂತ ಅಂದುಕೊಂಡು ಮೊನ್ನೆ ಸೋಮವಾರ ಮೊಬೈಲ್ ನಲ್ಲಿ ಅವರ ಎಲ್ಲಾ ಮಾತನ್ನು ರೆಕಾರ್ಡ್ ಮಾಡಿಬಿಟ್ಟೆ, ಮನೆಗೆ ಬಂದು ಹಾಕಿ ಕುಳಿತೆ. ಚೆನ್ನಾಗಿ ಎಚ್ಚರ ಇದ್ದಿದ್ದಕ್ಕೋ ಏನೋ ಅವರ ಮಾತಿಗೆ ತರೇವಾರಿ ಅರ್ಥ ಹೊಳೆಯ ತೊಡಗಿದವು. ಪೆರ್ಫಾರ್ಮನ್ಸ್ ಇಲ್ಲದವರನ್ನು ಓಡಿಸಿಬಿಡುವೆ ಎಂದು ಗರ್ಜಿಸಿದ್ದು ಕೇಳಿ ತೀರ ಗಲಿಬಿಲಿ ಆಯಿತು. ಕೇಳಬಾರದ ಹೊತ್ತಲ್ಲಿ ಕೇಳಬಾರದನ್ನು ಕೇಳಿದ್ದಕ್ಕೆ ಮುಂದಿನ ೪ ದಿನ ನಿದ್ರೆ ಖತಂ.
ಕೊನೆಗೆ ನನ್ನ ಆಪ್ತ ಮಿತ್ರ ವರುಣ ನ ಸಹಾಯ ಕೇಳೋಣ ಅಂತ ತೀರ್ಮಾನಿಸಿದೆ. (ಮೂರು ಗೊತ್ತು ನಿದ್ದೆ ಮಾಡುವ ಅವನು ಆಪ್ತ ಶತ್ರು ಕೂಡ ಹೌದು) ಒಮ್ಮೆ ನಿದ್ದೆ ಮಾದುತ್ತಿದ್ದವನನ್ನ ಬಡಿದೆಬ್ಬಿಸಿ "ನಿನ್ನ ಗಾಢ ನಿದ್ದೆಗೆ ಕಾರಣವೇನು? ನವರತ್ನ ತೈಲವೇ ಎಂದು ಕೇಳಿದೆ?"
ಅದಕ್ಕವನು ಹಾಗೇನು ಇಲ್ಲ, ನಂಗು ಮೊದಲು ನಿನ್ ತರಾನೆ ನಿದ್ದೆ ಬರುತ್ತಾ ಇರಲಿಲ್ಲ, ಆಮೇಲೆ ಸ್ವಲ್ಪ ಲೋಜಿಕಲ್ ಆಗಿ ಚಿಂತಿಸಿ ಪರಿಹಾರ ಕಂಡು ಕೊಂಡೆ ಎಂದ.
ನಾನೂ ಅ ಪರಿಹಾರ ಮಾರ್ಗವನ್ನು ನನಗೂ ಭೋದಿಸಿ ಕೃತಾರ್ಥನಾಗು ಎಂದು ಬೇಡಿದೆ.
ಆಗ ಅವನು ಉಪದೇಶಾಮೃತ ಶುರು ಮಾಡಿದ. " ನೋಡು ಕಲಿಯುಗದ ನಿದ್ರೆಯ ಅಧಿದೇವತೆ ಯಾರು? ನಮ್ಮ ಮಾಜಿ ಪ್ರಧಾನಿಗಳು ಅಲ್ಲವೇ? ಅವರಿಗೆ ಎಲ್ಲರು ಬಾಯಿಗೆ ಬಂದಂತೆ ಬೈಯುತ್ತಾ ಇದ್ದರು, ನಾನು ಕೂಡ ದ್ವೇಷಿಸ್ತಾ ಇದ್ದೆ. ಆದ್ರೆ ಮಂತ್ರ ತಂತ್ರ ಪ್ರಚಂಡ ಮಾಜಿ ಪ್ರಧಾನಿಗಳು ತಮ್ಮ ಸುಖ ನಿದ್ದೆಯ ಮೇಲೆ ಕಣ್ಣು ಹಾಕಿರುವರಿಗೆ ನಿದ್ರಾ ಹೀನತೆ ಆಗಲೆಂದು ಕೇರಳದ ಮಾಂತ್ರಿಕರಲ್ಲಿ, ಕೊಪ್ಪ ದ ಬಾಲಗೋಪಾಲ ಜೋಯಿಸರಲ್ಲಿ ಮಾಟ ಮಾಡಿಸಿದ್ದಾರೆ ಅಂತ ಒಮ್ಮೆ ತಿಳಿಯಿತು, ಕೂಡಲೇ ಅವರ ಪಕ್ಷಕ್ಕೆ ಜೈ ಹೇಳಿದೆ, ಆಮೇಲಿ೦ದ ಕಣ್ಣು ಮುಚ್ಸಿದಾಗೆಲ್ಲ ನಿದ್ದೆ!!
