Saturday, March 13, 2010

ನಿದ್ದೆ ಬಾರದ ರಾತ್ರಿಗಳು


ನೀವು ಏನೇ ಹೇಳಿ, ನಂಗೆ ರಾತ್ರೆ ಭರಪೂರ ನಿದ್ರೆ ಮಾಡೋರನ್ನ ಕಂಡ್ರೆ ವಿಪರೀತ ಹೊಟ್ಟೆ ಉರಿಯುತ್ತೆ, ಅದರಲ್ಲೂ ಮಲಗಿದ ಕೂಡಲೇ ಗೊರಕೆ ಹೊಡಿಲಿಕ್ಕೆ ಶುರು ಮಾಡ್ತಾರಲ್ಲ ಅವರನ್ನು ಕಂಡ್ರೆ ಹೊಟ್ಟೆಲಿ ಜೀರಿಗೆ ಮೆಣಸು ಕುಟ್ಟಿದ ಹಾಗೆ ಅನ್ಸುತ್ತೆ. ಇದಕ್ಕೆ ಕಾರಣ ಇಷ್ಟೇ, ನಂಗೆ ಇತ್ತೀಚಿಗೆ ನಿದ್ದೆ ಕಡಿಮೆ ಆಗಿದೆ, ಮಧ್ಯರಾತ್ರೆ ಏನಾದ್ರು ಎಚ್ಚರ ಆದ್ರೆ ನನ್ನ ಕಷ್ಟ ಯಾರಿಗೂ ಬೇಡ.


ನನ್ನ ಸಮಸ್ಯೆಗೆ ಅಮ್ಮ ಪರಿಹಾರ ಸೂಚಿಸಿದಳು, ತಲೆಗೆ ಚೆನ್ನಾಗಿ ಎಣ್ಣೆ ಹಾಕಿಕೋ, ಹರಳೆಣ್ಣೆ ಬಿಸಿ ಮಾಡಿ ತಲೆಗೆ ಹೊಯ್ಕೋ, ನೆಲ್ಲಿ - ಕೊಬ್ಬರಿ ಎಣ್ಣೆ ಊರಿಂದ ಕಳಿಸಿ ಉಪಯೋಗಿಸು ಅಂತೆಲ್ಲಾ ಸಲಹೆ ಬಂತು, ನಾನು ಕೂಡ ಪ್ರಾಮಾಣಿಕವಾಗಿ ಪ್ರಯೋಗಿಸಿದೆ, ನಿದ್ದೆ ಬರಲಿಲ್ಲ, ಅದರ ಬದಲಿಗೆ ಮನೆಯ ಗೋಡೆಗಳೆಲ್ಲ ಎಣ್ಣೆ ಕಲೆ ಆಯಿತು ಅಷ್ಟೇ. ಅದೂ ಸಾಲದು ಎಂಬಂತೆ, ಒಮ್ಮೆ ರಾತ್ರೆ ತಲೆಯ ಮೇಲೆ ಇರುವೆಗಳು ಧಾಳಿ ಮಾಡಬೇಕೆ?


