Wednesday, November 14, 2012

ಪ್ರೆಮಂ ಮಧುರಂ



ಕಾಗದ ನಗರ 2000

ಸತ್ತಳು ಈಕೆ :
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?

ಅರರೆ.. ಬೀರುವಿನಲ್ಲಿ ಏನೋ ಹುಡುಕುತ್ತಿದ್ದಾಗ ಅಕಸ್ಮಾತ್ ಕೈಗೆ ಸಿಕ್ಕ ಕಾಗದದ ಚೂರು. ಅವ್ವ”!!! ವಿಶ್ವ ನ ಮನಸ್ಸು ದಶಕಗಳಷ್ಟು ಹಿಂದಕ್ಕೆ ಹೋಯಿತು.

ಅಂದು ಕಾಲೇಜಿನ ಬೇಲಿ ಹಾರುವಾಗ ವಿಶ್ವ ಮತ್ತೆ ಪಾರಿಯ ಪ್ಯಾಂಟು ಸ್ವಲ್ಪ ಹರಿಯಿತು! ಆದರೇನಂತೆ. ಆಗಲೂ ಹುಡುಗರ ಶೀಲಕ್ಕೆ ಅಷ್ಟು ಬೆಲೆ ಏನೂ ಇರಲಿಲ್ಲವಾದ್ದರಿಂದ ಹಂಗೆ ಕ್ಲಾಸ್ ಗೆ ಸೈನ್ಯ ನುಗ್ಗಿತು. ಬೆಳ್ಳಂ ಬೆಳಗ್ಗೆ ಕನ್ನಡ! ಪಾಪ ದೇವರಾಜ್ ಅವ್ವ ಶುರು ಮಾಡಿದರು. ಆದ್ರೆ ಸ್ವಲ್ಪ ಹೊತ್ತಿನಲ್ಲೇ ಪಾರಿ, ನೀವು ಪದ್ಯದ ಆಶಯ ಹಾಳು ಮಾಡುತ್ತಿದ್ದೀರಿ ಅಂತ ವರಾತ ತೆಗೆದ. ಇದ್ದಕಿದಂತೆ ಹುಡುಗಿಯರ ಗುಂಪಿನಿಂದ  ಅಂಬಿಕೆ ನಿನ್ನ ಆಲೋಚನೆ ಸರಿಯಿಲ್ಲ ಅಂತ ಎದ್ದು ನಿಂತಳು. (ಭಾಗಷ್ಯ ಪೂರ ಹೆಸರು ಅಂಬಿಕ, ಅಂಬಾಲಿಕ ಅಂತ ಏನೋ ಇದ್ದಿರಬಹುದು. ಹುಡುಗರಿಗೆ ಆಂಬಿ, ಅಂಬಿಕೆ ಆಗಿದ್ದಳು.) ಪಾರಿ ಅರ್ಥಾತ್ ಪಾರ್ಥ ಸಾರಥಿ ಹಂಗೆಲ್ಲ ಸೋಲು ಒಪ್ಪಿಕೊಳ್ಳುವವನೇ ಅಲ್ಲ. ಮಾತು ಮುಂದುವರಿಯಿತು, ಗೃಹಭಂಗ ದಿಂದ ಶುರು ಆಗಿ, ಮ್ಯಾಕ್ಸಿಂ ಗಾರ್ಕಿ ಯಾ ಮದರ್ ತನಕ ಹೋಯಿತು. ನೋಟ್ಸ್ ಮಾಡಿಕೊಳ್ಳುವ ನೆಪದಲ್ಲಿ ಚುಕ್ಕಿ ಆಡುತ್ತಿದ್ದ ಹುಡುಗಿಯರೆಲ್ಲ ಕತ್ತು ಎತ್ತಿ ನೋಡಲಾರಂಬಿಸಿದರು. ಮಿಕ್ಕ 8 ಜನ ಹುಡುಗರು ಪಾರಿ ಮಾತಿಗೆ ಡಿ ಟಿ ಎಸ್ ಎಫೆಕ್ಟ್ ಮೂಲಕ ಪಾರಿಗೆ ಬೆಂಬಲ ಸೂಚಿಸಿದರು.  (ಕ್ಲಾಸ್ ನಲ್ಲಿ ಇದ್ದಿದ್ದೆ 9 ಜನ ಹುಡುಗ್ರು) ಗಲಾಟೆ ಜಾಸ್ತಿ ಆಗಿ ಪಕ್ಕದ ಕ್ಲಾಸ್ ಗು ಕೇಳಿಸಿತು, ಪ್ರಿಸಿಪಾಲ್ ರಮೇಶ್ ಕಿವಿಗೂ ಬಡಿಯಿತು. ಯಾವಾಗಲು ಹೊಡೆದಾಟ ಬಡಿದಾಟ ಗಳಿಗೆ ಪ್ರಸಿದ್ದವಾದ ಭದ್ರಾವತಿಯಲ್ಲಿ, ಹುಡುಗರು ಪಾಠದ ಬಗ್ಗೆ ಚರ್ಚಿಸುವುದು ಕಂಡು ಕುಶಿ ಪಟ್ಟರು. ! ಆದ್ರೆ ದೇವರಾಜ್ ಮಾತ್ರ ಏನೂ ಮಾಡಲು ತೋಚದೆ ಗರ ಬಡಿದವರಂತೆ ನಿಂತಿದ್ದರು. ಕೊನೆಗೆ ಕವನ ಏನಾಯಿತೋ, ಪಾರಿ ಅಂಬಿ ಮಾತ್ರ ಒಳ್ಳೆ ದುಶ್ಮನ್ ಗಳು ಆದರು!