ನಂಗು ಕೂಡ ಹೌದಲ್ವ ಅಂತ ಅನ್ನಿಸಿತು. ಕೂಡಲೇ ಅವರ ಪಕ್ಷಕ್ಕೆ ಒಂದಿಷ್ಟು ಘೋಷಣೆ ಕೂಗಿ ಮಲಗಿದೆ. ಏನು ಆಶ್ಚರ್ಯ ಅಂತಿರಿ, ಒಮ್ಮೆಲೇ ಗಾಢ ನಿದ್ದೆ ಆವರಿಸಿತು. ನಿದ್ರೆ ಬಂತು ಆದ್ರೆ ಸಮಸ್ಯೆ ಪರಿಹಾರ ಆಗಿಲ್ಲ, ಯಾಕೆ ಅಂತಿರ? ಗಾಢ ನಿದ್ರೆ ಲಿ ಬರಿ ರಾಧಿಕೆ ಕನಸು ಬೀಳೋಕೆ ಶುರು ಆಯಿತು! ಕೂಡಲೇ ಅವರ ಪಕ್ಷ ಬಿಟ್ಟೆ, ಹಾಗೆ ಇದ್ದಿದ್ರೆ ನಾನು ಮತ್ತೊಬ್ಬ ನಿತ್ಯಾನಂದ ಆಗ್ತಾ ಇದ್ದೇನೋ ಏನೋ..
ಇಂತಿಪ್ಪ ನನಗೆ ಸಹಾಯಕ್ಕೆ ಬಂದವರು ಹಿತೈಷಿಗಳಾದ ಶ್ರೀಯುತ ಪರಾ೦ಜಪೆ ಅವರು. ಮಲಗುವ ಮುನ್ನ ಓದಬೇಕು, ೪-೮ ಪುಟಗಳಷ್ಟು ಅಧ್ಯಯನ ಮಾಡಿದರೆ ಮನಸ್ಸು ಉಲ್ಲಸಿತಗೊಂದು ಅಧ್ಬುತ ನಿದ್ರೆ ಬರುವುದು ಎಂದು ಹೇಳಿದರು, ಹಿಂದೆ ಕಾಲೇಜಿನಲ್ಲಿ ಓದುತ್ತಾ ಇರಬೇಕಾದರೆ ಪುಸ್ತಕ ಕಂಡೊಡನೆ ನಿದ್ದೆ ಬರುತ್ತಿದ್ದರಿಂದ ನನಗು ಅವರ ಮಾತು ವೇದ ವಾಕ್ಯ ದಂತೆ ತೋರಿತು. ಅಂದೇ ಸಪ್ನಾ ಗೆ ನುಗ್ಗಿ ಚಿತ್ತಾಲರ ಮತ್ತೆ ಕಾರ್ನಾಡರ ಕಾದಂಬರಿ ಗಳನ್ನು ತಂದೂ ಬಿಟ್ಟೆ. ಹಾಸಿಗೆಯಲ್ಲಿ ಪವಡಿಸಿಕೊಂಡು ಭಾರತಿಪುರ ಓದಲು ಶುರು ಮಾಡಿದೆ. ಅದೊಂದು ಅಧ್ಬುತ ಕಾದಂಬರಿ, ಸಮಯ ಹೋದದ್ದು, ಪುಟಗಳು ತಿರುವಿದ್ದು ಗೊತ್ತೇ ಆಗಲಿಲ್ಲ, ಕೊನೆಗೆ ಪೇಜ್ ಬಂದಾಗ ಸಮಯ ನೋಡಿದರೆ ಬೆಳಗಿನ ಜಾವ ೫ ಗಂಟೆ! ನಂತರ ಆಫೀಸ್ ನಲ್ಲಿ ಪೂರ ಅಮಲು ಗಣ್ಣು. ಆಗಲೇ ಅನ್ನಿಸಿದ್ದು ಪರಾ೦ಜಪೆ ಅವರಿಗೆ ನನ್ನ ಮೇಲೆ ದ್ವೇಷ ಏನಾದ್ರೂ ಇದೆಯೇ? ನಾನು ಆಫೀಸ್ ನಲ್ಲಿ ನಿದ್ದೆ ಮಾಡಿ ಕೆಲಸ ಕಳೆದು ಕೊಳ್ಳಬೇಕು ಅಂತ ಏನಾದ್ರು ಉಪಾಯ ಮಾಡಿದ್ದರೋ ಅನ್ನುವ ಗುಮಾನಿಯೂ ಕಾಡಿತು. ಒಳ್ಳೆಯ ಕಾದಂಬರಿ ಓದುತ್ತಾ ಇದ್ದರೆ ಯಾರಿಗೆ ತಾನೇ ನಿದ್ದೆ ಬರುತ್ತೆ? ನಿದ್ದೆ ಬರೋಕೆ ಅದರಲ್ಲೇನು ಸೈನ್ ತೀಠ, ಕಾಸ್ ತೀಠ ಅಥವಾ ಫಿಸಿಕ್ಸ್ ನಿಯಮಗಳು ಯಾವುದು ಇರುವುದಿಲ್ಲವಲ್ಲ. ಆದರೆ ಏನು ಮಾಡುವುದು ಇದನ್ನು ಅವರಿಗೆ ಹೇಳಲಾಗುತ್ತದ?
