Wednesday, November 14, 2012

ಪ್ರೆಮಂ ಮಧುರಂ



ಕಾಗದ ನಗರ 2000

ಸತ್ತಳು ಈಕೆ :
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?

ಅರರೆ.. ಬೀರುವಿನಲ್ಲಿ ಏನೋ ಹುಡುಕುತ್ತಿದ್ದಾಗ ಅಕಸ್ಮಾತ್ ಕೈಗೆ ಸಿಕ್ಕ ಕಾಗದದ ಚೂರು. ಅವ್ವ”!!! ವಿಶ್ವ ನ ಮನಸ್ಸು ದಶಕಗಳಷ್ಟು ಹಿಂದಕ್ಕೆ ಹೋಯಿತು.

ಅಂದು ಕಾಲೇಜಿನ ಬೇಲಿ ಹಾರುವಾಗ ವಿಶ್ವ ಮತ್ತೆ ಪಾರಿಯ ಪ್ಯಾಂಟು ಸ್ವಲ್ಪ ಹರಿಯಿತು! ಆದರೇನಂತೆ. ಆಗಲೂ ಹುಡುಗರ ಶೀಲಕ್ಕೆ ಅಷ್ಟು ಬೆಲೆ ಏನೂ ಇರಲಿಲ್ಲವಾದ್ದರಿಂದ ಹಂಗೆ ಕ್ಲಾಸ್ ಗೆ ಸೈನ್ಯ ನುಗ್ಗಿತು. ಬೆಳ್ಳಂ ಬೆಳಗ್ಗೆ ಕನ್ನಡ! ಪಾಪ ದೇವರಾಜ್ ಅವ್ವ ಶುರು ಮಾಡಿದರು. ಆದ್ರೆ ಸ್ವಲ್ಪ ಹೊತ್ತಿನಲ್ಲೇ ಪಾರಿ, ನೀವು ಪದ್ಯದ ಆಶಯ ಹಾಳು ಮಾಡುತ್ತಿದ್ದೀರಿ ಅಂತ ವರಾತ ತೆಗೆದ. ಇದ್ದಕಿದಂತೆ ಹುಡುಗಿಯರ ಗುಂಪಿನಿಂದ  ಅಂಬಿಕೆ ನಿನ್ನ ಆಲೋಚನೆ ಸರಿಯಿಲ್ಲ ಅಂತ ಎದ್ದು ನಿಂತಳು. (ಭಾಗಷ್ಯ ಪೂರ ಹೆಸರು ಅಂಬಿಕ, ಅಂಬಾಲಿಕ ಅಂತ ಏನೋ ಇದ್ದಿರಬಹುದು. ಹುಡುಗರಿಗೆ ಆಂಬಿ, ಅಂಬಿಕೆ ಆಗಿದ್ದಳು.) ಪಾರಿ ಅರ್ಥಾತ್ ಪಾರ್ಥ ಸಾರಥಿ ಹಂಗೆಲ್ಲ ಸೋಲು ಒಪ್ಪಿಕೊಳ್ಳುವವನೇ ಅಲ್ಲ. ಮಾತು ಮುಂದುವರಿಯಿತು, ಗೃಹಭಂಗ ದಿಂದ ಶುರು ಆಗಿ, ಮ್ಯಾಕ್ಸಿಂ ಗಾರ್ಕಿ ಯಾ ಮದರ್ ತನಕ ಹೋಯಿತು. ನೋಟ್ಸ್ ಮಾಡಿಕೊಳ್ಳುವ ನೆಪದಲ್ಲಿ ಚುಕ್ಕಿ ಆಡುತ್ತಿದ್ದ ಹುಡುಗಿಯರೆಲ್ಲ ಕತ್ತು ಎತ್ತಿ ನೋಡಲಾರಂಬಿಸಿದರು. ಮಿಕ್ಕ 8 ಜನ ಹುಡುಗರು ಪಾರಿ ಮಾತಿಗೆ ಡಿ ಟಿ ಎಸ್ ಎಫೆಕ್ಟ್ ಮೂಲಕ ಪಾರಿಗೆ ಬೆಂಬಲ ಸೂಚಿಸಿದರು.  (ಕ್ಲಾಸ್ ನಲ್ಲಿ ಇದ್ದಿದ್ದೆ 9 ಜನ ಹುಡುಗ್ರು) ಗಲಾಟೆ ಜಾಸ್ತಿ ಆಗಿ ಪಕ್ಕದ ಕ್ಲಾಸ್ ಗು ಕೇಳಿಸಿತು, ಪ್ರಿಸಿಪಾಲ್ ರಮೇಶ್ ಕಿವಿಗೂ ಬಡಿಯಿತು. ಯಾವಾಗಲು ಹೊಡೆದಾಟ ಬಡಿದಾಟ ಗಳಿಗೆ ಪ್ರಸಿದ್ದವಾದ ಭದ್ರಾವತಿಯಲ್ಲಿ, ಹುಡುಗರು ಪಾಠದ ಬಗ್ಗೆ ಚರ್ಚಿಸುವುದು ಕಂಡು ಕುಶಿ ಪಟ್ಟರು. ! ಆದ್ರೆ ದೇವರಾಜ್ ಮಾತ್ರ ಏನೂ ಮಾಡಲು ತೋಚದೆ ಗರ ಬಡಿದವರಂತೆ ನಿಂತಿದ್ದರು. ಕೊನೆಗೆ ಕವನ ಏನಾಯಿತೋ, ಪಾರಿ ಅಂಬಿ ಮಾತ್ರ ಒಳ್ಳೆ ದುಶ್ಮನ್ ಗಳು ಆದರು!

ಆದ್ರೆ ನಮ್ಮೂರಿನ ಲಕ್ಷ್ಮೀನರಸಿಂಹನ ದಯೇನೋ ಏನೋ, ಇದ್ದಕಿದ್ದಂತೆ ಒಂದು ದಿನ ಜನಪ್ರಿಯ ಶಾಸಕರು ನಾಪತ್ತೆ ಆಗಿದ್ದಾರೆ, ಕಿಡ್ನಾಪ್ ಆಗಿದ್ದಾರೆ ಅಂತೆಲ್ಲಾ ಗುಲ್ಲೆಬಿತು. ಕೂಡಲೇ ಶಾಲೆ ಕಾಲೇಜು ಮುಚ್ಚಲು ಆದೇಶ ಬಂತು. ನವಗ್ರಹಗಳೆಂದು ಹೆಸರುವಾಸಿಯಾಗಿದ್ದ!  ಹುಡುಗರಿಗೆ ಹುಡುಗಿಯರನ್ನು ಸುರಕ್ಷಿತವಾಗಿ ಮನೆ ತಲುಪಿಸಲು ಪ್ರಿನ್ಸಿಪಾಲ್ ಹೇಳಿದರು. ಬಸ್ಸು, ಆಟೋ ಏನೂ ಇಲ್ಲದ್ದರಿಂದ ನಡೆದೇ ಹೋಗಬೇಕಾಯಿತು. ದುರಂತಕ್ಕೆ ಪಾರಿಗೆ ಅಂಬಿಕಾ ಳನ್ನು ಮನೆಗೆ ತಲುಪಿಸುವ ಜವಾಬ್ದಾರಿ ನೀಡಲಾಯಿತು. (ಅವರಿಬ್ಬರಿಗೂ ಇಷ್ಟವಿರಲಿಲ್ಲ )

ಪ್ರಪಂಚ ಎಷ್ಟು ಬೇಗ ಬದಲಾಗುತ್ತೆ ಅಂತ ಕಾಲೇಜಿಗೆ ಪ್ರಾತ್ಯಕ್ಷಿಕವಾಗಿ ಗೊತ್ತಾಗಿದ್ದು, ಮಾರನೆದಿನ ಪಾರಿ ಆಂಬಿ ನ ಒಟ್ಟಿಗೆ ನೋಡಿದಾಗ. ಅವನಂತ ಬ್ರಹ್ಮಚಾರಿ ಜೊತೆ ಒಂದು ಸುಂದರ ಹುಡುಗಿ ನೋಡಿದಾಗ, ವಿಜ್ಞಾನಿಗಳು ಹೇಳಿದ್ದಕಿಂತ ಜೋರಾಗಿ ಕಾಲಡಿಯ ಭೂಮಿ ತಿರುಗ್ತಾ ಇದೆ ಅಂತ ಎಲ್ಲರಿಗೂ ಭಾಸ ಆಯಿತು. 

ಡಿಗ್ರಿ ಮುಗಿದ ಮೇಲೆ ಅವಳ ಮನೆ ಹತ್ತಿರಾನೆ ಇದ್ದ ಒಂದು ಸಂಜೆ ಪತ್ರಿಕೆ ಗೆ ಇವರನು ಸೇರಿದ. ಒಂದು ವರ್ಷದ ನಂತರ ಅಂಬಿಕಾ ಎಂ ಸಿ ಎ ಮಾಡ್ತೀನಿ ಅಂತ ಬೆಂಗಳೂರ್ ಗೆ ಹೋದಳು. ಇವನ್ನು ಕೂಡ ಗಂಟು ಮೂಟೆ ಕಟ್ಟಿದ. ಇನ್ನೂ ದಿನಗಳು ಹಿಂದಕ್ಕೆ ಹರಿತಿತ್ತೋ ಏನೋ
, ಆದ್ರೆ ಕಾರ್ಖಾನೆ ಸೈರನ್ ಕೇಳಿಸ್ತು! ಕೈಲಿದ್ದ ಕಾಗದನ ಜೋಪಾನವಾಗಿ ಹಾಗೆ ಬೀರುವಿನಲ್ಲಿ ಇಟ್ಟು, ಯುನಿಫಾರ್ಮ್ ಹಾಕಿ, ಹೊರಡಲನುವಾದ.


ಅರ್ಕಾವತಿ 2007  

ಸಾಗರನ ಹೃದಯದಲಿ
ರತ್ನಪರ್ವತ ಮಾಲೆ
ಮಿಂಚಿನಲಿ ಮೀವುದಂತೆ
ತೀರದಲಿ ಬಳುಕುವಲ್ಲೆ
ಕಣ್ಣಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ
ನಿನ್ನೋಳಿದೆ ನನ್ನ ಮನಸ್ಸು

ಬೇಡ ಬೇಡ ಅಂದ್ರು, ಕೈ ಎಫ್ ಎಂ ಹಾಕುತ್ತೆ. ಯಾಕೋ ಒಂಟಿತನ ಅಸಹನೀಯ ಆಗುತ್ತಿದೆಯೋ ಏನೋ ಅಂತ ಅನ್ನಿಸುವಷ್ಟರಲ್ಲಿ ಮೈಸೂರು ಮಲ್ಲಿಗೆ ಬರುತ್ತಲಿತ್ತು. ರಮ್ಮಿ ಅಲಿಯಾಸ್ ರಮೇಶ್ಚಂದ್ರ, ತೀರ ಅನ್ಯಮನಸ್ಕನಾಗಿ ಮನಸ್ಸು ಹೊರಳಿಸ ತೊಡಗಿದ. ಬೂತಕಾಲದ ಹಕ್ಕಿಗೆ, ರೆಕ್ಕೆಗಳ ಅಗತ್ಯವೂ ಇದ್ದಂತಿಲ್ಲ.