ಆದ್ರೆ ನಮ್ಮೂರಿನ ಲಕ್ಷ್ಮೀನರಸಿಂಹನ ದಯೇನೋ ಏನೋ, ಇದ್ದಕಿದ್ದಂತೆ ಒಂದು ದಿನ ಜನಪ್ರಿಯ ಶಾಸಕರು ನಾಪತ್ತೆ ಆಗಿದ್ದಾರೆ, ಕಿಡ್ನಾಪ್ ಆಗಿದ್ದಾರೆ ಅಂತೆಲ್ಲಾ ಗುಲ್ಲೆಬಿತು. ಕೂಡಲೇ ಶಾಲೆ ಕಾಲೇಜು ಮುಚ್ಚಲು ಆದೇಶ ಬಂತು. ನವಗ್ರಹಗಳೆಂದು ಹೆಸರುವಾಸಿಯಾಗಿದ್ದ!  ಹುಡುಗರಿಗೆ ಹುಡುಗಿಯರನ್ನು ಸುರಕ್ಷಿತವಾಗಿ ಮನೆ ತಲುಪಿಸಲು ಪ್ರಿನ್ಸಿಪಾಲ್ ಹೇಳಿದರು. ಬಸ್ಸು, ಆಟೋ ಏನೂ ಇಲ್ಲದ್ದರಿಂದ ನಡೆದೇ ಹೋಗಬೇಕಾಯಿತು. ದುರಂತಕ್ಕೆ ಪಾರಿಗೆ ಅಂಬಿಕಾ ಳನ್ನು ಮನೆಗೆ ತಲುಪಿಸುವ ಜವಾಬ್ದಾರಿ ನೀಡಲಾಯಿತು. (ಅವರಿಬ್ಬರಿಗೂ ಇಷ್ಟವಿರಲಿಲ್ಲ )

ಪ್ರಪಂಚ ಎಷ್ಟು ಬೇಗ ಬದಲಾಗುತ್ತೆ ಅಂತ ಕಾಲೇಜಿಗೆ ಪ್ರಾತ್ಯಕ್ಷಿಕವಾಗಿ ಗೊತ್ತಾಗಿದ್ದು, ಮಾರನೆದಿನ ಪಾರಿ ಆಂಬಿ ನ ಒಟ್ಟಿಗೆ ನೋಡಿದಾಗ. ಅವನಂತ ಬ್ರಹ್ಮಚಾರಿ ಜೊತೆ ಒಂದು ಸುಂದರ ಹುಡುಗಿ ನೋಡಿದಾಗ, ವಿಜ್ಞಾನಿಗಳು ಹೇಳಿದ್ದಕಿಂತ ಜೋರಾಗಿ ಕಾಲಡಿಯ ಭೂಮಿ ತಿರುಗ್ತಾ ಇದೆ ಅಂತ ಎಲ್ಲರಿಗೂ ಭಾಸ ಆಯಿತು. 