ಈ ಹಾಳು ನಿದ್ರೆ ಬೇಡದ ಸಮಯದಲ್ಲಿ ಚೆನ್ನಾಗಿ ಬರುತ್ತದೆ! ಮ್ಯಾನೇಜರ್ ಜೊತೆ ಮೀಟಿಂಗ್ ನಲ್ಲಿ ಇದ್ರೆ ಪೂರ ಆಕಳಿಕೆ ಹಾಗು ತೂಕಡಿಕೆ, ಒಂದು ಮಾತು ಕೂಡ ಮೆದುಳು ತಲುಪೋಲ್ಲ, ಅದೇ ರಾತ್ರೆ ಹಾಸಿಗೇಲಿ ಉರುಳಾಡಿದರು ನಿದ್ರೆಯ ಸುಳಿವಿರೋಲ್ಲ. ಮ್ಯಾನೇಜರ್ ಮಾತಿಗೂ ನಿದ್ರೆಗೂ ಸಂಬಂದವೆನಾದ್ರು ಇರಬಹುದೇ ಅಂತ ಅಂದುಕೊಂಡು ಮೊನ್ನೆ ಸೋಮವಾರ ಮೊಬೈಲ್ ನಲ್ಲಿ ಅವರ ಎಲ್ಲಾ ಮಾತನ್ನು ರೆಕಾರ್ಡ್ ಮಾಡಿಬಿಟ್ಟೆ, ಮನೆಗೆ ಬಂದು ಹಾಕಿ ಕುಳಿತೆ. ಚೆನ್ನಾಗಿ ಎಚ್ಚರ ಇದ್ದಿದ್ದಕ್ಕೋ ಏನೋ ಅವರ ಮಾತಿಗೆ ತರೇವಾರಿ ಅರ್ಥ ಹೊಳೆಯ ತೊಡಗಿದವು. ಪೆರ್ಫಾರ್ಮನ್ಸ್ ಇಲ್ಲದವರನ್ನು ಓಡಿಸಿಬಿಡುವೆ ಎಂದು ಗರ್ಜಿಸಿದ್ದು ಕೇಳಿ ತೀರ ಗಲಿಬಿಲಿ ಆಯಿತು. ಕೇಳಬಾರದ ಹೊತ್ತಲ್ಲಿ ಕೇಳಬಾರದನ್ನು ಕೇಳಿದ್ದಕ್ಕೆ ಮುಂದಿನ ೪ ದಿನ ನಿದ್ರೆ ಖತಂ.



ಕೊನೆಗೆ ನನ್ನ ಆಪ್ತ ಮಿತ್ರ ವರುಣ ನ ಸಹಾಯ ಕೇಳೋಣ ಅಂತ ತೀರ್ಮಾನಿಸಿದೆ. (ಮೂರು ಗೊತ್ತು ನಿದ್ದೆ ಮಾಡುವ ಅವನು ಆಪ್ತ ಶತ್ರು ಕೂಡ ಹೌದು) ಒಮ್ಮೆ ನಿದ್ದೆ ಮಾದುತ್ತಿದ್ದವನನ್ನ ಬಡಿದೆಬ್ಬಿಸಿ "ನಿನ್ನ ಗಾಢ ನಿದ್ದೆಗೆ ಕಾರಣವೇನು? ನವರತ್ನ ತೈಲವೇ ಎಂದು ಕೇಳಿದೆ?"

ಅದಕ್ಕವನು ಹಾಗೇನು ಇಲ್ಲ, ನಂಗು ಮೊದಲು ನಿನ್ ತರಾನೆ ನಿದ್ದೆ ಬರುತ್ತಾ ಇರಲಿಲ್ಲ, ಆಮೇಲೆ ಸ್ವಲ್ಪ ಲೋಜಿಕಲ್ ಆಗಿ ಚಿಂತಿಸಿ ಪರಿಹಾರ ಕಂಡು ಕೊಂಡೆ ಎಂದ.

ನಾನೂ ಅ ಪರಿಹಾರ ಮಾರ್ಗವನ್ನು ನನಗೂ ಭೋದಿಸಿ ಕೃತಾರ್ಥನಾಗು ಎಂದು ಬೇಡಿದೆ.

ಆಗ ಅವನು ಉಪದೇಶಾಮೃತ ಶುರು ಮಾಡಿದ. " ನೋಡು ಕಲಿಯುಗದ ನಿದ್ರೆಯ ಅಧಿದೇವತೆ ಯಾರು? ನಮ್ಮ ಮಾಜಿ ಪ್ರಧಾನಿಗಳು ಅಲ್ಲವೇ? ಅವರಿಗೆ ಎಲ್ಲರು ಬಾಯಿಗೆ ಬಂದಂತೆ ಬೈಯುತ್ತಾ ಇದ್ದರು, ನಾನು ಕೂಡ ದ್ವೇಷಿಸ್ತಾ ಇದ್ದೆ. ಆದ್ರೆ ಮಂತ್ರ ತಂತ್ರ ಪ್ರಚಂಡ ಮಾಜಿ ಪ್ರಧಾನಿಗಳು ತಮ್ಮ ಸುಖ ನಿದ್ದೆಯ ಮೇಲೆ ಕಣ್ಣು ಹಾಕಿರುವರಿಗೆ ನಿದ್ರಾ ಹೀನತೆ ಆಗಲೆಂದು ಕೇರಳದ ಮಾಂತ್ರಿಕರಲ್ಲಿ, ಕೊಪ್ಪ ದ ಬಾಲಗೋಪಾಲ ಜೋಯಿಸರಲ್ಲಿ ಮಾಟ ಮಾಡಿಸಿದ್ದಾರೆ ಅಂತ ಒಮ್ಮೆ ತಿಳಿಯಿತು, ಕೂಡಲೇ ಅವರ ಪಕ್ಷಕ್ಕೆ ಜೈ ಹೇಳಿದೆ, ಆಮೇಲಿ೦ದ ಕಣ್ಣು ಮುಚ್ಸಿದಾಗೆಲ್ಲ ನಿದ್ದೆ!!