ಸುಮಾರು 2004-05, ರಮ್ಮಿಯ ಬಾಳಿನಲ್ಲೂ ಸುನಾಮಿ ಎದ್ದಿತ್ತು. ತಾನು ಅಗಾಧವಾಗಿ ಪ್ರೀತಿಸುತ್ತಿದ್ದ, ಆದರೆ ಅದನ್ನು ವ್ಯಕ್ತ ಪಡಿಸಲು ದೈರ್ಯ ಸಾಲದೇ ಇದ್ದ, ರಾಧಾ ಬೇರೊಂದು ಮದುವೆ ಆಗಿದ್ದಳು. ಏಕ ಮುಖ ವಾದ ಯಾವ ಸಂಬಂದವೂ ಶಾಶ್ವತವಲ್ಲ. ಅದು ಹುಟ್ಟುವಾಗಲೇ ಸಾವಿನ ದಿನಾಂಕ ನಮೂದಾಗಿರುತ್ತೆ. ನೀನು ಅವಳಿಲ್ಲದೆ ಬದುಕೊಲ್ಲ ಅಂತ ಹೇಳಬೇಡ, ಯಾಕೆಂದ್ರೆ ಅದು ಸುಳ್ಳು. ಅವಳಿಲ್ಲದೆ ಬದುಕೇ ಶೂನ್ಯ ಎನ್ನಬೇಡ, ಅದು ಆತ್ಮವಂಚನೆ. ಹೀಗೆಲ್ಲ ಹೇಳಿದವನು ಜೊತೆಗೆ ಕೆಲಸ ಮಾಡುತ್ತಿದ್ದ, ಹಳೆಯ ರೂಂ ಮೇಟ್ ಮಿತ್ರ ಪಾರ್ಥ.

ಇಂತಾ ಪಾರ್ಥನಿಗೂ ಒಂದು ಪ್ರೇಮವಿತ್ತು. ಅಂಬಿಕಾ! ಅವಳು ಎಂ ಸಿ ಎ ಓದುತ್ತಿದ್ದರೆ ಈತ ಕೆಲಸ ಮಾಡುತ್ತಿದ್ದ. ಅವಳ ಓದು ಮುಗಿಯುವ ಹೊತ್ತಿಗೆ ಬೀಕರ ರೆಸೆಶನ್! ಇವನು ಅದೆಲಿಂದನೋ ರೆಫೆರೆನ್ಸ್ ತಂದು, ಅಂಬಿಕಾಗೆ ದೊಡ್ಡ MNCನಲ್ಲಿ ಕೆಲಸ ಕೊಡಿಸಿದ! ಆದರೆ ಮಾರುಕಟ್ಟೆ ಏರಿಳಿತ ದಿಂದ ನಮ್ಮ ಕಂಪನಿ ಲಾಸ್ ಆಗತೊಡಗಿತು. ಅದರ ಮೊದಲ ಬಲಿ ಪಾರ್ಥ.

ಎಕನಾಮಿಕ್ಸ್ ಗು ಕನ್ನಡದ ಪ್ರೀತಿ ಪದಗಳಿಗೂ ಇರೋ ಸಂಬಂದ ಅರ್ಥ ಆಗಿದ್ದು, ಅವರಿಬ್ಬರ ಸಂಬಂದದ ಗೋಡೆಯಲ್ಲಿ ಬಿರುಕು ಕಂಡಾಗ.  ಅಂಬಿಕಾ, ಪಾರ್ಥ ನ ಕಾಲ್ ತೆಗೆದು ಕೊಳ್ಳೋದು ಕಡಿಮೆ ಮಾಡತೊಡಗಿದಳು, ಇದ್ದಕ್ಕಿದ್ದಂತೆ ಪ್ರಾಜೆಕ್ಟ್ ಕೆಲಸ ಅಂತ  ಅಮೆರಿಕ ಹೊರಟು ಹೋದಳು. ವಾಪಸ್ ಬಂದ ಎರಡು ತಿಂಗಳೊಳಗೆ, ಒಂದು ಇಳಿ ಸಂಜೆ ಮದುವೆ ಪತ್ರಿಕೆ ರೂಂ ನ ಮುಂದೆ ಬಿದ್ದಿತ್ತು! 

ಪ್ರೀತಿಯೇ ಸುಳ್ಳೇನೋ ಅಥವಾ ಪ್ರೀತಿಸಿದ್ದೆ ಸುಳ್ಳೇನೋ ಅನ್ನುವ ಹಾಗೆ ಪಾರ್ಥ ನಿರಮ್ಮಳನಾಗಿದ್ದ. ಆದರೆ ಅದೆಲ್ಲ ನಾಟಕ ಅಂತ ಗೊತ್ತಾಗಿದ್ದು ರೂಮಿನಲ್ಲಿ ಒಮ್ಮೆ ಕಂಠಪೂರ್ತಿ ಕುಡಿದು ಅಳುತ್ತಿದ್ದಾಗ. ನಾನು ರೂಂ ಗೆ ಈಗ ಬರಬಾರದಿತ್ತು ಎಂದು ಕೊಳ್ಳುವ ಹೊತ್ತಿಗೆ
, ಅವನು ಮಾತನಾಡತೊಡಗಿದ. ಮಾತಿನಲ್ಲಿ ಭದ್ರಾವತಿ ಬಂತು, ಅವನ ವಯಸ್ಸಾದ ಅಪ್ಪ ಇದ್ರು, ಅಮೆರಿಕಾದ ದುಷ್ಟ ನೀತಿಗಳು, ಅವರಿಗಾಗಿ ನಿದ್ದೆ ಬಿಡೋ ನಮ್ಮಂತ ಅಪ್ರಯೋಜಕರು, ಹೀಗೆ ಎಲ್ಲೆಲ್ಲೋ.. ಆದರೆ ಮಾತು ಅಂಬಿಕಾಳಲ್ಲಿ ನಿಂತಿತು.

ಕೆಲಸವಿಲ್ಲದ ಹುಡುಗ ಪ್ರೀತಿಸಲು ನಾಲಾಯಕ್ಕು ಅಂತ ತಿಳೀಲಿಕ್ಕೆ ಅದೆಷ್ಟೋ ಮಳೆಗಾಲ ನನ್ನ ಜೀವನದಲ್ಲಿ ಬರಬೇಕಾಯಿತು ಅಂತ ಕಿರುಚಿದ. ಈ ಒಂಟಿತನ ನನ್ನ ಕೊಲ್ತಾ ಇದೆ ಕಣೋ ರಮ್ಮಿ ಅಂತ ಗೋಳಾಡಿದ. ಅವಳಿಲ್ಲದೆ ಈ ಬದುಕಿಗೆ ಅರ್ಥ ಇರೋಲ್ಲ ಕಣೋ, ಯಾಕೆಂದರೆ ನನ್ನಲ್ಲಿ ಒಬ್ಬ ದೊಡ್ಡ ಪೋಲಿ, ವಂಚಕ, ದ್ರೋಹಿ, ಪುಕ್ಕಲ, ಪಲಾಯನವಾದಿ, ಸೋಂಬೇರಿ ಎಲ್ಲಾ ಇದ್ದಾನೆ. ಆದರೆ ಹೊರಗೆ ಮಾತ್ರ ನಾನೊಬ್ಬ ಸಂಭಾವಿತ. ಆದರೆ ಇವಿಷ್ಟೂ ಗೊತ್ತಿದ್ದೂ, ಗೊತ್ತಿದ್ದೂ ಪ್ರೀತಿಸಿದ್ದು ಆಂಬಿ. ಯಾರನ್ನಾದರು ನಾವು ಸಂಪೂರ್ಣವಾಗಿ ಅರ್ಥ ಮಾಡಿ ಕೊಂಡೂ ಅಲ್ಲಿ, ದ್ವೇಷ, ತಿರಸ್ಕಾರ ಹುಟ್ಟಲಿಲ್ಲ ಅಂದ್ರೆ... ಅಲ್ಲಿ ಇರುವುದು ಪ್ರೀತಿ ಮಾತ್ರ ಅಂತೆಲ್ಲಾ ಹೇಳಿದ. ನನಗೆಷ್ಟು ಅರ್ಥ ಆಯಿತೋ, ಆದರೆ ಸುಮ್ಮನೆ ಅವನ ಹೆಗಲು ಮುಟ್ಟಿ ಸಂತೈಸಿದೆ.
ಕಾಲ ಕಳೆಯಿತು. 2009ರ ಒಂದು ಬಿಸಿಲಿನ ದಿನ, ತನ್ನೆಲ್ಲಾ ವಸ್ತು ಗಳನ್ನು ಮಾರಿ ದುಡ್ಡು ತಂದ. ದುಬೈ ಚೆನ್ನಾಗಿದೆ, ಅಲ್ಲಿ ಹೋಗಿ ಬದುಕ್ತೀನಿ ಅಂತ ಹೊರಟೇ ಹೋದ. ಮದ್ಯ ಪ್ರಾಚ್ಯ ದಲ್ಲಿ ಅರ್ಥಿಕ ಹಿಂಜರಿತದ ಹೊಡೆತ ಬಿದ್ದಿರಲಿಲ್ಲ. ಆಮೇಲೆ ಅವನು ಈಜಿಪ್ಟ್ ಗೆ ಹೋದ ಅಂತ ಫೇಸ್  ಬುಕ್ ನ ಸ್ಟೇಟಸ್ ತೋರಿಸ್ತಾ ಇತ್ತು.


ಈಗ ರಮ್ಮಿ ಫೇಸ್ ಬುಕ್, ಅಡಿಕ್ಟ್ ಆಗಿದ್ದಾನೆ. ಗ್ರೇಟ್ ಮೈಂಡ್ ಅನ್ನೋ ಹೆಸರಲ್ಲಿ, ಅದೆಷ್ಟೋ ರಾಧೆಯರ ಹತ್ತಿರ ಮಾತಾಡ್ತಾನೆ. ತನ್ನ ಕಳೆದು ಹೋದ ರಾಧೇ ಹುಡುಕುತ್ತಾ.