ಡಿಗ್ರಿ ಮುಗಿದ ಮೇಲೆ ಅವಳ ಮನೆ ಹತ್ತಿರಾನೆ ಇದ್ದ ಒಂದು ಸಂಜೆ ಪತ್ರಿಕೆ ಗೆ ಇವರನು ಸೇರಿದ. ಒಂದು ವರ್ಷದ ನಂತರ ಅಂಬಿಕಾ ಎಂ ಸಿ ಎ ಮಾಡ್ತೀನಿ ಅಂತ ಬೆಂಗಳೂರ್ ಗೆ ಹೋದಳು. ಇವನ್ನು ಕೂಡ ಗಂಟು ಮೂಟೆ ಕಟ್ಟಿದ. ಇನ್ನೂ ದಿನಗಳು ಹಿಂದಕ್ಕೆ ಹರಿತಿತ್ತೋ ಏನೋ
, ಆದ್ರೆ ಕಾರ್ಖಾನೆ ಸೈರನ್ ಕೇಳಿಸ್ತು! ಕೈಲಿದ್ದ ಕಾಗದನ ಜೋಪಾನವಾಗಿ ಹಾಗೆ ಬೀರುವಿನಲ್ಲಿ ಇಟ್ಟು, ಯುನಿಫಾರ್ಮ್ ಹಾಕಿ, ಹೊರಡಲನುವಾದ.


ಅರ್ಕಾವತಿ 2007  

ಸಾಗರನ ಹೃದಯದಲಿ
ರತ್ನಪರ್ವತ ಮಾಲೆ
ಮಿಂಚಿನಲಿ ಮೀವುದಂತೆ
ತೀರದಲಿ ಬಳುಕುವಲ್ಲೆ
ಕಣ್ಣಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ
ನಿನ್ನೋಳಿದೆ ನನ್ನ ಮನಸ್ಸು

ಬೇಡ ಬೇಡ ಅಂದ್ರು, ಕೈ ಎಫ್ ಎಂ ಹಾಕುತ್ತೆ. ಯಾಕೋ ಒಂಟಿತನ ಅಸಹನೀಯ ಆಗುತ್ತಿದೆಯೋ ಏನೋ ಅಂತ ಅನ್ನಿಸುವಷ್ಟರಲ್ಲಿ ಮೈಸೂರು ಮಲ್ಲಿಗೆ ಬರುತ್ತಲಿತ್ತು. ರಮ್ಮಿ ಅಲಿಯಾಸ್ ರಮೇಶ್ಚಂದ್ರ, ತೀರ ಅನ್ಯಮನಸ್ಕನಾಗಿ ಮನಸ್ಸು ಹೊರಳಿಸ ತೊಡಗಿದ. ಬೂತಕಾಲದ ಹಕ್ಕಿಗೆ, ರೆಕ್ಕೆಗಳ ಅಗತ್ಯವೂ ಇದ್ದಂತಿಲ್ಲ.

ಸುಮಾರು 2004-05, ರಮ್ಮಿಯ ಬಾಳಿನಲ್ಲೂ ಸುನಾಮಿ ಎದ್ದಿತ್ತು. ತಾನು ಅಗಾಧವಾಗಿ ಪ್ರೀತಿಸುತ್ತಿದ್ದ, ಆದರೆ ಅದನ್ನು ವ್ಯಕ್ತ ಪಡಿಸಲು ದೈರ್ಯ ಸಾಲದೇ ಇದ್ದ, ರಾಧಾ ಬೇರೊಂದು ಮದುವೆ ಆಗಿದ್ದಳು. ಏಕ ಮುಖ ವಾದ ಯಾವ ಸಂಬಂದವೂ ಶಾಶ್ವತವಲ್ಲ. ಅದು ಹುಟ್ಟುವಾಗಲೇ ಸಾವಿನ ದಿನಾಂಕ ನಮೂದಾಗಿರುತ್ತೆ. ನೀನು ಅವಳಿಲ್ಲದೆ ಬದುಕೊಲ್ಲ ಅಂತ ಹೇಳಬೇಡ, ಯಾಕೆಂದ್ರೆ ಅದು ಸುಳ್ಳು. ಅವಳಿಲ್ಲದೆ ಬದುಕೇ ಶೂನ್ಯ ಎನ್ನಬೇಡ, ಅದು ಆತ್ಮವಂಚನೆ. ಹೀಗೆಲ್ಲ ಹೇಳಿದವನು ಜೊತೆಗೆ ಕೆಲಸ ಮಾಡುತ್ತಿದ್ದ, ಹಳೆಯ ರೂಂ ಮೇಟ್ ಮಿತ್ರ ಪಾರ್ಥ.