ನಂಗು ಕೂಡ ಹೌದಲ್ವ ಅಂತ ಅನ್ನಿಸಿತು. ಕೂಡಲೇ ಅವರ ಪಕ್ಷಕ್ಕೆ ಒಂದಿಷ್ಟು ಘೋಷಣೆ ಕೂಗಿ ಮಲಗಿದೆ. ಏನು ಆಶ್ಚರ್ಯ ಅಂತಿರಿ, ಒಮ್ಮೆಲೇ ಗಾಢ ನಿದ್ದೆ ಆವರಿಸಿತು. ನಿದ್ರೆ ಬಂತು ಆದ್ರೆ ಸಮಸ್ಯೆ ಪರಿಹಾರ ಆಗಿಲ್ಲ, ಯಾಕೆ ಅಂತಿರ? ಗಾಢ ನಿದ್ರೆ ಲಿ ಬರಿ ರಾಧಿಕೆ ಕನಸು ಬೀಳೋಕೆ ಶುರು ಆಯಿತು! ಕೂಡಲೇ ಅವರ ಪಕ್ಷ ಬಿಟ್ಟೆ, ಹಾಗೆ ಇದ್ದಿದ್ರೆ ನಾನು ಮತ್ತೊಬ್ಬ ನಿತ್ಯಾನಂದ ಆಗ್ತಾ ಇದ್ದೇನೋ ಏನೋ..


ಇಂತಿಪ್ಪ ನನಗೆ ಸಹಾಯಕ್ಕೆ ಬಂದವರು ಹಿತೈಷಿಗಳಾದ ಶ್ರೀಯುತ ಪರಾ೦ಜಪೆ ಅವರು. ಮಲಗುವ ಮುನ್ನ ಓದಬೇಕು, ೪-೮ ಪುಟಗಳಷ್ಟು ಅಧ್ಯಯನ ಮಾಡಿದರೆ ಮನಸ್ಸು ಉಲ್ಲಸಿತಗೊಂದು ಅಧ್ಬುತ ನಿದ್ರೆ ಬರುವುದು ಎಂದು ಹೇಳಿದರು, ಹಿಂದೆ ಕಾಲೇಜಿನಲ್ಲಿ ಓದುತ್ತಾ ಇರಬೇಕಾದರೆ ಪುಸ್ತಕ ಕಂಡೊಡನೆ ನಿದ್ದೆ ಬರುತ್ತಿದ್ದರಿಂದ ನನಗು ಅವರ ಮಾತು ವೇದ ವಾಕ್ಯ ದಂತೆ ತೋರಿತು. ಅಂದೇ ಸಪ್ನಾ ಗೆ ನುಗ್ಗಿ ಚಿತ್ತಾಲರ ಮತ್ತೆ ಕಾರ್ನಾಡರ ಕಾದಂಬರಿ ಗಳನ್ನು ತಂದೂ ಬಿಟ್ಟೆ. ಹಾಸಿಗೆಯಲ್ಲಿ ಪವಡಿಸಿಕೊಂಡು ಭಾರತಿಪುರ ಓದಲು ಶುರು ಮಾಡಿದೆ. ಅದೊಂದು ಅಧ್ಬುತ ಕಾದಂಬರಿ, ಸಮಯ ಹೋದದ್ದು, ಪುಟಗಳು ತಿರುವಿದ್ದು ಗೊತ್ತೇ ಆಗಲಿಲ್ಲ, ಕೊನೆಗೆ ಪೇಜ್ ಬಂದಾಗ ಸಮಯ ನೋಡಿದರೆ ಬೆಳಗಿನ ಜಾವ ೫ ಗಂಟೆ! ನಂತರ ಆಫೀಸ್ ನಲ್ಲಿ ಪೂರ ಅಮಲು ಗಣ್ಣು. ಆಗಲೇ ಅನ್ನಿಸಿದ್ದು ಪರಾ೦ಜಪೆ ಅವರಿಗೆ ನನ್ನ ಮೇಲೆ ದ್ವೇಷ ಏನಾದ್ರೂ ಇದೆಯೇ? ನಾನು ಆಫೀಸ್ ನಲ್ಲಿ ನಿದ್ದೆ ಮಾಡಿ ಕೆಲಸ ಕಳೆದು ಕೊಳ್ಳಬೇಕು ಅಂತ ಏನಾದ್ರು ಉಪಾಯ ಮಾಡಿದ್ದರೋ ಅನ್ನುವ ಗುಮಾನಿಯೂ ಕಾಡಿತು. ಒಳ್ಳೆಯ ಕಾದಂಬರಿ ಓದುತ್ತಾ ಇದ್ದರೆ ಯಾರಿಗೆ ತಾನೇ ನಿದ್ದೆ ಬರುತ್ತೆ? ನಿದ್ದೆ ಬರೋಕೆ ಅದರಲ್ಲೇನು ಸೈನ್ ತೀಠ, ಕಾಸ್ ತೀಠ ಅಥವಾ ಫಿಸಿಕ್ಸ್ ನಿಯಮಗಳು ಯಾವುದು ಇರುವುದಿಲ್ಲವಲ್ಲ. ಆದರೆ ಏನು ಮಾಡುವುದು ಇದನ್ನು ಅವರಿಗೆ ಹೇಳಲಾಗುತ್ತದ?