ಭದ್ರಾ:  2011

ಓ ಮನಸೇ, ಒಂದು ಮನಸಲೆರಡು ಮನಸು ಎಲ್ಲ ಮನಸ ನಿಯಮ
ಓ ಮನಸೇ, ಎರಡು ಹಾಲು ಮನಸಲ್ಲೊಂದು ಮನಸು ಇದ್ದರೆ ಪ್ರೇಮ.

ರಜಕ್ಕೆ ಊರಿಗೆ ಬಂದು, ಚಾನೆಲ್ ತಿರುವುತ್ತಿರುವಾಗ ಅಕಸ್ಮಾತ್ ಹಾಡು ಕೇಳಿಸ್ತು. ಅಡುಗೆ ಮನೇಲಿ ಅಮ್ಮ, ಪೂರಿ ಕರಿಯುತ್ತಾ ಇದ್ದರೂ, ಮನ್ಸಸ್ಸು ಸಿಟಿ ಬಸ್ಸು ಹತ್ತಿ ಎಲ್ಲಿಗೂ ಹೊರಟಿತ್ತು. ಕಾರಣ ಪಾರ್ಥ ಸಾರಥಿ. ಆರು ವರುಷಗಳ ಪ್ರೀತಿ. 

ಮೊದ ಮೊದಲಿಗೆ ಅವನ ಪ್ರತಿ ಭೇಟಿಯು ಆಕರ್ಷಣೆ, ಜೊತೆ ಇದ್ದಷ್ಟು ಹೊತ್ತು ಸಾಲದು. ಆ ಅಂಗೈ ಬಿಸಿಗೆ ಹಪಹಪಿತನ. ಆಮೇಲೆ ಕರ್ತವ್ಯ! ಕೊನೆ ಕೊನೆಗೆ, ಬಂಧನ. ಹೌದು ಎನ್ನೊಂದೂ ನಿರೀಕ್ಷೆಗಳು ಇಲ್ಲದೆ ಶುರು ವಾದ ಪ್ರೀತಿ ಅಲ್ಲವ. ಅದೆಷ್ಟು ಸಲ ರಂಗ ಶಂಕರ ದ ಆ ಬೆಂಚಿನ ಮೇಲೆ ಕೂತು, ಈ ದೇಶವೇ ತಲೆ ಮೇಲೆ ಕೂತಿದೆ ಅನ್ನೋ ಹಾಗೆ ಮಾಡಿದ ಚರ್ಚೆ, ಆಡಿದ ಜಗಳ, ಮರೆಯಲು ಸಾದ್ಯವೇ. ಅದು ಪ್ರಕಾಶ್ ಬೆಳವಾಡಿ ಇರಬೇಕು ? ಭಾರತಿ ಪುರ ದ ಬಗ್ಗೆ ಜಗಳ ಮಾಡುವಾಗ "ಸ್ವಲ್ಪ ಸಣ್ಣ ಮಾತಾಡಿ" ಅಂದಿದ್ದು! 

ಕಾಲೇಜಿನ ಮೊದಲ ದಿನಗಳಲ್ಲಿ ಪಾರಿ ಹೆಸರು ಕೇಳಿದರೆ ಅಂದ್ರೆ ಆಗ್ತಿರ್ಲಿಲ್ಲ. ಆಮೇಲೆ ಕಾರಣಾನೆ ಇಲ್ಲದೆ ಇಷ್ಟ ಆದ, ಆಮೇಲೆ ಯಾಕೆ ಇಷ್ಟ ಆಗ್ಲಿಲ್ಲ! ನನಗೋಸ್ಕರ ಜೀವ ಬಿಡಲೂ ಸಿದ್ದ ಇದ್ದ.  ಆದರು ನಾನು ಯಾಕೆ ನಿನ್ನಿಂದ ದೂರ ಆದೆ, ನಾನು ಮಾಡಿದ್ದು ಸರಿ ಹೌದೋ ಅಲ್ವೋ ಅಂತ ಈಗಲೂ ಅನುಮಾನ ಕಾಡುತ್ತೆ.  ಹೌದು ಆ ಲೆಕ್ಕದಲ್ಲಿ ನಾನು ಸ್ವಾರ್ಥಿ. ಅವನಿಂದ ಎಲ್ಲಾ ಉಪಯೋಗ ಪಡೆದೆ.  ಆದರೂ ನಾನು, ಆ ಕೈ ತೋಳಿನಲ್ಲಿ, ನಾನು ನಾನಾಗಿ ಇರಲಿಕ್ಕೆ ಆಗ್ತಾ ಇರಲಿಲ್ಲ.

ಅದೊಂದು ದಿನ ರಂಗ ಶಂಕರ ದಲ್ಲಿ ಫಾದರ್ ಅನ್ನೋ ನಾಟಕ ನಡೆದಿತ್ತು. ಅರ್ದಕ್ಕೆ ಎದ್ದು ಬರಲಾಗದೆ, ಕೂತು ನೋಡಲಾಗದೆ ಕಷ್ಟ ಅನುಭವಿಸಿದ್ದೆವು. ಆ ಇಳಿ ಸಂಜೆ ಚಪ್ಪಲಿ ಹುಡುಕುತ್ತಾ ಜಯನಗರಕ್ಕೆ ನಡೆದು ಸಾಗಿದ್ದೆವು. ಚೆನ್ನಾಗಿ ನೆನಪಿದೆ! ನಂಗೆ ಇಷ್ಟ ಆಗಿದ್ದ ಚಪ್ಪಲಿ ಕೊಳ್ಳಲು  ತೊಗೊಳೋಕು ಬಿಡಲಿಲ್ಲ. ಒಂದು ಪ್ಲೇಟ್ ಪಾನಿ ಪುರಿ ಒಟ್ಟಾಗಿ ತಿನ್ನೋಕು ಎಷ್ಟು RESTRICTIONS! ಅವನು ಹೇಳಿದನ್ನೇ ನಾನು ತಿನ್ನಬೇಕಿತು.ಮೊದಮೊದಲು ಇದನ್ನ ಅಕ್ಕರೆ ಅಂದ್ಕೊಂಡೆ, ಆಮೇಲೆ POSSISSIVENESS ಅನ್ನಿಸಿತು. ಆದ್ರೆ ಹೋಗ್ತಾ ಹೋಗ್ತಾ ಅದು ಹುಚ್ಚು ಅನ್ನಿಸಿತು. ರಿಸೆಶನ್ ಸಮಯದಲ್ಲಿ ಪಾರಿ ಕೆಲಸ ಹೋದಾಗನನ್ನ ಹಂಗಿಸಲು ಶುರು ಮಾಡಿದ.  ಆ ಹುಚ್ಚು ಬಿಡಸೋಕೆ ಹೋಗಿ ನನ್ನ ಮನಸು ಸೊರಗಿತು. ಅಂತದ್ರಲ್ಲಿ ಅದೇ ಕೆಲಸದಲ್ಲೇ ನಾನು ಇದ್ರೆ ನನ್ನ ಸ್ವಂತಿಕೆ ಎಲ್ಲಿ ಸತ್ತು ಹೋಗುವುದೋ ಅಂತ ಭಯ ಆಯಿತು.ನನ್ನ ಆದರ್ಶ ಕಾಲೇಜ್ ದಿನಗಳ ಚರ್ಚಾ ಸ್ಪರ್ದೆಗೆ ಸೀಮಿತವಾಗೋದು ಸಹ್ಯ ಅಂತ ಅನ್ನಿಸಲಿಲ್ಲ. ಹೌದು, ನಾನು ಹೋಗ್ತಾ ಇರೋದಕ್ಕೆ ಕಾರಣ ಹೇಳಿದ್ರೆ ಅವನು ಬದಲಾಗುತ್ತಾನೆ ಅನ್ನೋ ನಂಬಿಕೆ ನಂಗೆ ಇರ್ಲಿಲ್ಲ, ನ್ಯುಯಾರ್ಕ್ ನಲ್ಲಿ ಇರುವಾಗ ಪ್ರತಿ ದಿನ ಅವನದೇ  ನೆನಪು. ಆರ್ಕುಟ್ ನಲ್ಲಿ ನೋಡುತ್ತಲೇ ಇದ್ದೆ. ಆದ್ರೆ ಫೋಟೋ ಕಂಪ್ಯೂಟರ್ ಗೆ ಡೌನ್ಲೋಡ್ ಮಾಡಿಕೊಳ್ಳಬೇಕು ಅಂತ ಅನ್ನಿಸಲೇ ಇಲ್ಲ.  ನಂಗೆ ಅವನೇನು ಏನು ಅಂತ ಗೊತ್ತು, ಆದ್ರೆ ನಾನು ಏನು ಅಂತ  ಕೊನೆಗೂ ಅರ್ಥ  ಅವನಿಗೆ ಅರ್ಥ ಆಗಲಿಲ್ಲ.. 

ಈ ಉಸಿರುಗಟ್ಟುವ ಸಂಬಂಧದ ಬಗ್ಗೆ ಅಸಹ್ಯ ಬರೋಕೆ ಮುಂಚೆ ನಾನು ಎಲ್ಲಾ ಬಿಟ್ಟು ಬಂದೆ. ನನ್ನ ಪಾಲಿಗೆ ಕಾಲೇಜಿನಲ್ಲಿ ಜಗಳ ಮಾಡಿದ ಆ ಪಾರಿ ನನಗೆ ಪ್ರಾಣ. ಆ ನೆನಪುಗಳು ನಾನು ಬದುಕಿರೋ ವರೆಗೂ ಇರುತ್ತೆ. ಕೊನೆಗೆ ಊರಿಗೆ ಬಂದು ಅಪ್ಪ ತೋರಿಸಿದ ಹುಡುಗನ್ನ ಮದುವೆ ಆದೆ.  . 
ಅಷ್ಟರಲ್ಲಿ ಅಂಬಿಕಾಳ ತಮ್ಮ, ರಾಘವೇಂದ್ರ ಚಾನೆಲ್ ಬದಲಿಸಲು ಶುರುಮಾಡಿದ. ಒಳಗಿಂದ  ಪೂರಿ ತಯಾರಾಗಿದೆ ತಿಂಡಿಗೆ ಬಾ ಅನ್ನೋ ಕೂಗು  ಇತ್ತು.  "ಈಜಿಪ್ಟ್ ನಲ್ಲಿ ನಡೆಯುತ್ತಿರುವ ಕ್ರಾಂತಿಯಲ್ಲಿ, ಕರ್ನಾಟಕ ಮೂಲದ ಸಾರಥಿ ಎಂಬುವವರಿಗೆ ... "..  ಅಂತ ಟೀವಿ ಹೇಳೋ ಹೊತ್ತಿಗೆ ಕರೆಂಟ್ ಹೋಯಿತು. ಅಂಬಿಕಾ ಯಾವುದನ್ನೂ ಕೇಳಿಸಿಕೊಳ್ಳುವ ಸ್ತಿತಿಯಲ್ಲಿ ಇರಲಿಲ್ಲ.