ಅದಕ್ಕೆ ತೀರ್ಮನಿಸಿಯೇ ಬಿಟ್ಟೆ ನಾನೇ ಒಂದು ಕಾದಂಬರಿ ಬರೆದು ಬಿಡುವುದು ಅಂತ! ಅದನ್ನು ಓದ ತೊಡಗಿದರೆ ಎಂತಾ ಕಮಂಗಿ ಗು ಕೂಡ ನಿದ್ದೆ ಬರಬೇಕು, ಕುಂಬ ಕರ್ಣನ ಹಾಗೆ ನಿದ್ದೆ ಹೊಡಿಬೇಕು, ಅದು ಬಾಸ್ ನ ಮಾತಿಗಿಂತಲೂ ವಿಪರೀತ ಬೋರು ಇರಬೇಕು, ಅದೇ ಹೆಂಡತಿ / ಗಂಡ ನ ಮುಖ ನೋಡಿದಷ್ಟು ಬೇಜಾರಾಗಿ, ಬೋರಲು ಬಿದ್ದು ನಿದ್ದೆ ಮಾಡುವ ಹಾಗೆ ಇರಬೇಕೆಂದು ತೀರ್ಮಾನಿಸಿದೆ.
ನಿದ್ದೆ ಬಾರದ ರಾತ್ರೆಗಳಲ್ಲಿ ಬರೆಯಲು ಶುರು ಕೂಡ ಮಾಡಿದೆ, ಹಲವು ದಿನಗಳ ಪರಿಶ್ರಮ ದ ನಂತರ ಹಸ್ತ ಪ್ರತಿ ಸಿದ್ದವಾಯಿತು. ನನ್ನ ಹೊಸ ಸಾಹಸದ ಬಗ್ಗೆ ಸ್ನೇಹಿತರು ಬಹಳ ಮೆಚ್ಚುಗೆ ವ್ಯಕ್ತ ಪಡಿಸಿದರು. (ಅವರಾರು ಇನ್ನು ಓದಿಲ್ಲ, ಆದ್ರೆ ಅದು ಬೇರೆ ವಿಷ್ಯ ಬಿಡಿ) ಸುದ್ದಿ ತಿಳಿದ ಕೆಲವು ಡಾಕ್ಟರಗಳು ಇದೊಂದು ಅಧ್ಬುತ ಸಂಶೋದನೆ ಅಂತ ಹೇಳಿದರು. ಅದನ್ನು ಮುದ್ರಿಸಿ ಭಾರಿ ಲಾಭ ಮಾಡುವುದರ ಜೊತೆ ಜನೋಪಯೋಗಿ ಕೆಲಸ ವಾಗುವುದೆಂದು ಹೇಳಿದರು.
ಸರಿ ಇಷ್ಟೆಲ್ಲಾ ಹೇಳ್ತಾ ಇದ್ದೀಯ ಪುಸ್ತಕ ಯಾವಾಗ ಅಂತ ಕೇಳಿದ್ರ, ಅದೇ ಆಗಿರೋದು ಸ್ವಾಮೀ ಸಮಸ್ಯೆ ಓದಲು ಹಸ್ತ ಪ್ರತಿ ತೆಗೆದು ಕೊಂದು ಹೋದ ಒಬ್ಬ ಮುದ್ರಕ ೪ ಪುಟ ಓದಿ ಮಲಗಿದವ ಇನ್ನು ಎದ್ದಿಲ್ಲ!!
Subscribe to:
Posts (Atom)