ಅದಕ್ಕೆ ತೀರ್ಮನಿಸಿಯೇ ಬಿಟ್ಟೆ ನಾನೇ ಒಂದು ಕಾದಂಬರಿ ಬರೆದು ಬಿಡುವುದು ಅಂತ! ಅದನ್ನು ಓದ ತೊಡಗಿದರೆ ಎಂತಾ ಕಮಂಗಿ ಗು ಕೂಡ ನಿದ್ದೆ ಬರಬೇಕು, ಕುಂಬ ಕರ್ಣನ ಹಾಗೆ ನಿದ್ದೆ ಹೊಡಿಬೇಕು, ಅದು ಬಾಸ್ ನ ಮಾತಿಗಿಂತಲೂ ವಿಪರೀತ ಬೋರು ಇರಬೇಕು, ಅದೇ ಹೆಂಡತಿ / ಗಂಡ ನ ಮುಖ ನೋಡಿದಷ್ಟು ಬೇಜಾರಾಗಿ, ಬೋರಲು ಬಿದ್ದು ನಿದ್ದೆ ಮಾಡುವ ಹಾಗೆ ಇರಬೇಕೆಂದು ತೀರ್ಮಾನಿಸಿದೆ.


ನಿದ್ದೆ ಬಾರದ ರಾತ್ರೆಗಳಲ್ಲಿ ಬರೆಯಲು ಶುರು ಕೂಡ ಮಾಡಿದೆ, ಹಲವು ದಿನಗಳ ಪರಿಶ್ರಮ ದ ನಂತರ ಹಸ್ತ ಪ್ರತಿ ಸಿದ್ದವಾಯಿತು. ನನ್ನ ಹೊಸ ಸಾಹಸದ ಬಗ್ಗೆ ಸ್ನೇಹಿತರು ಬಹಳ ಮೆಚ್ಚುಗೆ ವ್ಯಕ್ತ ಪಡಿಸಿದರು. (ಅವರಾರು ಇನ್ನು ಓದಿಲ್ಲ, ಆದ್ರೆ ಅದು ಬೇರೆ ವಿಷ್ಯ ಬಿಡಿ) ಸುದ್ದಿ ತಿಳಿದ ಕೆಲವು ಡಾಕ್ಟರಗಳು ಇದೊಂದು ಅಧ್ಬುತ ಸಂಶೋದನೆ ಅಂತ ಹೇಳಿದರು. ಅದನ್ನು ಮುದ್ರಿಸಿ ಭಾರಿ ಲಾಭ ಮಾಡುವುದರ ಜೊತೆ ಜನೋಪಯೋಗಿ ಕೆಲಸ ವಾಗುವುದೆಂದು ಹೇಳಿದರು.