ಮಾಹಿತಿ: ಸೆಪ್ಟೆಂಬರ್ 8, 2000 ರಿಂದ ಭದ್ರಾವತಿಯ ಅಂದಿನ ಶಾಸಕರಾದ ಅಪ್ಪಾಜಿ ಗೌಡ, ನಾಪತ್ತೆ ಆಗಿದ್ದರೆ ಅಂತ ಸುದ್ದಿ ಹಬ್ಬಿತ್ತು.
           ಅವ್ವ ಕವನವು, ಕುವೆಂಪು ವಿಶ್ವವಿದ್ಯಾಲಯ ದ ಪದವಿಯಾ ಕನ್ನಡ ವಿಷಯದಲ್ಲಿ ಇದ್ದಿತು.   
ಇಬ್ಬರು ಸೇರಿ ಒಂದು ಸಿನಿಮಾ ನಿರ್ದೇಶನ ಮಾಡ್ತಾರೆ. ಸಂಗೀತ ಕೊಡ್ತಾರೆ. ಹಾಗೆ ಇಬ್ಬರು ಸೇರಿ ಕಾದಂಬರಿ ಬರೆಯೋದು ಕೂಡ ಹೊಸತಲ್ಲ. ಹಾಗೆಯೇ ಇದು,  ನಾನು ಮತ್ತೆ ನನ್ನ ಸ್ನೇಹಿತೆ ಒಬ್ಬಳು ಕುಂತು ಬರೆದ ಕಥೆ!

Thursday, July 26, 2012

ಪರಿಪೂರ್ಣ ಕಾಫಿಗೆ 9 ಸೂತ್ರಗಳು. :)



ಮಲೆನಾಡಿನವರಿಗೆ ಜೀವನ ಕಷ್ಟವಾಗುವುದು ಮಳೆಗಾಲದಲ್ಲಿ ಆಕಾಶ ನೀಲಿ ಇದ್ದಾಗ ಅಥವಾ ಬೆಳಿಗ್ಗೆ ಕುಡಿಲಿಕ್ಕೆ ಕಾಫಿ 
ಸಿಗದೇ  ಇದ್ದಾಗ. ನಾನಂತೂ ಕಾಫಿ ಯನ್ನ ಜೀವನದ ಒಂದು ಅವಿಭಾಜ್ಯ ಅಂಗ ಎಂದೇ ಭಾವಿಸುತ್ತೇನೆ. ಬೆಳಿಗ್ಗೆ ಅದು ಇಲ್ಲದೆ ಇದ್ರೆ, ಅಂದು ಸೂರ್ಯ ಹುಟ್ಟಿದ್ದು ಕೂಡ ನಿರರ್ಥಕ ಎಂದೇ ಭಾಸವಾಗುತ್ತದೆ. ಆದರೆ ಊರು ಬಿಟ್ಟು, ಉದ್ಯೋಗಕಾಗಿ ಬೇರೆಡೆ ಬಂದಿರುವ ನನ್ನಂತ ಜನರಿಗೆ ಒಳ್ಳೆಯ ಕಾಫಿ ಎಂಬ ಅಮೃತ ಪಾನೀಯ ಸಿಗದೆ ಆಗುವ ನೋವು ಅಷ್ಟಿಷ್ಟಲ್ಲ.

ಇರಲಿ ಬಿಡಿ. ನಾನೀಗ ಒಳ್ಳೆಯ ಕಾಫಿ ಮಾಡುವ ಬಗ್ಗೆ ಕೆಲವು ಉಚಿತ ಸಲಹೆ ನೀಡಲಿದ್ದೇನೆ. (ಜಾರ್ಜ್ ಒರ್ವೆಲ್ ಟೀ ಮಾಡೋದರ ಬಗ್ಗೆ ಹೇಳಿದ್ದಾನಲ್ಲ ಹಂಗೆ.  -) ರಸ್ತೆ ಬದಿಯಲ್ಲಿ ಕೆಟ್ಟ, ಕುಲಗೆಟ್ಟ ಹಾಗೂ ಕಲಗಚ್ಚಿನಂತ  ಕಾಫಿ ಕುಡಿದವರು, ಮನೆಯಲ್ಲಿಯೇ ಈ ದೈವಾಂಶ ಸಂಬೂತ ಪಾನೀಯ ತಯಾರಿಸಿ ಜೀವನವನ್ನು ಸುಂದರ ಹಾಗೂ ಅಧ್ಬುತ ಮಾಡಿ ಕೊಳ್ಳಬಹುದು.


1. ಮೊದಲು ಕಾಫಿ ಪುಡಿ ಚಿಕ್ಕಮಗಳೂರಿನದೇ ಆಗಿರಬೇಕು. ಹಿಂದಿನ ಕಾಫಿ ಪ್ರಿಯರಿಗೆ ಇಂದಿಗೂ ಜಯಂತಿ ಕಾಫಿ ನೆನಪಿರಬಹುದು. ಅಗ್ಗದ ದರ ದ ಬೇರೆ ಪುಡಿ ತಂದು ನಾಲಿಗೆ ಮೈಲಿಗೆ ಮಾಡಿಕೊಳ್ಳ ಬಾರದು.
2. ಕಾಫಿ ಡಿಕಾಕ್ಷನ್ ತಯಾರಿಸಲು ಒಂದು ಬೇರೆಯದೇ ಬಟ್ಟಲು / ಪಾತ್ರೆ ಇರಬೇಕು. ಅದನ್ನು ಬೇರೆ ಯಾವುದೇ ಕೆಲಸಕ್ಕೆ ಉಪಯೋಗಿಸ ಕೂಡದು. ಅಷ್ಟರ ಮಟ್ಟಿಗೆ ಮಡಿ ಅಗತ್ಯ!
3. ಮೂರನೆಯದಾಗಿ, ಯಾವಾಗಲೂ ತಾಜಾ ಹಾಲೇ ಉಪಯೋಗಿಸಬೇಕು. ಫ್ರಿಜ್ ನಲ್ಲಿಟ್ಟ ಎರಡು ಮೂರು ದಿನಗಳ ಹಾಲು, ಹಾಲಿನ ಪುಡಿ ಅಥವಾ ಕಂಡೆನ್ಸುಡ್ ಹಾಲು ಕೂಡದು. (ಮದ್ಯ ಪ್ರಾಚ್ಯದಲ್ಲಿ ಇರುವರ ಬಗ್ಗೆ, ಈ ವಿಷಯದಲ್ಲಿ ಒಂದಿಷ್ಟು ಕನಿಕರ ಬಿಟ್ಟು ಬೇರೇನೂ ಹೇಳಲು ಸಾದ್ಯವಿಲ್ಲ)
4. ಸೋಸಲು ಯಾವತ್ತೂ ತೆಳುವಾದ, ಶುಬ್ರವಾದ ಬಿಳಿ ಕಾಟನ್ ಬಟ್ಟೆ ಉಪಯೋಗಿಸಬೇಕು. ಸುಲಭಕ್ಕೆ ಸಿಗುತ್ತೆ ಅನ್ನೋ ಕಾರಣಕ್ಕೆ ಗಂಡನ ಕರ್ಚಿಪು ಬಳಸಬಾರದು.
5. ನನ್ನ ಪ್ರಕಾರ ಕಾಫಿ ಯಾವಾಗಲೂ ಆಳದ ಸ್ಟೀಲ್ ಲೋಟದಲ್ಲೆ ಕೊಡಬೇಕು. (ನಿಮ್ಮ ಮೂಗು ಒಳಗೆ ಹೋದರೂ ಸರಿಯೇ, ಲೋಟ ಮಾತ್ರ ದೊಡ್ಡದಿರಬೇಕು ) ಸರಿಯಾಗಿ ನಾಲ್ಕು ಗುಟುಕು ಬಾರದ ಪುಟ್ಟ ಲೋಟ ಅಥವಾ ಹೋಟೆಲಿನ ಹಾಗೆ ಗಾಜಿನ, ಪಿಂಗಾಣಿಯ ಲೋಟ ಕೂಡದು.
6. ಕಾಫಿ ಯಾವತ್ತೂ ಸ್ಟ್ರಾಂಗ್ ಹಾಗೂ ಬಿಸಿ ಬಿಸಿ ಇರಬೇಕು. ತಣ್ಣಗೆ ಇದ್ರೂ ಆಗುತ್ತೆ ಅನ್ನೋರು ತಣ್ಣೀರು ಕುಡಿಬಹುದೇ ಹೊರತು ಕಾಫಿ ಕುಡಿಯೋ ಸಾಹಸ ಮಾಡಬಾರದು.
7. ಮನೆಗೆ ತಂದ ತಾಜಾ ಪುಡಿಯನ್ನ ಒಂದು ಭದ್ರವಾದ ಡಬ್ಬಿಯಲ್ಲಿ ಇಡಬೇಕು. ಸುವಾಸನೆ ಇಲ್ಲದ ಕಾಫಿ ಕುಡಿಯುವ ಬದಲು, ತೆಪ್ಪಗೆ ಆಕಾಶ ನೋಡುತ್ತಾ ಕುಳಿತು ಕೊಳ್ಳುವುದು ಒಳಿತು.
8. ಒಮ್ಮೆ ಬಿಸಿ ಮಾಡಿದ ಕಾಫಿಯನ್ನ ಪದೇ ಪದೇ ಬಿಸಿ ಮಾಡಬಾರದು. ಅದು ರುಚಿ ಕೆಡಿಸುತ್ತದೆ ಹಾಗೂ ಅದು ಶ್ರೇಷ್ಟವೂ ಅಲ್ಲ, ನಿಮಗೆ ಕಾಫಿ ಮಾಡಿದ ಪುಣ್ಯ ಕೂಡ ಲಭಿಸುವುದಿಲ್ಲ. 
9. ಎಲ್ಲಕಿಂತ ಮುಖ್ಯವಾಗಿ ಒಂದು ಲೋಟ ಕಾಫಿಗೆ ಹೆಚ್ಚೆಂದರೆ ಅರ್ದ ಚಮಚೆ ಸಕ್ಕರೆ ಸೇರಿಸಬೇಕು. ಶರಬತ್ತಿಗೆ ಹಾಕುವ ಹಾಗೆ ಸಕ್ಕರೆ ಹಾಕುವುದು, ಕಾಫಿಗೆ ಮಾಡುವ ದೊಡ್ಡ ಅವಮಾನಗಳಲೊಂದು. (ಸಿಹಿ ಕಾಫಿಯನ್ನ, ಇದಕ್ಕೆ ಶೀರ್ಷಿಕೆ ಕೊಟ್ಟಿರುವ ಚಂದ್ರು ಕುಡಿಯಬಲ್ಲನೆ ಹೊರತು, ನಮ್ಮಂತ ಸಹಜ ಮಾನವರಿಗಲ್ಲ .)