ಇಂತಾ ಪಾರ್ಥನಿಗೂ ಒಂದು ಪ್ರೇಮವಿತ್ತು. ಅಂಬಿಕಾ! ಅವಳು ಎಂ ಸಿ ಎ ಓದುತ್ತಿದ್ದರೆ ಈತ ಕೆಲಸ ಮಾಡುತ್ತಿದ್ದ. ಅವಳ ಓದು ಮುಗಿಯುವ ಹೊತ್ತಿಗೆ ಬೀಕರ ರೆಸೆಶನ್! ಇವನು ಅದೆಲಿಂದನೋ ರೆಫೆರೆನ್ಸ್ ತಂದು, ಅಂಬಿಕಾಗೆ ದೊಡ್ಡ MNCನಲ್ಲಿ ಕೆಲಸ ಕೊಡಿಸಿದ! ಆದರೆ ಮಾರುಕಟ್ಟೆ ಏರಿಳಿತ ದಿಂದ ನಮ್ಮ ಕಂಪನಿ ಲಾಸ್ ಆಗತೊಡಗಿತು. ಅದರ ಮೊದಲ ಬಲಿ ಪಾರ್ಥ.

ಎಕನಾಮಿಕ್ಸ್ ಗು ಕನ್ನಡದ ಪ್ರೀತಿ ಪದಗಳಿಗೂ ಇರೋ ಸಂಬಂದ ಅರ್ಥ ಆಗಿದ್ದು, ಅವರಿಬ್ಬರ ಸಂಬಂದದ ಗೋಡೆಯಲ್ಲಿ ಬಿರುಕು ಕಂಡಾಗ.  ಅಂಬಿಕಾ, ಪಾರ್ಥ ನ ಕಾಲ್ ತೆಗೆದು ಕೊಳ್ಳೋದು ಕಡಿಮೆ ಮಾಡತೊಡಗಿದಳು, ಇದ್ದಕ್ಕಿದ್ದಂತೆ ಪ್ರಾಜೆಕ್ಟ್ ಕೆಲಸ ಅಂತ  ಅಮೆರಿಕ ಹೊರಟು ಹೋದಳು. ವಾಪಸ್ ಬಂದ ಎರಡು ತಿಂಗಳೊಳಗೆ, ಒಂದು ಇಳಿ ಸಂಜೆ ಮದುವೆ ಪತ್ರಿಕೆ ರೂಂ ನ ಮುಂದೆ ಬಿದ್ದಿತ್ತು! 

ಪ್ರೀತಿಯೇ ಸುಳ್ಳೇನೋ ಅಥವಾ ಪ್ರೀತಿಸಿದ್ದೆ ಸುಳ್ಳೇನೋ ಅನ್ನುವ ಹಾಗೆ ಪಾರ್ಥ ನಿರಮ್ಮಳನಾಗಿದ್ದ. ಆದರೆ ಅದೆಲ್ಲ ನಾಟಕ ಅಂತ ಗೊತ್ತಾಗಿದ್ದು ರೂಮಿನಲ್ಲಿ ಒಮ್ಮೆ ಕಂಠಪೂರ್ತಿ ಕುಡಿದು ಅಳುತ್ತಿದ್ದಾಗ. ನಾನು ರೂಂ ಗೆ ಈಗ ಬರಬಾರದಿತ್ತು ಎಂದು ಕೊಳ್ಳುವ ಹೊತ್ತಿಗೆ
, ಅವನು ಮಾತನಾಡತೊಡಗಿದ. ಮಾತಿನಲ್ಲಿ ಭದ್ರಾವತಿ ಬಂತು, ಅವನ ವಯಸ್ಸಾದ ಅಪ್ಪ ಇದ್ರು, ಅಮೆರಿಕಾದ ದುಷ್ಟ ನೀತಿಗಳು, ಅವರಿಗಾಗಿ ನಿದ್ದೆ ಬಿಡೋ ನಮ್ಮಂತ ಅಪ್ರಯೋಜಕರು, ಹೀಗೆ ಎಲ್ಲೆಲ್ಲೋ.. ಆದರೆ ಮಾತು ಅಂಬಿಕಾಳಲ್ಲಿ ನಿಂತಿತು.