ಸರಿ ಇಷ್ಟೆಲ್ಲಾ ಹೇಳ್ತಾ ಇದ್ದೀಯ ಪುಸ್ತಕ ಯಾವಾಗ ಅಂತ ಕೇಳಿದ್ರ, ಅದೇ ಆಗಿರೋದು ಸ್ವಾಮೀ ಸಮಸ್ಯೆ ಓದಲು ಹಸ್ತ ಪ್ರತಿ ತೆಗೆದು ಕೊಂದು ಹೋದ ಒಬ್ಬ ಮುದ್ರಕ ೪ ಪುಟ ಓದಿ ಮಲಗಿದವ ಇನ್ನು ಎದ್ದಿಲ್ಲ!!


20 comments:

ಮನಸು said...

ಹಹಹ ಸೂಪರ್ ಆಗಿದೆ ಒಳ್ಳೆ ಕಾನ್ಸೆಪ್ಟ್ ಪ್ರಯೋಗ ಮಾಡಿದ್ದೀರಿ.... ಆ ಪುಸ್ತಕ ಬಿಡುಗಡೆ ಆದಮೇಲೆ ಹೇಳಿ ನಿದ್ರೆ ಬಾರದವರು ಓದಿ ನಿದ್ರೆ ಮಾಡಲಿ.

ಮುದ್ರಕ ೪ ಪುಟ ಓದಿಯೇ ಹಾಗೆ ಮಲಗಿದರೆ ಇನ್ನು ಪೂರ್ತಿ ಪುಸ್ತಕ ಓದಿದವರ ಕಥೆ ಏನು ಹೇಳಿ.

ತುಂಬಾ ಚೆನ್ನಾಗಿದೆ ನಗುವನ್ನು ತುಂಬಿ ನಗೆಯ ಚೆಲ್ಲಿದೆ.
ಧನ್ಯವಾದಗಳು

Admin said...

small mistake.... ಎಣ್ಣೆ ತಲೆಗಲ್ಲ , ಹೊಟ್ಟೆಗೆ ಹಾಕ್ಕೊಬೇಕಿತ್ತು.

ಸವಿಗನಸು said...

super aagidhe...

ಯುಗಾದಿ ಹಬ್ಬದ ಶುಭಾಶಯಗಳು...

PARAANJAPE K.N. said...

ಬಾಲೂ
ನಿಮ್ಮ ನಿದ್ದೆ ಬಾರದ ರಾತ್ರಿ ಗಳ ಪ್ರಸ೦ಗ ಚೆನ್ನಾಗಿದೆ. ಹೌದು ನಿಮ್ಮ ಓದುಗರೊಬ್ಬರು ಅ೦ದ೦ತೆ ತಲೆಗಲ್ಲದೆ ಹೊಟ್ಟೆಗೂ ಎಣ್ಣೆ ಹಾಕಿದ್ದರೆ ನಿದ್ದೆ ಬರುತ್ತಿತ್ತೋ ಏನೋ ಗೊತ್ತಿಲ್ಲ, ಆದರೆ ನಾನು ಕೊಟ್ಟ ಸಲಹೆಯನ್ನು ನೀವು ತಪ್ಪಾಗಿ ಅರ್ಥೈಸಿ ನಿದ್ರಾ-ವ೦ಚಿತ ರಾಗಿದ್ದೀರಿ. ಅದಕ್ಕೆ ನಾನು ಹೊಣೆಯಲ್ಲ, ನಾನು ಓದಲು ಹೇಳಿದ್ದೆ ಬೇರೆ, ನೀವು ಓದಿದ್ದೆ ಬೇರೆ. ಓಕೆ. ನಿಮ್ಮ ನಿರ್ನಿದ್ದೆಯ ಒದ್ದಾಟಗಳಿಗೆ ಒ೦ದು ಮದ್ದು ಇದೆ. ಖುದ್ದು ಸಿಕ್ಕರೆ ಹೇಳುವೆ. ಅದು ಸ್ವಲ್ಪ ದುಬಾರಿ ಅಷ್ಟೇ.

Aravinda B N said...