ನಗರ ಪ್ರದೇಶಗಳಲ್ಲಿ ಇರುವವರು ಕಾಫಿ ಡೇ / ಸ್ಟಾರ್ ಬಕ್ಸ್ ಗಳಲ್ಲಿ ಕೆಪೆಚಿನೋ, ಎಕ್ಷ್ಪ್ರೆಸ್ಸೊ, ಇಟಾಲಿಯನೋ, ಕಾಂಬೋಡಿಯನ್ ಮುಂತಾದ ಕಾಫಿ ಹೀರಬಹುದಾದರೂ.. ಅದು ನಿಮ್ಮ ಎದುರು ಕೂತಿರುವ ಹುಡುಗಿಯರ ಮುಗುಳು ನಗೆಗೆ ಅಥವಾ ಹುಸಿಗೋಪಕ್ಕೆ ಅಷ್ಟೇ ಮದ್ದು.  ಮೂರಂಕಿ ದುಡ್ಡಲ್ಲಿ ಸ್ವಾದಿಷ್ಟ ಕಾಫಿ ಸಿಗಲಾರದು.

ವಯಕ್ತಿಕವಾಗಿ ನನಗೆ ಮನೆಯಲ್ಲಿಯೇ ಹುರಿದು ಪುಡಿ ಮಾಡಿ ಮಾಡುವ ಕಾಫಿ ಅಚ್ಚು ಮೆಚ್ಚು. ಇಂದಿಗೂ ಕೆಲವರ ಮನೆಯಲ್ಲಿ ಕಾಫಿ ಪುಡಿ ಮಾಡುವ ಮೇಷಿನ್ ನ ಅಡುಗೆ ಮನೆಯಲ್ಲಿ ನೋಡಬಹುದು. ಬೆಲ್ಲದ ಕಾಫಿ ಕೂಡ ನನಗೆ ಇಷ್ಟ. ಇಂದಿಗೂ ನನಗೆ ಫಿಲ್ಟರ್ ಕಾಫಿ ಅಥವಾ ಬ್ರೂ  ಅಸ್ಪೃಶ್ಯವಾಗಿಯೇ ಕಾಣುತ್ತದೆ! ಥಟ್ ಅಂತ ತಯಾರು ಮಾಡಬಹುದಾದರೂ ಅದರಲ್ಲಿ ದೈವಿಕ ಶಕ್ತಿಯ ಕೊರತೆ ಕಾಣುತ್ತದೆ.

ಟೀ, ಕಷಾಯ ಮುಂತಾದುವುಗಳನ್ನು ಕುಡಿಯಬಹುದಾದರೂ ಬೆಳಿಗ್ಗೆ ಮಾತ್ರ ಅದು ಕಾಫಿ ಆಗಿರಬೇಕು. ಯಾಕೆಂದರೆ ಅದು ಕೇವಲ ಪಾನೀಯ ಆಗಿರದೆ ಔಷದಿ ಕೂಡ ಆಗಿದೆ, ಶೀತ, ಕೆಮ್ಮಿಗೆ ಅದು ರಾಮ ಬಾಣ. ಹೆಚ್ಚಿನ ಮಾಹಿತಿ ಗೆ ಇಲ್ಲಿ ಇಣುಕಿ ನೋಡಬಹುದು.


ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತು ಅಂದ್ರೆ, ಮದುವೆಯೇ ಆಗುವುದಿಲ್ಲ ಎನ್ನುವ ನನ್ನ ಶಪಥ ಸಡಿಲು ಆಗುವುದಕ್ಕೆ ಹುಡುಗಿ ನೋಡಲು ಹೋದಾಗ ಸಿಕ್ಕ ರುಚಿಕರ ಕಾಫಿಯೇ ಕಾರಣ ಎಂದು ಅನ್ನಿಸಲು ಶುರು ಆಗಿದ್ದರಿಂದ. J

Wednesday, December 7, 2011

ದೆವ್ವ - ಒಂದು ಪತ್ತೆ ದಾರಿ ಕಥೆ



ನಿವೆಂದಾದರೂ ಬೆಂಗಳೂರಿನ ಕಾರ್ಪೋರೇಶನ್ ಸಮೀಪದ ಸಂಪಂಗಿರಾಮ್ ನಗರಕ್ಕೆ ಬಂದಿದ್ದೇ ಆದಲ್ಲಿ, ನಿಮ್ಮ ವಾಸನೆಯನ್ನು ನನ್ನ ಪತ್ತೆಧಾರ ಮಿತ್ರ ಗುರುತಿಸಿಯೇ ಇರುತ್ತಾನೆ. ಪತ್ತೆದಾರ ಪುರುಷೋತ್ತಮ, ಅಜಿತ ಮುಂತಾದವರ ಹಾಗೆ ಇವನು ಕೂಡ ಒಂದು ಮಟ್ಟಿಗೆ ಫೇಮಸ್ ಕೂಡ ಹೌದು. ತನ್ನ ಜನ್ಮ ಕಾರಣವೇ ಪತ್ತೆದಾರಿಕೆ! ಜನರಿಗೆ ಸಹಾಯ ಮಾಡುವುದೇ ಗುರಿ ಎಂದು ಕೊಂಡವನು ನಮ್ಮ ವರುಣ.ಇರಲಿ ಸದ್ಯಕ್ಕೆ ಈ ದೆವ್ವದ ಕೇಸಿಗೆ ಬರೋಣ. ಇಲ್ಲಿ ದೆವ್ವ, ದೆವ್ವಗಳನ್ನು ಏಕವಚನದಲ್ಲಿ ಸಂಭೋದಿಸಲಾಗಿದೆ , ದಯಮಾಡಿ ದೆವ್ವಾಭಿಮಾನಿಗಳು ಬೇಸರಿಸಿ ಕೊಳ್ಳದಿರಿ.

ಮೊನ್ನೆ ರಾತ್ರೆ ಕರೆಂಟು ಇಲ್ಲವಾದ್ದರಿಂದ ಹುರಿದ ನೆಲಗಡಲೆ ತಿನ್ನುತ್ತಾ ಕೂತಿದ್ದೆವು, ಅಷ್ಟರಲ್ಲಿ ವರುಣ ನ ಮೊಬೈಲ್ ರಿಂಗುಣಿಸಿತು. ಮಾತನಾಡುವಾಗ ವರುಣ ನ ಅರಳಿದ ಮುಖ ನೋಡಿ, ಆ ಕಡೆ ಇರೋದು ಒಂದು ಹುಡುಗಿ ಎಂದು ಗ್ಯಾರಂಟಿ ಆಯಿತು. (ನಂಗೂ ಕೂಡ ಸ್ವಲ್ಪ ಪತ್ತೆ ದಾರಿಕೆ ಬರುತ್ತೆ ) ಆಮೇಲೆ ಅವನು 5 ನಿಮಿಷ ನಾಪತ್ತೆ ಕೂಡ ಆದ. ವಾಪಸ್ ಬರೋ ಹೊತ್ತಿಗೆ ಕರೆಂಟು ಬಂದಿತ್ತು. ಟೀವಿ ಲಿ ಸದಾನಂದ ಗೌಡರ ನಗು ನೂ ಕಾಣಿಸ್ತಾ ಇತ್ತು. ಆಮೇಲೆ ಕಾಲ್ ಬಗ್ಗೆ ಹೇಳಿದ್ದು ಇಷ್ಟು. ಫೋನ್ ಬಂದಿದ್ದು ದೂರದ ಅಮೆರಿಕೆ ಇಂದ, ಮೂಲತಃ ಬೆಂಗಳೂರು ಮೂಲದ ನಯನ ಅಂತೆ. ಇಲ್ಲೇ ಕೋಣನಕುಂಟೆ ಲಿ ಅವರ ಬಂಗಲೆ ಕೂಡ ಇದೆ. ಆದರೆ ಆ ಬಂಗಲೆಲಿ ದೆವ್ವ ಇದೆಯಂತೆ. ಯಾರು ಹೊಗೊಕು ಬಿಡ್ತಾ ಇಲ್ವಂತೆ. ಹೋದೋರಿಗೆ ಗಲಾಟೆ ಮಾಡಿ, ಹೆದರಿಸಿ ಕಳ್ಸುತ್ತೆ ಅಂತೆ. ಅವರಪ್ಪ ಹೋದ ತಿಂಗಳು ಬಂದಾಗ ಸಿಕ್ಕಾಪಟ್ಟೆ ಕಾಟ ಕೊಡ್ತಂತೆ. ಅವರು ಯಾರೋ ಕಿಡಿಗೇಡಿ ಗಳು ಅಂದುಕೊಂಡು ಬ್ಯಾಟರಿ ಹಾಕಿಕೊಂಡು ಹುಡುಕೋಕೆ ಹೋದ್ರೆ ಅವರ ಮೇಲೆ ಪಾತ್ರೆಗಳನ್ನ ಎಸೆದು ಹೆದರಿಸಿ ಕಳ್ಸಿತು ಅಂತೆ. ಕೊನೆಗವರು ದಾರಿ ಕಾಣದ ಪರಿಚಯಸ್ತರನ್ನ ಕೇಳಿದ್ರೆ ನೀವು ಕೊಪ್ಪಕ್ಕೆ, ಕೊಳ್ಳೇಗಾಲಕ್ಕೆ ಹೋಗಿ ಮಾಂತ್ರಿಕರನ್ನು ಕರೀರಿ ಅಂದರಂತೆ. ಇವರು ಆಪ್ತ ಮಿತ್ರ ದ ರಾಮಚಂದ್ರ ಆಚಾರ್ಯ ರನ್ನೇ ಕರೆಸಿದರಂತೆ. ಆದ್ರೆ ದೆವ್ವ ಅವರ ಮೇಲೆ ನೆ ಹಲ್ಲೆ ಮಾಡ್ತಂತೆ. ಆದುದರಿಂದ ಈ ದೆವ್ವದ ರಹಸ್ಯ ಭೇದಿಸುವ ಅಸೈನ್ಮೆಂಟ್ ನನಗೆ ಸಿಕ್ಕಿದೆ ಅಂದು ಮಾತು ಮುಗಿಸಿದ. ಪಾಪ ಅವರು ನಮ್ಮನ್ನ ದೆವ್ವ ಹಿಡಿಯೋರು ಅಂತ ಭಾವಿಸಿದ್ರೋ ಏನೋ? ಅಥವಾ ಇವ್ನು ಹುಡುಗೀರು ಫೋನ್ ಮಾಡಿದ್ರೆ ಯಾವ ಕೇಸ್ ಬೇಕಾದ್ರೂ ತಗೋತಾನ ಅಂತ ಗುಮಾನಿ ನೂ ಬಂತು.