ಕೆಲಸವಿಲ್ಲದ ಹುಡುಗ ಪ್ರೀತಿಸಲು ನಾಲಾಯಕ್ಕು ಅಂತ ತಿಳೀಲಿಕ್ಕೆ ಅದೆಷ್ಟೋ ಮಳೆಗಾಲ ನನ್ನ ಜೀವನದಲ್ಲಿ ಬರಬೇಕಾಯಿತು ಅಂತ ಕಿರುಚಿದ. ಈ ಒಂಟಿತನ ನನ್ನ ಕೊಲ್ತಾ ಇದೆ ಕಣೋ ರಮ್ಮಿ ಅಂತ ಗೋಳಾಡಿದ. ಅವಳಿಲ್ಲದೆ ಈ ಬದುಕಿಗೆ ಅರ್ಥ ಇರೋಲ್ಲ ಕಣೋ, ಯಾಕೆಂದರೆ ನನ್ನಲ್ಲಿ ಒಬ್ಬ ದೊಡ್ಡ ಪೋಲಿ, ವಂಚಕ, ದ್ರೋಹಿ, ಪುಕ್ಕಲ, ಪಲಾಯನವಾದಿ, ಸೋಂಬೇರಿ ಎಲ್ಲಾ ಇದ್ದಾನೆ. ಆದರೆ ಹೊರಗೆ ಮಾತ್ರ ನಾನೊಬ್ಬ ಸಂಭಾವಿತ. ಆದರೆ ಇವಿಷ್ಟೂ ಗೊತ್ತಿದ್ದೂ, ಗೊತ್ತಿದ್ದೂ ಪ್ರೀತಿಸಿದ್ದು ಆಂಬಿ. ಯಾರನ್ನಾದರು ನಾವು ಸಂಪೂರ್ಣವಾಗಿ ಅರ್ಥ ಮಾಡಿ ಕೊಂಡೂ ಅಲ್ಲಿ, ದ್ವೇಷ, ತಿರಸ್ಕಾರ ಹುಟ್ಟಲಿಲ್ಲ ಅಂದ್ರೆ... ಅಲ್ಲಿ ಇರುವುದು ಪ್ರೀತಿ ಮಾತ್ರ ಅಂತೆಲ್ಲಾ ಹೇಳಿದ. ನನಗೆಷ್ಟು ಅರ್ಥ ಆಯಿತೋ, ಆದರೆ ಸುಮ್ಮನೆ ಅವನ ಹೆಗಲು ಮುಟ್ಟಿ ಸಂತೈಸಿದೆ.
ಕಾಲ ಕಳೆಯಿತು. 2009ರ ಒಂದು ಬಿಸಿಲಿನ ದಿನ, ತನ್ನೆಲ್ಲಾ ವಸ್ತು ಗಳನ್ನು ಮಾರಿ ದುಡ್ಡು ತಂದ. ದುಬೈ ಚೆನ್ನಾಗಿದೆ, ಅಲ್ಲಿ ಹೋಗಿ ಬದುಕ್ತೀನಿ ಅಂತ ಹೊರಟೇ ಹೋದ. ಮದ್ಯ ಪ್ರಾಚ್ಯ ದಲ್ಲಿ ಅರ್ಥಿಕ ಹಿಂಜರಿತದ ಹೊಡೆತ ಬಿದ್ದಿರಲಿಲ್ಲ. ಆಮೇಲೆ ಅವನು ಈಜಿಪ್ಟ್ ಗೆ ಹೋದ ಅಂತ ಫೇಸ್  ಬುಕ್ ನ ಸ್ಟೇಟಸ್ ತೋರಿಸ್ತಾ ಇತ್ತು.


ಈಗ ರಮ್ಮಿ ಫೇಸ್ ಬುಕ್, ಅಡಿಕ್ಟ್ ಆಗಿದ್ದಾನೆ. ಗ್ರೇಟ್ ಮೈಂಡ್ ಅನ್ನೋ ಹೆಸರಲ್ಲಿ, ಅದೆಷ್ಟೋ ರಾಧೆಯರ ಹತ್ತಿರ ಮಾತಾಡ್ತಾನೆ. ತನ್ನ ಕಳೆದು ಹೋದ ರಾಧೇ ಹುಡುಕುತ್ತಾ.