ತುಂಬಾ ಚೆನ್ನಾಗಿದೆ. ನಾನು ಈ ವಿಚಾರದಲ್ಲಿ ನಿಮ್ಮ ಪರಮ ಮಿತ್ರ ಕೂಡ ಹೌದು. ಯಾಕೆಂದರೆ ನನ್ನದೂ ನಿಮ್ಮದೇ ಸಮಸ್ಯೆ. ಆದರೆ ನಿಮ್ಮ ತರಹದ ಘನ ಪರಿಹಾರ ನನ್ನ ತಲೆಗೆ ಹೊಳೆಯಲಿಲ್ಲ. :)
ಧನ್ಯವಾದಗಳು

Sushrutha Dodderi said...

:D sooooper!

Ramya said...

HE he He He :) good one ...

Keep writing but not like the ones written in one of those Nidde barada ratrigallu :)

Gowtham said...

ನಿದ್ದೆ ಬಾರದೆ ಇರುವುದಕ್ಕೆ acidity ಕೂಡ ಕಾರಣ ಆಗಬಹುದು! :-)

ಚುಕ್ಕಿಚಿತ್ತಾರ said...

:):):)

shivu.k said...

ಬಾಲು ಸರ್,

ನಿದ್ರೆಯ ಬಗ್ಗೆ ಒಂದು ಅದ್ಬುತ ಸಂಶೋಧನೆ ಮಾಡಿದ್ದೀರಿ. ಆದ್ರೂ ಪರಿಹಾರ ಸಿಕ್ಕಿಲ್ಲವೆನ್ನುವುದು ನಿಮ್ಮ ಲೇಖನದ ಕೊನೆಯಲ್ಲಿ ಗೊತ್ತಾಯಿತು. ನನ್ನದೊಂದು ಸಲಹೆ. ನಿಮಗೆ ನಿದ್ರೆ ಬರಬೇಕಾದರೆ ನನ್ನ "ವೆಂಡರ್ ಕಣ್ಣು ಓದಿ" ನಿದ್ರೆ ಮಾಡದೆ ಒಂದೇ ಉಸುರಿಗೆ ಓದಿ ಮುಗಿಸಿ ನನ್ನನ್ನು ಬೈದುಕೊಂಡರೆ ಹೊಗಳಿದಂತೆ. ಬೋರ್ ಆಗಿ ನಿದ್ರೆ ಬಂದುಬಿಟ್ಟರೆ ನಿಮ್ಮ ನಿದ್ರೆ ಸಮಸ್ಯೆಗೆ ಅಂತ್ಯ! ಏನಂತೀರಿ..

ಗೌತಮ್ ಹೆಗಡೆ said...

haha very funny

Rohini Joshi said...

Baraha odi nidde barlilla nagu bantu:D
chennaagide:)

Unknown said...

Hahahaha... Sooper saar...

ಮನಮುಕ್ತಾ said...

ಚೆನ್ನಾಗಿದೆ..ಅನಿದ್ರಾ ಪ್ರಸ೦ಗ.:)

Shashi jois said...

chennagide ri..

ಮನದಾಳದಿಂದ............ said...

ಹ್ಹ ಹ್ಹ ಹ್ಹಾ
ಒಳ್ಳೆ ನಿದ್ದೆ ಪುರಾಣ ಸ್ವಾಮೀ.
ಹ್ಞಾಂ, ಅಂದ ಹಾಗೆ ಇದನ್ನು ಓದುತ್ತಾ ಓದುತ್ತಾ ನನ್ನ ನಿದ್ದೇನೆ ಓಡಿಹೊಯ್ತು!!!!!!!!!!!!!!

nenapina sanchy inda said...

hahahaha too good!!
malathi S

ಸೀತಾರಾಮ. ಕೆ. / SITARAM.K said...

ಓದಿ ಓದಿ ನಕ್ಕೂನಕ್ಕು ನನ್ನ ನಿದ್ರೆ ಓಡಿಹೋಯಿತು. ಇದಕ್ಕೆ ನೀವೇ ಕಾರಣರು. ಬೇಗ ಹಸ್ತ ಪ್ರತಿ ತ೦ದು ಓದಿ ಹೇಳಿ!
ಅರುಣರೂ ಹೇಳಿದ್ದು ಸರಿ!!!

Suma Rao said...

oh... naanu idanna eega odtha iddini.. Supper....:)

Kiran Kumar said...

Good one Balu :)