ಊಟ ಆದ ಕೂಡಲೇ ಎರಡು ಬ್ಯಾಟರಿ ಹಿಡ್ಕೊಂಡು ಹೋಗೋಣ ಅಂತ ಅವನು ರೆಡಿ ಆದ್ರೆ ನಂಗೆ ಯಾಕೋ ಜ್ವರ ಬಂದಿದೆ ಅಂತ ಅನ್ನಿಸ್ತು. (ಭಾಗಷ್ಯ ಅಲ್ಲಿ ಇದ್ದಿದ್ದು ಬ್ರಹ್ಮ ರಾಕ್ಷಸ ಇರಬೇಕು )ಅವನು ಬೈಕೊಂಡು ಒಬ್ನೇ ಹೋದ, ನಾನು ಮತ್ತೆ ಕಳ್ಳೆ ಕಾಯಿ ಮೆಲ್ಲುತ್ತಾ ನಿದ್ದೆ ಹೋದೆ. ಬೆಳಿಗ್ಗೆ ಪಕ್ಕದ ಮನೆ ನೀಲು ಆಂಟಿ ಮನೆ ಇಂದ ಒಂದು ೨೦ ನೀರು ದೋಸೆ ಬಂತು. ವರುಣ ಬರೋ ಸೂಚನೆ ಇರಲಿಲ್ಲ ವಾದ್ದರಿಂದ (ಅಥವಾ ಹಾಗೆ ಅಂದುಕೊಂಡು) ನಾನೊಬ್ಬನೇ ತಿಂದೆ. ಸಂಜೆ ಕೂಡ ಬರಲಿಲ್ಲವಾದ್ದರಿಂದ ನಾನೊಬ್ನೇ ಹೋಗಿ ಮೊಸರು ವಡೆ, ಮಸಾಲೆ ದೋಸೆ ತಿಂದು ಬಂದೆ. ಸ್ವಲ್ಪ ಹೊತ್ತಲ್ಲಿ "ನಾಡಿದ್ದು ಬರ್ತೀನಿ" ಅಂತ ಮೆಸೇಜ್ ಬಂತು. ಸರಿ ಅಲ್ಲಿ ತನಕ ಒಬ್ನೇ ಕೂತು ಟೀವಿ ನೈನ್ ನೋಡಬಹುದು ಅಂತ ಕುಶಿಯಾದೆ.

ಎರಡು ದಿನ ಆದ ಮೇಲೆ ಬಂದ. ಕೆಲಸ ಎಲ್ಲಾ ಮುಗೀತು, ಸಂಜೆ ಅವರು ಬರ್ತಾರೆ ರೆಡಿ ಆಗಿರು ಅಂದ. ದೆವ್ವ ಹೋಯ್ತಾ ಅಂತ ಕೇಳಬೇಕು ಅಂತ ಅನ್ನಿಸಿದ್ರೂ, ಸಂಜೆ ಹೇಳ್ತಾನಲ್ಲ ಅವಾಗ್ಲೇ ಕೇಳೋಣ ಅಂತ ಸುಮ್ಮನಾದೆ. 5 ಗಂಟೆ ಹೊತ್ತಿಗೆ ಅವರು ಬಂದ್ರು, ನಯನ ನಿಜಕ್ಕೂ ನಯನ ಮನೋಹರ ವಾಗೆ ಇದ್ಲು. ಬಂದವಳೇ ತುಂಬಾ ಥ್ಯಾಂಕ್ ಯು ವರುಣ್ ಎಂದವಳೇ ತಬ್ಬಿಕೊಂಡಳು. (ನಂಗೆ ಇಂತಹ ಸನ್ನಿವೇಶಗಳಲ್ಲಿ ಅವನ ಮೇಲೆ ವಿಪರೀತ ಅಸೂಯೆ ಆಗುತ್ತೆ )

ಸೋಫಾ ದಲ್ಲಿ ಕೂರುತಿದ್ದ ಹಾಗೆ ಮಿಸ್ಟರ್ ವರುಣ್ ದೆವ್ವ ಹೊಯ್ತ? ಏನು ಮಾಡಿದ್ರಿ? ಯಾರ ದೆವ್ವ ಅದು? ಅಂತೆಲ್ಲ ಕೇಳಿದಳು.

ತನ್ನ ಸಾಹಸ ಕಾರ್ಯದ ಬಗ್ಗೆ ಹೇಳೋದ್ರಲ್ಲಿ ವರುಣ ಗೆ ಯಾವಾಗಲು ಆಸಕ್ತಿ ಜಾಸ್ತಿ. ಶುರು ಮಾಡಿಕೊಂಡ.

ಅ ಮನೆಯ ದೆವ್ವ ಬಗ್ಗೆ ಇವನು ಕೇಳಿದ್ನಂತೆ. (ನಾನು ಹೈ ಕೋರ್ಟ್ ದೆವ್ವದ ಬಗ್ಗೆ ಮಾತ್ರ ಕೇಳಿದ್ದೆ. ) ರಾತ್ರೆಯೇ "ಭೂತ ಬಂಗಲೆ" ಪಕ್ಕದ ಮನೆಗೆ ಹೋಗಿ ವಿಚಾರಿಸಿದ್ನಂತೆ. ಅ ಮನೇಲಿ ಮೊದಲು ಇದ್ದವರು ದಂಪತಿಗಳು. ನಯನಗೆ ದೂರದ ಸಂಬಂದಿಗಳು ಕೂಡ ಹೌದು. ಆದ್ರೆ ಆ ದಂಪತಿಗಳು ಯಾವಾಗಲು ಕಿತ್ತಾಡೋರಂತೆ. ಹಿಂಗಿರ ಬೇಕಾದ್ರೆ ರಸ್ತೆ ಅಪಘಾತದಲ್ಲಿ ಅವರು ತೀರಿಕೊಂಡರಂತೆ. ಇವನಿಗೆ ಅವಾಗ್ಲೇ ಡೌಟ್ ಬಂತಂತೆ. ದೆವ್ವ ಇರೋದೇ ಆದ್ರೆ ಅದು ಅ ದಂಪತಿ ಗಳು ಅಂತ. ರಾತ್ರೆ ಅ ಕಾಂಪೌಂಡ್ ಗೆ ಕಿವಿ ಕೊಟ್ಟು ನಿಂತ್ರೆ ಬರೇ ಒಂದು ಹೆಣ್ಣು ದ್ವನಿ ಕೇಳ್ತಾ ಇತ್ತಂತೆ. ಅದು ನೆಲ ಕುಟ್ಟೋದು, ಅಳೋದು, ಕಿರಿಚೋದು ಮಾಡ್ತಾ ಇತ್ತಂತೆ. ಕೆಲವೊಮ್ಮೆ ಪಾತ್ರೆ ಗಳನ್ನೂ ಬಿಸುಟು ಶಬ್ದ ಮಾಡ್ತಾ ಇತ್ತಂತೆ. ಆದರು ಇವ್ನು ದೈರ್ಯ ಮಾಡಿ ಒಳಗೆ ಹೋಗಿ ಯಾರು ನೀನು? ಯಾಕೆ ಅಳುತ್ತಾ ಇದ್ದಿ? ನಾನೇನಾದ್ರು ಸಹಾಯ ಮಾಡಬಹುದೇ? ಅಂತ ಕೇಳೆ ಬಿಟ್ಟನಂತೆ.

ದೆವ್ವ ಏನು ಕಣ್ಣಿಗೆ ಕಾಣುತ್ತ? ಆದರೂ ಸ್ವಲ್ಪ ಸ್ಥೈರ್ಯ ತಗೊಂಡು, ನೋಡು ನಾನೊಬ್ಬ ಮಾನವ ಆದರೇನಂತೆ, ಮುಂದೆ ನಿನ್ ತರಾನೆ ದೆವ್ವ ಆಗೋನು, ಹೇಳು ಯಾಕೆ ಈ ತರ ಅಳುತ್ತಾ ಇದ್ದೀಯ? ಇದ್ದಕಿದ್ದಂತೆ ಮನುಷ್ರನ್ನ ಕಂಡು ದೆವ್ವ ಹೆದ್ರಿತೋ, ಅಥವಾ ಮಾತಡ್ಸಿದ್ದಕ್ಕೆ ಕುಶಿಯ್ತೋ ಗೊತ್ತಿಲ್ಲ, ಒಟ್ಟಾರೆ ಕಥೆ ಹೇಳ್ತಂತೆ. ಅ ಮನೇಲಿ ಮೊದ್ಲು ಇದ್ದರಲ್ಲ ದಂಪತಿಗಳು, ಹೆಂಡತಿನೇ ಅ ದೆವ್ವ ಅಂತೆ. ಅವರು ಅಪಘಾತದಲ್ಲಿ ಸತ್ತ ಮೇಲೆ ಯಮ ಕಿಂಕರರು ಬಂದು ಇವರನ್ನ ಕರ್ಕೊಂಡು ಹೋಗ್ತಾ ಇರ್ಬೇಕಾದ್ರೆ,(somewhere in Vaitarnika river) ನಿಮ್ಮಿಂದಲೇ ಆಕ್ಸಿಡೆಂಟ್ ಆಗಿದ್ದು ಅಂತ ಗಂಡಗೆ ಬೈದ್ಲಂತೆ. ಅಷ್ಟಕ್ಕೇ ಹೆದರಿದ ಗಂಡ ಕ್ಷಣ ಮಾತ್ರದಲ್ಲಿ ಕುಣಿಕೆ ಇಂದ ತಪ್ಪಿಸ್ಕೊಂಡು ಹಾರಿ ಹೋದನಂತೆ. ಈ ಹೆಂಗಸಿನ ಬಾಯಿ ಗಿಂತ ಯಮ ನ ಶಿಕ್ಷೆ ನೆ ಮೇಲು ಎಂದು ಬಾವಿಸಿದ ಕಿಂಕರರು "ನಿನ್ ಗಂಡ ಸಿಕ್ಕ ಮೇಲೆ ನಮಗೆ ಮಿಸ್ ಕಾಲ್ ಕೊಡು ಅಂತ ಹೇಳಿ ಅವರು ಹೋದರಂತೆ" ಅತ್ಲಾಗೆ ಬಯ್ಯೋಕೆ ಗಂಡ ನೂ ಇಲ್ಲದೆ, ಸ್ವರ್ಗ ನೂ ಇಲ್ಲದೆ ಈಕೆ ಬೇಜಾರಾಗಿ ಆ ಮನೆಗೆ ಬಂದು ಕೂತ್ಲಂತೆ. ಇಲ್ಲಿಗೆ ಮೊದಲ ಭಾಗ ಮುಗೀತು ಅಂತ ಹೇಳಿ ಒಂದು ಸಿಪ್ಪು ಟೀ ಕುಡಿದು ಮತ್ತೆ ಮುಂದುವರಿಸಿದ.