ಭದ್ರಾ:  2011

ಓ ಮನಸೇ, ಒಂದು ಮನಸಲೆರಡು ಮನಸು ಎಲ್ಲ ಮನಸ ನಿಯಮ
ಓ ಮನಸೇ, ಎರಡು ಹಾಲು ಮನಸಲ್ಲೊಂದು ಮನಸು ಇದ್ದರೆ ಪ್ರೇಮ.

ರಜಕ್ಕೆ ಊರಿಗೆ ಬಂದು, ಚಾನೆಲ್ ತಿರುವುತ್ತಿರುವಾಗ ಅಕಸ್ಮಾತ್ ಹಾಡು ಕೇಳಿಸ್ತು. ಅಡುಗೆ ಮನೇಲಿ ಅಮ್ಮ, ಪೂರಿ ಕರಿಯುತ್ತಾ ಇದ್ದರೂ, ಮನ್ಸಸ್ಸು ಸಿಟಿ ಬಸ್ಸು ಹತ್ತಿ ಎಲ್ಲಿಗೂ ಹೊರಟಿತ್ತು. ಕಾರಣ ಪಾರ್ಥ ಸಾರಥಿ. ಆರು ವರುಷಗಳ ಪ್ರೀತಿ. 

ಮೊದ ಮೊದಲಿಗೆ ಅವನ ಪ್ರತಿ ಭೇಟಿಯು ಆಕರ್ಷಣೆ, ಜೊತೆ ಇದ್ದಷ್ಟು ಹೊತ್ತು ಸಾಲದು. ಆ ಅಂಗೈ ಬಿಸಿಗೆ ಹಪಹಪಿತನ. ಆಮೇಲೆ ಕರ್ತವ್ಯ! ಕೊನೆ ಕೊನೆಗೆ, ಬಂಧನ. ಹೌದು ಎನ್ನೊಂದೂ ನಿರೀಕ್ಷೆಗಳು ಇಲ್ಲದೆ ಶುರು ವಾದ ಪ್ರೀತಿ ಅಲ್ಲವ. ಅದೆಷ್ಟು ಸಲ ರಂಗ ಶಂಕರ ದ ಆ ಬೆಂಚಿನ ಮೇಲೆ ಕೂತು, ಈ ದೇಶವೇ ತಲೆ ಮೇಲೆ ಕೂತಿದೆ ಅನ್ನೋ ಹಾಗೆ ಮಾಡಿದ ಚರ್ಚೆ, ಆಡಿದ ಜಗಳ, ಮರೆಯಲು ಸಾದ್ಯವೇ. ಅದು ಪ್ರಕಾಶ್ ಬೆಳವಾಡಿ ಇರಬೇಕು ? ಭಾರತಿ ಪುರ ದ ಬಗ್ಗೆ ಜಗಳ ಮಾಡುವಾಗ "ಸ್ವಲ್ಪ ಸಣ್ಣ ಮಾತಾಡಿ" ಅಂದಿದ್ದು! 

ಕಾಲೇಜಿನ ಮೊದಲ ದಿನಗಳಲ್ಲಿ ಪಾರಿ ಹೆಸರು ಕೇಳಿದರೆ ಅಂದ್ರೆ ಆಗ್ತಿರ್ಲಿಲ್ಲ. ಆಮೇಲೆ ಕಾರಣಾನೆ ಇಲ್ಲದೆ ಇಷ್ಟ ಆದ, ಆಮೇಲೆ ಯಾಕೆ ಇಷ್ಟ ಆಗ್ಲಿಲ್ಲ! ನನಗೋಸ್ಕರ ಜೀವ ಬಿಡಲೂ ಸಿದ್ದ ಇದ್ದ.  ಆದರು ನಾನು ಯಾಕೆ ನಿನ್ನಿಂದ ದೂರ ಆದೆ, ನಾನು ಮಾಡಿದ್ದು ಸರಿ ಹೌದೋ ಅಲ್ವೋ ಅಂತ ಈಗಲೂ ಅನುಮಾನ ಕಾಡುತ್ತೆ.  ಹೌದು ಆ ಲೆಕ್ಕದಲ್ಲಿ ನಾನು ಸ್ವಾರ್ಥಿ. ಅವನಿಂದ ಎಲ್ಲಾ ಉಪಯೋಗ ಪಡೆದೆ.  ಆದರೂ ನಾನು, ಆ ಕೈ ತೋಳಿನಲ್ಲಿ, ನಾನು ನಾನಾಗಿ ಇರಲಿಕ್ಕೆ ಆಗ್ತಾ ಇರಲಿಲ್ಲ.

ಅದೊಂದು ದಿನ ರಂಗ ಶಂಕರ ದಲ್ಲಿ ಫಾದರ್ ಅನ್ನೋ ನಾಟಕ ನಡೆದಿತ್ತು. ಅರ್ದಕ್ಕೆ ಎದ್ದು ಬರಲಾಗದೆ, ಕೂತು ನೋಡಲಾಗದೆ ಕಷ್ಟ ಅನುಭವಿಸಿದ್ದೆವು. ಆ ಇಳಿ ಸಂಜೆ ಚಪ್ಪಲಿ ಹುಡುಕುತ್ತಾ ಜಯನಗರಕ್ಕೆ ನಡೆದು ಸಾಗಿದ್ದೆವು. ಚೆನ್ನಾಗಿ ನೆನಪಿದೆ! ನಂಗೆ ಇಷ್ಟ ಆಗಿದ್ದ ಚಪ್ಪಲಿ ಕೊಳ್ಳಲು  ತೊಗೊಳೋಕು ಬಿಡಲಿಲ್ಲ. ಒಂದು ಪ್ಲೇಟ್ ಪಾನಿ ಪುರಿ ಒಟ್ಟಾಗಿ ತಿನ್ನೋಕು ಎಷ್ಟು RESTRICTIONS! ಅವನು ಹೇಳಿದನ್ನೇ ನಾನು ತಿನ್ನಬೇಕಿತು.ಮೊದಮೊದಲು ಇದನ್ನ ಅಕ್ಕರೆ ಅಂದ್ಕೊಂಡೆ, ಆಮೇಲೆ POSSISSIVENESS ಅನ್ನಿಸಿತು. ಆದ್ರೆ ಹೋಗ್ತಾ ಹೋಗ್ತಾ ಅದು ಹುಚ್ಚು ಅನ್ನಿಸಿತು. ರಿಸೆಶನ್ ಸಮಯದಲ್ಲಿ ಪಾರಿ ಕೆಲಸ ಹೋದಾಗನನ್ನ ಹಂಗಿಸಲು ಶುರು ಮಾಡಿದ.  ಆ ಹುಚ್ಚು ಬಿಡಸೋಕೆ ಹೋಗಿ ನನ್ನ ಮನಸು ಸೊರಗಿತು. ಅಂತದ್ರಲ್ಲಿ ಅದೇ ಕೆಲಸದಲ್ಲೇ ನಾನು ಇದ್ರೆ ನನ್ನ ಸ್ವಂತಿಕೆ ಎಲ್ಲಿ ಸತ್ತು ಹೋಗುವುದೋ ಅಂತ ಭಯ ಆಯಿತು.ನನ್ನ ಆದರ್ಶ ಕಾಲೇಜ್ ದಿನಗಳ ಚರ್ಚಾ ಸ್ಪರ್ದೆಗೆ ಸೀಮಿತವಾಗೋದು ಸಹ್ಯ ಅಂತ ಅನ್ನಿಸಲಿಲ್ಲ. ಹೌದು, ನಾನು ಹೋಗ್ತಾ ಇರೋದಕ್ಕೆ ಕಾರಣ ಹೇಳಿದ್ರೆ ಅವನು ಬದಲಾಗುತ್ತಾನೆ ಅನ್ನೋ ನಂಬಿಕೆ ನಂಗೆ ಇರ್ಲಿಲ್ಲ, ನ್ಯುಯಾರ್ಕ್ ನಲ್ಲಿ ಇರುವಾಗ ಪ್ರತಿ ದಿನ ಅವನದೇ  ನೆನಪು. ಆರ್ಕುಟ್ ನಲ್ಲಿ ನೋಡುತ್ತಲೇ ಇದ್ದೆ. ಆದ್ರೆ ಫೋಟೋ ಕಂಪ್ಯೂಟರ್ ಗೆ ಡೌನ್ಲೋಡ್ ಮಾಡಿಕೊಳ್ಳಬೇಕು ಅಂತ ಅನ್ನಿಸಲೇ ಇಲ್ಲ.  ನಂಗೆ ಅವನೇನು ಏನು ಅಂತ ಗೊತ್ತು, ಆದ್ರೆ ನಾನು ಏನು ಅಂತ  ಕೊನೆಗೂ ಅರ್ಥ  ಅವನಿಗೆ ಅರ್ಥ ಆಗಲಿಲ್ಲ.. 