ಅ ಗಂಡನಿಗೆ ಸಿನೆಮ ಹುಚ್ಚು, ಮೂರು ಹೊತ್ತು ಕಾಮಾಕ್ಯ ಥೇಟರ್ ನಲ್ಲಿ ಇರ್ತಿದ್ದ ಅಂತ ಪಕ್ಕದ ಮನೆಯವರು ಹೇಳಿದ್ರಿಂದ ಅವನು ಅಲ್ಲೇ ಎಲ್ಲಾದರು ಹುಣಸೆ ಮರಕ್ಕೆ ನೇತು ಹಾಕ್ಕೊಂಡು ಇರಬಹುದು ಅಂತ ಅನ್ನಿಸ್ತು. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಒಂದು ಹುಣಸೆ ಮರ ಇದ್ದಿದ್ದು ಗೊತ್ತಿತ್ತು. ನಿನ್ನೆ ರಾತ್ರೆ ಅಲ್ಲಿಗೆ ಹುಡುಕೊಂಡು ಹೋದೆ. ಸೆಕೆಂಡ್ ಶೋ ಆದ ನಂತರ ಮರದಿಂದ ಗಂಡು ದ್ವನಿ ಕೇಳಿಸ್ತು. ದೈರ್ಯ ಮಾಡ್ಕೊಂಡು ಮೊನ್ನೆ ರಾತ್ರೆ ಮಾಡಿದ್ದ ತರ ಆ ದೆವ್ವನು ಮತಾಡಿಸ್ದೆ. ನನ್ನ ಊಹೆ ನಿಜ ಆಗಿತ್ತು. ಅದು ಆ ಗಂಡನೇ! ಆಮೇಲೆ ತಡ ಮಾಡದೆ ಹೋಗಿ ಅ ಹೆಣ್ಣು ದೆವ್ವಕ್ಕೆ ವಿಷ್ಯ ಹೇಳಿದೆ. ಆಮೇಲೆ ಕಿಂಕರರಿಗೆ ಕಾಲ್ ಮಾಡು ಅಂತ ನಂ ಮೊಬೈಲ್ ಕೂಡ ಕೊಟ್ಟೆ. ಕ್ಷಣ ಮಾತ್ರದಲ್ಲಿ ಕಿಂಕರರು ಹೋಗಿ ಹಿಡ್ಕೊಂಡು ಬಂದ್ರು ಅನ್ಸುತ್ತೆ, ಅ ಗಂಡು ದೆವ್ವ ನಂಗೆ ಶಾಪ ಹಾಕ್ತ ಇರೋದು ಕೇಳಿಸ್ತು. ಸ್ವಲ್ಪ ಹೊತ್ತಲ್ಲಿ ಅಲ್ಲಿ ಶಬ್ದ ಎಲ್ಲ ಕಡಿಮೆ ಆಯಿತು. ಎಲ್ಲಾ ಯಮಪುರಿಗೆ ಹೋದರು. ಆಮೇಲೆ ನಾನು ದೆವ್ವ ದ ಶಾಪ ಪರಿಹಾರಕ್ಕೆ ಕೊಳ್ಳೇಗಾಲಕ್ಕೆ ಹೋಗಿ ತಾಯ್ತ ಕಟ್ಟಿಸ್ಕೊಂದು ಬೆಳಿಗ್ಗೆ ಬಂದೆ ಅಂತ ಹೇಳಿ ವರುಣ ಮಾತು ಮುಗಿಸಿದ. ಯಮಪುರಿಯ ಕಾಂಟಾಕ್ಟ್ ನಂಬರ್ ನಮ್ಮ ಯಾರಿಗೂ ಬೇಕಾಗಿಲ್ಲ ವಾದ್ದರಿಂದ ನಾವು ಕೇಳಲಿಲ್ಲ.

ಮಾತು ಕಥೆ ಎಲ್ಲಾ ಮುಗಿಸಿ ಅವರನ್ನು ಬೀಳ್ಕೊಡ್ತಾ ಇರಬೇಕಾದ್ರೆ ಒಂದು ಕಾಲ್ ಬಂತು. ಅದ್ಯಾವ್ದೋ ಭವಿಷ್ಯ ಹೇಳೋ ಸ್ವಾಮಿಜಿದು ತಾಳೆ ಗರಿಗಳು ನಾಪತ್ತೆ ಆಗಿದೆಯಂತೆ. ಸ್ವತಃ ಮಾಜಿ ಮುಖ್ಯ ಮಂತ್ರಿಗಳು ಸಹಾಯ ಕೇಳಿದ್ದಾರೆ. ಈಗ ನಾವು ಅಲ್ಲಿಗೆ ಹೊರಡಬೇಕಿದೆ.

ಇರಲಿ, ಈ ಪತ್ತೆದಾರನ ಜೊತೆ ಇರೋದು ನಾನು ಡಾಕ್ಟರ್ ಅಂತ ಅಂದು ಕೊಂಡರ? ಹಂಗೇನಿಲ್ಲ. ನಾನು ಮೂಲತಃ ಕೌನ್ಸೆಲ್ಲಿಂಗ್ ಮಾಡೋನು. ವರುಣ್ ಕೈಯಲ್ಲಿ ಕೇಸ್ ಆಗಿಲ್ಲ ಅಂದ್ರೆ ಅದು ನಂಗೆ ಬರುತ್ತೆ. "ನಿಮ್ಮ ಮನೇಲಿ ಕಳ್ಳತನ ಆಗೇ ಇಲ್ಲ, ನಿಮ್ಮ ಹತ್ತಿರ ಮುತ್ತಿನ ಹಾರ ಇರಲೇ ಇಲ್ಲ" ಅಂತೆಲ್ಲ ನಂಬಿಸಿ ನ್ಯಾಯ ಮಾರ್ಗವಾಗಿ ಫೀಸ್ ಪಡೆಯೋದು ನನ್ನ ಕೆಲಸ :)

ಅಂದ ಹಾಗೆ ನಿಮ್ಮ ಬಳಿ ಕೂಡ ಏನಾದ್ರು ಸಮಸ್ಯೆ ಇದ್ರೆ ನಮ್ಮನ್ನು ಸಂಪರ್ಕಿಸಬಹುದು. ದೆವ್ವ ಹಿಡಿತೀವಿ ಅಂತ ನಮಗೆ ಬಾಡಿ ಬ್ರಹ್ಮಾಂಡ ನ ಹಿಡಿಯೋ ಕೇಸ್ ಕೊಡಬೇಡಿ ಅಷ್ಟೇ. :)

ಶೀರ್ಷಿಕೆ ಕೊಡುಗೆ: ಫ್ಯೂಚರ್ ದೆವ್ವ ಚಂದ್ರು. :)

Thursday, July 14, 2011

ಕಾಮೆಂಟರಿ


ನನ್ನ ಅಖಂಡ ಪ್ರೇಮಕ್ಕೆ ಕೆ ಈಗ 15 ವರ್ಷ ಮೇಲಾಯಿತು. ಅಂದು ಬಾಂಬೆ ಯಲ್ಲಿ ಭಾರತ ಮತ್ತೆ ಆಸ್ಟ್ರೇಲಿಯಾ ವರ್ಲ್ಡ್ ಕಪ್ ಮ್ಯಾಚ್ ನಡೀತಾ ಇತ್ತು. ಅಂದು ಸಂಜೆ ನಾನು ಸಾಂದ್ಯವಂಧನೆ ಅದೆಷ್ಟು ವೇಗವಾಗಿ ಮಾಡಿದೆನೋ? ಮುಗಿಸಿ ದೇವರ ಕೋಣೆಯಿಂದ ಹೊರ ಬರುವಾಗ ಕಂಡಿದ್ದು ಸಚಿನ್ ಸಿಕ್ಸ್ ಮತ್ತೆ ಕುಣಿಯುತ್ತಿದ್ದ ನಿನ್ನ ಮುಂಗುರುಳು! ಅಂದು ಮನೆಯಲ್ಲಿ ಎಲ್ಲರಿಗೂ ಇಂಡಿಯಾ ಸೋತಿತಲ್ಲ ಅಂತ ನಿದ್ದೆ ಬಾರದೆ ಇದ್ರೆ, ನನಗೆ ಬೇರಾವುದೋ ಕಾರಣದಿಂದ ನಿದ್ರೆ ಬರಲಿಲ್ಲ!

ಅಂದಿನಿಂದ ಪ್ರತಿ ಮ್ಯಾಚ್ ನೋಡಲು ನೀನು ನಮ್ಮ ಮನೆಗೆ ಬರತೊಡಗಿದೆ. ನಂತರ ಪಾಕಿಸ್ತಾನದ ಮೇಲೆ ಬೆಂಗಳೂರಿನಲ್ಲಿ ಪಂದ್ಯ. ಅಂದು ಜಡೇಜ ಹೊಡೆದ ಎರಡು ಸಿಕ್ಸೆರ್ ಗೆ ನಾವಿಬ್ಬರು ಕೈ ಕೈ ತಟ್ಟಿ ಚಪ್ಪಾಳೆ ಹೊಡೆದಿದ್ದವು. ಅದೇ ನಿನ್ನ ಮೊದಲ ಸ್ಪರ್ಶ. ನಂತರ ಸೆಮಿ ನಲ್ಲಿ ಇಂಡಿಯಾ ಶ್ರೀಲಂಕ ಮೇಲೆ ಸೋತಿತು, ಆದರೆ ನಂಗೆ ನಿನ್ನ ಮೇಲೆ ಆಕರ್ಷಣೆ ಜಾಸ್ತಿ ಆಗಿತ್ತು.