ಈ ಉಸಿರುಗಟ್ಟುವ ಸಂಬಂಧದ ಬಗ್ಗೆ ಅಸಹ್ಯ ಬರೋಕೆ ಮುಂಚೆ ನಾನು ಎಲ್ಲಾ ಬಿಟ್ಟು ಬಂದೆ. ನನ್ನ ಪಾಲಿಗೆ ಕಾಲೇಜಿನಲ್ಲಿ ಜಗಳ ಮಾಡಿದ ಆ ಪಾರಿ ನನಗೆ ಪ್ರಾಣ. ಆ ನೆನಪುಗಳು ನಾನು ಬದುಕಿರೋ ವರೆಗೂ ಇರುತ್ತೆ. ಕೊನೆಗೆ ಊರಿಗೆ ಬಂದು ಅಪ್ಪ ತೋರಿಸಿದ ಹುಡುಗನ್ನ ಮದುವೆ ಆದೆ.  . 
ಅಷ್ಟರಲ್ಲಿ ಅಂಬಿಕಾಳ ತಮ್ಮ, ರಾಘವೇಂದ್ರ ಚಾನೆಲ್ ಬದಲಿಸಲು ಶುರುಮಾಡಿದ. ಒಳಗಿಂದ  ಪೂರಿ ತಯಾರಾಗಿದೆ ತಿಂಡಿಗೆ ಬಾ ಅನ್ನೋ ಕೂಗು  ಇತ್ತು.  "ಈಜಿಪ್ಟ್ ನಲ್ಲಿ ನಡೆಯುತ್ತಿರುವ ಕ್ರಾಂತಿಯಲ್ಲಿ, ಕರ್ನಾಟಕ ಮೂಲದ ಸಾರಥಿ ಎಂಬುವವರಿಗೆ ... "..  ಅಂತ ಟೀವಿ ಹೇಳೋ ಹೊತ್ತಿಗೆ ಕರೆಂಟ್ ಹೋಯಿತು. ಅಂಬಿಕಾ ಯಾವುದನ್ನೂ ಕೇಳಿಸಿಕೊಳ್ಳುವ ಸ್ತಿತಿಯಲ್ಲಿ ಇರಲಿಲ್ಲ.


ಮಾಹಿತಿ: ಸೆಪ್ಟೆಂಬರ್ 8, 2000 ರಿಂದ ಭದ್ರಾವತಿಯ ಅಂದಿನ ಶಾಸಕರಾದ ಅಪ್ಪಾಜಿ ಗೌಡ, ನಾಪತ್ತೆ ಆಗಿದ್ದರೆ ಅಂತ ಸುದ್ದಿ ಹಬ್ಬಿತ್ತು.
           ಅವ್ವ ಕವನವು, ಕುವೆಂಪು ವಿಶ್ವವಿದ್ಯಾಲಯ ದ ಪದವಿಯಾ ಕನ್ನಡ ವಿಷಯದಲ್ಲಿ ಇದ್ದಿತು.   
ಇಬ್ಬರು ಸೇರಿ ಒಂದು ಸಿನಿಮಾ ನಿರ್ದೇಶನ ಮಾಡ್ತಾರೆ. ಸಂಗೀತ ಕೊಡ್ತಾರೆ. ಹಾಗೆ ಇಬ್ಬರು ಸೇರಿ ಕಾದಂಬರಿ ಬರೆಯೋದು ಕೂಡ ಹೊಸತಲ್ಲ. ಹಾಗೆಯೇ ಇದು,  ನಾನು ಮತ್ತೆ ನನ್ನ ಸ್ನೇಹಿತೆ ಒಬ್ಬಳು ಕುಂತು ಬರೆದ ಕಥೆ!

2 comments:

Anonymous said...

Unfortunately that’s what happens in life.

-Vish

Anonymous said...

Chennagide