ನಂತರ ಕೆನಡಾ ದಲ್ಲಿ ಸಹಾರ ಕಪ್ ಆಡಲು ನಮ್ಮವರು ಹೋದರು. ಆಗಲೂ ಮ್ಯಾಚ್ ಗಳನ್ನು ನೋಡಲು ನೀನು ನಮ್ಮ ಮನೆಗೆ ಬಂದೆ. ಭಾರತ ಸರಣಿ ಸೋತಿತು. ಕೊನೆಯ ಪಂದ್ಯ ದಲ್ಲಿ ಮುಶ್ತಕ್ ಅಹ್ಮೆದ್ 5 ವಿಕೆಟ್ ಪಡೆದ, ನಿನಗೆ ಕಣ್ಣಲ್ಲಿ ನೀರೆ ಬಂದಿತ್ತು. ಹಾಗೇನೆ ಮುಶ್ತಕ್ ಗೆ ನನ್ನ ಕಡೆ ಇಂದ ಲೆಕ್ಕವಿಲ್ಲದಷ್ಟು ಶಾಪ ಕೂಡ ಜಮೆ ಆಯಿತು. ನಿನ್ನ ಮೇಲಿನ ಇರುವುದು ಕೇವಲ ಆಕರ್ಷಣೆ ಅಲ್ಲವೇನೋ ಅಂತ ಅನ್ನಿಸುವಷ್ಟರಲ್ಲಿ ನಮ್ಮವರು ನ್ಯೂಜೀಲ್ಯಾಂಡ್ ನಲ್ಲಿ ಆಡುತ್ತಿದ್ದರು. ಅಲ್ಲಿನ ಹಗಲು ರಾತ್ರಿ ಪಂದ್ಯ ನೋಡಲು ನೀನು ಮನೆಗೆ ಬರುತ್ತಿರಲಿಲ್ಲ. ಆಡಲು ಅಲ್ಲಿಗೇ ಹೋಗಬೇಕಿತ್ತಾ? ನಮ್ಮಲ್ಲೇನು ಮೈದಾನಗಳು ಇಲ್ಲವ ಅಂತ ಅದೆಷ್ಟು ಅಂದು ಕೊಂಡೆನೋ? ಆಮೇಲೆ ಅದೆಷ್ಟೋ ಮ್ಯಾಚ್ ಗಳು ಇಲ್ಲಿ ನಡೆದವು. ಸಚಿನ್ ಹೊಡೆದ ಸೆಂಚುರಿಗಳು ಎಷ್ಟೋ. ಅವನ ಪ್ರತಿ ಬೌಂಡರಿಗೆ ಹಾಕಿದ ಕೇಕೆಗಳು ಲೆಕ್ಕವಿಟ್ಟವರಾರು?. ಕೆಲವೊಮ್ಮೆ ಮಳೆ ಬಂದು ಪಂದ್ಯ ನಿಲ್ಲಿಸಿದರೆ ನೀನು, ಮಳೆ ನಿಲ್ಲುವುದನ್ನೇ ಕಾಯುತ್ತಾ ಲಂಕೇಶ್ ತಿರುವಿ ಹಾಕುತ್ತಿದ್ದೆ. ನಾನು ನಿನ್ನ ಕಣ್ಣುಗಳನ್ನೇ ನೋಡುತ್ತಾ ಕೂತಿರುತ್ತಿದ್ದೆ.


1999 ರಲ್ಲಿ ಇಂಗ್ಲೆಂಡ್ ನಲ್ಲಿ ವರ್ಲ್ಡ್ ಕಪ್ ನಡೆಯುತ್ತಿತ್ತು. ನಮ್ಮೂರಲ್ಲಿ ಎಡೆಬಿಡದೆ ಮಳೆ. ನೀನು ಬರಲಿಲ್ಲ, ವಿಪರೀತ ಜ್ವರವಿತ್ತು ನಿಂಗೆ. 2000 ರಲ್ಲಿ ಸಹರ ಕಪ್ ನಡೆಯದೆ ಬೇಸರ ಉಂಟು ಮಾಡಿದರೆ, ನಿಮ್ಮ ಮನೆಯಲ್ಲಿ ಬಣ್ಣದ ಟೀವಿ ಬಂದಿತ್ತು, ನನ್ನಲ್ಲಿ ಅಳುವಿನ ಕಟ್ಟೆ ಒಡೆದಿತ್ತು. ಆಮೇಲೆ ನೀನು ಡಿಗ್ರಿ ಮಾಡಲು ಶಿವಮೊಗ್ಗೆ ಗೆ ಹೋದೆ. ಆಸ್ಟ್ರೇಲಿಯಾ ದವರು ಇಂಡಿಯಾ ಗೆ ಬಂದರು. ಹೇಡನ್, ಸಚಿನ್ ದೇವರು ಅಂತ ಕರೆದ. ವಾರ್ನೆ ತಲೆ ಮೇಲೆ ಕೈ ಇಟ್ಟ. ಆದರೆ ಸಂತಸ ಹಂಚಿ ಕೊಳ್ಳಲು ನೀನು ಇರಲಿಲ್ಲ. ಆದರೆ 2003 ರಲ್ಲಿ ಸೆಂಚುರಿಯನ್ ನಲ್ಲಿ ಭಾರತ ಮತ್ತೆ ಪಾಕಿಸ್ತಾನ ಆಡುವಾಗ ನೀನು ಊರಿಗೆ ಬಂದಿದ್ದೆ. ಅಕ್ತರ್ ಗೆ ಒಂದು ಸಿಕ್ಸ್ ಬಿದ್ದ ಕೂಡಲೇ ನಿಮ್ಮನೇಲಿ ಕೇಬಲ್ ಸರಿ ಬರ್ತಾ ಇಲ್ಲ ಅಂತ ಹೇಳಿ ಬಂದು ನನ್ನ ಜೊತೇನೆ ಕೂತು ಆಟ ನೋಡಿದೆಯಲ್ಲ, ಅಂದು ನಮ್ಮಿಬ್ಬರ ಮದ್ಯೆ ಗ್ಯಾಪ್ ಇತ್ತಾ? ಆದ್ರೆ ಹಾಳದೊನು ಸಚಿನ್ 98 ಕೆ ಔಟ್ ಆಗಿ ಬಿಟ್ಟ! ನೀನು ಸಿಡುಕಿಕೊಂಡು ಮನೆಗೆ ಹೋದೆ.


2004 ರಲ್ಲಿ ರಾವಲ್ಪಿಂಡಿಯಲ್ಲಿ ಸಚಿನ್ 37 ನೆ ಶತಕ ದಾಖಲಿಸಿದ, ಆದರೆ ಪಂದ್ಯ ಸೋತ. ಅಷ್ಟೇ ಅಲ್ಲ, 38, 39,40 ನೆ ಶತಕದಲ್ಲೂ ಭಾರತಕ್ಕೆ ಸೋಲು. ನಿನ್ನ ಮುಖ ಕೂಡ ನೋಡದೆ 2 ವರ್ಷ 6 ತಿಂಗಳು 18 ದಿನ ಆಗಿತ್ತು. ನಂಗೆ 9 ನೇ ಕೆಲಸ ಕೂಡ ಹೋಗಿತ್ತು.

ಮುಂದೆ ವೆಸ್ಟ್ ಇಂಡಿಸ್ ನಲ್ಲಿ ಕಪ್ ನಡೆಯೋ ಹೊತ್ತಿಗೆ ನಿಮ್ಮನೇಲಿ ವರ ಹುಡುಕುವ ಸಂಭ್ರಮ. ಅದೆಷ್ಟು ಉಪ್ಪಿಟ್ಟು ಕೇಸರಿ ಬಾತ್ ಸಮಾರಾಧನೆ ನಡೆಯಿತೋ? ಬಾಂಗ್ಲ ಗೆ ನಮ್ಮವರು ಸೋಲೋ ಹೊತ್ತಿಗೆ, ಇಂಜಿನಿಯರ್ ಬಿಟ್ಟು ಬೇರಾರಿಗೂ ನನ್ನ ಮಗಳನ್ನು ಕೊಡೋಲ್ಲ ಅಂತ ನಿಮ್ಮಪ್ಪ ಘೋಷಣೆ ಮಾಡಿ ಬಿಟ್ಟಿದ್ದರು. ನಾನಿಲ್ಲಿ ಮತ್ತೆ ಕೆಲಸ ಕಳೆದು ಕೊಂಡು ಬೀದಿ ಬೀದಿ ಅಲೀತಾ ಇದ್ದೆ. ನಮ್ಮವರು ವೆಸ್ಟ್ ಇಂಡಿಸ್ ನಿಂದ ವಾಪಾಸ್ ಬಂದ್ರು, ನಾನು ಇಲ್ಲಿ ಹೀನಾಯವಾಗಿ ಸೋತೆ. ಮುಂದೆ 2007 ಸೆಪ್ಟೆಂಬರ್ ನಲ್ಲಿ ಟಿ 20 ಶುರು ಆಗುವಾಗ ಅದ್ಯಾರೋ ರಮೇಶ ಅನ್ನೋ ಹೆಸರು ನಿನ್ನ ಜೊತೆ ಕೇಳಿ ಬರುತ್ತಲಿತ್ತು. ಯುವರಾಜ್, ಕ್ರಿಸ್ ಬ್ರಾಡ್ ಗೆ 6 ಸಿಕ್ಸ್ ಹೊಡೆದ. ಕಪ್ ಕೂಡ ಗೆದ್ದರು. ಆದರೆ ತಂಡದಲ್ಲಿ ಸಚಿನ್ ಇರಲಿಲ್ಲ. ನಂತರ ಅವನು ಹೊಡೆದ ಯಾವ ಶತಕ ಗಳು ನನಗೆ ನೆನಪೇ ಉಳಿಯಲಿಲ್ಲ. ಮೊನ್ನೆ ಮೊನ್ನೆ ಅವನು ವಿಶ್ವ ಕಪ್ ಕೂಡ ಗೆದ್ದು ಬಿಟ್ಟ, ಆದರೆ ಬೆಂಗಳೂರ್ ನಲ್ಲಿ ನಾನು ಒಬ್ಬನೇ ಕೂತು ನೋಡುತ್ತಿದ್ದೆ, ನೀನು ಎಲ್ಲಿದ್ದ್ಯೋ?

ಕಳೆದ ವಾರ ಊರಿಗೆ ಹೋಗಿದ್ದೆ, ಅಮ್ಮ ಹೇಳಿದಳು, ನೀನು ಅದ್ಯಾವ್ದೋ ಆಫ್ರಿಕಾ ದೇಶದಲ್ಲಿ ಇದ್ದಿ ಅಂತ. ಅಲ್ಲಿ ಕ್ರಿಕೆಟ್ ಬರುತ್ತಾ? ಗೊತ್ತಿಲ್ಲ. ಟೀವಿ ಲಿ ಕ್ರಿಕೆಟ್ ಬರ್ತಾ ಇತ್ತು. ನೋಡೋ ಆಸಕ್ತಿ ಇರಲಿಲ್ಲ. ಸಚಿನ್ ಕೂಡ ಟೀಂ ನಲ್ಲಿ ಇರಲಿಲ್ಲ.